ಉಡುಪಿ: ಅಪಾಯದ ಅಂಚಿನಲ್ಲಿದೆ ದೀಪಕ್ ತೂಗು ಸೇತುವೆ; ದುರಸ್ತಿ ಕಾರ್ಯ ಆರಂಭಕ್ಕೆ ಜನರ ಆಗ್ರಹ

ಪಡುಕುದ್ರು ಮತ್ತು ತಿಮ್ಮಣ್ಣಕುದ್ರುವಿಗೆ ಹಿಂದೆ ದೋಣಿ ಮೂಲಕ ಸಂಪರ್ಕ ಇತ್ತು. ನಂತರ ಸುಳ್ಯದ ಗಿರೀಶ್‌ ಭಾರಧ್ವಜ್‌ ಅವರ ಮಾರ್ಗದರ್ಶನದಲ್ಲಿ 1991 ರಲ್ಲಿ ತೂಗು ಸೇತುವೆ ನಿರ್ಮಾಣ ಮಾಡಿ, ದೀಪಕ್ ತೂಗು ಸೇತುವೆ ಅಂತ ನಾಮಕರಣ ಮಾಡಲಾಯಿತು.

ಉಡುಪಿ: ಅಪಾಯದ ಅಂಚಿನಲ್ಲಿದೆ ದೀಪಕ್ ತೂಗು ಸೇತುವೆ;  ದುರಸ್ತಿ ಕಾರ್ಯ ಆರಂಭಕ್ಕೆ ಜನರ ಆಗ್ರಹ
ದೀಪಕ್ ತೂಗು ಸೇತುವೆ

ಉಡುಪಿ: ಅದು ಪ್ರವಾಸಿಗರ ಮೆಚ್ಚಿನ ತೂಗು ಸೇತುವೆ. ವೀಕೆಂಡ್‌ಗಳಲ್ಲಿ ಪ್ರವಾಸಿಗರಿಂದ ತುಂಬಿರುವ ಈ ತೂಗು ಸೇತುವೆಯಲ್ಲಿ, ಸ್ಯಾಂಡಲ್‌ವುಡ್‌ನ ಖ್ಯಾತನಾಮರ ಸಿನಿಮಾ ಚಿತ್ರೀಕರಣ ಕೂಡ ನಡೆದಿದೆ. ಆದರೆ ಸದ್ಯ ಸರ್ಕಾರದ ನಿರ್ಲಕ್ಷ್ಯದಿಂದ, ನಿರ್ವಹಣೆ ಇಲ್ಲದೇ ಅಪಾಯವನ್ನು ಎದುರು ನೋಡುತ್ತಿದೆ.  ಎರಡು ಊರಗಳ ಕೊಂಡಿಯಂತಿರುವ ತೂಗು ಸೇತುವೆ ಕಳಚಿ ಬೀಳುವ ಭೀತಿ ಎದುರಾಗಿದೆ.

ಉಡುಪಿಯಿಂದ ಕೇವಲ 10 ಕಿ.ಮೀ ದೂರದಲ್ಲಿರುವ ದೀಪಕ್ ತೂಗು ಸೇತುವೆಯ ಸದ್ಯದ ಪರಿಸ್ಥಿತಿ ಇದಾಗಿದೆ. ಪಡುಕುದ್ರು ಮತ್ತು ತಿಮ್ಮಣ್ಣಕುದ್ರುವಿಗೆ ಹಿಂದೆ ದೋಣಿ ಮೂಲಕ ಸಂಪರ್ಕ ಇತ್ತು. ನಂತರ ಸುಳ್ಯದ ಗಿರೀಶ್‌ ಭಾರಧ್ವಜ್‌ ಅವರ ಮಾರ್ಗದರ್ಶನದಲ್ಲಿ 1991 ರಲ್ಲಿ ತೂಗು ಸೇತುವೆ ನಿರ್ಮಾಣ ಮಾಡಿ, ದೀಪಕ್ ತೂಗು ಸೇತುವೆ ಅಂತ ನಾಮಕರಣ ಮಾಡಲಾಯಿತು. ಆರಂಭದಲ್ಲಿ ಕುದ್ರುವಿಗೆ ಸಂಪರ್ಕಕ್ಕೆ ಮಾತ್ರ ಸೀಮಿತವಾಗಿದ್ದ ಈ ತೂಗು ಸೇತುವೆ ನಂತರದ ದಿನಗಳಲ್ಲಿ ದೊಡ್ಡ ಪ್ರವಾಸಿ ತಾಣವಾಗಿದೆ ಮಿಂಚಿದೆ. ಆದರೆ ಸದ್ಯ ತೂಗು ಸೇತುವೆ ನಿರ್ವಹಣೆ ಇಲ್ಲದೇ ಅಪಾಯಕ್ಕೆ ಕರೆ ಗಂಟೆ ಬಾರಿಸುತ್ತಿದೆ.

ಕನ್ನಡದ ಹಲವಾರು ಸಿನಿಮಾಗಳು, ಶಾರ್ಟ್ ಮೂವಿಗಳು ಇಲ್ಲಿ ಚಿತ್ರಿಕರಣಗೊಂಡಿದೆ. ವೆಡ್ಡಿಂಗ್ ಶೂಟ್‌ಗಳು ದಿನ ನಿತ್ಯ ನಡೆಯುತ್ತಿದೆ. ವೀಕೆಂಡ್‌ಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಇಲ್ಲಿಗೆ ಬರುವ ಪ್ರವಾಸಿಗರು, ಸ್ವರ್ಣನದಿ ಕಾಯಕಿಂಗ್ ಮಾಡಿ ತೂಗು ಸೇತುವೆಯಲ್ಲಿ ಸೆಲ್ಫಿ‌ ಕ್ಲಿಕಿಸಿ ಖುಷಿ ಪಡುತ್ತಾರೆ. ಇಂತಹ ಪ್ರಸಿದ್ಧಿ ಪಡೆದ ತೂಗು ಸೇತುವೆ ನಿರ್ವಹಣೆ ಇಲ್ಲದೇ ಸೊರಗುತ್ತಿದೆ ಎಂದು ಸ್ಥಳೀಯರಾದ ಪ್ರಮೋದ್ ತಿಳಿಸಿದ್ದಾರೆ.

ಕಾಂಕ್ರೀಟ್‌ ಹಲಗೆಗಳಲ್ಲಿ ಮಧ್ಯೆ ಒಂದೆರಡು ಹಲಗೆಗಳು ಒಡೆದಿದ್ದು, ಈ ಭಾಗದಲ್ಲಿ ಎಚ್ಚರ ತಪ್ಪಿ ಕಾಲಿಟ್ಟರೆ ಅಪಾಯ ತಪ್ಪಿದ್ದಲ್ಲ. ಸೇತುವೆಯ ಎರಡೂ ಬದಿಗೆ ಸುರಕ್ಷತೆಗಾಗಿ ಅಳವಡಿಸಿರುವ ಕಬ್ಬಿಣದ ರಾಡ್‌ಗಳು ತುಂಡಾಗಿ ನೇಲಾಡುತ್ತಿದೆ. ಸೇತುವೆಯನ್ನು ಹಿಡಿದಿಟ್ಟುಕೊಳ್ಳುವ ಪ್ರಮುಖ ವೈಯರ್‌ ರೋಪ್‌ಗ್ಳಿಗೆ ಗ್ರೀಸಿಂಗ್‌ ಮಾಡದೇ ಅನೇಕ ವರ್ಷಗಳು ಕಳೆದಿವೆ. ಎಲ್ಲ ನಟ್‌ ಬೋಲ್ಟ್‌ಗಳು ತುಕ್ಕು ಹಿಡಿದು ಹಾಳಾಗುತ್ತಿದೆ ಎಂದು ಪ್ರವಾಸಿಗರಾದ ಪಲ್ಲವಿ ಬೇಸರ ವ್ಯಕ್ತಪಡಿಸಿದ್ದಾರೆ.

ನಡೆದಾಡಲು ಭಯವಾಗುವ ತೂಗು ಸೇತುವೆಯನ್ನು ಆದಷ್ಟು ಬೇಗ ಸರಿ ಪಡಿಸಿ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಿ ಎನ್ನುವುದು ಸದ್ಯ ಊರಿನವರ ಆಗ್ರಹ. ಯಾಕೆಂದರೆ ಇಲ್ಲಿಗೆ ಬರುವ ಪ್ರವಾಸಿಗರನ್ನೇ ನಂಬಿ ಹಲವಾರು ಮಂದಿ ಜೀವನ ನಡೆಸುತ್ತಿದ್ದಾರೆ. ದುರದೃಷ್ಟವಶಾತ್ ಪ್ರವಾಸಿಗರು ತುಂಬಿರುವಾಗಲೇ ಏನಾದರೂ ಅಪಾಯ ಸಂಭವಿಸಿದರೆ ದೊಡ್ಡ ಸಾವು ನೋವು ಉಂಟಾಗಬಹುದು. ಹೀಗಾಗಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಆದಷ್ಟು ಬೇಗ ಓ ಬಗ್ಗೆ ಎಚ್ಚೆತ್ತುಕೊಳ್ಳಬೇಕಿದೆ.

ವರದಿ: ಹರೀಶ್ ಪಾಲೆಚ್ಚಾರ್

ಇದನ್ನೂ ಓದಿ:
ವಿಜಯಪುರ: ಸೇತುವೆಯಲ್ಲಿ ಬಿರುಕು, ರಾಜ್ಯ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತ

ಸ್ಮಾರ್ಟ್ ಸಿಟಿ ಯೋಜನೆ ಕಳಪೆ ಕಾಮಗಾರಿ; ಟಿವಿ9 ವರದಿ ಪ್ರಸಾರದ ಬಳಿಕ ಎಚ್ಛೆತ್ತ ರಾಜ್ಯ ಸರ್ಕಾರ

Click on your DTH Provider to Add TV9 Kannada