ಸೇತುವೆ ನಿರ್ಮಾಣಕ್ಕೆ ಎಷ್ಟೇ ಬೇಡಿಕೆ ಇಟ್ಟರೂ ಸರ್ಕಾರದಿಂದ ಸಿಗಲಿಲ್ಲ ಸ್ಪಂದನೆ: ಕೋಲು ಕಟ್ಟಿ ಸೇತುವೆ ನಿರ್ಮಾಣ, ಮಳೆ ಬಂದ್ರೆ ಏನು ಗತಿ ಎಂಬ ಆತಂಕ
ಅಲ್ಲಿನ ಜನಕ್ಕೆ ಮಳೆಗಾಲ ಅಂದ್ರೆ ಸಾಕು ಭಯ ಶುರುವಾಗುತ್ತೆ. ಯಾವಾಗಪ್ಪಾ ಮಳೆಗಾಲ ಮುಗಿಯೋದು ಅಂತಾ ಜನ ಚಾತಕ ಪಕ್ಷಿಗಳಂತೆ ಕಾಯ್ತಾ ಇರ್ತಾರೆ. ಏಕೆಂದರೆ ಕೋಲು ಕಟ್ಟಿ ನಿರ್ಮಿಸಿರುವ ಸೇತುವೆ ಯಾವ ಕ್ಷಣದಲ್ಲಿ ಬೇಕಾದರು ಜೀವಕ್ಕೆ ಅಪಾಯ ತರಬಹುದು ಎಂಬ ಭಯ. ಇಲ್ಲಿನ ಜನ ಅಪಾಯಕಾರಿ ಸೇತುವೆಯ ಮೇಲೆ ಓಡಾಡಬೇಕಾದ ಅನಿವಾರ್ಯತೆ ಉಂಟಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕಲ್ಲೂರು ಗ್ರಾಮದಲ್ಲಿ ಜನರಿಗೆ ಮಳೆಗಾಲ ಅಂದ್ರೆ ಸಾಕು ಭಯ ಶುರುವಾಗಿಬಿಡುತ್ತೆ. ಯಾಕಂದ್ರೆ ಗ್ರಾಮಕ್ಕೆ ಅಡ್ಡಲಾಗಿ ಕಾಮನಗದ್ದೆ ಹೊಳೆ ಹರಿದಿದ್ದು, ಹೊಳೆಗೆ ಅಡ್ಡಲಾಗಿ ಸೂಕ್ತ ಸೇತುವೆ ನಿರ್ಮಿಸಿಲ್ಲ. ಕೆಲ ವರ್ಷಗಳ ಹಿಂದೆ ಜನರೇ ಸಂಕವೊಂದನ್ನು ಮಾಡಿಕೊಂಡಿದ್ದಾರೆ. ಆದ್ರೆ ಅದು ಸಹ ಈಗಲೋ ಆಗಲೋ ಬೀಳುವಂತಿದೆ. ಗ್ರಾಮದಲ್ಲಿ 500ಕ್ಕೂ ಹೆಚ್ಚು ಜನರಿದ್ದು ಪ್ರತಿನಿತ್ಯ ಅಪಾಯಕಾರಿ ಸಂಕದಲ್ಲಿಯೇ ಹೊಳೆ ದಾಟಬೇಕಿದೆ. ಮಳೆಗಾಲದಲ್ಲಿ ಹೊಳೆಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತದೆ. ಪ್ರತಿವರ್ಷ ಮಳೆಗಾಲದಲ್ಲಿ ಹೆದರುತ್ತಲೇ ಹೊಳೆ ದಾಟಬೇಕಿದೆ. ಸೇತುವೆ ನಿರ್ಮಿಸಿ ಕೊಡಿ ಅಂತಾ ಅದೆಷ್ಟೇ ಬಾರಿ ಮನವಿ ಮಾಡಿದ್ರೂ ಅಧಿಕಾರಿಗಳು, ಜನಪ್ರತಿನಿಧಿಗಳು ಮನವಿಗೆ ಸ್ಪಂದಿಸಿಲ್ಲವಂತೆ.
ನಿತ್ಯ ವಿಧ್ಯಾರ್ಥಿಗಳು ಸೇರಿದಂತೆ ಸುಮಾರು 200ಕ್ಕೂ ಹೆಚ್ಚು ಜನ ಹೊಳೆ ದಾಟುತ್ತಾರೆ. ಕೆಲವೊಮ್ಮೆ ಆಯಾ ತಪ್ಪಿ ಸಂಕದಿಂದ ಬಿದ್ದು ಗಾಯಗಳಾದ ಘಟನೆಗಳು ನಡೆದಿವೆ. ಮಳೆಗಾಲದಲ್ಲಿ ತುಂಬಿ ಹರಿಯುವ ಹೊಳೆಗೆ ಬಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಇನ್ನೊಂದೆಡೆ ಕ್ಷೇತ್ರ ಶಾಸಕರಾಗಿರುವ ಹಾಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೂ ಈ ಬಗ್ಗೆ ಮನವಿ ಮಾಡಿ, ಸೇತುವೆ ನಿರ್ಮಾಣಕ್ಕೆ ಕೇಳಿಕೊಂಡಿದ್ರೂ ಸ್ಪಂದಿಸುತ್ತಿಲ್ಲ ಎಂದು ಸ್ಥಳೀಯ ಆರೋಪಿಸ್ತಿದ್ದಾರೆ.
ಒಟ್ನಲ್ಲಿ ಕಲ್ಲೂರು ಗ್ರಾಮದ ಜನ ಜೀವ ಕೈಯಲ್ಲಿಡಿದು ಹೊಳೆ ದಾಟುವ ಪರಿಸ್ಥಿತಿ ಇದೆ. ಈಗಲಾದ್ರೂ ಈ ಬಗ್ಗೆ ಗಮನಹರಿಸಿ ಜನರ ಸಮಸ್ಯೆ ಬಗೆಹರಿಸಬೇಕಿದೆ. ಮುಂದಿನ ಮಳೆಗಾಲದ ಒಳಗೆ ಸೂಕ್ತ ಸೇತುವೆ ವ್ಯವಸ್ಥೆ ಕಲ್ಪಿಸಬೇಕಿದೆ ಅನ್ನೋದು ಸ್ಥಳೀಯರ ಒತ್ತಾಯ.
ವರದಿ: ಮಂಜುನಾಥ್ ಪಟಗಾರ್, ಟಿವಿ9 ಕಾರವಾರ
ಇದನ್ನೂ ಓದಿ: ಮೈಸೂರಿನಲ್ಲಿ ಸೇತುವೆಯಿಂದ ನದಿಗೆ ಹಾರಿದ ಯುವತಿಯ ರಕ್ಷಣೆ! ವಿಡಿಯೋ ವೈರಲ್