ಬೆಳಗಾವಿ, ಜನವರಿ 12: ಮಹಾರಾಷ್ಟ್ರ ಸರ್ಕಾರದ ಆರೋಗ್ಯ ವಿಮೆ ಜಾರಿ (Health Insurance) ವಿಚಾರವಾಗಿ ಬೆಳಗಾವಿಯ ಕೆಎಲ್ಇ ಹಾಗೂ ಅರಿಹಂತ ಆಸ್ಪತ್ರೆಗೆ ನೋಟಿಸ್ ಜಾರಿ ಮಾಡಲಾಗಿದೆ. ಮಹಾರಾಷ್ಟ್ರ (Maharashtra) ಆರೋಗ್ಯ ವಿಮೆಯನ್ನು ಆರೋಗ್ಯ ಇಲಾಖೆ ಗಮನಕ್ಕೆ ತರದೇ ಅನುಷ್ಠಾನಗೊಳಿಸಿದ್ದಕ್ಕಾಗಿ ಡಿಎಚ್ಓ ಡಾ. ಮಹೇಶ್ ಕೋಣಿ ನೋಟಿಸ್ ಜಾರಿ ಮಾಡಿದ್ದಾರೆ. ಯಾವ ಕಾನೂನಿಡಿ ಮಹಾರಾಷ್ಟ್ರ ಆರೋಗ್ಯ ವಿಮೆಗೆ ಸಂಬಂಧಿಸಿ ಒಡಂಬಡಿಕೆ ಮಾಡಿಕೊಂಡಿದ್ದೀರಿ? ಅದರಡಿ ಇಲ್ಲಿಯ ವರೆಗೆ ಚಿಕಿತ್ಸೆ ಪಡೆದವರ ಸಂಖ್ಯೆ ಎಷ್ಟು ಎಂದು ಪ್ರಶ್ನಿಸಿ ರೋಗಿಗಳ ವಿವಿರ ಸಮೇತ ಮಾಹಿತಿ ನೀಡಲು ನೋಟಿಸ್ನಲ್ಲಿ ಸೂಚಿಸಲಾಗಿದೆ.
ನೋಟಿಸ್ ತಲುಪಿದ 24 ಗಂಟೆಯಲ್ಲಿ ಉತ್ತರ ನೀಡಬೇಕು ಎಂದೂ ಸೂಚಿಸಲಾಗಿದೆ. ಈ ಮಧ್ಯೆ, ಗಡಿ ವಿಚಾರದಲ್ಲಿ ಮಹಾರಾಷ್ಟ್ರ ಸರ್ಕಾರ ಮತ್ತೆ ಉದ್ಧಟತನ ತೋರಿದೆ.
ಗಡಿ ವಿವಾದ ಇರುವ 865 ಗ್ರಾಮಗಳ ಜನರಿಗೆ ಆರೋಗ್ಯ ವಿಮೆ ಜಾರಿ ವಿಚಾರವಾಗಿ ಮಹಾರಾಷ್ಟ್ರ ಮುಖ್ಯಮಂತ್ರಿಗಳ ವಿಶೇಷಾಧಿಕಾರಿ ಮಂಗೇಶ್ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಆರೋಗ್ಯ ಪರಿಹಾರ ನಿಧಿ ಯೋಜನೆ ಬಗ್ಗೆ ಈಗಾಗಲೇ ತಿಳಿಸಿದ್ದೇವೆ. ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿಯೂ ನಾವು ಮಾಹಿತಿ ನೀಡಿದ್ದೇವೆ. ಇದು ಗಡಿ ಭಾಗದ ಮರಾಠಿ ಭಾಷಿಕರಿಗಾಗಿ ಅನುಷ್ಠಾನ ಮಾಡ್ತಿದ್ದೇವೆ ಎಂದು ವಿಡಿಯೋ ಹೇಳಿಕೆಯಲ್ಲಿ ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಪೊಲೀಸರಿಗೇ ಚಳ್ಳೆಹಣ್ಣು ತಿನ್ನಿಸಿ ಆರೋಪಿ ಪರಾರಿ: ಕೋರ್ಟ್ಗೆ ಹಾಜರುಪಡಿಸಲು ಕರೆತಂದಿದ್ದಾಗ ಎಸ್ಕೇಪ್
ಮುಖ್ಯಮಂತ್ರಿ ಏಕನಾಥ ಶಿಂಧೆ ಸೂಚನೆ ಮೇರೆಗೆ ಯೋಜನೆ ಜಾರಿ ಮಾಡಿದ್ದೇವೆ. ಬೆಳಗಾವಿಯ ಅರಿಹಂತ ಆಸ್ಪತ್ರೆಗೆ 1 ಲಕ್ಷ ರೂ. ಸಂದಾಯ ಮಾಡಿದ್ದೇವೆ. ಮಹಾರಾಷ್ಟ್ರ ಸಿಎಂ ಪರಿಹಾರ ನಿಧಿಯಿಂದ 1 ಲಕ್ಷ ಹಣ ಸಂದಾಯ ಮಾಡಲಾಗಿದೆ. ಇದನ್ನು ಕನ್ನಡ ಪರ ಹೋರಾಟಗಾರರು ವಿರೋಧಿಸಿದ್ದಾರೆ. ಅಲ್ಲದೇ ಬೆಳಗಾವಿ ಜಿಲ್ಲಾಡಳಿತ ನಮಗೆ ನೋಟಿಸ್ ಜಾರಿಗೊಳಿಸಿದೆ. ಕರ್ನಾಟಕ ಸರ್ಕಾರದ ಈ ನಿರ್ಧಾರ ಖಂಡಿಸುತ್ತೇವೆ. ಗಡಿ ಭಾಗದ ಜನರಿಗೆ ಈ ಯೋಜನೆ ವರವಾಗಿದೆ. ಇದನ್ನು ಕರ್ನಾಟಕ ಸರ್ಕಾರ ವಿರೋಧಿಸಬಾರದೆಂದು ಮಂಗೇಶ್ ಚಿವಟೆ ವಿಡಿಯೋ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ