ಕರಾವಳಿಗರು ಬೆಂಕಿ ಹಚ್ಚೋರು ಎಂದ ಸಚಿವ ಭೈರತಿ ಸುರೇಶ್ ವಿರುದ್ಧ ಭುಗಿಲೆದ್ದ ಆಕ್ರೋಶ
ಬಿಜೆಪಿ ಸದಸ್ಯರ ತೀವ್ರ ವಿರೋಧ ಮತ್ತು ಪ್ರತಿಭಟನೆ ನಡುವೆ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ(ಪ್ರತಿಬಂಧಕ) ವಿಧೇಯಕ ವಿಧಾನಸಭೆಯಲ್ಲಿ ಇಂದು ಅಂಗೀಕಾರಗೊಂಡಿತು. ಇದರ ನಡುವೆ ಸಚಿವ ಭೈರತಿ ಸುರೇಶ್ 'ನೀವು ಕರಾವಳಿಯವರು ಬೆಂಕಿ ಹಚ್ಚುವವರು' ಎಂಬ ಹೇಳಿಕೆ ನೀಡುವ ಮೂಲಕ ಹೊಸ ವಿವಾದವನ್ನು ಸೃಷ್ಟಿಸಿದ್ದು, ಕರಾವಳಿ ಭಾಗದ ಶಾಸಕರ ಆಕ್ರೋಶಕ್ಕೆ ಕಾರಣವಾಗಿದೆ.

ಬೆಳಗಾವಿ (ಡಿಸೆಂಬರ್ .18): ಕರಾವಳಿ ಭಾಗದ ಬಿಜೆಪಿ ಶಾಸಕರ ವಿರುದ್ಧ ‘ಬೆಂಕಿ ಹಚ್ಚುವವರು’ ಎಂದು ಸಚಿವ ಬೈರತಿ ಸುರೇಶ್ (Byarathi Suresh) ಅವರು ಹೇಳಿರುವುದು ಸದನದಲ್ಲಿ ಕಿಚ್ಚನ್ನು ಹೊತ್ತಿಸಿದೆ. ಸುವರ್ಣಸೌಧದ ವಿಧಾನಸಭೆಯಲ್ಲಿಂದು ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ(ಪ್ರತಿಬಂಧಕ) ವಿಧೇಯಕಕ್ಕೆ (Hate Speech Bill) ವಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದು, ಭಾವಿಗಿಳಿದು ಪ್ರತಿಭಟನೆ ನಡೆಸಿದರು. ಹೀಗೆ ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರ ನಡುವೆ ಜೋರಾಗಿ ಮಾತಿನ ಸಮರ ನಡೆಯುತ್ತಿರುವಾಗಲೇ ಸಚಿವ ಭೈರತಿ ಸುರೇಶ್ ಅವರು ಎದ್ದು ನಿಂತು ನೀವು ಕರಾವಳಿಯವರು ಬೆಂಕಿ ಹಚ್ಚುವವರು ಎಂದು ಹೇಳಿದರು. ಇದು ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಭಾರೀ ವಾಕ್ಸಮರಕ್ಕೆ ಕಾರಣವಾಯಿತು. ಕರಾವಳಿ ಭಾಗದ ಬಿಜೆಪಿ ಶಾಸಕರು ಸಚಿವರ ವಿರುದ್ಧ ತಿರುಗಿಬಿದ್ದು, ಕ್ಷಮೆಯಾಚನೆಗೆ ಪಟ್ಟು ಹಿಡಿದರು.
ಸಚಿವ ಸುರೇಶ್ ಕ್ಷಮೆಗೆ ಬಿಗಿಪಟ್ಟು
ಸದನದಲ್ಲಿ ಚರ್ಚೆಯ ವೇಳೆ ಸಚಿವ ಭೈರತಿ ಸುರೇಶ್ ಅವರು ಬಿಜೆಪಿ ಶಾಸಕರನ್ನು ಉದ್ದೇಶಿಸಿ, ‘ನೀವು ಕರಾವಳಿಯವರು ಬೆಂಕಿ ಹಚ್ಚುವವರು’ ಎಂದು ನೀಡಿದ ಹೇಳಿಕೆ ನೀಡಿದ್ದೇ ತಡ ಸದನದಲ್ಲಿ ಕಿಚ್ಚು ಹಚ್ಚಿತು. ಸಚಿವರ ಮಾತಿನಿಂದ ಕೆರಳಿದ ಬಿಜೆಪಿ ಶಾಸಕರಾದ ಸುನಿಲ್ ಕುಮಾರ್, ವೇದವ್ಯಾಸ ಕಾಮತ್ ಮತ್ತು ಚನ್ನಬಸಪ್ಪ ಅವರು ಸಚಿವರ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದರು. ಕರಾವಳಿ ಸಂಸ್ಕೃತಿಗೆ ನೀವು ಅಪಮಾನ ಮಾಡಿದ್ದೀರಿ, ಕೂಡಲೇ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ: BPL ಕಾರ್ಡ್ದಾರರಿಗೆ ಶೀಘ್ರವೇ ಗುಡ್ನ್ಯೂಸ್?: ಆದಾಯ ಮಿತಿ ಪರಿಷ್ಕರಣೆಗೆ ಚಿಂತನೆ
ಸ್ಪೀಕರ್ ಖಾದರ್ ವಿರುದ್ಧ ಆಕ್ರೋಶ
ಈ ಸಂದರ್ಭದಲ್ಲಿ ಕಾರಾವಳಿ ಭಾಗದ ಶಾಸಕರೂ ಆಗಿರುವ ಸ್ಫೀಕರ್ ಯುಟಿ ಖಾದರ್ ಸೈಲೆಂಟ್ ಆಗಿರುವುದಕ್ಕೆ ಬಿಜೆಪಿ ಶಾಸಕ ಸುನಿಲ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು. ಸಭಾಧ್ಯಕ್ಷ ಯು.ಟಿ. ಖಾದರ್ ಅವರನ್ನೇ ಪ್ರಶ್ನಿಸಿ, ‘ನೀವೂ ಕರಾವಳಿಯವರಲ್ಲವೇ? ಸಚಿವರು ಇಡೀ ಕರಾವಳಿಗೆ ಬೆಂಕಿ ಹಚ್ಚುವವರು ಎಂದು ಹಣೆಪಟ್ಟಿ ಕಟ್ಟುತ್ತಿದ್ದರೂ ನೀವು ಸುಮ್ಮನೆ ಕುಳಿತಿದ್ದೀರಲ್ಲಾ? ಪೀಠದಿಂದ ಹೊರಗೆ ಬನ್ನಿ’ ಎಂದರು. ಆಗ ಸ್ಪೀಕರ್ ಯುಟಿ ಖಾದರ್ ಅವರು ವಿವಾದಾತ್ಮಕ ಮಾತನ್ನು ಕಡತದಿಂದ ತೆಗೆದುಹಾಕುವುದಾಗಿ ಹೇಳಿದರೂ ಬಿಜೆಪಿ ಶಾಸಕರು ಸಮಾಧಾನಗೊಳ್ಳದೆ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು.
ಗದ್ದಲದ ನಡುವೆ ಬಿಲ್ ಪಾಸ್
ಬಿಜೆಪಿ ಶಾಸಕರ ಪ್ರತಿಭಟನೆ ಮತ್ತು ಗದ್ದಲದ ನಡುವೆಯೇ ಸಭಾಧ್ಯಕ್ಷರು ‘ದ್ವೇಷ ಭಾಷಣ ತಡೆ ವಿಧೇಯಕ’ವನ್ನು ಅಂಗೀಕರಿಸಿದರು. ಈ ಕ್ರಮದಿಂದ ತೀವ್ರ ಆಕ್ರೋಶಗೊಂಡ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಸದನದಲ್ಲೇ ವಿಧೇಯಕದ ಪ್ರತಿಯನ್ನು ಹರಿದು ಹಾಕಿದರು. ‘ಇದು ದ್ವೇಷ ಭಾಷಣ ವಿರೋಧಿ ಬಿಲ್ ಅಲ್ಲ, ಬದಲಿಗೆ ವಿರೋಧ ಪಕ್ಷಗಳ ಧ್ವನಿ ಅಡಗಿಸುವ ಬಿಲ್’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕಿಡಿಕಾರಿದರು.
ಸದ್ಯ ಕರಾವಳಿ ಭಾಗದ ಬಿಜೆಪಿ ಶಾಸಕರು ಆಕ್ರೋಶಗೊಂಡಿದ್ದು, ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಸಚಿವ ಭೈರತಿ ಸುರೇಶ್ ವಿರುದ್ಧ ಕಿಡಿಕಾರಿದ್ದಾರೆ. ಇದನ್ನು ಬಿಜೆಪಿ ಅಸ್ತ್ರವನ್ನಾಗಿ ಮಾಡಿಕೊಂಡು ಕರಾವಳಿ ಭಾಗದ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸುವ ಸಾಧ್ಯತೆಗಳಿವೆ. ಹೀಗಾಗಿ ಇದು ಮುಂದೆ ಯಾವ ಹಂತಕ್ಕೆ ಹೋಗಲಿದೆ ಎನ್ನುವುದನ್ನು ಕಾದುನೋಡಬೇಕಿದೆ.




