
ಬೆಳಗಾವಿ, ಡಿಸೆಂಬರ್ 18: ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ಪಡೆಯಲು ಇರುವ ಆದಾಯ ಮಿತಿ ಪರಿಷ್ಕರಣೆಗೆ ಚಿಂತನೆ ನಡೆದಿದೆ ಎಂದು ಆಹಾರ ಸಚಿವ ಕೆ. ಹೆಚ್. ಮುನಿಯಪ್ಪ ತಿಳಿಸಿದ್ದಾರೆ. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೇಂದ್ರ ಸರ್ಕಾರ ಬಿಪಿಎಲ್ ಕಾರ್ಡ್ದಾರರ ಆದಾಯವನ್ನು 1.20ಲಕ್ಷ ರೂ.ಗೆ ಮಿತಿಗೊಳಿಸಿದೆ. ಆದರೆ ಕೂಲಿ ಕೆಲಸಗಾರರಿಗೂ ಪ್ರತಿದಿನ 500 ರೂ. ದೊರೆಯುತ್ತದೆ. ಇದರ ಆಧಾರದಲ್ಲಿ ಅವರ ಆದಾಯವೂ ವರ್ಷಕ್ಕೆ 1.80 ಲಕ್ಷ ರೂ. ಗಿಂತ ಅಧಿಕವಾಗುತ್ತಿದೆ. ಹೀಗಾಗಿ ಈ ಬಗ್ಗೆ ಪರಿಷ್ಕರಣೆ ಕುರಿತು ಚಿಂತನೆ ನಡೆದಿದೆ ಎಂದಿದ್ದಾರೆ.
ಕೇಂದ್ರ ಸರ್ಕಾರ ರಾಜ್ಯದಲ್ಲಿ 7,75,206 ಶಂಕಾಸ್ಪದ ಪಡಿತರ ಫಲಾನುಭವಿಗಳನ್ನು ಗುರುತಿಸಿದೆ. ರಾಜ್ಯದಲ್ಲಿ 4.53 ಲಕ್ಷ ಬಿಪಿಎಲ್ ಹಾಗೂ 1.25 ಲಕ್ಷ ಎಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳಿವೆ . ಇಲ್ಲಿನ ಜನಸಂಖ್ಯೆಗೆ ಹೊಲಿಸಿದರೆ ಶೇ.73ರಷ್ಟು ಕುಟುಂಬಗಳು ಬಿಪಿಎಲ್ ಕಾರ್ಡ್ ಪಡೆದಿವೆ. ರಾಜ್ಯವು ಜಿಎಸ್ಟಿ , ಆದಾಯ ತೆರಿಗೆ ಪಾವತಿಯಲ್ಲಿ ದೇಶದಲ್ಲಿ ಮುಂಚೂಣಿಯಲ್ಲಿದೆ. ಈ ಅಂಶ ಪರಿಗಣಿಸಿದರೆ ಬಿಪಿಎಲ್ ಕುಟುಂಬಗಳ ಪ್ರಮಾಣ ಶೇ.50ರಷ್ಟು ಇರಬೇಕಿತ್ತು. ಆದರೆ ಅದಕ್ಕೂ ಹೆಚ್ಚಿನ ಕುಟುಂಬ ಬಿಪಿಎಲ್ ಕಾರ್ಡ್ ಪಡೆದುಕೊಂಡಿವೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಅನರ್ಹ ಬಿಪಿಎಲ್ ಕಾರ್ಡ್ದಾರರಿಗೆ ಶಾಕ್ ನೀಡಲಿದೆ ಆಹಾರ ಇಲಾಖೆ; 12 ಲಕ್ಷ ಪಡಿತರ ಚೀಟಿ ರದ್ದತಿಗೆ ತೆರೆಮರೆಯ ಸಿದ್ಧತೆ
ರಾಜ್ಯದಲ್ಲಿ ಆದ್ಯತಾ ಪಡಿತರ ಚೀಟಿಗಳನ್ನು ಪಡೆಯುವ ಹಾಗೂ ಹೊರಗಿಡುವ ಬಗ್ಗೆ 2017ರಲ್ಲಿ ಮಾನದಂಡಗಳನ್ನು ರೂಪಿಸಲಾಗಿದೆ. ಇದರ ಅನ್ವಯ ಸರ್ಕಾರಿ, ಅನುದಾನಿತ ಸಂಸ್ಥೆಗಳು, ಮಂಡಳಿ, ನಿಗಮ, ಸ್ವಾಯತ್ತ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ನೌಕರರು, ಆದಾಯ, ಸೇವಾ ಹಾಗೂ ಜಿಎಸ್ಟಿ ತೆರಿಗೆ ಪಾವತಿ ಮಾಡುವ ಕುಟುಂಬಗಳಿಗೆ ಬಿಪಿಎಲ್ ಕಾರ್ಡ್ ನೀಡಲಾಗುವುದಿಲ್ಲ. ಆದಾಯ ಮಿತಿ ಪರಿಷ್ಕರಣೆಗೆ ಚಿಂತನೆ ನಡೆಸಿರುವುದರಿಂದ, ತಾತ್ಕಾಲಿಕವಾಗಿ ಯಾವುದೇ ಬಿಪಿಎಲ್ ಕಾರ್ಡುಗಳನ್ನು ರದ್ದು ಮಾಡದಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಸದ್ಯ ವೈದ್ಯಕೀಯ ಆಧಾರದಲ್ಲಿ ಮಾತ್ರ ಬಿಪಿಎಲ್ ಕಾರ್ಡ್ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಒಂದು ವೇಳೆ ಕುಟುಂಬದ ಸದಸ್ಯರು ನೌಕರಿಗೆ ಸೇರಿದ್ದಾರೆ ಎನ್ನುವ ಕಾರಣದಿಂದ ಬಿಪಿಎಲ್ ಕಾರ್ಡ್ ರದ್ದಾಗಿದ್ದರೆ, ಬಾಧಿತ ಕುಟುಂಬದವರು ನೌಕರಿಗೆ ಸೇರಿದವರು ತಮ್ಮೊಂದಿಗೆ ವಾಸವಾಗಿಲ್ಲ ಎನ್ನುವ ಕಾರಣ ನೀಡಿದಲ್ಲಿ, ಸಂಬಂಧಪಟ್ಟ ತಹಶೀಲ್ದಾರರಿಗೆ ಅರ್ಜಿ ಸಲ್ಲಿಸಿದರೆ 15 ದಿನದ ಒಳಗಾಗಿ ಬಿಪಿಎಲ್ ಕಾರ್ಡ್ ಪುನಃ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.