ಅಕ್ರಮ ಸಂಬಂಧಕ್ಕೆ ಒಪ್ಪದ ಬಾಲ್ಯದ ಗೆಳತಿಯನ್ನು 9 ಬಾರಿ ಇರಿದು ಕೊಂದ ಗೆಳೆಯ

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನಲ್ಲಿ ಭೀಕರ ಘಟನೆ ನಡೆದಿದೆ. ಗೆಳತಿಗೆ 9 ಬಾರಿ ಚಾಕುವಿನಿಂದ ಚುಚ್ಚಿ ಗೆಳೆಯ ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ಬಳಿಕ ಭಯಗೊಂಡ ಗೆಳೆಯ ಅದೇ ಚಾಕುವಿನಿಂದ ತಾನೂ ಚುಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಏನಿದು ಪ್ರಕರಣ? ಇಲ್ಲಿದೆ ವಿವರ

ಅಕ್ರಮ ಸಂಬಂಧಕ್ಕೆ ಒಪ್ಪದ ಬಾಲ್ಯದ ಗೆಳತಿಯನ್ನು 9 ಬಾರಿ ಇರಿದು ಕೊಂದ ಗೆಳೆಯ
ರೇಷ್ಮಾ, ಆನಂದ್​
Updated By: ವಿವೇಕ ಬಿರಾದಾರ

Updated on: Aug 16, 2025 | 7:10 PM

ಬೆಳಗಾವಿ, ಆಗಸ್ಟ್​ 16: ಅಕ್ರಮ ಸಂಬಂಧಕ್ಕೆ ಒಪ್ಪದ ಬಾಲ್ಯದ ಗೆಳತಿಯನ್ನು 9 ಬಾರಿ ಇರಿದು ಕೊಲೆ ಮಾಡಿ, ಬಳಿಕ ತಾನೂ ಅದೇ ಚಾಕುವಿನಿಂದ ಚುಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ (Belagavi) ಜಿಲ್ಲೆಯ ಖಾನಾಪುರ (Khanapur) ತಾಲೂಕಿನ ಬೀಡಿ ಗ್ರಾಮದಲ್ಲಿ ನಡೆದಿದೆ. ಆನಂದ ಸುತಾರ್ (31 ವರ್ಷ) ಆತ್ಮಹತ್ಯೆ ಮಾಡಿಕೊಂಡವರು. ರೇಷ್ಮಾ ತಿರವಿರ (30 ವರ್ಷ) ಕೊಲೆಯಾದವರು.

ರೇಷ್ಮಾ ಮತ್ತು ಆನಂದ ಇಬ್ಬರೂ ಒಂದೇ ಗ್ರಾಮದವರು. ಇಬ್ಬರ ಮನೆಯೂ ಒಂದೇ ಕಾಲನಿಯಲ್ಲಿದೆ. ರೇಷ್ಮಾ ಮತ್ತು ಆನಂದ ಬಾಲ್ಯದ ಸ್ನೇಹಿತರಾಗಿದ್ದರು. ದೊಡ್ಡವರಾದ ಮೇಲೆ ರೇಷ್ಮಾ ಮತ್ತು ಆನಂದ ನಡುವೆ ಪ್ರೀತಿ ಚಿಗುರಿತ್ತು. ಈ ವಿಚಾರ ರೇಷ್ಮಾ ಅವರ ಮನೆಯಲ್ಲಿ ಗೊತ್ತಾಗುತ್ತಿದ್ದಂತೆ, ಪೋಷಕರು ಆಕೆಯನ್ನು ಇದೇ ಗ್ರಾಮದ ಶಿವಾನಂದ್​ ಎಂಬುವರ ಜೊತೆಗೆ ಮದುವೆ ಮಾಡಿದ್ದರು. ಇತ್ತ, ಆನಂದ ಕೂಡ ಬೇರೊಂದು ಯುವತಿ ಜೊತೆ ಮದುವೆಯಾಗಿದ್ದನು. ರೇಷ್ಮಾ ಮತ್ತು ಶಿವಾನಂದ್​ ದಂಪತಿಯ ಸುಖ ಸಂಸಾರಕ್ಕೆ ಸಾಕ್ಷಿ ಎಂಬಂತೆ ಇಬ್ಬರು ಮಕ್ಕಳಿದ್ದಾರೆ. ಇನ್ನು, ಶಿವಾನಂದ ದಂಪತಿಗೂ ಮೂವರು ಮಕ್ಕಳಿದ್ದಾರೆ.

ಮದುವೆಯಾದ ಬಳಿಕವೂ ಆನಂದ ಮತ್ತು ರೇಷ್ಮಾ ನಡುವೆ ಗೆಳೆತನ ಮುಂದುವರೆದಿತ್ತು. ಆದರೆ ಕಳೆದ ಎರಡು ವರ್ಷಗಳಿಂದ ಇಬ್ಬರ ಮಧ್ಯೆ ಇದ್ದ ಸಲುಗೆ ಅಕ್ರಮ ಸಂಬಂಧಕ್ಕೆ ತಿರುಗಿತ್ತು. ಕಳೆದ ತಿಂಗಳು ರೇಷ್ಮಾ ಮತ್ತು ಆನಂದ್​ ರೆಡ್​ ಹ್ಯಾಂಡ್​ ಆಗಿ ಶಿವಾನಂದ್​ ಕೈಗೆ ಸಿಕ್ಕಿಬಿದ್ದಿದ್ದರು.

ಆಗ, ರೇಷ್ಮಾ ಪತಿ ಶಿವಾನಂದ್​ ನಂದಗಡ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದರು. ಶಿವಾನಂದ್​ ನೀಡಿದ ದೂರಿನನ್ವಯ ಪೊಲೀಸರು ಆನಂದ್​ನನ್ನು ಠಾಣೆಗೆ ಕರೆಸಿಕೊಂಡು ವಾರ್ನ್ ಮಾಡಿದ್ದರು. ಜೊತೆಗೆ ಮುಚ್ಚಳಿಕೆಯನ್ನು ಬರೆಯಿಸಿಕೊಂಡು ಕಳುಹಿಸಿದ್ದರು.

ಬಳಿಕ ರೇಷ್ಮಾ, ಆನಂದನಿಂದ ಅಂತರ ಕಾಯ್ದುಕೊಂಡಿದ್ದರು. ಆದರೆ, ಆನಂದ್​ ಮಾತ್ರ ಮಾತನಾಡಿಸುವಂತೆ, ಭೇಟಿಯಾಗುವಂತೆ ರೇಷ್ಮಾರಿಗೆ ಪೀಡಿಸುತ್ತಲೇ ಇದ್ದನು. ಈ ಸಂದರ್ಭದಲ್ಲಿ ರೇಷ್ಮಾ, “ಇದೆಲ್ಲ ಬೇಡ. ಬಿಟ್ಟು ಬಿಡೋಣ” ಅಂತ ಆನಂದ್​ಗೆ ಬುದ್ದಿ ಮಾತು ಹೇಳಿದ್ದರು. ಆದರೆ, ಆನಂದ ಮಾತ್ರ ಶಿವಾನಂದ್​ ಮನೆಯಲ್ಲಿ ಇಲ್ಲದಿದ್ದಾಗ ರೇಷ್ಮಾ ಬಳಿ ಹೋಗಿ ತನ್ನೊಟ್ಟಿಗೆ ಇರುವಂತೆ ಹೇಳುತ್ತಿದ್ದನು. ರೇಷ್ಮಾ ಇದಕ್ಕೆ ಸ್ಪಂದಿಸುತ್ತಿರಲಿಲ್ಲ. ಇದರಿಂದ ಆನಂದ್​ ಸಿಟ್ಟಾಗಿದ್ದನು.

ಇದನ್ನೂ ಓದಿ: ಹೂವಿನ ಅಂಗಡಿ ಮಾಲೀಕನನ್ನು ಕೊಂದ ಬಿರಿಯಾನಿ ಶಾಪ್​ ಓನರ್

ಶುಕ್ರವಾರ (ಆ.15) ಬೆಳಗಿನ ಜಾವ ಶಿವಾನಂದ್​ ಹಾಲು ಹಾಕಲು ಡೇರಿಗೆ ಹೋಗಿದ್ದನು. ಇತ್ತ, ಹಿಂಬಾಗಿಲಿನಿಂದ ಮನೆಯೊಳಗೆ ಹೋದ ಆನಂದ್​, ರೇಷ್ಮಾರ ಹೊಟ್ಟೆಗೆ 9ಬಾರಿ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾನೆ. ತಾಯಿಯನ್ನು ಕೊಲೆ ಮಾಡುವ ದೃಶ್ಯವನ್ನು ರೇಷ್ಮಾ ಪುತ್ರಿ ಕಂಡಿದ್ದಾಳೆ. ತೀವ್ರ ರಕ್ತಸ್ರಾವ ಉಂಟಾಗಿ, ರೇಷ್ಮಾ ಸ್ಥಳದಲ್ಲೇ ಮೃತಪಟ್ಟರು. ರೇಷ್ಮಾ ಸಾವಿಗೀಡಾಗುತ್ತಿದ್ದಂತೆ ಭಯಗೊಂಡ ಆನಂದ್ ಅದೇ ಚಾಕುವಿನಿಂದ ತನ್ನ ಹೊಟ್ಟೆಗೆ ಐದಾರು ಬಾರಿ ಚುಚ್ಚಿಕೊಂಡಿದ್ದನು.

ಚೀರಾಟ ಕೇಳಿ ಮನೆಯೊಳಗೆ ಬಂದ ಅಕ್ಕಪಕ್ಕದವರು ಆನಂದನನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದರೆ, ಮಾರ್ಗ ಮಧ್ಯೆ ಆನಂದ್​ ಮೃತನಾಗಿದ್ದಾನೆ. ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಆನಂದ್​ನ​ ಮರಣೋತ್ತರ ಪರೀಕ್ಷೆ ನಡೆಸಿ, ಕುಟುಂಬಸ್ಥರಿಗೆ ಮೃತ ದೇಹ ನೀಡಲಾಯಿತು. ರೇಷ್ಮಾ ಹಾಗೂ ಆನಂದನ ಮೃತದೇಹಗಳನ್ನು ಇದೇ ಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ರೇಷ್ಮಾ ಮತ್ತು ಆನಂದ್​ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ