ಕಾಂಗ್ರೆಸ್ ಮುಖಂಡನಿಂದಲೇ ಪಡಿತರ ಅಕ್ಕಿ ಕಾಳ ಸಂತೆಯಲ್ಲಿ ಮಾರಾಟ: ಮಾಲು ಸಮೇತ ಸಿಕ್ಕಿಬಿದ್ದ
ಕಾಂಗ್ರೆಸ್ ಮುಖಂಡ ವಿರುದ್ಧ ಬಿಪಿಎಲ್ ಅಕ್ಕಿಯನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿರುವ ಆರೋಪ ಕೇಳಿಬಂದಿದೆ. ಕರ್ನಾಟಕ ರಾಷ್ಟ್ರ ಸಮಿತಿ ಈ ಅಕ್ರಮ ದಂಧೆಯನ್ನು ಬಯಲಿಗೆಳೆದಿದ್ದು, ಎರಡೂ ಗುಂಪುಗಳ ನಡುವೆ ಗಲಾಟೆ ಉಂಟಾಗಿದೆ. ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದ್ದು, ಪ್ರಕರಣವನ್ನು ಸೂಕ್ತ ತನಿಖೆಗೆ ಒತ್ತಾಯಿಸಲಾಗಿದೆ.

ಬೆಂಗಳೂರು, ಡಿಸೆಂಬರ್ 18: ಬಿಪಿಎಲ್ ಕಾರ್ಡ್ದಾರರಿಂದ ಕಡಿಮೆ ಬೆಲೆಗೆ ಅಕ್ಕಿ (rice) ಖರೀದಿಸಿ ಹೆಚ್ಚಿನ ಬೆಲೆಗೆ ಕಾಳ ಸಂತೆಯಲ್ಲಿ ಮಾರಾಟ ಮಾಡಲಾಗಿರುವ ಸಾಕಷ್ಟು ಘಟನೆಗಳು ವರದಿಯಾಗಿವೆ. ಪಡಿತರ ಅಕ್ಕಿಯನ್ನು ಅಕ್ರಮವಾಗಿ ಖರೀದಿ ಮಾಡಿ ಬಳಿಕ ಕಾಳಸಂತೆಯಲ್ಲಿ ಮಾರಾಟ ಮಾಡಲು ಲಾರಿಯಲ್ಲಿ ಸಾಗಾಟ ಮಾಡುವಾಗ ಸಿಕ್ಕಿಬಿದ್ದ ಸಾಕಷ್ಟು ನಿದರ್ಶನಗಳಿವೆ. ಇದೀಗ ಕಾಂಗ್ರೆಸ್ (congress) ಮುಖಂಡನಿಂದಲೇ ಈ ಅಕ್ಕಿ ಮಾರಾಟ ದಂಧೆ ನಡೆಯುತ್ತಿರುವ ಆರೋಪ ಕೇಳಿಬಂದಿದೆ. ಕಾಳ ಸಂತೆಯಲ್ಲಿ ಬಿಪಿಎಲ್ ಅಕ್ಕಿ ಮಾರಾಟ ನೆಪದಲ್ಲಿ ಎರಡು ಗುಂಪುಗಳ ನಡುವೆ ಆಕ್ರೋಶ ಭುಗಿಲೆದ್ದಿದೆ.
ಎರಡು ಗುಂಪುಗಳ ನಡುವೆ ಗಲಾಟೆ
ಕರ್ನಾಟಕ ರಾಷ್ಟ್ರ ಸಮಿತಿ ಹಾಗೂ ಅಲೀಮ್ ಎಂಬ ಕಾಂಗ್ರೆಸ್ ಮುಖಂಡನ ಮಧ್ಯೆ ಕಾಳ ಸಂತೆಯಲ್ಲಿ ಅಕ್ಕಿ ಮಾರಾಟ ನೆಪದಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ ಉಂಟಾಗಿದೆ. ಕಾಂಗ್ರೆಸ್ ಮುಖಂಡ ಅಲೀಮ್ ಎಂಬುವವರಿಂದ ಕಾನೂನು ಬಾಹಿರವಾಗಿ ಬಿಪಿಎಲ್ ಕಾರ್ಡ್ದಾರರಿಂದ ಅಕ್ಕಿ ಖರೀದಿಸಿ ಹೆಚ್ಚಿನ ಬೆಲೆಗೆ ಕಾಳ ಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಆರೋಪಿಸಿದೆ. ಅಷ್ಟೇ ಅಲ್ಲದೆ KRS ಪಕ್ಷದ ಮುಖಂಡರು ಅಕ್ರಮವಾಗಿ ಅಕ್ಕಿ ಸಾಗಾಟ ಮಾಡುತ್ತಿದ್ದವರನ್ನು ಹಿಡಿದು ಪೊಲೀಸ್ ಠಾಣೆಗೆ ಕರೆತಂದಿದ್ದರು.
ಇದನ್ನೂ ಓದಿ: ಕರ್ನಾಟಕದ ಅನ್ನಭಾಗ್ಯ ಅಕ್ಕಿ ದುಬೈನಲ್ಲಿ ಮಾರಾಟವಾಗುತ್ತಿದ್ಯಾ? ಕಾಂಗ್ರೆಸ್-ಬಿಜೆಪಿ ಜಟಾಪಟಿ
ಇನ್ನು KRS ಪಕ್ಷದ ಮುಖಂಡರ ಆರೋಪವನ್ನು ಅಲೀಮ್ ಅಲ್ಲಗೆಳೆದಿದ್ದಾರೆ. ಸದ್ಯ ಕುಮಾರಸ್ವಾಮಿ ಲೇಔಟ್ ಸ್ಟೇಷನ್ ಸುತ್ತಮುತ್ತ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂಥಾಗಿದೆ. 300ಕ್ಕೂ ಹೆಚ್ಚು ಅಲೀಮ್ ಬೆಂಬಲಿಗರು ಹಾಗೂ KRS ಮುಖಂಡರು ಸೇರಿದ್ದ ಹಿನ್ನೆಲೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಸದ್ಯ ಎರಡು ಕಡೆಯ ಗುಂಪುಗಳನ್ನು ಪೊಲೀಸರು ಚದುರಿಸಿದ್ದಾರೆ.
ಕಾಂಗ್ರೆಸ್ ಮುಖಂಡ ಅಲೀಮ್ ದಂಧೆ ನಡೆಸುತ್ತಿದ್ದಾನೆ: ರಘುಪತಿ ಭ
ಇನ್ನು ಈ ಬಗ್ಗೆ KRS ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ರಘುಪತಿ ಭಟ್ ಮಾತನಾಡಿದ್ದು, ಹಲವು ದಿನಗಳ ಹಿಂದೆ ಈ ರೀತಿ ಅಕ್ರಮವಾಗಿ ಬಿಪಿಎಲ್ ಅಕ್ಕಿ ಮಾರಾಟದ ಮಾಹಿತಿ ಸಿಕ್ತು. ನಾವು ಪೂರ್ವ ತಯಾರಿ ಮಾಡಿಕೊಂಡು ಅಕ್ಕಿ ತುಂಬಿಸಿಕೊಂಡು ಹೋಗುತ್ತಿದ್ದ ಜನರನ್ನು ಹಿಡಿದಿದ್ದೇವೆ. ಸುಮಾರು 45 ಅಕ್ಕಿ ಚೀಲಗಳನ್ನು ನಾವು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದೇವೆ ಎಂದರು.
ಇದನ್ನೂ ಓದಿ: ಯಾದಗಿರಿ: ಶಾಲಾ ಮಕ್ಕಳ ಬಿಸಿಯೂಟಕ್ಕೆ ಹುಳ ಬಿದ್ದಿರೋ ಅಕ್ಕಿ ಬೇಳೆ; TV9 ರಿಯಾಲಿಟಿ ಚೆಕ್ನಲ್ಲಿ ಬಯಲಾಯ್ತು ಅಸಲಿಯತ್ತು
ಅಲೀಮ್ ಎಂಬ ಕಾಂಗ್ರೆಸ್ ಮುಖಂಡನೇ ಈ ದಂಧೆಯನ್ನು ನಡೆಸುತ್ತಿದ್ದಾನೆ. ಮುಂದಿನ ಪಾಲಿಕೆ ಚುನಾವಣೆಯಲ್ಲಿ ನಿಲ್ಲಬೇಕು ಅಂತ ಅಲೀಮ್ ಪ್ಲಾನ್ ಮಾಡಿಕೊಂಡಿದ್ದಾನೆ. ಯಲಚೇನಹಳ್ಳಿ, ಇಲಿಯಾಸ್ ನಗರ ಸುತ್ತಮುತ್ತ ಆತನ ಹಾವಳಿ ಮಿತಿಮೀರಿದೆ. ನಾವು KRS ಪಕ್ಷದ ಮುಖಂಡರು ಸಕ್ರಿಯವಾಗಿ ಸಮಾಜಸೇವೆಯಲ್ಲಿ ತೊಡಗಿದ್ದೇವೆ. ನಮ್ಮ ಜನಪ್ರಿಯತೆಯನ್ನು ಸಹಿಸಲು ಆಗದೆ ಈ ರೀತಿ ಹಗೆ ಸಾಧಿಸುತ್ತಿದ್ದಾನೆ. ಅವನ ಅಕ್ರಮಗಳನ್ನು ಬಯಲಿಗೆ ಎಳೆದಿದ್ದಕ್ಕಾಗಿ ನಮಗೆ ಬೆದರಿಕೆ ಹಾಕುತ್ತಿದ್ದಾರೆ. ಅವರ ಕಡೆಯ 200 ಹುಡುಗರನ್ನು ಕರೆಸಿ ಹಲ್ಲೆ ಮಾಡಲು ಯತ್ನಿಸುತ್ತಿದ್ದಾರೆ. ನಾವು ಕಾನೂನು ಹೋರಾಟ ಮುಂದುವರೆಸುತ್ತೇವೆ. ಪೊಲೀಸರು ನಮಗೆ ರಕ್ಷಣೆ ನೀಡಬೇಕು ಎಂದು ಅವರು ಹೇಳಿದ್ದಾರೆ.
ವರದಿ: ಲಕ್ಷ್ಮಿ ನರಸಿಂಹ ಟಿವಿ9 ಬೆಂಗಳೂರು
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




