ಬೆಳಗಾವಿ, ಜನವರಿ 20: ಕಾಂಗ್ರೆಸ್ ಪಕ್ಷದಲ್ಲಿ ನಾಯಕರ ನಡುವಿನ ಒಳಮುನಿಸು ಕಡಿಮೆ ಆದಂತೆ ಕಾಣಿಸುತ್ತಿಲ್ಲ. ಕಳೆದೆರಡು ದಿನಗಳಿಂದ ಡಿಸಿಎಂ ಡಿಕೆ ಶಿವಕುಮಾರ್ ಬೆಳಗಾವಿಯಲ್ಲಿ ವಾಸ್ತವ್ಯ ಹೂಡಿದ್ದಾರೆ. ಆದರೆ ಒಮ್ಮೆಯೂ ಅವರನ್ನು ಭೇಟಿಯಾಗಲು ಸಚಿವ ಸತೀಶ್ ಜಾರಕಿಹೊಳಿ ಮನಸು ಮಾಡಿಲ್ಲ. ಕಾಮಗಾರಿಗಳ ಉದ್ಘಾಟನೆ ನೆಪ ಹೇಳಿಕೊಂಡು ತಪ್ಪಿಸಿಕೊಳ್ಳುತ್ತಿದ್ದಾರೆ. ಹೀಗೆ ಅಂತರ ಕಾಯ್ದುಕೊಳ್ಳುತ್ತಲೇ ಮುನಿಸು ಹೊರಹಾಕುತ್ತಿದ್ದಾರಾ ಎಂಬ ಚರ್ಚೆ ಕಾಂಗ್ರೆಸ್ ಆಂತರಿಕ ವಲಯದಲ್ಲಿ ಗರಿಗೆದರಿದೆ.
ಮತ್ತೊಂದೆಡೆ, ಸತೀಶ್ ಜಾರಕಿಹೊಳಿ ಆಪ್ತ ವಲಯದಲ್ಲಿ ಕಾಣಿಸಿಕೊಂಡ ಶಾಸಕರು ದುಬೈ ಪ್ರವಾಸಕ್ಕೆ ಯೋಜಿಸಿದ್ದಾರೆ. ನಾಲ್ಕೈದು ದಿನಗಳ ಕಾಲ ವಿದೇಶಕ್ಕೆ ಹಾರಲು ಸಜ್ಜಾಗಿದ್ದಾರೆ. ಇದರಿಂದ ಎಚ್ಚೆತ್ತುಕೊಂಡಿರುವ ಡಿಕೆ ಶಿವಕುಮಾರ್ ಭಾನುವಾರ ಸತೀಶ್ ಆಪ್ತ ಆಸೀಫ್ ಸೇಠ್ ನಿವಾಸಕ್ಕೆ ಭೇಟಿಕೊಟ್ಟಿದ್ದಾರೆ. ಯಾರೆಲ್ಲಾ ಪ್ರವಾಸಕ್ಕೆ ಹೋಗುತ್ತಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾರೆ. ಈ ಮಾತಿಗೆ ಸಮಾಜಾಯಿಸಿ ಕೊಟ್ಟ ಸೇಠ್, ಪ್ಲ್ಯಾನ್ ಮಾಡಿದ್ದೇವೆ. ನಿಮಗೆ ಹೇಳದೇ ಹೋಗಲ್ಲ ಎಂದು ಉತ್ತರಿಸಿದ್ದಾರೆ. ಮುಂದುವರೆದ ಡಿಕೆ ಶಿವಕುಮಾರ್, ಪಕ್ಷದಲ್ಲಿದ್ದಾಗ ಶಿಸ್ತಿನಿಂದ ಇರುವಂತೆ ಪಾಠ ಮಾಡಿದ್ದಾರೆ.
ಇತ್ತೀಚೆಗೆ ಕಾಂಗ್ರೆಸ್ ನಾಯಕರ ಬಹಿರಂಗ ಹೇಳಿಕೆಗಳು ಹೆಚ್ಚಾಗಿದ್ದವು. ಯಾವುದೇ ಅಡೆತಡೆ ಇಲ್ಲದೆ ಎಲ್ಲ ವಿಷಯಗಳ ಬಗ್ಗೆ ಮಾತನಾಡತ್ತಿದ್ದರು. ಆದರೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೂಚನೆ ಬಳಿಕ ಎಲ್ಲರೂ ಮೌನಕ್ಕೆ ಶರಣಾಗಿದ್ದಾರೆ. ಗೃಹ ಸಚಿವ ಜಿ ಪರಮೇಶ್ವರ್ ಅವರಂತೂ ರಾಜಕೀಯ ಕುರಿತ ಹೇಳಿಕೆ ನೀಡಲು ಹಿಂದೇಟು ಹಾಕುತ್ತಿದ್ದಾರೆ.
ಏತನ್ಮಧ್ಯೆ, ಸಿಎಂ ಬದಲಾವಣೆ ಕೂಗು ಕೂಡ ಕೈ ಪಾಳಯದಲ್ಲಿ ತಣ್ಣಗಾಗಿದೆ. ಸಿಎಂ ಸ್ಥಾನ ಬದಲಾಗಲ್ಲ ಎಂದು ಸಚಿವರು ಹೇಳಿಕೆ ಕೊಟ್ಟಿದ್ದಾರೆ. ಮತ್ತೊಂದೆಡೆ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ, ಸಿಎಂ ಮುಂದುವರೆಯುತ್ತಾರೆ. ಕನಸು ಕಾಣುವವರು ಕಾಣಲಿ ಎಂದು ಗುಡುಗಿದ್ದಾರೆ.
ಕಾಂಗ್ರೆಸ್ ಒಳಬೇಗುದಿ ಬಿಜೆಪಿಗೆ ದಾಳವಾಗಿ ಸಿಕ್ಕಿದೆ. ಕಾಂಗ್ರೆಸ್ನ ಬಡಿದಾಟ ಆಡಳಿತದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಬಿಜೆಪಿ ನಾಯಕರು ವಾಗ್ದಾಳಿ ನಡೆಸಿದ್ದಾರೆ.
ಇಷ್ಟೆಲ್ಲಾ ಬೆಳವಣಿಗೆಗಳ ಮಧ್ಯೆ ಡಿಸಿಎಂ ಡಿಕೆ ಶಿವಕುಮಾರ್ ಬೆಳಗಾವಿಯ ಕಪಿಲೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದೇ ವೇಳೆ ಅರ್ಚಕರು, ಆಡಳಿತ ಮಂಡಳಿ ಡಿಕೆಗೆ ತ್ರಿಶೂಲ ಕಾಣಿಕೆ ನೀಡಿದ್ದಾರೆ. ಈ ವೇಳೆ ಸಿಎಂ ಆಗಲಿ ಎಂದು ಹಾರೈಸಿದ್ದು ಗಮನ ಸೆಳೆಯಿತು.
ಇದನ್ನೂ ಓದಿ: ಮೊದಲ ಬಾರಿ ಆಯ್ಕೆಯಾದ ಕಾಂಗ್ರೆಸ್ ಶಾಸಕರಿಂದ ವಿದೇಶ ಪ್ರವಾಸಕ್ಕೆ ಪ್ಲ್ಯಾನ್: ಡಿಕೆಶಿ ಅಚ್ಚರಿಯ ಪ್ರತಿಕ್ರಿಯೆ
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ