ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಕೃಷ್ಣಾ ನದಿ: ಇಪ್ಪತ್ತಕ್ಕೂ ಅಧಿಕ ಮನೆಗಳು ಮುಳುಗಡೆ
ಇಪ್ಪತ್ತಕ್ಕೂ ಅಧಿಕ ಮನೆಗಳು ಮುಳುಗಡೆಯಾಗಿರುವಂತಹ ಘಟನೆ ಗೋಕಾಕ್ ನಗರದ ಬೋಜಗಾರ ಗಲ್ಲಿ ಜಲಾವೃತವಾಗಿದೆ. ಮನೆಗಳಿಗೆ ನೀರು ನುಗ್ಗಿದ್ರೂ ಬಾರದ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿಕ್ಕೋಡಿ: ಮಹಾರಾಷ್ಟ್ರ ಘಟ್ಟ ಪ್ರದೇಶದಲ್ಲಿ ಮಳೆ ಮುಂದುವರೆದಿದ್ದು, ಅಪಾಯಮಟ್ಟ ಮೀರಿ ಕೃಷ್ಣಾ ನದಿ (Krishna River) ಹರಿಯುತ್ತಿದೆ. ನಿನ್ನೆಗಿಂತ ಕೃಷ್ಣಾ ನದಿಯಲ್ಲಿ 2 ಅಡಿ ಏರಿಕೆಯಾಗಿದ್ದು, 2 ಲಕ್ಷಕ್ಕೂ ಅಧಿಕ ಕ್ಯೂಸೆಕ್ ಒಳ ಹರಿವಿನಿಂದ ಕೃಷ್ಣಾ ನದಿ ಉಕ್ಕಿ ಹರಿಯುತ್ತಿದೆ. ಇವತ್ತು ಕೊಯ್ನಾ ಡ್ಯಾಂನಿಂದ ಮತ್ತೆ 10 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಚಿಕ್ಕೋಡಿ ಉಪವಿಭಾಗದಲ್ಲಿ ಪ್ರವಾಹ ಭೀತಿ ಮುಂದುವರೆದಿದ್ದು, ನಿನ್ನೆಯಷ್ಟೇ ಮಾಂಜರಿ ಗ್ರಾಮದ ಹರಿತ ಕ್ರಾಂತಿ ನಗರ ನಡುಗಡ್ಡೆ ಕುರಿತು ಟಿವಿ9 ವರದಿ ಮಾಡಿತ್ತು. ವರದಿ ಮಾಡಿದ್ರು ಜಿಲ್ಲಾಡಳಿತ ಎಚ್ಚೆತ್ತುಕೊಂಡಿಲ್ಲ. ಹರಿತ ಕ್ರಾಂತಿ ನಗರದಲ್ಲಿ 50ಕ್ಕೂ ಹೆಚ್ಚು ಕುಟುಂಬ ವಾಸ ಮಾಡುತ್ತಿವೆ. ಪ್ರಾಣ ಒತ್ತೆ ಇಟ್ಟು ಎದೆಮಟ್ಟದ ನೀರಿನಲ್ಲಿ ಜನರು ಸಂಚಾರ ಮಾಡುವಂತ್ತಾಗಿದೆ. ನಡುಗಡ್ಡೆ ನೀರಿನಲ್ಲಿ ಯುವಕರ ಈಜಾಟ, ಬಟ್ಟೆ ತೊಳೆಯುವುದು, ವಾಹನ ತೊಳೆಯುವ ಸಾಹಸ ಸ್ಥಳೀಯರು ಮಾಡುತ್ತಿದ್ದಾರೆ. ಅಧಿಕಾರಿಗಳು ನದಿ ಪಾತ್ರದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿಲ್ಲ. ಗ್ರಾಮ ನಡುಗಡ್ಡೆಯಾದರೂ ಅಧಿಕಾರಿಗಳು ಸ್ಥಳಕ್ಕೆ ಬಂದಿಲ್ಲ. ಮತ್ತೆ ಕೊಯ್ನಾ ಜಲಾಶಯದಿಂದ ನೀರು ಬಿಡುಗಡೆ ಹಿನ್ನಲೆ ಕೃಷ್ಣಾ ನದಿಯಲ್ಲಿ ನೀರು ಹೆಚ್ಚಳ ಸಾಧ್ಯತೆ ಇದೆ.
ಗೋಕಾಕ್ ನಗರದ ಮತ್ತೊಂದು ಕಾಲೋನಿ ಜಲಾವೃತ:
ಬೆಳಗಾವಿ: ಇಪ್ಪತ್ತಕ್ಕೂ ಅಧಿಕ ಮನೆಗಳು ಮುಳುಗಡೆಯಾಗಿರುವಂತಹ ಘಟನೆ ಗೋಕಾಕ್ ನಗರದ ಬೋಜಗಾರ ಗಲ್ಲಿ ಜಲಾವೃತವಾಗಿದೆ. ಘಟಪ್ರಭಾ ನದಿ ನೀರು ನೂರಾನಿ ಮಸ್ಜಿದ್ ಸುತ್ತುವರೆದಿದ್ದು, ಮನೆಗಳಿಗೆ ನೀರು ನುಗ್ಗಿದ್ರೂ ಬಾರದ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಳಜಿ ಕೇಂದ್ರಕ್ಕೂ ಶಿಪ್ಟ್ ಮಾಡ್ತಿಲ್ಲ, ನಾವೇ ಮನೆಯಿಂದ ಹೊರ ಹೋಗಬೇಕು. ಮನೆಯಲ್ಲಿ ಬಾಣಂತಿ ಇದ್ದು ಮಕ್ಕಳನ್ನ ಕರೆದುಕೊಂಡು ಹೋಗೋದೆಲ್ಲಿಗೆ ಎಂದು ಬೆಳಗಾವಿ ಜಿಲ್ಲಾಡಳಿತ, ಗೋಕಾಕ್ ತಾಲೂಕು ಆಡಳಿತದ ವಿರುದ್ಧ ಮಹಿಳೆಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅದೇ ರೀತಿಯಾಗಿ ಗೋಕಾಕ್ ಉಪ್ಪಾರ ಓಣಿಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಮೂವತ್ತು ಮನೆಗಳು ಜಲಾವೃತವಾಗಿವೆ.
ಮನೆಗಳು ಮುಳುಗಿದ್ರೂ ಸ್ಥಳಕ್ಕೆ ಬಾರದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೀರು ಬರುವ ಕುರಿತು ಎಚ್ಚರಿಕೆ ಕೂಡ ನೀಡಿಲ್ಲ. ಇದೀಗ ಮನೆಗೆ ನೀರು ನುಗ್ಗಿದ್ದು ಎಲ್ಲಿಗೆ ಹೋಗಬೇಕು. ಸಾಮಾಗ್ರಿಗಳನ್ನ ಮನೆಯಲ್ಲಿ ಬಿಟ್ಟು ಹೊರ ಬಂದಿದ್ದೇವೆ. ಕಾಳಜಿ ಕೇಂದ್ರ ಕೂಡ ತೆಗೆದಿಲ್ಲ, ಬಾಡಿಗೆ ಮನೆ ಹುಡುಕಿಕೊಂಡು ಹೋಗಬೇಕು. ನಮ್ಮ ಸಮಸ್ಯೆಗೆ ಯಾರು ಸ್ಪಂದಿಸುತ್ತಿಲ್ಲ ಅಂತಾ ಉಪ್ಪಾರ ಓಣಿಯ ಮಹಿಳೆಯರು ಆಕ್ರೋಶ ಹೊರಹಾಕಿದರು.
ಯಲ್ಲಮ್ಮದೇವಿ ದೇವಸ್ಥಾನ ಜಲಾವೃತ
ಕಲಬುರಗಿ: ಮಹಾರಾಷ್ಟ್ರದಲ್ಲಿ ನಿರಂತರ ಮಳೆ ಹಿನ್ನೆಲೆ ಭೀಮಾ ನದಿಗೆ ಉಜನಿ ಹಾಗೂ ವಿರಾ ಜಲಾಶಯಗಳಿಂದ 70 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಿದ್ದು, ಜಿಲ್ಲೆಯ ಅಫಜಲಪುರ ತಾಲೂಕಿನ ಮಣ್ಣೂರು ಗ್ರಾಮದ ಭೀಮಾ ನದಿ ದಡದಲ್ಲಿರುವ ಯಲ್ಲಮ್ಮದೇವಿ ದೇವಸ್ಥಾನದ ಗರ್ಭ ಗುಡಿ ಬಹುತೇಕ ಜಲಾವೃತವಾಗಿದೆ.
ಲಾಲ ಬಹಾದ್ದೂರ ಶಾಸ್ತ್ರಿ ಸಾಗರದ ಇಂದಿನ ನೀರಿನ ಮಟ್ಟ
ವಿಜಯಪುರ: ಆಲಮಟ್ಟಿಯ ಲಾಲ ಬಹಾದ್ದೂರ ಶಾಸ್ತ್ರಿ ಸಾಗರದಲ್ಲಿ ಇಂದಿನ ನೀರಿನ ಮಟ್ಟ ಹೀಗಿದೆ. ಗರಿಷ್ಠ ಮಟ್ಟ: 519.60 ಮೀಟರ್, ಇಂದಿನ ನೀರಿನ ಮಟ್ಟ: 518.27 ಮೀಟರ್, ಒಳ ಹರಿವು: 1,92,453 ಕ್ಯೂಸೆಕ್, ಹೊರ ಹರಿವು : 2,25,000 ಕ್ಯೂಸೆಕ್, 123.01 ಟಿಎಂಸಿ ಸಂಗ್ರಹ ಸಾಮರ್ಥ್ಯದ ಡ್ಯಾಂನಲ್ಲಿ 101.667 ಟಿಎಂಸಿ ನೀರು ಸಂಗ್ರಹವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.