ಭಾರತ-ನೇಪಾಳ ಗಡಿ ವಿಷಯದಲ್ಲಿ ಮೂರನೇ ದೇಶದ ಹಸ್ತಕ್ಷೇಪಕ್ಕೆ ಅವಕಾಶವಿಲ್ಲ; ಭಾರತದ ಖಡಕ್ ಸಂದೇಶ
ನೇಪಾಳದೊಂದಿಗಿನ ಗಡಿ ಸಮಸ್ಯೆಯನ್ನು ಮೂರನೇ ವ್ಯಕ್ತಿಯ ಸಹಾಯವಿಲ್ಲದೆ ತಾನೇ ಬಗೆಹರಿಸಿಕೊಳ್ಳುವುದಾಗಿ ಭಾರತ ಹೇಳಿದೆ. ಈಗಾಗಲೇ ಶೇ. 98ರಷ್ಟು ಗಡಿ ಗಡಿರೇಖೆ ಪ್ರಕ್ರಿಯೆ ಮುಗಿದಿದ್ದು, ಉಳಿದ ಸೂಕ್ಷ್ಮ ಪ್ರದೇಶಗಳ ಬಗ್ಗೆ ನೇಪಾಳವು ಅನಗತ್ಯವಾಗಿ ಅಂತಾರಾಷ್ಟ್ರೀಯ ಸಮುದಾಯದ ಮೊರೆ ಹೋಗುವುದನ್ನು ನಿಲ್ಲಿಸಬೇಕು ಮತ್ತು ದ್ವಿಪಕ್ಷೀಯ ಒಪ್ಪಂದಗಳಿಗೆ ಗೌರವ ನೀಡಬೇಕು ಎಂದು ಭಾರತ ಎಚ್ಚರಿಕೆಯ ಸಂದೇಶ ರವಾನಿಸಿದೆ.

ನವದೆಹಲಿ, ಜೂನ್ 2: ಭಾರತ ಮತ್ತು ನೇಪಾಳದ (Nepal Border) ನಡುವಿನ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಭಾರತ ಸರ್ಕಾರವು ಅತ್ಯಂತ ಕಠಿಣ ನಿಲುವು ತಳೆದಿದೆ. ನೇಪಾಳದ ಪ್ರಧಾನಿಯವರ ಇತ್ತೀಚಿನ ಹೇಳಿಕೆಗೆ ತಿರುಗೇಟು ನೀಡಿರುವ ಭಾರತ, “ಎರಡು ದೇಶಗಳ ನಡುವಿನ ಶೇ. 98ರಷ್ಟು ಗಡಿ ಗುರುತಿಸುವಿಕೆ (Demarcation) ಈಗಾಗಲೇ ಯಶಸ್ವಿಯಾಗಿ ಮುಗಿದಿದೆ. ಉಳಿದ ವಿಷಯಗಳನ್ನು ದ್ವಿಪಕ್ಷೀಯ ಮಾತುಕತೆಯ ಮೂಲಕವೇ ಬಗೆಹರಿಸಿಕೊಳ್ಳಲಾಗುವುದು. ಇದರಲ್ಲಿ ಯಾವುದೇ ಮೂರನೇ ವ್ಯಕ್ತಿ ಅಥವಾ ದೇಶದ ಹಸ್ತಕ್ಷೇಪದ ಅಗತ್ಯವಿಲ್ಲ” ಎಂದು ಸ್ಪಷ್ಟಪಡಿಸಿದೆ.
ಈ ಮೂಲಕ ಭಾರತ ಮತ್ತು ನೇಪಾಳ ನಡುವಿನ ಗಡಿ ಸಮಸ್ಯೆಯನ್ನು ಬಗೆಹರಿಸಲು ಯಾವುದೇ ಮೂರನೇ ದೇಶದ ಮಧ್ಯಸ್ಥಿಕೆಯನ್ನು ಭಾರತ ಸರ್ಕಾರವು ಸಂಪೂರ್ಣವಾಗಿ ತಿರಸ್ಕರಿಸಿದೆ. ದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿದೇಶಾಂಗ ಸಚಿವಾಲಯವು ಈ ಬಗ್ಗೆ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ. ನೆರೆಹೊರೆಯ ದೇಶಗಳ ನಡುವಿನ ಗಡಿ ವಿವಾದಗಳು ಕೇವಲ ದ್ವಿಪಕ್ಷೀಯ ಚರ್ಚೆಗಳ ಮೂಲಕವೇ ಇತ್ಯರ್ಥವಾಗಬೇಕು ಎಂಬ ತನ್ನ ದೃಢ ನಿಲುವನ್ನು ಪುನರುಚ್ಚರಿಸಿದೆ.
ಇದನ್ನೂ ಓದಿ: ಆರು ವರ್ಷ ಬಳಿಕ ಲಿಪುಲೇಖ ಪಾಸ್ ಮೂಲಕ ಭಾರತ-ಚೀನಾ ಟ್ರೇಡಿಂಗ್ ಪುನಾರಂಭ; ಆದರೆ, ನೇಪಾಳದಿಂದ ಆಕ್ಷೇಪ ಯಾಕೆ?
ಇತ್ತೀಚೆಗೆ ನೇಪಾಳದ ಪ್ರಧಾನಮಂತ್ರಿ ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ, ಭಾರತ ಮತ್ತು ನೇಪಾಳ ನಡುವಿನ ಬಹುಕಾಲದ ಗಡಿ ವಿವಾದಗಳನ್ನು (ವಿಶೇಷವಾಗಿ ಕಾಲಾಪಾನಿ, ಲಿಂಪಿಯಾಧುರಾ ಮತ್ತು ಲಿಪುಲೇಖ್ ಪ್ರದೇಶಗಳು) ಇತ್ಯರ್ಥಪಡಿಸಲು ಅಂತಾರಾಷ್ಟ್ರೀಯ ಮಧ್ಯಸ್ಥಿಕೆ (ಇಂಗ್ಲೆಂಡ್ ಮತ್ತು ಚೀನಾ)ಯ ಅಗತ್ಯವಿದೆ ಎಂಬ ಹೇಳಿಕೆ ನೀಡಿದ್ದರು. ನೇಪಾಳದ ಈ ಹೇಳಿಕೆಯು ರಾಜತಾಂತ್ರಿಕ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು.
ನೇಪಾಳದ ಪ್ರಧಾನಿಯವರ ಈ ಹೇಳಿಕೆಯನ್ನು ಭಾರತವು ನಿರಾಕರಿಸಿದೆ. ಭಾರತದ ವಿದೇಶಾಂಗ ಸಚಿವಾಲಯದ ಮೂಲಗಳ ಪ್ರಕಾರ, ಭಾರತ ಮತ್ತು ನೇಪಾಳ ನಡುವಿನ ಸುಮಾರು 1,751 ಕಿ.ಮೀ. ಉದ್ದದ ಗಡಿಯಲ್ಲಿ ಈಗಾಗಲೇ ಶೇ. 98ರಷ್ಟು ಭಾಗವನ್ನು ಪರಸ್ಪರ ಒಪ್ಪಿಗೆಯೊಂದಿಗೆ ಯಶಸ್ವಿಯಾಗಿ ಗುರುತಿಸಲಾಗಿದೆ ಮತ್ತು ನಕ್ಷೆ ತಯಾರಿಸಲಾಗಿದೆ. ಬಾಕಿ ಉಳಿದಿರುವ ಕೇವಲ ಶೇ. 2ರಷ್ಟು ಗಡಿ ಸಮಸ್ಯೆಯನ್ನು (ವಿವಾದಿತ ಪ್ರದೇಶಗಳು) ಉಭಯ ದೇಶಗಳು ಸ್ಥಾಪಿಸಿರುವ ಜಂಟಿ ತಾಂತ್ರಿಕ ಸಮಿತಿಗಳು ಮತ್ತು ರಾಜತಾಂತ್ರಿಕ ವೇದಿಕೆಗಳ ಮೂಲಕವೇ ಬಗೆಹರಿಸಲಾಗುವುದು.
ಇದನ್ನೂ ಓದಿ: Zojila Tunnel : ಲಡಾಖ್-ಕಾಶ್ಮೀರ ನಡುವೆ ಸರ್ವಋತು ಸಂಪರ್ಕ, ಜೂನ್ 9ರೊಳಗೆ ಝೋಜಿಲಾ ಸುರಂಗದ ಉತ್ಖನನ ಕಾರ್ಯ ಪೂರ್ಣ
ಕಾಶ್ಮೀರದ ವಿಷಯದಲ್ಲಿ ಭಾರತ ಹೇಗೆ ಅಂತಾರಾಷ್ಟ್ರೀಯ ಮಧ್ಯಸ್ಥಿಕೆಯನ್ನು ಒಪ್ಪುವುದಿಲ್ಲವೋ, ಅದೇ ರೀತಿ ನೇಪಾಳದೊಂದಿಗಿನ ಗಡಿ ವಿಷಯದಲ್ಲೂ ಯಾವುದೇ ಮೂರನೇ ದೇಶದ ಹಸ್ತಕ್ಷೇಪಕ್ಕೆ ಅವಕಾಶ ನೀಡುವುದಿಲ್ಲ ಎಂದು ಭಾರತ ಕಠಿಣ ಸಂದೇಶ ರವಾನಿಸಿದೆ.
ಏನಿದು ಗಡಿ ವಿವಾದ?:
ಭಾರತ ಮತ್ತು ನೇಪಾಳ ನಡುವಿನ ಗಡಿ ವಿವಾದವು 1816ರ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಮತ್ತು ನೇಪಾಳ ರಾಜರ ನಡುವೆ ನಡೆದ ‘ಸುಗೌಲಿ ಒಪ್ಪಂದ’ಕ್ಕೆ (Treaty of Sugauli) ಸಂಬಂಧಿಸಿದ್ದಾಗಿದೆ. ಮಹಾಕಾಳಿ ನದಿಯ ಉಗಮ ಸ್ಥಾನದ ಕುರಿತು ಉಭಯ ದೇಶಗಳ ನಡುವೆ ಭಿನ್ನಾಭಿಪ್ರಾಯಗಳಿವೆ. ನೇಪಾಳವು ಇತ್ತೀಚಿನ ವರ್ಷಗಳಲ್ಲಿ ತನ್ನ ಹೊಸ ನಕ್ಷೆಯಲ್ಲಿ ಭಾರತದ ಉತ್ತರಾಖಂಡಕ್ಕೆ ಸೇರಿದ ಕಾಲಾಪಾನಿ, ಲಿಂಪುಯಾಧುರಾ ಮತ್ತು ಲಿಪುಲೇಖ್ ಪ್ರದೇಶಗಳನ್ನು ತನ್ನದೆಂದು ತೋರಿಸಿಕೊಂಡಿದ್ದರಿಂದ ಉಭಯ ದೇಶಗಳ ನಡುವಿನ ಬಾಂಧವ್ಯದಲ್ಲಿ ಕೊಂಚ ಬಿರುಕು ಮೂಡಿತ್ತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




