ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ; ಗೆಲ್ಲುವ ಶಕ್ತಿ ಇರುವ ಅಭ್ಯರ್ಥಿಗೆ ಟಿಕೆಟ್: ಸತೀಶ್ ಜಾರಕಿಹೊಳಿ
Belagavi: ಸೋಮವಾರ ಕಾಂಗ್ರೆಸ್ ಕಮಿಟಿ ಸಭೆಯಿದೆ. ಮಾಜಿ ಸಚಿವ ಎಂ.ಬಿ.ಪಾಟೀಲ್ ನೇತೃತ್ವದ ಮೂವರು ನಾಯಕರು ಬರ್ತಾ ಇದ್ದಾರೆ. ಆಗ ಯಾವ ರೀತಿ ಚುನಾವಣೆ ಮಾಡಬೇಕೆಂದು ತೀರ್ಮಾನ ಆಗಲಿದೆ.
ಬೆಳಗಾವಿ: ಇಲ್ಲಿನ ಮಹಾನಗರ ಪಾಲಿಕೆ ಚುನಾವಣೆ ದಿನಾಂಕ ಸಪ್ಟೆಂಬರ್ 3 ಎಂದು ಘೋಷಣೆ ಆಗಿರುವ ಹಿನ್ನೆಲೆಯಲ್ಲಿ, ಕಾಂಗ್ರೆಸ್ ಕಾರ್ಯಕರ್ತರ ಜತೆ ಟಿಕೆಟ್ ಆಕಾಂಕ್ಷಿಗಳು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಭೇಟಿಯಾಗಿದ್ದಾರೆ. ಬೆಳಗಾವಿಯ ಜಾಧವ್ನಗರದಲ್ಲಿರುವ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಭೇಟಿಯಾಗಿದ್ದಾರೆ. ಸಪ್ಟೆಂಬರ್ 3ರಂದು ನಡೆಯಲಿರುವ ಬೆಳಗಾವಿ ಮಹಾನಗರ ಪಾಲಿಕೆಗೆ ಚುನಾವಣೆ ವಿಚಾರವಾಗಿ ಮಾತನಾಡಿದ ಸತೀಶ್ ಜಾರಕಿಹೊಳಿ, ಪಕ್ಷದ ಚಿಹ್ನೆ ಮೇಲೆ ಸ್ಪರ್ಧೆ ಕುರಿತು ಅಭಿಪ್ರಾಯ ಸಂಗ್ರಹಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಸೋಮವಾರ ಕಾಂಗ್ರೆಸ್ ಕಮಿಟಿ ಸಭೆಯಿದೆ. ಮಾಜಿ ಸಚಿವ ಎಂ.ಬಿ.ಪಾಟೀಲ್ ನೇತೃತ್ವದ ಮೂವರು ನಾಯಕರು ಬರ್ತಾ ಇದ್ದಾರೆ. ಆಗ ಯಾವ ರೀತಿ ಚುನಾವಣೆ ಮಾಡಬೇಕೆಂದು ತೀರ್ಮಾನ ಆಗಲಿದೆ. ಕಾರ್ಯಕರ್ತರ ಅಭಿಪ್ರಾಯದ ಬಳಿಕ ಕಾಂಗ್ರೆಸ್ ಪಕ್ಷ ಚಿಹ್ನೆ ಮೇಲೆ ಸ್ಪರ್ಧೆ ಮಾಡಬೇಕಾ ಬೇಡವಾ ಅನ್ನೋದು ತೀರ್ಮಾನ ಆಗಲಿದೆ. ನನ್ನ ವೈಯಕ್ತಿಕ ನಿರ್ಧಾರದ ಮೇಲೆ ತೀರ್ಮಾನ ಮಾಡಲು ಆಗಲ್ಲ. ಸ್ಥಳೀಯ ಮುಖಂಡರ ಅಭಿಪ್ರಾಯದ ಮೇಲೆ ಕಮಿಟಿ ಅಂತಿಮ ತೀರ್ಮಾನ ಮಾಡಲಿದೆ ಎಂದು ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ಕಳೆದ ಅವಧಿಯಲ್ಲೂ ಕಾಂಗ್ರೆಸ್ಗೆ ಪಾಲಿಕೆಯಲ್ಲಿ ಹಿಡಿತವಿತ್ತು. ಈಗಲೂ ಹೆಚ್ಚಿನ ಸ್ಥಾನ ಗೆಲ್ಲಲು ಪ್ರಯತ್ನ ಮಾಡ್ತೇವಿ. ಕೊರೊನಾ ಮೂರನೇ ಅಲೆ ಇದೆ. ಡಿಸೆಂಬರ್ ವರೆಗೂ ಚುನಾವಣೆ ಬೇಡ ಎಂದು ಸರ್ಕಾರವೇ ಹೇಳಿತ್ತು. ಆದ್ರೆ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿದೆ. ಏನೂ ಮಾಡಲು ಆಗಲ್ಲ. ಈ ಬಗ್ಗೆ ಚುನಾವಣಾ ಆಯೋಗ ಯೋಚನೆ ಮಾಡಬೇಕಿತ್ತು. ಈಗ ನಮಗೆ ಯಾವುದೇ ಆಯ್ಕೆಯಿಲ್ಲ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಬಸವರಾಜ ಬೊಮ್ಮಾಯಿ ಸರ್ಕಾರ ಆಕ್ಟಿವ್ ಆಗಿಲ್ಲ ಎಂದು ಮಾಧ್ಯಮಗಳ ಪ್ರಶ್ನೆಗೆ ಅವರು ಉತ್ತರಿಸಿದ್ದಾರೆ. ತಕ್ಷಣವೇ ಸರ್ಕಾರದ ಆಡಳಿತ ಆಕ್ಟಿವ್ ಆಗಲು ಆಗಲ್ಲ. ಸಿಎಂ ಬಸವರಾಜ ಬೋಮ್ಮಾಯಿ ಮತ್ತು ಸಚಿವರಿಗೆ ಇನ್ನೂ ಸಮಯಬೇಕು. ಸಿಎಂ ಆಗಿ 15 ದಿನವಾಗಿದೆ ಇನ್ನೂ ಸ್ವಲ್ಪ ಟೈಮ್ ಬೇಕು. ಪ್ರವಾಹದ ಸರ್ವೇ ಕಾರ್ಯ ಮಂದಗತಿಯಲ್ಲಿ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಪದೇಪದೇ ದೆಹಲಿ ಪ್ರಯಾಣ ವಿಚಾರವಾಗಿ ಅವರು ಪ್ತತಿಕ್ರಿಯೆ ನೀಡಿದ್ದಾರೆ. ಬೆಂಗಳೂರು ತಗೆದು ದೆಹಲಿಯನ್ನೇ ಹೆಡ್ ಕ್ವಾಟರ್ ಮಾಡಬೇಕು ಈಗ. ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ನ ಯಾವುದೇ ಹೊಂದಾಣಿಕೆ ಇಲ್ಲ. ಕಾಂಗ್ರೆಸ್ ಪಕ್ಷವು ಡೆವಲಪ್ಮೆಂಟ್ ವಿಚಾರ ಇಟ್ಟುಕೊಂಡು ಪಾಲಿಕೆ ಚುನಾವಣೆ ಎದುರಿಸುತ್ತೇವೆ. ಕಾಂಗ್ರೆಸ್ ಪಕ್ಷ 50 ವರ್ಷ ಮಾಡಿದ ಡೆವಲಪ್ಮೆಂಟ್ ವಿಚಾರ ಇಟ್ಟುಕೊಂಡು ಹೋಗ್ತಿವಿ. ಗೆಲ್ಲುವಂತ ಶಕ್ತಿ ಇರುವ ಅಭ್ಯರ್ಥಿಗೆ ಟಿಕೆಟ್ ಕೊಡ್ತೀವಿ ಎಂದು ಹೇಳಿದ್ಧಾರೆ. ಸಿ.ಟಿ. ರವಿ ಹೇಳಿಕೆ ಅವರಿಗೆ, ಅವರ ಪಕ್ಷಕ್ಕೆ ಶೋಭೆ ತರುವಂತದ್ದಲ್ಲ. ಅವರ ಹೇಳಿಕೆಗಳು ಅವರ ಪಕ್ಷಕ್ಕೆನೇ ಡ್ಯಾಮೆಜ್ ಮಾಡಲಿದೆ ಎಂದು ಸತೀಶ್ ಜಾರಕಿಹೊಳಿ ಅಭಿಪ್ರಾಯಪಟ್ಟಿದ್ಧಾರೆ.
ಇದನ್ನೂ ಓದಿ: Karnataka Politics: 2023ರ ಚುನಾವಣೆಯಲ್ಲಿ123 ಕ್ಷೇತ್ರ ಗೆಲ್ಲುವುದೇ ಜೆಡಿಎಸ್ ಪಕ್ಷದ ಗುರಿ: ಎಚ್ ಡಿ ಕುಮಾರಸ್ವಾಮಿ ವಿಶ್ವಾಸ
ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ ಗದಗದ ಇಬ್ಬರು ಮಾಜಿ ಶಾಸಕರು