ಬೆಳಗಾವಿ, ಅಕ್ಟೋಬರ್ 30: ಭ್ರಷ್ಟ ಅಧಿಕಾರಿಗಳು ನಿದ್ದೆಗಣ್ಣಿಂದ ಎದ್ದು ಹೊರ ಬರುವವಷ್ಟರಲ್ಲಿ ಲೋಕಾಯುಕ್ತ ಅಧಿಕಾರಿಗಳು (Lokayukta Officials) ಅವರ ಮನೆ ಬಾಗಿಲು ಬಡಿದು ಶಾಕ್ ಕೊಟ್ಟಿದ್ದರು. ಅಕ್ರಮವಾಗಿ ಸಂಪಾದಿಸಿದ ಆಸ್ತಿಯನ್ನ ಜಾಲಾಡಿ ಇಂಚಿಂಚು ಶೋಧ ನಡೆಸಿ ಅಪಾರ ಪ್ರಮಾಣದ ಅಕ್ರಮ ಆಸ್ತಿ ಪತ್ತೆ ಹಚ್ಚಿದ್ದಾರೆ. ಬೆಳಗಾವಿ ನಗರದಲ್ಲೇ (Belagavi City) ಇಬ್ಬರು ಅಧಿಕಾರಿಗಳಿಗೆ ಇಂದು ಲೋಕಾಯುಕ್ತ ಅಧಿಕಾರಿಗಳು ಶಾಕ್ ಕೊಟ್ಟಿದ್ದಾರೆ.
ಬೆಳಗಾವಿ ಪಂಚಾಯತ್ ರಾಜ್ ಇಲಾಖೆಯಲ್ಲಿ ಎಇಇ ಆಗಿ ಕೆಲಸ ಮಾಡುತ್ತಿರುವ ಎಂ.ಎಂ ಬಿರಾದಾರ್ ಪಾಟೀಲ್ ಮನೆ ಮೇಲೂ ಲೋಕಾಯುಕ್ತ ಅಧಕಾರಿಗಳು ದಾಳಿ ನಡೆಸಿದ್ದಾರೆ. ವಿಶ್ವೇಶ್ವರಯ್ಯ ನಗರದಲ್ಲಿರುವ ಇವರ ನಿವಾಸದ ಮೇಲೆ ಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಡಿವೈಎಸ್ಪಿ ನೇತೃತ್ವದ ತಂಡ ದಾಳಿ ನಡೆಸಿ ಇಂಚಿಂಚು ಶೋಧ ಮಾಡಿ ಅಕ್ರಮ ಆಸ್ತಿಯನ್ನ ಪತ್ತೆ ಹಚ್ಚಿದೆ. ಅಪಾರ್ಟ್ಮೆಂಟ್ ನಲ್ಲಿ ಪ್ಲ್ಯಾಟ್ ಒಂದರಲ್ಲಿರುವ ಈ ಬಿರಾದಾರ್ ಪಾಟೀಲ್ ಬರೀ ನಿವಾಸ ಅಷ್ಟೇ ಅಲ್ಲದೆ ಖಾನಾಪುರ ಮತ್ತು ಕಿತ್ತೂರ ಪಟ್ಟಣದಲ್ಲಿರುವ ಮನೆ ಮೇಲೆಯೂ ಏಕ ಕಾಲದಲ್ಲಿ ದಾಳಿ ನಡೆಸಿದ್ದಾರೆ.
ಮನೆಯಲ್ಲಿ ಬೆಡ್ ರೂಮ್ ಸೇರಿದಂತೆ ಎಲ್ಲ ಕಡೆಯೂ ಶೋಧ ಮಾಡಿದ್ದು ಅದರಲ್ಲೂ ಕಿಚನ್ ನಲ್ಲಿ ಕುಕ್ಕರ್ ಸಮೇತ ಬಿಡದೇ ಶೋಧ ಮಾಡಿದ್ದಾರೆ. ಜೂನ್ ನಲ್ಲಿ ಇದೇ ಎಂ.ಎಂ.ಬಿರಾದಾರ್ ಪಾಟೀಲ್ ಗುತ್ತಿಗೆದಾರರಿಂದ ಹಣ ಪಡೆಯುವ ಸಂದರ್ಭದಲ್ಲಿ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದ. ಅಂದಿನಿಂದ ಈತನ ಮೇಲೆ ಕಣ್ಣಿಟ್ಟಿದ್ದ ಲೋಕಾಯುಕ್ತ ಅಧಿಕಾರಿಗಳು ದಾಖಲೆ ಸೇರಿದಂತೆ ಎಲ್ಲವನ್ನೂ ಸಂಗ್ರಹಿಸಿ ಇಂದು ದಾಳಿ ನಡೆಸಿದ್ದಾರೆ. ಇನ್ನೂ ದಾಳಿ ವೇಳೆ ಒಂದು ಕೋಟಿ 35ಲಕ್ಷ ಮೌಲ್ಯದ ಅಕ್ರಮ ಸಂಪತ್ತು ಸಿಕ್ಕಿದ್ದು ಇದರಲ್ಲಿ ಎರಡು ಲಕ್ಷ ರೂಪಾಯಿ ನಗದ, ಖಾನಾಪುರದ ಬ್ಯಾಂಕ್ ನ ಲಾಕರ್ ನಲ್ಲಿ ಲಕ್ಷಾಂತರ ಮೌಲ್ಯದ ಚಿನ್ನ ಕೂಡ ಸಿಕ್ಕಿದ್ದು ಇನ್ನೂ ಕೂಡ ಪರಿಶೀಲನೆ ಮುಂದುವರೆದಿದೆ. ಹೀಗೆ ಅಕ್ರಮ ಆಸ್ತಿ ಪತ್ತೆಯಾಗುತ್ತಿದ್ದಂತೆ ಸ್ಥಳಕ್ಕೆ ಲೋಕಾಯುಕ್ತ ಎಸ್ ಪಿ ಹನುಂತರಾಯ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ.
ಒಂದು ಕಡೆ ಪಂಚಾಯತ್ ರಾಜ್ ಇಲಾಖೆಯ ಎಇಇ ಕಥೆ ಇದಾದ್ರೇ ಇನ್ನೊಂದು ಕಡೆ ಕಲಬುರಗಿ ಟೌನ್ ಪ್ಲ್ಯಾನಿಂಗ್ ಅಧಿಕಾರಿಯ ಕಥೆ ಬೇರೆನೇ ಆಗಿತ್ತು. ಅಪ್ಪಾಸಾಹೇಬ್ ಕಾಂಬಳೆ ಎಂಬ ಅಧಿಕಾರಿ ಮನೆ ಮೇಲೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರೇ ಸುಸ್ತು ಹೊಡೆದು ಹೋಗಿದ್ದಾರೆ. ಯಾಕಂದ್ರೇ ಕಲಬುರಗಿ ಕಚೇರಿಯಲ್ಲಿ ಇರಬೇಕಾದ ದಾಖಲೆಗಳು ಕಾಂಬಳೆ ಅವರ ಬೆಳಗಾವಿಯ ರಾಮತೀರ್ಥ ನಗರದ ನಿವಾಸದಲ್ಲಿ ಪತ್ತೆಯಾಗಿವೆ. ಅದು ಒಂದಲ್ಲಾ ಎರಡಲ್ಲಾ ನೂರಾರು ದಾಖಲೆಗಳೇ ಇಲ್ಲಿ ಪತ್ತೆಯಾಗಿದ್ದು ಎಲ್ಲವನ್ನೂ ಪರಿಶೀಲನೆ ಮಾಡುವಷ್ಟರಲ್ಲಿ ಅಧಿಕಾರಿಗಳು ಸುಸ್ತಾಗಿ ಹೋಗಿದ್ದಾರೆ. ಇನ್ನೂ ಮನೆಯಲ್ಲಿ ಆರು ಲಕ್ಷ ನಗದು, 250 ಗ್ರಾಂ ಚಿನ್ನಾಭರಣ, ಬೆಳ್ಳಿ ಸೇರಿದಂತೆ ಆಸ್ತಿ ಪತ್ರಗಳು ಕೂಡ ಸಿಕ್ಕಿವೆ. ನಿವಾಸದ ಜತೆ ಜತೆಗೆ ಆಟೋ ನಗರದಲ್ಲಿರುವ ಕಚೇರಿ ಮೇಲೆಯೂ ದಾಳಿ ನಡೆಸಿದ್ದು ಅಲ್ಲಿಯೂ ಆಸ್ತಿ ಪತ್ರಗಳು ಸಿಕ್ಕಿದ್ದು ಎಲ್ಲವನ್ನೂ ಜಪ್ತಿ ಮಾಡಿಕೊಂಡು ತನಿಖೆ ಶುರು ಮಾಡಿದ್ದಾರೆ. ಇನ್ನೂ ಲೋಕಾಯುಕ್ತ ದಾಳಿ ವೇಳೆ ಅಪ್ಪಾಸಾಹೇಬ್ ಕಾಂಬಳೆ ಮನೆಯಲ್ಲಿರಲಿಲ್ಲ ಆದ್ರೇ ಕುಟುಂಬಸ್ಥರ ಸಮ್ಮುಖದಲ್ಲಿ ಎಲ್ಲವನ್ನೂ ಅಧಿಕಾರಿಗಳು ಜಾಲಾಡಿದ್ದಾರೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಏಕಕಾಲಕ್ಕೆ 75 ಕಡೆ ಲೋಕಾಯುಕ್ತ ದಾಳಿ: ಯಾವೆಲ್ಲಾ ಇಲಾಖೆ ಅಧಿಕಾರಿಗಳ ಮೇಲೆ ರೇಡ್? ಇಲ್ಲಿದೆ ಪಟ್ಟಿ
ಒಟ್ಟಿನಲ್ಲಿ ಇಂದು ಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟ ಅಧಿಕಾರಿಗಳ ಭೇಟೆಯಾಡಿದ್ದು ಇನ್ನೂ ಕೂಡ ದಾಳಿ ಮುಂದುವರೆದಿದೆ. ಕೆಲವು ಕಡೆಗಳಲ್ಲಿ ಅಪಾರ ಪ್ರಮಾಣದಲ್ಲಿ ಅಕ್ರಮ ಆಸ್ತಿ ಪತ್ತೆಯಾಗಿದ್ರೇ ಇನ್ನೂ ಕೆಲವು ಕಡೆಗಳಲ್ಲಿ ನಗದು ಹಾಗೂ ಚಿನ್ನ ಪತ್ತೆಯಾಗಿದೆ. ಬೆಳಗಾವಿಯಲ್ಲಿ ಒಟ್ಟು ಎರಡು ಕಡೆಗಳಲ್ಲಿ ದಾಳಿ ನಡೆದಿದ್ದು ಇಬ್ಬರು ಅಧಿಕಾರಿಗಳಿಗೆ ಬಿಸಿ ಮುಟ್ಟಿಸುವ ಕೆಲಸ ಲೋಕಾಯುಕ್ತ ಅಧಿಕಾರಿಗಳು ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ