ಬೆಳಗಾವಿ, ಏಪ್ರಿಲ್ 4: ಬೆಳಗಾವಿ (Belagavi) ಲೋಕಸಭಾ ಕಣ (Lok Sabha Elections) ರಂಗೇರುತ್ತಿದ್ದು, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ನಡುವೆ ವಾಕ್ಸಮರ ಜೋರಾಗಿದೆ. ಕಳೆದ ಬಾರಿ ಚುನಾವಣೆಯಲ್ಲಿ ಉಸ್ತುವಾರಿ ವಹಿಸಿಕೊಂಡು ಓಡಾಟ ನಡೆಸಿದ್ದ ಸಾಹುಕಾರ್ ರಮೇಶ್ ಜಾರಕಿಹೊಳಿ (Ramesh Jarkiholi) ಈ ಬಾರಿ ಮೌನವಾಗಿದ್ದಾರೆ. ಹಾಗಂತ ಸುಮ್ಮನೆ ಕುಳಿತಿಲ್ಲ, ಬದಲಿಗೆ ಮೌನವಾಗಿದ್ದುಕೊಂಡೇ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಸೋಲಿಸಲು ಪಣ ತೊಟ್ಟಿದ್ದಾರೆ. ಇನ್ನೊಂದು ಕಡೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕೂಡ ಪುತ್ರನನ್ನು ಗೆಲ್ಲಿಸಲು ಸಾಕಷ್ಟು ರಣತಂತ್ರ ಹೆಣೆಯುತ್ತಿದ್ದಾರೆ.
ಬೆಳಗಾವಿ ಲೋಕಸಭಾ ಚುನಾವಣೆ ಕಣ ಇದೀಗ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದ್ದು ಶೆಟ್ಟರ್ ವರ್ಸಸ್ ಹೆಬ್ಬಾಳ್ಕರ್ ಬದಲಿಗೆ ಮತ್ತೆ ಜಾರಕಿಹೊಳಿ ವರ್ಸಸ್ ಹೆಬ್ಬಾಳ್ಕರ್ ಆಗಿ ಮಾರ್ಪಟ್ಟಿದೆ. ಈ ವರೆಗೂ ಚುನಾವಣಾ ಅಖಾಡಕ್ಕೆ ಧುಮ್ಮಿಕ್ಕದೆ ಸುಮ್ಮನಿದ್ದ ಸಾಹುಕಾರ್ ರಮೇಶ್ ಜಾರಕಿಹೊಳಿ ಇದೀಗ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಪರ ಅಖಾಡಕ್ಕಿಳಿದಿದ್ದಾರೆ. ಗೋಡಚಿ ವೀರಭದ್ರೇಶ್ವರ ದೇಗುಲಕ್ಕೆ ಭೇಟಿ ಬಳಿಕ ಶೆಟ್ಟರ್ ಕಚೇರಿಗೆ ಆಗಮಿಸಿ ಒಂದು ಗಂಟೆಗಳ ಕಾಲ ಸುಧೀರ್ಘ ಚರ್ಚೆ ಮಾಡಿ ಹೋಗಿದ್ದಾರೆ.
ಆಸಕ್ತಿದಾಯಕ ವಿಚಾರ ಅಂದರೆ ಈ ಬಾರಿ ಬಹಿರಂಗವಾಗಿ ಎನನ್ನೂ ಮಾತಾಡದೇ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಸೋಲಿಸಲು ಯೋಜನೆ ಮಾಡುತ್ತಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೆಬ್ಬಾಳ್ಕರ್ ಮತ್ತು ಸವದಿ ವಿರುದ್ದ ಬಹಿರಂಗವಾಗಿಯೇ ಮಾತಾಡಿದ್ದ ರಮೇಶ್ಗೆ ಕೊನೆಯ ಹಂತದಲ್ಲಿ ಉಲ್ಟಾ ಆಗಿತ್ತು. ರಮೇಶ್ ಜಾರಕಿಹೊಳಿಯ ಕೆಲ ಹೇಳಿಕೆಗಳನ್ನು ವಿರೋಧಿಗಳು ಅಸ್ತ್ರವಾಗಿಸಿಕೊಂಡು ಕಳೆದ ಚುನಾವಣೆಯಲ್ಲಿ ಸುಲಭ ಗೆಲುವು ಪಡೆಯುವಂತಾಗಿತ್ತು. ಇದರಿಂದ ಎಚ್ಚೆತ್ತುಕೊಂಡಿರುವ ಬಿಜೆಪಿ ನಾಯಕರು ಇದೀಗ ರಮೇಶ್ ಜಾರಕಿಹೊಳಿಗೆ ಎಲ್ಲಿಯೂ ವಿರೋಧಿಗಳ ಬಗ್ಗೆ ಬಹಿರಂಗ ಹೇಳಿಕೆ ಕೊಡಬಾರದು, ಮಾಧ್ಯಮಗಳ ಮುಂದೆ ಎನೂ ಹೇಳದಂತೆ ಸೂಚನೆ ನೀಡಿದ್ದಾರೆ. ಇದೇ ಕಾರಣಕ್ಕೆ ರಮೇಶ್ ಜಾರಕಿಹೊಳಿ ಮಾಧ್ಯಮದ ಮುಂದೆ ಬರುತ್ತಿಲ್ಲ. ಜೂನ್ 4ರ ನಂತರ ಮಾತನಾಡುತ್ತೇನೆ ಎಂದೇ ಹೇಳುತ್ತಿದ್ದಾರೆ.
ರಮೇಶ್ ಜಾರಕಿಹೊಳಿ ಮಾತುಗಳನ್ನೇ ಅಸ್ತ್ರವಾಗಿಸಿಕೊಳ್ತಿದ್ದ ಕೈ ನಾಯಕರಿಗೆ ಈ ಬಾರಿ ಒಂದು ಹಂತದಲ್ಲಿ ನಿರಾಸೆ ಆಗುತ್ತಿದೆ. ಹಾಗಂತ ಸುಮ್ಮನೆ ಕುಳಿತುಕೊಳ್ಳದೆ ಹೆಬ್ಬಾಳ್ಕರ್ ಒಂದು ಕಡೆ ಹಿಂದು ಅಸ್ತ್ರ, ಮತ್ತೊಂದು ಕಡೆ ಪಂಚಮಸಾಲಿ ಅಸ್ತ್ರ ಪ್ರಯೋಗಿಸುತ್ತಾ ಮತಗಳನ್ನು ಸೆಳೆಯುವ ಕೆಲಸ ಮಾಡುತ್ತಿದ್ದಾರೆ. ಮಗನ ಗೆಲುವಿಗೆ ಟೊಂಕ ಕಟ್ಟಿ ನಿಂತಿರುವ ಹೆಬ್ಬಾಳ್ಕರ್ ಜಾರಕಿಹೊಳಿ ಸಹೋದರರಿಗೂ ಸವಾಲಾಗಿ ನಿಂತಿದ್ದಾರೆ. ಇತ್ತ ಜಾರಕಿಹೊಳಿ ಸಹೋದರರನ್ನೇ ಗಟ್ಟಿಯಾಗಿಸಿಕೊಂಡ ಶೆಟ್ಟರ್, ಅವರ ಮೂಲಕವೇ ಇಡೀ ಕ್ಷೇತ್ರದಲ್ಲಿ ಸುತ್ತುತ್ತಾ ಇದೊಂದು ಬಾರಿ ಗೆಲ್ಲಿಸುವಂತೆ ಮನವಿ ಮಾಡುತ್ತಿದ್ದಾರೆ. ಇತ್ತ ಗೋಕಾಕ್ ಮತ್ತು ಅರಬಾವಿಯಲ್ಲಿ ಇದೇ ಏಳರಂದು ಬೃಹತ್ ಸಮಾವೇಶ ಮಾಡುವ ಮೂಲಕ ಜಾರಕಿಹೊಳಿ ಸಹೋದರರು ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ.
ಇದನ್ನೂ ಓದಿ: ಬೆಳಗಾವಿ ಲೋಕಸಭಾ ಚುನಾವಣೆ ಅಖಾಡಕ್ಕೆ ಎಂಇಎಸ್ ಎಂಟ್ರಿ; ಬಿಜೆಪಿ-ಕಾಂಗ್ರೆಸ್ಗೆ ಮತ ವಿಭಜನೆ ಆತಂಕ
ಸದ್ಯ ಬೆಳಗಾವಿ ಲೋಕಸಭಾ ಕಣ ಬಿಜೆಪಿ ಭದ್ರಕೋಟೆಯಾಗಿದ್ದು ಇದನ್ನ ಛಿದ್ರ ಮಾಡಲು ಹೆಬ್ಬಾಳ್ಕರ್ ರಣತಂತ್ರ ಹೆಣೆದಿದ್ದಾರೆ. ಹೇಗಾದರೂ ಮಾಡಿ ಈ ಬಾರಿ ಲಕ್ಷ್ಮೀಗೆ ಸೋಲಿನ ರುಚಿ ತೋರಿಸಲು ಜಾರಕಿಹೊಳಿ ಸಹೋದರರು ಟೊಂಕ ಕಟ್ಟಿದ್ದಾರೆ. ಒಟ್ಟಿನಲ್ಲಿ ಬೆಳಗಾವಿಯಲ್ಲಿ ಚುನಾವಣೆ ಕಾವು ಏರುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:20 am, Thu, 4 April 24