AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಳಗಾವಿಗೆ ಕಳ್ಳನಂತೆ ಬಂದುಹೋದ ಮಹಾರಾಷ್ಟ್ರದ ಎನ್​ಸಿಪಿ ಶಾಸಕ ರೋಹಿತ್ ಪವಾರ್

ಗಡಿವಿವಾದದ ನಡುವೆಯೇ ಮಹಾರಾಷ್ಟ್ರದ ಶಾಸಕ ರೋಹಿತ್ ಪವಾರ್ ಬೆಳಗಾವಿಗೆ ಗಪ್‌ಚುಪ್ ಭೇಟಿ‌ ನೀಡಿ ಹೋಗಿದ್ದಾರೆ. ಇದು ಕನ್ನಡಪರ ಹೋರಾಟಗಾರರ ಕೆಂಗಣ್ಣಿಗೆ ಗುರಿಯಾಗಿದೆ.

ಬೆಳಗಾವಿಗೆ ಕಳ್ಳನಂತೆ ಬಂದುಹೋದ ಮಹಾರಾಷ್ಟ್ರದ ಎನ್​ಸಿಪಿ ಶಾಸಕ ರೋಹಿತ್ ಪವಾರ್
ಬೆಳಗಾವಿ ಭೇಟಿ ನೀಡಿದ ಶಾಸಕ ರೋಹಿತ್​ ಪವಾರ್​
Follow us
TV9 Web
| Updated By: ಕಿರಣ್ ಹನುಮಂತ್​ ಮಾದಾರ್

Updated on: Dec 14, 2022 | 12:53 PM

ಬೆಳಗಾವಿ: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಮಧ್ಯೆಯೇ ಪುಣೆ ಜಿಲ್ಲೆಯ ಕರ್ಜತ್-ಜಮ್ಕೆಡ್ ವಿಧಾನಸಭೆ ಕ್ಷೇತ್ರದ ಎನ್‌ಸಿಪಿ ಶಾಸಕನಾಗಿರುವ ರೋಹಿತ್ ಪವಾರ್ ಬೆಳಗಾವಿಗೆ ಗಪ್‌ಚುಪ್ ಭೇಟಿ‌ ನೀಡಿ ಹೋಗಿದ್ದಾರೆ. ಕೊಲ್ಲಾಪುರ- ಕೊಗನೊಳ್ಳಿ ಮಾರ್ಗವಾಗಿ ರೋಹಿತ್ ನಿನ್ನೆ ರಾತ್ರಿಯೇ ಬೆಳಗಾವಿಗೆ ಆಗಮಿಸಿದ್ದು, ಅನಾರೋಗ್ಯಕ್ಕೆ ತುತ್ತಾಗಿರುವ ಎಂಇಎಸ್ ಬೆಳಗಾವಿ ನಗರ ಅಧ್ಯಕ್ಷ ದೀಪಕ್ ದಳವಿ ಅವರ ಆರೋಗ್ಯ ವಿಚಾರಿಸಿ ಇಂದು (ಡಿ.13) ಬೆಳಗ್ಗೆ ಬೆಳಗಾವಿ ತಾಲೂಕಿನ ವಿವಿಧ ಭಾಗಗಳಿಗೆ ಭೇಟಿ ನೀಡಿದ್ದಾರೆ.

ಗಡಿ ಹೋರಾಟದಲ್ಲಿ ಗಲಭೆ ಸೃಷ್ಟಿಸಿ ಗೋಲಿಬಾರ್‌ಗೆ ಮೃತರಾದವರ ಹೆಸರಲ್ಲಿ ಹಿಂಡಲಗಾದಲ್ಲಿ ನಿರ್ಮಿಸಿರುವ ಹುತಾತ್ಮ ಸ್ಮಾರಕಕ್ಕೆ ರೋಹಿತ್ ಪವಾರ್​ ಭೇಟಿ ನೀಡಿ. ನಂತರ ಶಿವಾಜಿ ಪುತ್ಥಳಿಗೆ ಮಾಲಾರ್ಪಣೆ ಸಲ್ಲಿಸಿ, ಯಳ್ಳೂರ ಗ್ರಾಮದಲ್ಲಿರುವ ಮರಾಠಿ ಹೈಸ್ಕೂಲ್‌ಗೆ ಭೇಟಿ ನೀಡಿದ್ದಾರೆ. ಇದೇ ವೇಳೆ ಎಂಇಎಸ್ ಹಾಗೂ ಎನ್‌ಸಿಪಿ ನಾಯಕರ ಜತೆಗೆ ಗುಪ್ತವಾಗಿ ಸಭೆ ನಡೆಸಿ ಇಲ್ಲಿನ ಸ್ಥಿತಿಗತಿ ಹಾಗೂ ಅಧಿವೇಶನಕ್ಕೆ ವಿರುದ್ಧವಾಗಿ ಮಾಡುವ ಮಹಾಮೇಳೆದ ಮಾಹಿತಿಯನ್ನ ಪಡೆದುಕೊಂಡಿದ್ದು, ಶಾಸಕ ರೋಹಿತ್ ಪವಾರ್‌ಗೆ ಸ್ಥಳೀಯ ಎಂಇಎಸ್ ಕಾರ್ಯಕರ್ತರು ಸಾಥ್‌ ನೀಡಿದ್ದಾರೆ.

ಮಹಾರಾಷ್ಟ್ರದ ಎಲ್ಲ ರಾಜಕೀಯ ಪಕ್ಷಗಳಿಗೆ ಗಡಿ ವಿವಾದವೇ ಪ್ರಮುಖ ಅಸ್ತ್ರವಾಗಿದೆ. ಗಡಿ ವಿವಾದ ಜೀವಂತ ಇರಬೇಕೆಂದೇ ಮಹಾರಾಷ್ಟ್ರ ನಾಯಕರು ಪದೆ ಪದೇ ಕ್ಯಾತೆ ತೆಗೆಯುತ್ತಲೇ ಇರುತ್ತಾರೆ. ಈ ವಿವಾದ ಸುಪ್ರೀಂ ಕೋರ್ಟ್‌ನಲ್ಲಿದ್ದು ಅಂತಿಮ ವಿಚಾರಣೆ ಕೂಡ ಶೀಘ್ರದಲ್ಲಿ ನಡೆಯಲಿದೆ. ಈ ಕಾರಣಕ್ಕೆ ಮಹಾರಾಷ್ಟ್ರ ಗಡಿ ಉಸ್ತುವಾರಿ ಸಚಿವರುಗಳು ಬೆಳಗಾವಿ ಬರುವುದಾಗಿ ಹೇಳಿ ಬಳಿಕ ಪ್ರವಾಸ ರದ್ದು ಮಾಡಿದ್ದರು. ಮಹಾರಾಷ್ಟ್ರ ಸರ್ಕಾರದ ಇಂತಹ ವರ್ತನೆ ಖಂಡಿಸಿ ಮಹಾ ವಿಕಾಸ ಆಘಾಡಿ ಇತ್ತೀಚೆಗಷ್ಟೇ ಕೊಲ್ಲಾಪುರದಲ್ಲಿ ಪ್ರತಿಭಟನೆಯನ್ನ ನಡೆಸಿತ್ತು.

ಎನ್‌ಸಿಪಿ ಶಾಸಕನ ಬೆಳಗಾವಿ ಭೇಟಿ ಕುರಿತು ಪ್ರತಿಕ್ರಿಯಿಸಿರುವ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ, ರಾತ್ರೋರಾತ್ರಿ ಬೆಳಗಾವಿಗೆ ಬರುವ ಅವಶ್ಯಕತೆ ಎನಿತ್ತು, ಯಾವ ಕಾರಣಕ್ಕೆ ಇಲ್ಲಿಗೆ ಬಂದಿದ್ದಾರೆ ಸ್ಪಷ್ಟಪಡಿಸಬೇಕು. ಗಡಿವಿವಾದ ಬಗ್ಗೆ ಮಹಾರಾಷ್ಟ್ರ ನಾಯಕರು ಹುಲಿಯಂತೆ ಮಾತನಾಡಿ, ನರಿಯಂತೆ ವರ್ತನೆ ತೋರಿದ್ದಾರೆ. ಬೆಳಗಾವಿಗೆ ಬರುವುದಾದರೆ ಹೇಳಿ ಬರಲಿ, ಚನ್ನಮ್ಮ ವೃತ್ತದಲ್ಲಿ ನಿಂತು ಮಾತಾಡಲಿ. ಗಡಿವಿವಾದ ಬಗ್ಗೆ ತಮ್ಮ ನಿಲುವು ವ್ಯಕ್ತಪಡಿಸಲಿ, ಎಂದು ಸವಾಲ್ ಹಾಕುವ ಮೂಲಕ ಅಶೋಕ ಚಂದರಗಿ ಕಿಡಿ ಕಾರಿದ್ದಾರೆ.

ಇದನ್ನೂ ಓದಿ:ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದದಲ್ಲಿ ಸಿಲುಕಿ ವಿಜಯಪುರ ಜಿಲ್ಲೆಯ ರೋಗಿಗಳು ಪರದಾಡುತ್ತಿದ್ದಾರೆ! ಯಾಕೆ?

ಒಟ್ಟಾರೆ ಮಹಾರಾಷ್ಟ್ರದಲ್ಲಿ ವೀರ ಶೂರರಂತೆ ಮಾತನಾಡುವ ಮಹಾ ನಾಯಕರು ಬೆಳಗಾವಿಗೆ ಕಳ್ಳರಂತೆ ರಾತ್ರೋ ರಾತ್ರಿ ಬಂದು ಇಲ್ಲಿ ಬೆಂಕಿ ಹಚ್ಚುವ ಕೆಲಸವನ್ನ ಮಾಡುತ್ತಿರುವುದು ಖಂಡನೀಯ ಎಂದು ಕನ್ನಡಪರ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೇ ಜಿಲ್ಲಾಡಳಿತ ಇವರ ಮೇಲೆ ಕ್ರಮ ಕೈಗೊಳ್ಳಬೇಕು ಎನ್ನುವ ಒತ್ತಾಯ ಕೂಡ ಕೇಳಿ ಬಂದಿದೆ. ಈ ನಿಟ್ಟಿನಲ್ಲಿ ಬೆಳಗಾವಿ ಜಿಲ್ಲಾಡಳಿತ ಯಾವ ರೀತಿ ಕ್ರಮಕ್ಕೆ ಮುಂದಾಗುತ್ತದೆ ಎಂಬುದನ್ನ ಕಾದುನೋಡಬೇಕಾಗಿದೆ.

ವರದಿ: ಸಹದೇವ ಮಾನೆ ಟಿವಿ9 ಬೆಳಗಾವಿ

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ