ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದದಲ್ಲಿ ಸಿಲುಕಿ ವಿಜಯಪುರ ಜಿಲ್ಲೆಯ ರೋಗಿಗಳು ಪರದಾಡುತ್ತಿದ್ದಾರೆ! ಯಾಕೆ?
ಮಹಾರಾಷ್ಟ್ರದ ಪಾಸಿಂಗ್ ಹೊಂದಿರೋ ಕ್ಯಾಬ್ ಗಳಿಗೆ ಇದು ವರವಾಗಿದೆ. ಹೆಚ್ಚಿದ ದರ ವಿಧಿಸುತ್ತಿದ್ದಾರೆ MH ಪಾಸಿಂಗ್ ಹೊಂದಿರೋ ಕ್ಯಾಬ್ ಚಾಲಕರು. ಹಾಗಾಗಿ ಗಡಿ ವಿಚಾರ ದೊಡ್ಡದು ಮಾಡುವ ಬದಲು ಆಯಾ ಸರ್ಕಾರಗಳು ಬಗೆಹರಿಸಬೇಕೆಂದು ಒತ್ತಾಯ ಮಾಡಿದ್ದಾರೆ ಗುಮ್ಮಟ ನಗರಿಯ ಜನತೆ.
ಕರ್ನಾಟಕ (Karnataka) ಹಾಗೂ ಮಹಾರಾಷ್ಟ್ರ ಗಡಿ ಹಾಗೂ ಜಲ ಭಾಷಾ ಗುದ್ದಾಟ ಇಂದು ನಿನ್ನೆಯದಲ್ಲ. 1966 ರಿಂದಲೇ ಈ ವಿವಾದ ಜೀವಂತವಾಗಿದ್ದುಕೊಂಡು ಬಂದಿದೆ. ಇದೇ ವಿಚಾರದಲ್ಲಿ ಮಹಾರಾಷ್ಟ್ರದಲ್ಲಿ ಆಳುವ ಸರ್ಕಾರ ಹಾಗೂ ಅಲ್ಲಿನ ರಾಜಕೀಯ ಪಕ್ಷಗಳು ಇದೇ ವಿವಾದದ ಕಿಡಿಯನ್ನು ಸಮಯಕ್ಕೆ ಅನುಗುಣವಾಗಿ ಹೊತ್ತಿಸುತ್ತಲೇ ಬಂದಿದೆ. ಮಹಾ ಸಿಎಂ ಗಡಿ ಕುರಿತು ಮಾತನಾಡಿದ ವಿಚಾರ ಇದೀಗ ಮತ್ತೆ ಭುಗಿಲೆದ್ದಿದೆ. ಗಡಿ ವಿಚಾರ ಎರಡು ರಾಜ್ಯಗಳ ಜನ ಜೀವನದ ಮೇಲೆ ತೀವ್ರ ಪರಿಣಾಮ ಬೀರಿದೆ. ಗಡಿ ವಿವಾದದ (Border Dispute) ಬಿಸಿ ಮಹಾರಾಷ್ಟ್ರದ ಗಡಿಯನ್ನು ಹಂಚಿಕೊಂಡಿರೋ ಬಡ ರೋಗಿಗಳ ಮೇಲೆ ಬೀರಿದೆ. ಜೊತೆಗೆ ಅದು ಮಹಾರಾಷ್ಟ್ರಕ್ಕೂ (Maharashtra) ನಷ್ಟದ ಬಾಬ್ತಾಗಿದೆ. ಗಡಿ ಕ್ಯಾತೆ, ರೋಗಿಗಳ (Patients) ಸಮಸ್ಯೆ ಕುರಿತ ವರದಿ ಇಲ್ಲಿದೆ ನೋಡಿ…….
ನೆರೆಯ ಮಹಾರಾಷ್ಟ್ರ ಹಾಗೂ ಕರ್ನಾಟಕ ಗಡಿ ಕ್ಯಾತೆಯಿಂದ ಬಡ ರೊಗಗಳಿಗೆ ತೊಂದರೆಯಾಗಿದೆ. ಮಹಾರಾಷ್ಟ್ರ ಗಡಿ ಹಂಚಿಕೊಂಡಿರೋ ವಿಜಯಪುರ ಜಿಲ್ಲೆಯ ಜನ ಸಂಕಷ್ಟಕ್ಕೆ ಈಡಾಗಿದ್ದಾರೆ. ಹಲವಾರು ಚಿಕಿತ್ಸೆಗಳಿಗಾಗಿ ಮಹಾರಾಷ್ಟ್ರದ ಸಾಂಗ್ಲಿ ಹಾಗೂ ಮೀರಜ್ ನತ್ತ ಮುಖ ಮಾಡುತ್ತಿದ್ದ ಜಿಲ್ಲೆಯ ಜನ ತಮ್ಮದೇ ಜಿಲ್ಲಾಸ್ಪತ್ರೆಯತ್ತ ಮುಖ ಮಾಡಿದ್ದಾರೆ. ಇದರಿಂದ ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚಳಗೊಂಡಿದೆ. ಮತ್ತೆ ಕರ್ನಾಟಕ ಮಹಾರಾಷ್ಟ್ರ ಗಡಿ ಕ್ಯಾತೆ ವಿಚಾರ ಮುನ್ನೆಲೆಗೆ ಬಂದಿದೆ. ಇದೇ ವಿಚಾರದಲ್ಲಿ ಮಹಾರಾಷ್ಟ್ರದಲ್ಲಿರೋ ಸಾಂಗ್ಲಿ, ದಕ್ಷಿಣ ಸೊಲ್ಲಾಪುರ ಹಾಗೂ ಸೊಲ್ಲಾಪುರ ಜಿಲ್ಲೆಗಳ ನೂರಾರು ಗ್ರಾಮಗಳ ಜನರು ಕರ್ನಾಟಕ ಸೇರಲು ಮುಂದೆ ಬಂದಿವೆ.
ಇಷ್ಟರ ಮಧ್ಯೆ ಬಸ್ ಗಳಿಗೆ ಕಪ್ಪು ಮಸಿ ಬಳಿಯೋದು, ಕಲ್ಲು ಹೊಡೆಯೋದು, ಪ್ರತಿಭಟನೆ ಹೋರಾಟ ಉಭಯ ರಾಜ್ಯಗಳಲ್ಲಿ ನಡೆದಿದೆ. ಇಂತ ಪ್ರಕ್ಷುಬ್ದ ವಾತಾವರಣದಿಂದ ವಿಜಯಪುರ ಜಿಲ್ಲೆಯ ರೋಗಗಳಿಗೆ ತೀವ್ರ ತೊಂದರೆಯಾಗುತ್ತಿದೆ. ಕಾರಣ ಜಿಲ್ಲೆಗಿಂತ ಮಹಾರಾಷ್ಟ್ರದ ಸಾಂಗ್ಲಿ ಹಾಗೂ ಮೀರಜ್ ಗಳಲ್ಲಿ ಕಡಿಮೆ ಶುಲ್ಕದಲ್ಲಿ ಉತ್ತಮ ಚಿಕಿತ್ಸೆ ಸಿಗುತ್ತಿದೆ. ಹಾಗಾಗಿ ವಿವಿಧ ಶಸ್ತ್ರಚಿಕಿತ್ಸೆ ಸೇರಿದಂತೆ ಹತ್ತಾರು ರೋಗಿಗಳಿಗೆ ಚಿಕಿತ್ಸೆ ಪಡೆಯಲು ಜಿಲ್ಲೆಯ ಜನರು ಮಹಾರಾಷ್ಟ್ರದ ಸಾಂಗ್ಲಿ, ಮೀರಜ್ ಹಾಗೂ ಸೊಲ್ಲಾಪುರದತ್ತ ಹೋಗುತ್ತಾರೆ.
ಸದ್ಯ ಉಭಯ ರಾಜ್ಯಗಳ ಗಡಿ ಕ್ಯಾತೆ ಕಿರಿಕ್ ನಿಂದ ಅತ್ತ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಒಂದು ದಿನ ಬಸ್ ಸಂಚಾರ ಇದ್ದರೆ ಮತ್ತೊಂದು ದಿನ ಇರಲ್ಲ. ಜೊತೆಗೆ ರಾಜ್ಯದ ಬಸ್ ಗಳ ಮೇಲೆ ಮಹಾರಾಷ್ಟ್ರದವರು ದಾಳಿ ಮಾಡುತ್ತಿರೋದು ಜನರಿಗೆ ಭಯ ಮೂಡಿಸಿದೆ. ಹಾಗಾಗಿ ತಮ್ಮದೇ ಜಿಲ್ಲಾಸ್ಪತ್ರೆಗೆ ಹೋಗುತ್ತಿದ್ದಾರೆ. ಇನ್ನು ಕೆಲ ಅನಿವಾರ್ಯ ಬಂದಲ್ಲಿ ಮಹಾರಾಷ್ಟ್ರ ರಾಜ್ಯದ ಪಾಸಿಂಗ್ ಇರೋ ವಾಹನಗಳನ್ನು ಬಾಡಿಗೆ ಪಡೆದುಕೊಂಡು ಹೋಗುತ್ತಿದ್ದಾರೆ.
ಇದು ಮಹಾರಾಷ್ಟ್ರದ ಪಾಸಿಂಗ್ ಹೊಂದಿರೋ ಕ್ಯಾಬ್ ಗಳಿಗೆ ವರವಾಗಿದೆ. ಹೆಚ್ಚಿದ ದರ ವಿಧಿಸುತ್ತಿದ್ದಾರೆ MH ಪಾಸಿಂಗ್ ಹೊಂದಿರೋ ಕ್ಯಾಬ್ ಚಾಲಕರು. ಇದು ಬಡ ಜನರ ಜೇಬಿಗೆ ಹೊಡೆತ ನೀಡುತ್ತಿದೆ. ಹಾಗಾಗಿ ಗಡಿ ವಿಚಾರವನ್ನು ದೊಡ್ಡದು ಮಾಡುವ ಬದಲು ಆಯಾ ಸರ್ಕಾರಗಳು ಬಗೆ ಹರಿಸಬೇಕೆಂದು ಒತ್ತಾಯ ಮಾಡಿದ್ದಾರೆ ಗುಮ್ಮಟ ನಗರಿಯ ಜನತೆ.
ಸದ್ಯ ಕರ್ನಾಟಕರಿಂದ ಮಹಾರಾಷ್ಟ್ರಕ್ಕೆ ಹಾಗೂ ಮಹಾರಾಷ್ಟ್ರದಿಂದ ಕರ್ನಾಟಕ್ಕೆ ಬಸ್ ಸಂಚಾರ ಆರಂಭವಾಗಿದೆ. ಆದರೆ ಉಭಯ ರಾಜ್ಯಗಳ ಬಸ್ ಗಳಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆಯಿದೆ. ಅಲ್ಪ ಪ್ರಮಾಣದ ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದಾರೆ. ಕಾರಣ ಯಾವಾಗ ಏನಾಗುತ್ತದೆಯೋ ಗೊತ್ತಿಲ್ಲಾ. ಅದರಲ್ಲೂ ಮಹಾರಾಷ್ಟ್ರದಲ್ಲಿ ಏಕಾಏಕಿ ಗಲಾಟೆ ಮಾಡುತ್ತಾರೆ. ರೋಗಿಗಳನ್ನು ನಾವು ಕರೆದುಕೊಂಡು ಹೋದಾಗ ಗಲಾಟೆ ಘರ್ಷಣೆ ಆದರೆ ತೊಂದರೆಯಾಗುತ್ತಿದೆ. ಆದ ಕಾರಣ ಅನಿವಾರ್ಯವಾಗಿ ಹೆಚ್ಚಿನ ಬಾಡಿಗೆ ನೀಡಿ ಮಹಾರಾಷ್ಟ್ರ ಪಾಸಿಂಗ್ ವಾಹನ ಬಾಡಿಗೆ ಮಾಡಿಕೊಂಡು ಹೋಗುತ್ತಿದ್ದೇವೆ ಎಂದಿದ್ದಾರೆ.
ಇನ್ನು ಬಡ ಜನರು ಖಾಸಗಿ ಆಸ್ಪತ್ರೆ ಶುಲ್ಕ ಹೆಚ್ಚಿರೋ ಕಾರಣ ಹೆಚ್ಚಿನವರು ಜಿಲ್ಲಾಸ್ಪತ್ರೆಗೆ ಹೋಗುತ್ತಿದ್ಧಾರೆ. ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಕಳೆದ ನವೆಂಬರ್ ಹಾಗೂ ಡಿಸೆಂಬರ್ 1 ರಿಂದ 8 ರವರೆಗೆ ಹೊರ ರೋಗಿಗಳ ಸಂಖ್ಯೆ ಹಾಗೂ ಒಳ ರೋಗಿಗಳ ಸಂಖ್ಯೆಗಳ ಅಂಕಿ ಅಂಶಗಳನ್ನು ಗಮನಿಸಿದಾಗ ಹೆಚ್ಚು ರೋಗಿಗಳು ಇತ್ತ ಬಂದಿರೋದು ಗೊತ್ತಾಗುತ್ತದೆ. 2022 ರ ನವೆಂಬರ್ ನಲ್ಲಿ 6800 ಕ್ಕೂ ಆಧಿಕ ಹೊರ ರೋಗಿಗಳು ಹಾಗೂ 4497 ಜನರು ಒಳ ರೋಗಿಗಳಾಗಿ ಚಿಕಿತ್ಸೆ ಪಡೆದಿದ್ದಾರೆ.
ಇದರಾಚೆಗೆ ಮಹಾರಾಷ್ಟ್ರ ಹಾಗೂ ಕರ್ನಾಟಕ ಗಡಿ ಕ್ಯಾತೆಯ ವಿಚಾರ ಭುಗಿಲೆದ್ದ ಈ ವಾರದಲ್ಲಿ ಹೆಚ್ಚು ಜನರು ಸಾಂಗ್ಲಿ ಮೀರಜ್ ಗೆ ಹೋಗದೇ ಜಿಲ್ಲಾಸ್ಪತ್ರೆ ಮೊರೆ ಹೋಗಿದ್ಧಾರೆ. ಡಿಸೆಂಬರ್ 1 ರಿಂದ ಡಿಸೆಂಬರ್ 8 ವರೆಗೆ 5338 ಜನರು ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದಿದ್ದಾರೆ. ಅದೇ ರೀತಿ 954 ಜನರು ಒಳ ರೋಗಿಗಳಾಗಿ ಚಿಕಿತ್ಸೆ ಪಡೆದಿದುಕೊಂಡಿರೊದು ಅಂಕಿ ಅಂಶಗಳು ಹೇಳುತ್ತವೆ.
ಗಡಿ ಕ್ಯಾತೆಯ ಕಾರಣದಿಂದ ಮಹಾರಾಷ್ಟ್ರದ ಸಾಂಗ್ಲಿ ಮೀರಜ್ ಗೆ ಹೋಗುವ ಬದಲು ಜಿಲ್ಲೆಯ ಜನರು ಇದೀಗ ಜಿಲ್ಲಾ ಆಸ್ಪತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ಧಾರೆ ವಿಜಯಪುರ ಜಿಲ್ಲಾಸ್ಪತ್ರೆಯ ಆರ್ ಎಂಓ ವೈದ್ಯ ಡಾ ಎ ಜಿ ಬಿರಾದಾರ್ ಎಂದು ಹೇಳುತ್ತಾರೆ.
ಉಭಯ ರಾಜ್ಯಗಳ ಗಡಿಯ ಕಿಚ್ಚು ಬಡ ರೋಗಿಗಳಿಗೆ ಬಿಸಿ ತಾಗಿಸಿದೆ. ಕಡಿಮೆ ಶುಲ್ಕದಲ್ಲಿ ಉತ್ತಮ ಚಿಕಿತ್ಸೆಗಾಗಿ ಮಹಾರಾಷ್ಟ್ರದ ಸಾಂಗ್ಲಿ ಮೀರಜ್ ಹಾಗೂ ಸೊಲ್ಲಾಪುರಕ್ಕೆ ಹೋಗುತ್ತಿದ್ದ ಜಿಲ್ಲೆಯ ರೋಗಿಗಳಿಗೆ ಗಡಿ ವಿವಾದ ಸಮಸ್ಯೆ ಮಾಡಿದೆ. ಅನಿವಾರ್ಯವಾಗಿ ಕೆಲ ಚಿಕಿತ್ಸೆಗಳಿಗೆ ಖಾಸಗಿ ಆಸ್ಪತ್ರೆಗೆ ಹೆಚ್ಚು ಶುಲ್ಕ ನೀಡಿ ಚಿಕಿತ್ಸೆ ಪಡೆಯಬೇಕು. ಮಹಾರಾಷ್ಟದತ್ತ ಹೋಗಲು ಚಿಂತಿಸಬೇಕಾದ ಸ್ಥಿತಿ ನಿರ್ಮಾಣವಾಗಿದ್ದು ಬಡವರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಆದಷ್ಟು ಬೇಗ ಎರಡೂ ರಾಜ್ಯಗಳ ಗಡಿ ವಿವಾದಕ್ಕೆ ಫುಲ್ ಸ್ಟಾಪ್ ಹಾಕಬೇಕಿದೆ. (ವರದಿ: ಅಶೋಕ ಯಡಳ್ಳಿ, ಟಿವಿ 9, ವಿಜಯಪುರ)
ಗಡಿ ವಿವಾದ ಕುರಿತು ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ