ಸ್ಮಾರ್ಟ್ ಸಿಟಿ ಯೋಜನೆ ಕಳಪೆ ಕಾಮಗಾರಿ; ಟಿವಿ9 ವರದಿ ಪ್ರಸಾರದ ಬಳಿಕ ಎಚ್ಛೆತ್ತ ರಾಜ್ಯ ಸರ್ಕಾರ
ಗುತ್ತಿಗೆದಾರರಿಗೆ ಇಂತಿಷ್ಟು ವರ್ಷ ನಿರ್ವಹಣೆ ಹೊಣೆ ನೀಡಲಾಗಿದೆ. ಅವರೇ ಅದರ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ಟಿವಿ9 ಡಿಜಿಟಲ್ಗೆ ಸ್ಮಾರ್ಟ್ ಸಿಟಿ ಯೋಜನೆಯ ಚೀಫ್ ಇಂಜಿನಿಯರ್ ವಿನಾಯಕ್ ತಿಳಿಸಿದ್ದಾರೆ.
ಬೆಂಗಳೂರು: ಸ್ಮಾರ್ಟ್ ಸಿಟಿ ಕಾಮಗಾರಿಯಲ್ಲಿ ಕೆಲವೊಂದಿಷ್ಟು ಲೋಪದೋಷ ಪತ್ತೆಯಾಗಿತ್ತು. ಹೀಗಾಗಿ ಕಳಪೆ ಕಾಮಗಾರಿ ಬಗ್ಗೆ ಟಿವಿ9 ಸಾಕ್ಷಿ ಸಮೇತ ಸುದ್ದಿ ಪ್ರಸಾರ ಮಾಡಿತ್ತು. ಟಿವಿ9 ಸುದ್ದಿ ಪ್ರಸಾರವಾದ ನಂತರ ಎಚ್ಛೆತ್ತುಕೊಂಡ ಸ್ಮಾರ್ಟ್ ಯೋಜನೆಯ ಅಧಿಕಾರಿಗಳು, ನಾಲ್ವರು ತಜ್ಞರ ಸಮಿತಿಯನ್ನು ರಚನೆ ಮಾಡಿದ್ದಾರೆ.
ಆರ್ಕಿಟೆಕ್ಚರ್ ನರೇಶ್ ನರಸಿಂಹನ್, ಅನೂಪ್ ನಾಯ್ಕ್, ಬಿಜೋಯ್ ಸೇರಿ ನಾಲ್ವರು ತಜ್ಞರನ್ನೊಳಗೊಂಡ ಸಮಿತಿಯನ್ನು ರಚನೆ ಮಾಡಿದ್ದು, ಕಾಮಗಾರಿ ಬಗ್ಗೆ ಪರಿಶೀಲನೆ ನಡೆಸಲು ಸೂಚಿಸಲಾಗಿದೆ. ಈಗಾಗಲೇ ಬೆಂಗಳೂರಿನಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ತಜ್ಞರು ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಿದ್ದಾರೆ ಎಂದು ಟಿವಿ9 ಡಿಜಿಟಲ್ಗೆ ಸ್ಮಾರ್ಟ್ ಸಿಟಿ ಯೋಜನೆಯ ಚೀಫ್ ಇಂಜಿನಿಯರ್ ವಿನಾಯಕ್ ಮಾಹಿತಿ ನೀಡಿದ್ದಾರೆ.
ತಜ್ಞರು ಕಾಮಗಾರಿ ಪರಿಶೀಲನೆ ನಡೆಸಿದ್ದಾರೆ. ನಾವು ಕೂಡಾ ಕಾಮಗಾರಿ ಪರಿಶೀಲನೆ ನಡೆಸಿದ್ದೇವೆ. ಕೆಲವೊಂದಿಷ್ಟು ಲೋಪದೋಷಗಳು ಕಂಡು ಬಂದಿವೆ. ಅದನ್ನು ಸರಿಪಡಿಸಲು ಸೂಚಿಸಿದ್ದು, ಗುತ್ತಿಗೆದಾರರ ವಿರುದ್ಧ ಕ್ರಮ ಜರುಗಿಸಲಾಗುತ್ತದೆ. ಗುತ್ತಿಗೆದಾರರಿಗೆ ಇಂತಿಷ್ಟು ವರ್ಷ ನಿರ್ವಹಣೆ ಹೊಣೆ ನೀಡಲಾಗಿದೆ. ಅವರೇ ಅದರ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ಟಿವಿ9 ಡಿಜಿಟಲ್ಗೆ ಸ್ಮಾರ್ಟ್ ಸಿಟಿ ಯೋಜನೆಯ ಚೀಫ್ ಇಂಜಿನಿಯರ್ ವಿನಾಯಕ್ ತಿಳಿಸಿದ್ದಾರೆ.
ಸ್ಮಾರ್ಟ್ ಸಿಟಿ ಯೋಜನೆ ಹೆಸರಲ್ಲಿ 935 ಕೋಟಿ ರೂ. ಕಳಪೆ ಕಾಮಗಾರಿ ರಾಜಧಾನಿಯನ್ನು ಸ್ಮಾರ್ಟ್ ಮಾಡಲು ಹೊರಟ್ಟಿದ್ದ ಕೇಂದ್ರ ಸರ್ಕಾರದ ಹಣ ಕಳಪೆ ಕಾಮಗಾರಿಯಿಂದ ವ್ಯರ್ಥವಾದಂತಾಗಿದೆ. ಸ್ಮಾರ್ಟ್ ಸಿಟಿ ಯೋಜನೆ ಹೆಸರಲ್ಲಿ 935 ಕೋಟಿ ರೂಪಾಯಿ ಕಾಮಗಾರಿ, ಅಕ್ಷರಶಃ ಕಳಪೆ ಗುಣಮಟ್ಟದ ಕಾಮಗಾರಿಯಾಗಿದೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿತ್ತು. ಸದ್ಯ ಟಿವಿ9 ನಡೆಸಿದ ರಿಯಾಲಿಟಿ ಚೆಕ್ನಲ್ಲಿ ಸ್ಮಾರ್ಟ್ ಸಿಟಿ ಕಳಪೆ ಕಾಮಗಾರಿ ಬಯಲಾಗಿದೆ.
ಸ್ಮಾರ್ಟ್ ಸಿಟಿ ಯೋಜನೆ ಅಡಿ ಬೆಂಗಳೂರಿನ ರಸ್ತೆ ಮತ್ತು ಫುಟ್ ಪಾತ್ ಅಭಿವೃದ್ಧಿಗೆ ಮುಂದಾಗಿದ್ದು, ಜನ ಸಂದಣಿ ಹೆಚ್ಚಿರುವ ಪ್ರದೇಶದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ಆರಂಭವಾಗಿತ್ತು. ಆದರೆ ಫುಟ್ ಪಾತ್ ನಿರ್ಮಾಣ ಮಾಡಲು ಅನುಸರಿಸಬೇಕಾದ ಕ್ರಮ ಪಾಲಿಸದೇ, ಕೇವಲ ಜಲ್ಲಿ ಮಣ್ಣು ಹಾಕಿ ಮೇಲೆ ಕಳಪೆ ಬ್ಲಾಕ್ಸ್ ಹಾಕಿ ಫುಟ್ ಪಾತ್ ನಿರ್ಮಾಣ ಮಾಡಿದ್ದಾರೆ.
ಪ್ರತಿ ಕಿಲೋ.ಮೀಟರ್ ಸ್ಮಾರ್ಟ್ ಸಿಟಿ ರಸ್ತೆಗೆ ಸುಮಾರು 19 ಕೋಟಿ ರೂಪಾಯಿ ವ್ಯಯ ಮಾಡಲಾಗಿದೆ. ಬೆಂಗಳೂರಿನಲ್ಲಿ ಈಗಾಗಲೇ 11 ರಸ್ತೆಗಳನ್ನು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ನಿರ್ಮಿಸಿಲಾಗಿದ್ದು, 11 ರಸ್ತೆಗಳ ಪೈಕಿ ಭಾಗಶಃ ರಸ್ತೆ ಕಾಮಗಾರಿ ಕಳಪೆಯಾಗಿದೆ ಎಂಬುವುದು ಟಿವಿ9 ನಡೆಸಿದ ರಿಯಾಲಿಟಿ ಚೆಕ್ನಲ್ಲಿ ಬಯಲಾಗಿದೆ.
ಸ್ಮಾರ್ಟ್ ಸಿಟಿ ಯೋಜನೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಅನುದಾನ ನೀಡಲಾಗಿದೆ. 38 ರಸ್ತೆಗಳ ನಿರ್ಮಾಣಕ್ಕೆ ಮೊದಲು ಒಟ್ಟು 913 ಕೋಟಿ ಅನುದಾನ ನೀಡಿದ್ದು, ನಂತರ 253 ಕೋಟಿ ಹೆಚ್ಚುವರಿಯಾಗಿ ಅಳವಡಿಕೆ ಮಾಡಲಾಗಿದೆ. ಒಟ್ಟು 1,166 ಕೋಟಿ ರೂಪಾಯಿ ವೆಚ್ಚದ ಕಾಮಗಾರಿ ಇದಾಗಿದ್ದು, ಸ್ಮಾರ್ಟ್ ಸಿಟಿ ಕಾಮಗಾರಿ ಕಳಪೆ ಗುಣಮಟ್ಟದ ಕಾಮಗಾರಿ ಎಂದು ಖುದ್ದು ಸಚಿವ ಆರ್.ಅಶೋಕ್ ಒಪ್ಪಿಕೊಂಡಿದ್ದರು.
ಕಮರ್ಷಿಯಲ್ ಸ್ಟ್ರೀಟ್ನಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ನಿರ್ಮಿಸಿದ್ದ ರಸ್ತೆ, ಸಿಎಂ ಉದ್ಘಾಟನೆ ಮಾಡಿದ್ದ ಮಾರನೇ ದಿನವೇ ಕಿತ್ತುಹೋಗಿತ್ತು. ನಂತರ ಆಗಸ್ಟ್ 13 ರಂದು ಖುದ್ದು ಸಚಿವ ಅಶೋಕ್ ಕಮರ್ಷಿಯಲ್ ಸ್ಟ್ರೀಟ್ಗೆ ಭೇಟಿ ನೀಡಿ ಕಾಮಗಾರಿ ಕಳಪೆಯಾಗಿದೆ ಎಂದು ಒಪ್ಪಿಕೊಂಡಿದ್ದರು.
ಇದನ್ನೂ ಓದಿ: ಸ್ಮಾರ್ಟ್ ಸಿಟಿ ಕಳಪೆ ಕಾಮಗಾರಿ: ಡಕ್ಟಿಂಗ್ ಲೈನ್ ಸ್ಪೇಸರ್ಸ್ ಕೆಡವಿ ಶಿವಣ್ಣ ಗರಂ
ಬೆಂಗಳೂರು: ಕೇಂದ್ರ ಸರ್ಕಾರಕ್ಕೆ ಪಂಗನಾಮ; ಸ್ಮಾರ್ಟ್ ಸಿಟಿ ಯೋಜನೆ ಹೆಸರಲ್ಲಿ 935 ಕೋಟಿ ರೂ. ಕಳಪೆ ಕಾಮಗಾರಿ
Published On - 9:40 am, Tue, 21 September 21