ಮೃಣಾಲ್ ಹೆಬ್ಬಾಳ್ಕರ್ ಪರ ಹಣ ಹಂಚಿಕೆ ಆರೋಪ; ಐವರನ್ನ ಪೊಲೀಸರಿಗೆ ಒಪ್ಪಿಸಿದ ಬಿಜೆಪಿ ಕಾರ್ಯಕರ್ತರು
ಲೋಕಸಭಾ ಚುನಾವಣಾ ಕಣ ರಂಗೇರಿದ್ದು, ಇಂದು(ಮೇ.04) ಬೆಳಗಾವಿ ಜಿಲ್ಲೆಯ ಜಿಲ್ಲೆಯ ಗೋಕಾಕ್(Gokak) ತಾಲೂಕಿನ ಅಂಕಲಗಿ ಗ್ರಾಮದಲ್ಲಿ ಮನೆ ಮನೆಗೆ ತೆರಳಿ ಒಂದು ಸಾವಿರ ರೂಪಾಯಿ ಹಂಚುತ್ತಿದ್ದ ವೇಳೆ ಹಣದ ಸಮೇತ ನಾಲ್ವರು ಬೆಳಗಾವಿ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ಬೆಂಬಲಿಗರು ಸಿಕ್ಕಿಬಿದ್ದಿದ್ದಾರೆ.
ಬೆಳಗಾವಿ, ಮೇ.04: ಬೆಳಗಾವಿ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್(Mrunal Hebbalkar) ಪರ ಹಣ ಹಂಚಿಕೆ ಆರೋಪ ಕೇಳಿಬಂದಿದೆ. ಹೌದು, ಬೆಳಗಾವಿ ಜಿಲ್ಲೆಯ ಜಿಲ್ಲೆಯ ಗೋಕಾಕ್(Gokak) ತಾಲೂಕಿನ ಅಂಕಲಗಿ ಗ್ರಾಮದಲ್ಲಿ ಮನೆ ಮನೆಗೆ ತೆರಳಿ ಒಂದು ಸಾವಿರ ರೂಪಾಯಿ ಹಂಚುತ್ತಿದ್ದ ವೇಳೆ ಹಣದ ಸಮೇತ ನಾಲ್ವರು ಹೆಬ್ಬಾಳ್ಕರ್ ಬೆಂಬಲಿಗರು ಸಿಕ್ಕಿಬಿದ್ದಿದ್ದಾರೆ. ಹಣ ಹಂಚುವ ವಿಚಾರ ತಿಳಿದು ಬಿಜೆಪಿ ಕಾರ್ಯಕರ್ತರು ಸ್ಥಳಕ್ಕೆ ಬರುತ್ತಿದ್ದಂತೆ ಓಡಿ ಹೋಗಲು ಯತ್ನಿಸಿದ್ದಾರೆ. ಬಳಿಕ ಸಿನಿಮೀಯ ರೀತಿಯಲ್ಲಿ ಓಡಾಡಿಸಿ ಹಿಡಿದಿದ್ದಾರೆ.
ಇಪ್ಪತ್ತು ಲಕ್ಷ ಹಣದ ಜೊತೆ ಐವರು ಅರೆಸ್ಟ್
ಇನ್ನು ಮತದಾರರಿಗೆ ಹಂಚಲು ತಂದಿದ್ದ ಇಪ್ಪತ್ತು ಲಕ್ಷ ಹಣ ಮತ್ತು ಐವರನ್ನ ಬಿಜೆಪಿ ಕಾರ್ಯಕರ್ತರು ಪೊಲೀಸರಿಗೆ ಒಪ್ಪಿಸಿದ್ದಾರೆ. ಗೋಕಾಕ್ ಪರಾಜಿತ ಅಭ್ಯರ್ಥಿ ಡಾ.ಮಹಾಂತೇಶ್ ಕಡಾಡಿ, ಇಬ್ಬರು ಭದ್ರಾವತಿ ಮೂಲದ ಯುವಕರು ಹಾಗೂ ಇಬ್ಬರು ಹರ್ಷಾ ಶುಗರ್ಸ್ ಕಾರ್ಖಾನೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಯನ್ನು ಹಿಡಿದು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಪರ ಹಣ ಹಂಚಲು ಕಾಂಗ್ರೆಸ್ ಮುಖಂಡ ಪರಾಜಿತ ಅಭ್ಯರ್ಥಿ ಡಾ.ಮಹಾಂತೇಶ್ ಕಡಾಡಿ ಜೊತೆಗೆ ಬಂದಿದ್ದಾಗಿ ಇಬ್ಬರು ಹೇಳಿದ್ದಾರೆ. ಈ ಘಟನೆ ಅಂಕಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಇದನ್ನೂ ಓದಿ:ನಾಮಪತ್ರ ಸಲ್ಲಿಸುವ ಮೊದಲು ಮಗ ಮೃಣಾಲ್ನಿಂದ ವಿವಿಧ ಮಠಾಧೀಶರ ಪಾದಪೂಜೆ ಮಾಡಿಸಿದ ಲಕ್ಷ್ಮಿ ಹೆಬ್ಬಾಳ್ಕರ್
ಬಿಜೆಪಿ ಕಾರ್ಯಕರ್ತರಿಂದ ಕೈ ಕಾರ್ಯಕರ್ತನ ಮೇಲೆ ಹಲ್ಲೆ ಆರೋಪ
ಇನ್ನು ಹೆಬ್ಬಾಳ್ಕರ್ ಸಹೋದರ ಎಂಎಲ್ಸಿ ಚನ್ನರಾಜ ಹಟ್ಟಿಹೊಳಿ ಅವರು ನಮ್ಮ ಕಾರ್ಯಕರ್ತರು ಮನೆ ಮನೆಗೆ ಪ್ರಚಾರಕ್ಕೆ ಹೋಗಿದ್ದರು. ಈ ವೇಳೆ ಬಿಜೆಪಿ ಕಾರ್ಯಕರ್ತರು ಅವರನ್ನ ತಡೆದು ಬಿಜೆಪಿ ಕಾರ್ಯಕರ್ತರು ಕೈ ಕಾರ್ಯಕರ್ತನ ಮೇಲೆ ಹಲ್ಲೆ ಮಾಡಿದ್ದಾರೆ. ಶಾಸಕ ಅಭಯ್ ಪಾಟೀಲ್ ಮನೆಗೆ ಕರೆದುಕೊಂಡು ಹೋಗಿ ಅವರ ಸಮ್ಮುಖದಲ್ಲಿ ಹೊಡೆದಿದ್ದಾರೆ. ಬಳಿಕ ಕಾಂಗ್ರೆಸ್ ಅಭ್ಯರ್ಥಿ ಪರ ಹಣ ಹಂಚುತ್ತಿದ್ದೇವೆ ಎಂದು ನಮ್ಮ ಕಾರ್ಯಕರ್ತರಿಂದ ಒತ್ತಾಯ ಪೂರ್ವಕ ಹೇಳಿಕೆ ಪಡೆದಿದ್ದಾರೆ.
ಮಧ್ಯಾಹ್ನ ಅಂಕಲಗಿಯಲ್ಲಿ ಬಿಜೆಪಿ ಕಾರ್ಯಕರ್ತರು ಹಣವಿಟ್ಟು. ನಮ್ಮ ಕಾರ್ಯಕರ್ತರು ಹಣ ಹಂಚುತ್ತಿದ್ದಾರೆ ಎಂದು ತೋರಿಸಿದ್ದಾರೆ. ಗೋಕಾಕ್ ಶಾಸಕ ಮತ್ತು ದಕ್ಷಿಣ ಕ್ಷೇತ್ರದ ಶಾಸಕ ಗೂಂಡಾಗಿರಿ ವರ್ತನೆ ತೋರುತ್ತಿದ್ದಾರೆ. ಸೋಲುವ ಹತಾಶೆಯಿಂದ ಈ ರೀತಿ ವರ್ತನೆ ಮಾಡುತ್ತಿದ್ದಾರೆ. ಈ ಕುರಿತು ಸಿಎಂ, ಡಿಸಿಎಂ ಮತ್ತು ಕಾನೂನು ಸಚಿವರಿಗೆ ಮಾತನಾಡಿದ್ದೇನೆ. ಕಾನೂನಿನ ಮೇಲೆ ನಂಬಿಕೆ ಇದೆ ನಮಗೆ ನ್ಯಾಯ ಸಿಗುತ್ತದೆ ಎಂದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:07 pm, Sat, 4 May 24