ಮಟನ್ ತರಲು ಹೋದವ ಆಸ್ಪತ್ರೆ ಪಾಲಾದ: ಅಪ್ಪನ ಹುಟ್ಟುಹಬ್ಬದಂದೇ ಮಗನ ಸ್ಥಿತಿ ಗಂಭೀರ
ಬೆಂಗಳೂರಿನ ಬನಶಂಕರಿಯಲ್ಲಿ ಒಣಗಿದ ಮರದ ಕೊಂಬೆ ಬಿದ್ದು ಬೈಕ್ ಸವಾರ ಅಕ್ಷಯ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರ ಚಿಕಿತ್ಸಾ ವೆಚ್ಚ 1.35 ಲಕ್ಷ ರೂಪಾಯಿಗಳಾಗಿದ್ದು, ಬಡ ಕುಟುಂಬ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಬಿಬಿಎಂಪಿ ಅಕ್ಷಯ್‌ರ ಚಿಕಿತ್ಸಾ ವೆಚ್ಚವನ್ನು ಭರಿಸುವುದಾಗಿ ಭರವಸೆ ನೀಡಿದೆ. ಈ ದುರ್ಘಟನೆಯು ಅಕ್ಷಯ್ ತಂದೆಯ ಹುಟ್ಟುಹಬ್ಬದ ದಿನ ನಡೆದಿದೆ.

ಬೆಂಗಳೂರು, ಜೂನ್ 15: ಬೆಂಗಳೂರಿನ (Bengaluru) ಬನಶಂಕರಿ 2ನೇ ಹಂತದ ಶ್ರೀನಿವಾಸನಗರದಲ್ಲಿ ಬಳಿ ಭಾನುವಾರ ಒಣಗಿದ ಮರದ ಕೊಂಬೆ ಮುರಿದುಬಿದ್ದು ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದು, ಜಯನಗರದ ಅಪೋಲೋ ಆಸ್ಪತ್ರೆಗೆ (Apollo Hospital) ದಾಖಲಿಸಲಾಗಿದೆ. ಅಕ್ಷಯ್ (29) ಗಾಯಗೊಂಡ ಯುವಕ. ಇಂದು (ಜೂ.15) ಅಕ್ಷಯ್ ತಂದೆಯ ಹುಟ್ಟುಹಬ್ಬ. ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಅಕ್ಷಯ್ ಮಟನ್ ತರಲು ಬೈಕ್ನಲ್ಲಿ ತೆರಳುತ್ತಿದ್ದ ವೇಳೆ ದುರ್ಘಟನೆ ನಡೆದಿದೆ.
ಅಕ್ಷಯ್ ಚಿಕಿತ್ಸಾ ವೆಚ್ಚ ಇದುವರೆಗೆ 1.35 ಲಕ್ಷ ರೂಪಾಯಿ ಆಗಿದ್ದು, ಕುಟುಂಬಸ್ಥರು ಬಿಲ್ ಪಾವತಿಸಲು ಹಣವಿಲ್ಲದೆ ಪರದಾಡುತ್ತಿದ್ದಾರೆ. ಒಂದು ವರ್ಷದ ಹಿಂದೆ ಅಕ್ಷಯ್ ತಾಯಿ ಮೃತಪಟ್ಟಿದ್ದಾರೆ. ಅಕ್ಷಯ್ ತಂದೆ ಡಯಾಲಿಸಿಸ್ ರೋಗಿಯಾಗಿದ್ದಾರೆ. ಅಕ್ಷಯ್ ದುಡಿದು ಮನೆ ನಡೆಸುವುದರ ಜೊತೆಗೆ ತಂದೆಗೆ ಚಿಕಿತ್ಸೆ ಸಹ ಕೊಡಿಸುತ್ತಿದ್ದರು. ಇದೀಗ ಅಕ್ಷಯ್ ಆಸ್ಪತ್ರೆ ಪಾಲಾಗಿರುವುದರಿಂದ ಕುಟುಂಬ ಕಂಗಾಲಾಗಿದೆ. ಆಸ್ಪತ್ರೆಯಲ್ಲಿ ಅಕ್ಷಯ್ ಸಹೋದರ ಬೆನಕ, ಅಜ್ಜಿ ಸಾವಿತ್ರಮ್ಮ ಪರದಾಡುತ್ತಿದ್ದಾರೆ.
“ಅಕ್ಷಯ್ ಕೆಲಸಕ್ಕೆ ಹೋಗುವವರೆಗೆ ನೀವು ನಮ್ಮ ಜೊತೆಗಿರಬೇಕು. ಮಧ್ಯದಲ್ಲಿ ನಮ್ಮ ಕೈಬಿಟ್ಟರೆ ಸುಮ್ಮನಿರಲ್ಲ” ಎಂದು ಅಜ್ಜಿ ಸಾವಿತ್ರಮ್ಮ ಬಿಬಿಎಂಪಿ ಅರಣ್ಯ ವಿಭಾಗದ ಅಧಿಕಾರಿ ರಂಗನಾಥಸ್ವಾಮಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ: ಹಲ್ಲೆ ಮಾಡಲು ಮುಂದಾದ ಕೊಲೆ ಆರೋಪಿಗಳ ಕಾಲಿಗೆ ಪೊಲೀಸ್ ಗುಂಡೇಟು, ಬಂಧನ
ಪ್ರಕರಣ ಸಂಬಂಧ ಬಿಬಿಎಂಪಿ ಅರಣ್ಯ ವಿಭಾಗದ ಅಧಿಕಾರಿ ರಂಗನಾಥಸ್ವಾಮಿ ಮಾತನಾಡಿ, “ಜಯನಗರದ ಅಪೋಲೊ ಆಸ್ಪತ್ರೆ ವೈದ್ಯರು ಅಕ್ಷಯ್ಗೆ ಶಸ್ತ್ರಚಿಕಿತ್ಸೆ ನಡೆಸುತ್ತಿದ್ದಾರೆ. ಸುಮಾರು 3 ಗಂಟೆ ಕಾಲ ಅಕ್ಷಯ್ಗೆ ಶಸ್ತ್ರಚಿಕಿತ್ಸೆ ನಡೆಯಲಿದೆ. ಅಕ್ಷಯ್ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಬಿಬಿಎಂಪಿ ಭರಿಸಲಿದೆ. ಗಾಳಿಯಿಂದ ಒಣಗಿದ್ದ ಕೊಂಬೆ ಮುರಿದುಬಿದ್ದು ಪೆಟ್ಟು ಬಿದ್ದಿದೆ” ಎಂದು ಹೇಳಿದರು.






