ಬೆಳಗಾವಿ: ಜಿಲ್ಲೆಯಲ್ಲಿ ಮಳೆ (Rain) ಅಬ್ಬರ ಮುಂದುವರೆದಿದ್ದು, ಬಳ್ಳಾರಿ ನಾಲಾ ನೀರು ನುಗ್ಗಿ, ಹೊರ ವಲಯದ ಯಳ್ಳೂರ ಮಾರ್ಗದಲ್ಲಿರುವ ಗಣಪತಿ ದೇವಸ್ಥಾನ ಜಲಾವೃತವಾಗಿದೆ. ದೇವಸ್ಥಾನ ಪಕ್ಕದ ನೂರಾರು ಎಕರೆ ಭತ್ತದ ಗದ್ದೆ ಮುಳುಗಡೆಯಾಗಿದೆ. ನದಿಯಂತೆ ಬಳ್ಳಾರಿ ನಾಲಾ ಮಾರ್ಪಟ್ಟಿದೆ. ನೂರಾರು ಎಕರೆ ಭತ್ತ ಮುಳುಗಡೆಯಾದ್ರೂ ಸ್ಥಳಕ್ಕೆ ಕೃಷಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿಲ್ಲ. ಇನ್ನೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ಆರ್ಭಟ ಮುಂದುವರೆದಿದ್ದು, ಮಳೆಯಿಂದ ಕಳಸ ತಾಲೂಕಿನ ಬಲಿಗೆ ಗ್ರಾಮದಲ್ಲಿ ಭೂಕುಸಿತ ಉಂಟಾಗಿದ್ದು, ಗುಡ್ಡ ಕುಸಿದು ಬೃಹತ್ ಬಂಡೆಗಳು ರಸ್ತೆಯಲ್ಲಿ ಬೀಳುತ್ತಿವೆ. ಹೊರನಾಡು-ಬಲಿಗೆ ಸಂಪರ್ಕಿಸುವ ರಸ್ತೆಯಾಗಿದ್ದು, ಭಾರೀ ಮಳೆಯಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ಇದನ್ನೂ ಓದಿ: Karnataka Rain: ಕರ್ನಾಟಕದಲ್ಲಿ ಮುಂದುವರೆದ ಮಳೆ ಆರ್ಭಟ: ಬೆಳಗಾವಿ, ಚಿಕ್ಕಮಗಳೂರು, ಹಾಸನ ಜಿಲ್ಲೆಯ ಶಾಲೆಗಳಿಗೆ ರಜೆ ಘೋಷಣೆ
ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರಿ ಮಳೆ ಹಿನ್ನೆಲೆ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಗೋಡನಚಿನಮಲ್ಕಿ ಜಲಪಾತ ಉಕ್ಕಿ ಹರಿಯುತ್ತಿದೆ. ಪಾಲ್ಸ್ ಸುತ್ತಮುತ್ತ ತೆರಳದಂತೆ ಪ್ರವಾಸಿಗರಿಗೆ ಪೊಲೀಸರು ಎಚ್ಚರಿಕೆ ನೀಡಿದ್ದು, ಪೊಲೀಸರ ಕಣ್ತಪ್ಪಿಸಿ ಪಾಲ್ಸ್ ಬಳಿ ಬಂಡೆಗಲ್ಲು ಮೇಲೆ ನಿಂತು ಯುವಕರ ಹುಚ್ಚಾಟವಾಡಿದ್ದಾರೆ. ಬಂಡೆಗಲ್ಲು ತುತ್ತ ತುದಿಯಲ್ಲಿ ನಿಂತು ಯುವಕರು ಅಪಾಯಕಾರಿ ಸೇಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ.
ಅಪಾಯ ಮಟ್ಟ ಮೀರಿ ಹರಿಯುತ್ತಿರುವ ತುಂಗಭದ್ರಾ ನದಿ
ಅಪಾಯ ಮಟ್ಟ ಮೀರಿ ತುಂಗಭದ್ರಾ ನದಿ ಹರಿಯುತ್ತಿದ್ದು, ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಬೆನ್ನೂರು ಗ್ರಾಮದ ಐತಿಹಾಸಿಕ ಹೊಳೆ ಬಸವೇಶ್ವರ ದೇವಸ್ಥಾನ ಸಂಪೂರ್ಣವಾಗಿ ಮುಳುಗಡೆಯಾಗಿದೆ. ತುಂಗಭದ್ರಾ ಜಲಾಶಯದಿಂದ 1 ಲಕ್ಷ 40 ಸಾವಿರಕ್ಕೂ ಅಧಿಕ ಕ್ಯೂಸೆಕ್ ನೀರು ಬಿಡುಗಡೆಯಾಗಿದ್ದು, ತುಂಗಭದ್ರಾ ಜಲಾಶಯ ಸಂಪೂರ್ಣವಾಗಿ ಭರ್ತಿಯಾಗಿದೆ. ನದಿ ಪಕ್ಕದ ಜಮೀನುಗಳಿಗೆ ನೀರು ನುಗ್ಗಿದೆ.
ಇದನ್ನೂ ಓದಿ: Kodagu Rain: ಕೊಡಗು ಜಿಲ್ಲೆಯಾದ್ಯಂತ ವರುಣಾರ್ಭಟ: 15 ದಿನಗಳಲ್ಲಿ ಧರೆಗುರುಳಿದ 650 ವಿದ್ಯುತ್ ಕಂಬಗಳು
ಭೋರ್ಗರಿಯುತ್ತಿರುವ ಜಲಪಾತಗಳು: ಪ್ರವಾಸಿಗರಿಗೆ ನೋ ಎಂಟ್ರಿ
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ವಿಭೂತಿ ಪಾಲ್ಸ್, ನಾಗರಮಡಿ ಪಾಲ್ಸ್ ಮತ್ತು ಗೋಲಾರಿ ಪಾಲ್ಸ್ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಪ್ರವಾಸಿಗರಿಗೆ ನೋ ಎಂಟ್ರಿ ಎನ್ನಲಾಗುತ್ತಿದೆ. ನಿರಂತರ ಮಳೆಯಿಂದಾಗಿ ಜಲಪಾತಗಳು ಭೋರ್ಗರಿಯುತ್ತಿದ್ದು, ಜಲಪಾತಗಳ ಮುಂದೆ ಜಿಲ್ಲಾಡಳಿತ ನೋ ಎಂಟ್ರಿ ಬೋರ್ಡ್ ಹಾಕಿದೆ. ಪ್ರವಾಸಿಗರ ಹಿತದೃಷ್ಟಿಯಿಂದ ನೋ ಎಂಟ್ರಿ ಬೋಡ್೯ ಅಳವಡಿಕೆ ಮಾಡಿದ್ದು, ಪ್ರವಾಸಿಗರಿಗೆ ನಿರ್ಲಕ್ಷ್ಯ ಉಂಟಾಗಿದೆ.
ಮಳೆಯಿಂದ ಹೆತ್ತೂರು-ಕುಂಬ್ರಳ್ಳಿ ರಸ್ತೆ ಸಂಪರ್ಕ ಕಡಿತ
ಹಾಸನ: ಜಿಲ್ಲೆಯಲ್ಲಿ ಮಳೆ ಮುಂದುವರೆದಿದ್ದು, ನದಿ ತೊರೆಗಳು ಉಕ್ಕಿ ಹರಿಯುತ್ತಿವೆ. ಯಡಕೇರಿ ಹೊಳೆ ಉಕ್ಕಿ ಹರಿದು ಸೇತುವೆ ಮೇಲೆ ನೀರು ಹರಿಯುತ್ತಿದೆ. ಹೆತ್ತೂರು ಕುಂಬ್ರಳ್ಳಿ ಮಾರ್ಗದ ವಾಹನ ಸಂಚಾರ ಸ್ಥಗಿತವಾಗಿ ಜನರ ಪರದಾಡುವಂತ್ತಾಗಿದೆ. ಕಳೆದ ಎರಡು ವಾರಗಳಿಂದ ಎಡೆಬಿಡದೆ ಮಳೆ ಸುರಿಯುತ್ತಿದ್ದು, ಅವಾಂತರ ಸೃಷ್ಟಿಯಾಗಿದೆ. ನೆನ್ನೆ ಸಂಜೆಯಿಂದಲೂ ಸೇತುವೆ ಮೇಲೆ ಎರಡು ಅಡಿಯಷ್ಟು ಎತ್ತರಕ್ಕೆ ನೀರು ಹರಿಯುತ್ತಿತ್ತು. ನದಿ ಪಾತ್ರದ ಭತ್ತದ ಗದ್ದೆಗಳು ಜಲಾವೃತವಾಗಿವೆ.
Published On - 11:13 am, Fri, 15 July 22