ಗೋಹತ್ಯೆ ಅಷ್ಟೇ ಅಲ್ಲ, ಯಾವ ಪ್ರಾಣಿಯ ಹತ್ಯೆಯನ್ನೂ ನಾನು ಸಹಿಸುವುದಿಲ್ಲ: ಲಕ್ಷ್ಮೀ ಹೆಬ್ಬಾಳ್ಕರ್

ಕಾಂಗ್ರೆಸ್ ‌ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ‌ಗೋಹತ್ಯೆ ನಿಷೇಧ ಕಾಯ್ದೆ ನಿಷೇಧ ಮತ್ತು ಬೆಳಗಾವಿ ಜಿಲ್ಲೆ ವಿಭಜನೆ ಕೂಗು ಮುನ್ನಲೆಗೆ ಬಂದಿದೆ. ಈ ವಿಚಾರವಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿ ಯಾವ ಪ್ರಾಣಿಯ ಹತ್ಯೆಯನ್ನೂ ನಾನು ಸಹಿಸಲ್ಲ ಎಂದು ಹೇಳಿದ್ದಾರೆ.

ಗೋಹತ್ಯೆ ಅಷ್ಟೇ ಅಲ್ಲ, ಯಾವ ಪ್ರಾಣಿಯ ಹತ್ಯೆಯನ್ನೂ ನಾನು ಸಹಿಸುವುದಿಲ್ಲ: ಲಕ್ಷ್ಮೀ ಹೆಬ್ಬಾಳ್ಕರ್
ಲಕ್ಷ್ಮೀ ಹೆಬ್ಬಾಳ್ಕರ್
Follow us
ವಿವೇಕ ಬಿರಾದಾರ
|

Updated on:Jun 06, 2023 | 1:46 PM

ಬೆಳಗಾವಿ: ಕಾಂಗ್ರೆಸ್ ‌ಸರ್ಕಾರ (Congress Government) ಅಸ್ತಿತ್ವಕ್ಕೆ ಬರುತ್ತಿದ್ದಂತೆ ‌ಗೋಹತ್ಯೆ ನಿಷೇಧ ಕಾಯ್ದೆ (Cow Slaughter Prohibition Act) ನಿಷೇಧ ಮತ್ತು ಬೆಳಗಾವಿ (Belagavi) ಜಿಲ್ಲೆ ವಿಭಜನೆ ಕೂಗು ಮುನ್ನಲೆಗೆ ಬಂದಿದೆ. ಈ ವಿಚಾರವಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Laxmi Hebbalkar) ಮಾತನಾಡಿ ಯಾವ ಪ್ರಾಣಿಯ ಹತ್ಯೆಯನ್ನೂ ನಾನು ಸಹಿಸಲ್ಲ. ಮಹಿಳೆಯಾಗಿ ಹೇಳುತ್ತೇನೆ ಗೋಹತ್ಯೆ ಅಷ್ಟೇ ಅಲ್ಲ, ಯಾವ ಪ್ರಾಣಿಯ ಹತ್ಯೆಯನ್ನೂ ನಾನು ಸಹಿಸುವುದಿಲ್ಲ ಎಂದು ಹೇಳಿದ್ದಾರೆ. ಇನ್ನು ಅಭಿವೃದ್ಧಿ ದೃಷ್ಟಿಯಿಂದ ಬೆಳಗಾವಿ ‌ಜಿಲ್ಲೆ ವಿಭಜನೆ ಆಗಬೇಕು. ಎಲ್ಲ ನಾಯಕರ ಸಹಮತ ಪಡೆದು ಜಿಲ್ಲೆ ವಿಭಜನೆ ‌ಆಗಲಿ. ಜಿಲ್ಲೆ ವಿಭಜನೆ ‌ಬಗ್ಗೆ ಸರ್ಕಾರ ಮಟ್ಟದಲ್ಲಿ ಚರ್ಚೆ ಆಗಲಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ ನಾಯಕರು ಕ್ರಮಕೈಗೊಳ್ಳುತ್ತಾರೆ ಎಂದು ಹೇಳಿದರು.

ಬೆಳಗಾವಿ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಜಿಲ್ಲೆಯ ಎಲ್ಲ ನಾಯಕರ ಸಹಮತದ ಆಧಾರದ ಮೇಲೆ ಜಿಲ್ಲಾ ವಿಭಜನೆ ‌ಆಗಲಿ. ಮಾಜಿ ಸಚಿವ ‌ಪ್ರಕಾಶ ಹುಕ್ಕೇರಿ ಹೇಳುತ್ತಿದ್ದಾರೆ, ನಾನು ಹೇಳ್ತಿದ್ದೇನೆ ಎಂಬ ಕಾರಣಕ್ಕೆ ವಿಭಜನೆ ‌ಬೇಡ. ಜಿಲ್ಲಾ ವಿಭಜನೆ ‌ಸಂಬಂಧ‌ ಸರ್ಕಾರ ಮಟ್ಟದಲ್ಲಿ ಹಂತಹಂತವಾಗಿ ಚರ್ಚೆ ನಡೆಯಲಿದೆ. ಆ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ ನಾಯಕರು ಕ್ರಮ ಜರುಗಿಸುತ್ತೇವೆ ಎಂದರು.

ಗೃಹಜ್ಯೋತಿ ಯೋಜನೆಯಿಂದ ಬಾಡಿಗೆದಾರರು ವಂಚಿತರಾಗುವ ಆತಂಕ ವ್ಯಕ್ತವಾಗುತ್ತಿರುವ ವಿಚಾರವಾಗಿ ಮಾತನಾಡಿದ ಅವರು ಯಾವುದೇ ವದಂತಿಗೆ ದಯಮಾಡಿ ಯಾರೂ ಕಿವಿಗೊಡಬೇಡಿ. ಬೆಲೆ ಏರಿಕೆಯಿಂದ ತತ್ತರಿಸಿದ ನಿಮಗೆ ಆಶಾಕಿರಣ ಮೂಡಿಸಿದ್ದು ಕಾಂಗ್ರೆಸ್. ಕಾಂಗ್ರೆಸ್ ಕೊಟ್ಟ ಭರವಸೆಯನ್ನು ಈಡೇರಿಸುತ್ತದೆ. ​ಮನೆ ಮಾಲೀಕರು, ಬಾಡಿಗೆದಾರರಿಗೆ ಯಾವುದೇ ಆತಂಕ ಬೇಡ. ಇನ್ನು ಅಧಿಕಾರಿಗಳು, ಮಂತ್ರಿಗಳ ಹಂತದಲ್ಲಿ ಎಲ್ಲಾ ಯೋಜನೆಗಳ ಚರ್ಚೆ ನಡೆಯುತ್ತಿದೆ ಎಂದು ತಿಳಿಸಿದರು.

ಮನೆಮಾಲೀಕರು ಹಾಗೂ ಬಾಡಿಗೆದಾರರು ಒಂದೇ ಆರ್‌ಆರ್ ನಂಬರ್ ಹೊಂದಿದ್ದರೇ ಹೇಗೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು ಈ ಬಗ್ಗೆ ಜಾಸ್ತಿ ಬೆಳಕನ್ನು ಚೆಲ್ಲುತ್ತಾರೆ. ಗೃಹಲಕ್ಷ್ಮೀ ಸಂಪೂರ್ಣ ಮಾಹಿತಿ ನಾನು ಮಾತನಾಡುವುದು. ತಾವು ಈ ವಿಷಯ ನನ್ನ ಗಮನಕ್ಕೆ ತಂದಿದ್ದೀರಿ ಅವರ ಜೊತೆ ಚರ್ಚೆ ಮಾಡುವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬಾಡಿಗೆದಾರರಿಗೂ ಸಿಗುತ್ತಾ ಉಚಿತ ವಿದ್ಯುತ್​​, ದಾಖಲೆಗಳು ಅಗತ್ಯ – ಕೆಜೆ ಜಾರ್ಜ್ ಸ್ಪಷ್ಟನೆ

ಗ್ಯಾರಂಟಿ ಯೋಜನೆಗಳಿಗೆ ಎಲ್ಲಿಂದ ಹಣ ತರುತ್ತೇನೆ ಎಂದು ಸಿಎಂ ಮಾತನಾಡುತ್ತಿಲ್ಲ ಎಂಬ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು ಚುನಾವಣೆ ‌ಮುನ್ನ ನಾವು ನೀಡಿದ ಎಲ್ಲ ಭರವಸೆ ಈಡೇರಿಸುತ್ತೇವೆ. ಬಸವರಾಜ್ ಬೊಮ್ಮಾಯಿ ಸಿಎಂ ಆದವರು, ಸಿದ್ದರಾಮಯ್ಯ ಕೂಡ ಈಗ ಸಿಎಂ ಇದ್ದಾರೆ. ಸಿದ್ದರಾಮಯ್ಯನವರು ಈ ಮೊದಲು 15 ಬಜೆಟ್ ಮಂಡಿಸಿದ ಅನುಭವ ಹೊಂದಿದ್ದಾರೆ. ಗ್ಯಾರಂಟಿಗಳಿಗೆ ಎಲ್ಲಿಂದ ದುಡ್ಡು ಹೊಂದಿಸಬೇಕು ಎಂಬದು ಸಿದ್ದರಾಮಯ್ಯ ಅವರಿಗೆ ಗೊತ್ತಿದೆ. ಈ ಬಗ್ಗೆ ನಮಗೆ ಗೊತ್ತಿದೆ, ಬೇರೆಯವರು ಚಿಂತೆ ಮಾಡುವುದು ಬೇಡ ಎಂದು ತಿರುಗೇಟು ನೀಡಿದರು.

ಕಾಂಗ್ರೆಸ್​ನ​ ಗ್ಯಾರಂಟಿ ಯೋಜನೆ ಬಗ್ಗೆ ಪ್ರತಿಪಕ್ಷಗಳ ಟೀಕೆ ವಿಚಾರವಾಗಿ ಮಾತನಾಡಿ ಚುನಾವಣೆ ಸಂದರ್ಭದಲ್ಲಿ ನಾವು ನೀಡಿದ್ದ ಭರವಸೆ ಈಡೇರಿಸುತ್ತಿದ್ದೇವೆ. ಬಿಜೆಪಿಯವರ ಪ್ರತಿಭಟನೆಗೆ ನಾನು ಉತ್ತರ ಕೊಡಲು ಸಾಧ್ಯವಿಲ್ಲ. ಬಿಜೆಪಿಯವರು ಎಷ್ಟು ಭರವಸೆ ಕೊಟ್ಟಿದ್ದರು, ಎಷ್ಟು ಈಡೇರಿಸಿದ್ದಾರೆ?ಬಿಜೆಪಿಯವರಿಗೆ ಜನ ಉತ್ತರ ಕೊಟ್ಟು ಸರಿಯಾದ ಪಾಠ ಕಲಿಸಿದ್ದಾರೆ. ನಾವು ಕೊಟ್ಟಂತಹ ಭರವಸೆಯನ್ನು ಖಂಡಿತವಾಗಿ ಈಡೇರಿಸುತ್ತೇವೆ ಎಂದು ಭರವಸೆ ನೀಡಿದರು.

ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ವಿಚಾರವಾಗಿ ಮಾತನಾಡಿ ಜೂನ್ 15ರಿಂದ ಜುಲೈ 15ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. 3-4 ಇಲಾಖೆಗಳ ಜೊತೆ ನಾವು ಕೆಲಸ ಮಾಡಬೇಕಾಗುತ್ತೆ. ಬರೀ ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯಿಂದ ಆಗಲ್ಲ. ನಮ್ಮ ಇಲಾಖೆ ಸಿಬ್ಬಂದಿ ಜೊತೆ ಕಂದಾಯ ಇಲಾಖೆ, ಆರ್‌ಡಿಪಿಆರ್, ನಗರಾಭಿವೃದ್ಧಿ ಇಲಾಖೆ ಇರಬಹುದು. ಈ ಎಲ್ಲಾ ಇಲಾಖೆ ಒಳಗೊಂಡು ಗೃಹಲಕ್ಷ್ಮೀ ಯೋಜನೆ ಜಾರಿ ತರಬೇಕಾಗುತ್ತದೆ. ಅವರ ಬ್ಯಾಂಕ್ ಖಾತೆ ನಂಬರ್, ಆಧಾರ್ ಲಿಂಕ್ ಮಾಡೋದಾಗಲಿ, ಕುಟುಂಬದ ಮುಖ್ಯಸ್ಥೆ ಆಯ್ಕೆ ಇದೆಲ್ಲ ನೋಡಿಕೊಂಡು ನಾವು ಹಾರ್ಡ್ ಕಾಪಿ ಫಾರ್ಮ್‌ನ್ನು ಕೊಡುತ್ತೇವೆ. ಜೊತೆಗೆ ಸಾಫ್ಟ್‌ವೇರ್ ಡೆವಲಪ್​ ಮಾಡುತ್ತಿದ್ದೇವೆ. ಫಲಾನುಭವಿಗಳು ತಮ್ಮ ಅರ್ಜಿ ಅಪ್‌ಲೋಡ್ ಮಾಡಬಹುದು. ಎಲ್ಲ ರೀತಿಯಾದ ಸರಳ ಪ್ರಕ್ರಿಯೆಯಲ್ಲಿ ಗೃಹಲಕ್ಷ್ಮೀ ಯೋಜನೆ ಅನುಷ್ಠಾನವಾಗುತ್ತದೆ ಎಂದು ಮಾಹಿತಿ ನೀಡಿದರು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:20 pm, Tue, 6 June 23