ಬೆಳಗಾವಿ ಬರಪೀಡಿತ ಜಿಲ್ಲೆ ಎಂದು ಘೋಷಿಸಿ ; ಸರ್ಕಾರಕ್ಕೆ ಬಿಜೆಪಿ ನಾಯಕನ ಆಗ್ರಹ
ರೈತರಿಗೆ ಏಳು ಗಂಟೆ ವಿದ್ಯುತ್ ನೀಡುತ್ತೇವೆ ಅಂತ ಎರಡ್ಮೂರು ಗಂಟೆ ನೀಡುತ್ತಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ವಿಶೇಷವಾಗಿ ಕಬ್ಬು ಬೆಳೆಯುತ್ತಾರೆ. ರೈತ ಬಾವಿ, ಬೋರ್‌ವೆಲ್, ಹೊಳೆಯಿಂದ ಬೆಳೆಗೆ ನೀರು ಹರಿಸುತ್ತಿದ್ದ. ಆದರೆ ಇದೀಗ ಕಳೆದ ಒಂದು ತಿಂಗಳಿಂದ ಅಯಮಿತ ಲೋಡ್ ಶೆಡ್ಡಿಂಗ್ ಆಗುತ್ತಿದೆ. ಅದರಲ್ಲೂ ಸತತವಾಗಿ ಮೂರು ಗಂಟೆ ಕೂಡ ವಿದ್ಯುತ್ ಬರಲ್ಲ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಹೇಳಿದರು.
ಚಿಕ್ಕೋಡಿ: ರೈತರಿಗೆ ಏಳು ಗಂಟೆ ಅನಿಯಮಿತ ವಿದ್ಯುತ್ ನೀಡಬೇಕು ಮತ್ತು ಬೆಳಗಾವಿಯನ್ನು (Belagavi) ಬರಪೀಡಿತ ಜಿಲ್ಲೆಯಂತ ಘೋಷಿಸಬೇಕೆಂದು ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ (Mahantesh Kavatagimath) ನೇತೃತ್ವದಲ್ಲಿ ಬಿಜೆಪಿ (BJP) ಮುಖಂಡರು ಚಿಕ್ಕೋಡಿ ಉಪವಿಭಾಗಧಿಕಾರಿ ಮಾಧವ್ ಗಿತ್ತೆ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಬಳಿಕ ಚಿಕ್ಕೋಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ರಾಜ್ಯದ ಜನರಿಗೆ ಹಲವು ಗ್ಯಾರಂಟಿ ಕೊಟ್ಟು ಅಧಿಕಾರಕ್ಕೆ ಬಂದಿದ್ದಾರೆ. ನಿನಗೂ ಫ್ರೀ, ನನಗೂ ಫ್ರೀ ಅಂತ ಹೇಳಿದರು. ನಾವು ಫ್ರೀಯಿಂದ ಜನರಿಗೆ ಒಳ್ಳೆಯದಾಗುವ ನಿರೀಕ್ಷೆಯಲ್ಲಿದ್ವಿ, ಆದರೆ ಇಷ್ಟು ಬೇಗ ಜನರ ನಿರೀಕ್ಷೆ ಸುಳ್ಳಾಗುತ್ತೆ ಅಂದುಕೊಂಡಿರಲಿಲ್ಲ ಎಂದು ಹೇಳಿದರು.
ಉತ್ತರ ಕರ್ನಾಟಕದಲ್ಲಿ ನಮ್ಮ ತಾಯಂದಿರು ವರ್ಷಕ್ಕೊಮ್ಮೆ ಜಾತ್ರೆಗೆ ತವರುಮನೆಗೆ ಹೋಗುತ್ತಾರೆ. ಇಡೀ ವರ್ಷ ಹೆಣ್ಣುಮಕ್ಕಳು ಬಸ್‌ನಲ್ಲಿ ಪ್ರಯಾಣಿಸುವ ಪ್ರವೃತ್ತಿ ನಮ್ಮ ಭಾಗದಲ್ಲಿ ಇಲ್ಲ. ಜನರಿಗೆ ಸುಳ್ಳು ಹೇಳುವ, ತಪ್ಪು ವಿಷಯ ಪ್ರಚಾರ ಮಾಡಲು ಸರ್ಕಾರ ಮುಂದಾಗಿದೆ. ಅಧಿಕಾರಕ್ಕೆ ಬಂದ ಕೂಡಲೇ ವಿದ್ಯುತ್ ದರ ಹೆಚ್ಚು ಮಾಡಿದರು. ಒಂದು ಕಡೆ ವಿದ್ಯುತ್ ಭಾಗ್ಯ ಕೋಡುತ್ತೇವೆ ಅಂತ ಹೇಳುತ್ತಾರೆ, ಮೊತ್ತೊಂದು ಕಡೆ ಬಿಲ್ ಹೆಚ್ಚಳ ಮಾಡಿದರು ಎಂದರು.
ರೈತರಿಗೆ ಏಳು ಗಂಟೆ ವಿದ್ಯುತ್ ನೀಡುತ್ತೇವೆ ಅಂತ ಹೇಳಿ, ಎರಡ್ಮೂರು ಗಂಟೆ ನೀಡುತ್ತಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ವಿಶೇಷವಾಗಿ ಕಬ್ಬು ಬೆಳೆಯುತ್ತಾರೆ. ರೈತರು ಬಾವಿ, ಬೋರ್‌ವೆಲ್, ನದಿಯಿಂದ ಪಂಪಸೆಟ್ ಮೂಲಕ ಬೆಳೆಗಳಿಗೆ ನೀರು ಹರಿಸುತ್ತಿದ್ದಾರೆ. ಆದರೆ ಇದೀಗ ಕಳೆದ ಒಂದು ತಿಂಗಳಿಂದ ಅಯಮಿತ ಲೋಡ್ ಶೆಡ್ಡಿಂಗ್ ಆಗುತ್ತಿದೆ. ಇದರಿಂದ ನೀರು ಹರಿಸಲು ಸಾಧ್ಯವಾಗುತ್ತಿಲ್ಲ. ಕಬ್ಬು ಬೆಳೆಗಾರರು ತೊಂದರೆಯಲ್ಲಿದ್ದಾರೆ. ಈ ಮಧ್ಯೆ ಸಾಲ ಮರು ಪಾವತಿಗೆ ಬ್ಯಾಂಕ್ ಸಿಬ್ಬಂದಿ ಮನೆಗೆ ಬರುತ್ತಿದ್ದಾರೆ. ಈ ಬಗ್ಗೆ ಬೇಸಿಕ್ ಮಾಹಿತಿ ಕೂಡ ಸರ್ಕಾರಕ್ಕಿಲ್ಲ ಎಂದು ವಾಗ್ದಾಳಿ ಮಾಡಿದರು.
ಇದನ್ನೂ ಓದಿ: ಬೆಳಗಾವಿ: ಕೈ ಕೊಟ್ಟ ಮುಂಗಾರು, ನೀರಿಗಾಗಿ ಬೀದಿಗಿಳಿದು ರೈತರ ಹೋರಾಟ
ಲೋಡ್‌ಶೆಡ್ಡಿಂಗ್, ಬರಗಾಲ ವಿಚಾರದಲ್ಲಿ ಏಳು ದಿನಗಳೊಳಗೆ ಸರ್ಕಾರ ಸ್ಪಷ್ಟ ನಿರ್ದೇಶನ ಕೊಡಬೇಕು. ರೈತರಿಗೆ ಅನಿಯಮಿತ ಏಳು ಗಂಟೆ ವಿದ್ಯುತ್ ನೀಡಬೇಕು. ಬರದ ಬಗ್ಗೆ ಸ್ಪಷ್ಟವಾದ ನಿರ್ಣಯ ತೆಗೆದುಕೊಂಡು ಸರ್ವೆ ಕಾರ್ಯ ಮಾಡಬೇಕು. ಸರ್ಕಾರ ತಾವು ಆರಿಸಿ ಬಂದ ಸಂಭ್ರಮದಿಂದ ಹೊರಬಂದು ರೈತರ ರಕ್ಷಣೆಗೆ ಮುಂದಾಗಬೇಕು ಎಂದು ಒತ್ತಾಯ ಮಾಡಿದರು.
ಇನ್ನು ಎಸ್.ಟಿ.ಸೋಮಶೇಖರ್, ಶಿವರಾಂ ಹೆಬ್ಬಾರ್ ಮರಳಿ ಕಾಂಗ್ರೆಸ್‌ಗೆ ಹೋಗುತ್ತಾರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಯಾವ ಪಕ್ಷದಿಂದ ನಾವು ರಾಜಕೀಯವಾಗಿ ಅಧಿಕಾರ ಅನುಭವಿಸಿದ್ದೀವಿ. ಅಧಿಕಾರದಿಂದ ನಿಮಗೇನು ಲಾಭ ಆಗಬೇಕಾಗಿದೆ. ಮತ್ತೊಂದು ಪಕ್ಷ ಅಧಿಕಾರಕ್ಕೆ ಬಂದ ಬಳಿಕ ಪಕ್ಷ ಬಿಟ್ಟು ಹೋಗುವುದು ತಾಯಿಗೆ ದ್ರೋಹ ಮಾಡಿದ ಹಾಗೆ. ಅವರು ಮಾಡಿದ್ದು ಇವರು ಮಾಡಿದ್ದು ಅಂತಾ ವಿಶ್ಲೇಷಣೆ ಮಾಡಲ್ಲ. ಮತ್ತೆ ಅದನ್ನೇ ಮರಳಿ ಮಾಡುವುದಾರೇ ಪ್ರಜಾಪ್ರಭುತ್ವ ಯಾವ ಕಡೆ ಸಾಗುತ್ತಿದೆ? ನಾಳೆ ಎಲ್ಲರೂ ಇದನ್ನೇ ಮಾಡುತ್ತಾ ಹೋಗೋರಾ? ಎಂದು ಪ್ರಶ್ನಿಸಿದರು.
ಬೆಳಗಾವಿ, ಚಿಕ್ಕೋಡಿಯಿಂದ ಸ್ಪರ್ಧೆ ಮಾಡಲು ಸಿದ್ಧ: ಮಹಾಂತೇಶ ಕವಟಗಿಮಠ
ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿಯಲ್ಲಿ ಟಿಕೆಟ್‌ಗಾಗಿ ಲಾಭಿ ಜೋರಾಗಿದೆ. ಬೆಳಗಾವಿ, ಚಿಕ್ಕೋಡಿ ಎರಡು ಕ್ಷೇತ್ರಗಳ ಪೈಕಿ ಎಲ್ಲಿಯಾದರೂ ಸ್ಪರ್ಧಿಸಲು ಸಿದ್ಧನಿದ್ದೇನೆ. ನಾನೇನು ಸನ್ಯಾಸಿ ಅಲ್ಲ ವಿಧಾನ ಪರಿಷತ್ ಚುನಾವಣೆಯಲ್ಲಿ ಸೋತು ಒಂದೂವರೆ ವರ್ಷ ಆಗಿದೆ. ರಾಜಕಾರಣದಲ್ಲಿ ಜನರಿಗೆ ಸಹಾಯ ಮಾಡಲು ರಾಜಕೀಯ ಅಧಿಕಾರ ಅವಶ್ಯಕ. ವೈಯಕ್ತಿಕ ನನಗಾಗಿ ಅಲ್ಲ, ಜನರಿಗಾಗಿ. ರಾಜಕೀಯ ಅಧಿಕಾರವಿದ್ದರೇ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಬಹುದು. ಪಕ್ಷ ಅವಕಾಶ ಕೊಟ್ಟರೇ ಬೆಳಗಾವಿ, ಚಿಕ್ಕೋಡಿ ಎಲ್ಲಿ ಕೊಟ್ಟರೂ ಸ್ಪರ್ಧೆಗೆ ಸಿದ್ಧ ಎಂದು ಆಶಯ ವ್ಯಕ್ತಪಡಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ