ಕನ್ನಡಿಗರ ಏಟಿಗೆ ಮಣಿದ R.V ಕಾಲೇಜು: ಸಸ್ಪೆಂಡ್ ಮಾಡಿದ್ದ ಉಪನ್ಯಾಸಕರಿಗೆ ಮತ್ತೆ ಸಿಕ್ತು ಕೆಲಸ
ಕನ್ನಡದಲ್ಲಿ ಉತ್ತರ ನೀಡಿದ್ದಕ್ಕೆ ಬೆಂಗಳೂರಿನ ಆರ್.ವಿ ಪಿಯು ಲರ್ನಿಂಗ್ ಹಬ್ ಪ್ರಿನ್ಸಿಪಾಲ್ ಉಪನ್ಯಾಸಕರೊಬ್ಬರನ್ನು ವಹಾ ಮಾಡಿದ್ದರು. ಕಾಲೇಜಿನ ಈ ಕ್ರಮಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಅಲ್ಲದೇ ಉಪನ್ಯಾಸಕ ವಿಡಿಯೋ ಮೂಲಕ ತಮ್ಮ ಅಳಲು ತೋಡಿಕೊಂಡಿದ್ದ. ಇದರ ಬೆನ್ನಲ್ಲೇ ಕನ್ನಡ ಪರ ಹೋರಾಟಗಾರರ ಉಪನ್ಯಾಸಕನ ಬೆಂಬಲಕ್ಕೆ ನಿಂತಿದ್ದಾರೆ. ಇದರ ಬೆನ್ನಲ್ಲೇ ಕಾಲೇಜು ಆಡಳಿ ಮಂಡಳಿ ಉಪನ್ಯಾಸಕ ವಜಾ ವಾಪಸ್ ಪಡೆದುಕೊಂಡಿದೆ. ಅಷ್ಟಕ್ಕೂ ಆಗಿದ್ದೇನು ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ಬೆಂಗಳೂರು, (ಜೂನ್ 14): ಕ್ಲಾಸ್ ನಲ್ಲಿ ಕನ್ನಡದಲ್ಲಿ ಉತ್ತರ ನೀಡಿದರು ಎನ್ನುವ ಕಾರಣಕ್ಕೆ ಉಪನ್ಯಾಸಕ ರೂಪೇಶ್ ಪುತ್ತೂರು ಅವರನ್ನ ವಜಾ ಮಾಡಿದ್ದು, ಇದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ಆರ್ ವಿ ಶಿಕ್ಷಣ ಸಂಸ್ಥೆ ಎಚ್ಚೆತ್ತುಕೊಂಡಿದೆ. ಉಪನ್ಯಾಸಕ ರೂಪೇಶ್ ಅವರನ್ನ ವಜಾ ಮಾಡಿದ್ದಕ್ಕೆ ಬೆಂಗಳೂರಿನ ಆರ್.ವಿ ಪಿಯು ಲರ್ನಿಂಗ್ ಹಬ್ ಪ್ರಿನ್ಸಿಪಾಲ್ ಕ್ಷಮೆಯಾಚಿಸಿದ್ದು, ಉಪನ್ಯಾಸಕರಿಗೆ ಮತ್ತೆ ಕೆಲಸಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ. ವಿದ್ಯಾರ್ಥಿಯೊಬ್ಬ ಕನ್ನಡದಲ್ಲಿ ಕೇಳಿದ್ದ ಪ್ರಶ್ನೆಗೆ ಕನ್ನಡದಲ್ಲೇ ಉತ್ತರಿಸಿದ್ದಕ್ಕೆ ಉಪನ್ಯಾಸಕ ರೂಪೇಶ್ ಅವರಿಂದ ರಾಜೀನಾಮೆ ಪಡೆಯಲಾಗಿತ್ತು. ಈ ಬಗ್ಗೆ ಉಪನ್ಯಾಸಕ ವಿಡಿಯೋ ಮಾಡಿ ತಮ್ಮ ಅಳಲು ತೋಡಿಕೊಂಡಿದ್ದರು. ಬಳಿಕ ಕನ್ನಡ ಹೋರಾಟಗಾರ ರೂಪೇಶ್ ರಾಜಣ್ಣ ಅವರು ಕಾಲೇಜಿಗೆ ಭೇಟಿ ಮಾಡಿ ಮುಖ್ಯಸ್ಥರ ಜೊತೆ ಮಾತುಕತೆ ನಡೆಸಿದ್ದು, ಬಳಿಕ ಉಪನ್ಯಾಸಕ ವಜಾವನ್ನು ವಾಪಸ್ ಪಡೆದುಕೊಂಡಿದೆ.
ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಉಪನ್ಯಾಸಕ ಬೆಂಬಲಕ್ಕೆ ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ನಿಂತಿದ್ದು, ಕನ್ನಡಿಗನಿಗೆ ಆದ ಅನ್ಯಾಯವನ್ನು ಪ್ರಶ್ನೆ ಮಾಡಿದ್ದಾರೆ. ಅಲ್ಲದೇ ಲಾಲ್ ಬಾಗ್ ಬಳಿ ಇರುವ ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟ್ ಕಚೇರಿಗೆ ಭೇಟಿ ನೀಡಿ ಮುಖ್ಯಸ್ಥರೊಂದಿಗೆ ಚರ್ಚಿಸಿ ಈ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಬಳಿಕ ರಾಜೀನಾಮೆ ಪಡೆದಿದ್ದ ಪ್ರಿನ್ಸಿಪಾಲ್ ಕ್ಷಮೆ ಕೇಳಿದ್ದಾರೆ. ಇತ್ತ ಜಂಟಿ ಕಾರ್ಯದರ್ಶಿ ನಾಗರಾಜ್ ನನಗೆ ಈ ವಿಷಯ ನನ್ನ ಗಮನಕ್ಕೆ ಬಂದಿಲ್ಲ. ನನಗೂ ಕನ್ನಡದ ಬಗ್ಗೆ ವಿಶ್ವಾಸ ಇದೆ. ಇದು ಸಹ ಕನ್ನಡದ ಸಂಸ್ಥೆ ಮಕ್ಕಳಿಗೆ ಈ ಬಗ್ಗೆ ಕೌನ್ಸಲಿಂಗ್ ಕೈಗೊಳ್ಳುತ್ತೇವೆ. ರಾಜೀನಾಮೆಯನ್ನು ವಾಪಾಸ್ ಪಡೆದಿದ್ದೇವೆ ಎಂದಿದ್ದಾರೆ.
ಇದನ್ನೂ ಓದಿ: ಉಪನ್ಯಾಸಕ ಕನ್ನಡದಲ್ಲಿ ಮಾತನಾಡಿದ್ದಕ್ಕೆ ಕೆಲಸದಿಂದ ತೆಗೆದ RV ಕಾಲೇಜು ಮಂಡಳಿ
ಆಗಿದ್ದೇನು?
ಕರ್ನಾಟಕದಲ್ಲಿ ಕನ್ನಡ ಮಾತಾಡೋದೇ ತಪ್ಪಾ ?ಅಥವಾ ಕನ್ನಡಿಗರು ಕರ್ನಾಟಕದಲ್ಲಿ ಇರೋದೇ ತಪ್ಪಾ? ಅನ್ನೋ ಹಾಗೆ ಆಗಿದೆ ಕನ್ನಡಿಗರ ಪರಿಸ್ಥಿತಿ. ಹೌದು.. ಉಪನ್ಯಾಸಕ ರೂಪೇಶ್ ಪುತ್ತೂರು ರಸಾಯನಿಕ ಶಾಸ್ತ್ರ ಪಾಠ ಮಾಡ್ತಿದ್ದ ಶಿಕ್ಷಕನಿಗೆ ವಿದ್ಯಾರ್ಥಿ ಒಬ್ಬಳು ಕನ್ನಡದಲ್ಲಿ ಮಾತನಾಡದಂತೆ ಹೇಳಿದ್ದಾಳೆ. ಅದಕ್ಕೆ ಉಪನ್ಯಾಸಕ ಏಕೆ ಕನ್ನಡದಲ್ಲಿ ಮಾತನಾಡಬಾರದು ಎಂದು ಕೇಳಿದ್ದಾರೆ. ಇದಕ್ಕೆ ವಿದ್ಯಾರ್ಥಿ ಇದು ಇಂಗ್ಲಿಷ್ ಮೀಡಿಯಂ ಇಂಗ್ಲಿಷ್ ನಲ್ಲಿ ಮಾತನಾಡಿ ಎಂದಿದ್ದಾಳೆ. ಇದಕ್ಕೆ ಉತ್ತರಿಸಿದ ಉಪನ್ಯಾಸಕ ಕನ್ನಡ ಯಾವುದೇ ಕ್ರಿಮಿನಲ್ ಲ್ಯಾoಗ್ ವೇಜ್ ಅಲ್ಲ . ಅದು ನಮ್ಮ ಮಣ್ಣಿನ ಭಾಷೆ ಅಂತ ವಿದ್ಯಾರ್ಥಿಗೆ ಬುದ್ದಿ ಹೇಳಿದ್ದಾರೆ.
ಇದಾದ ಮರುದಿನ ಆರ್ ವಿ ಲರ್ನಿಂಗ್ ಕಾಲೇಜು ಸಂಸ್ಥೆ ಉಪನ್ಯಾಸಕನನ್ನ ಕರೆಸಿ ರಾಜೀನಾಮೆ ನೀಡುವಂತೆ ಬಲವಂತ ಮಾಡಿದ್ದಾರೆ. ರೂಪೇಶ್ ತನ್ನ ಮಗಳು ಇದೇ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದಾಳೆ ಮುಂದೆ ಸರ್ಟಿಫಿಕೇಟ್ ಕೊಡುವ ವಿಚಾರದಲ್ಲಿ ತೊಂದರೆ ಮಾಡಬಹುದೆoಬ ಭಯದಲ್ಲಿ ರಾಜೀನಾಮೆ ನೀಡಿದ್ದರು.
ಸದ್ಯ ಈ ಬಗ್ಗೆ ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದ ರೂಪೇಶ್, ಕರ್ನಾಟಕದಲ್ಲಿ ಕನ್ನಡ ಮಾತನಾಡೋಕೆ ಭಯದ ವಾತಾವರಣ ಸೃಷ್ಟಿಯಾಗಿದೆ. ಕನ್ನಡ ಮಾತನಾಡಿದಕ್ಕೆ ನನ್ನ ಕೆಲಸ ಹೋಗಿದೆ. ನನ್ನಿಂದ ಬಲವಂತವಾಗಿ ರಾಜೀನಾಮೆ ಪಡೆದುಕೊಂಡಿದ್ದಾರೆ. ನನ್ನ ಮಗಳ ಸರ್ಟಿಫಿಕೇಟ್ ಕೊಡದಿದ್ದರೂ ಪರವಾಗಿಲ್ಲ ಮತ್ತೊಬ್ಬ ಕನ್ನಡಿಗನಿಗೆ ಈ ರೀತಿ ಆಗಬಾರದು ಎಂದು ಅಳಲು ತೋಡಿಕೊಂಡಿದ್ದರು.
ಈ ವಿಡಿಯೋಗೆ ಹಲವು ಕನ್ನಡಿಗರು ಕಮೆಂಟ್ ಮಾಡಿದ್ದು, ಕನ್ನಡದಲ್ಲಿ ಪ್ರಶ್ನೆ ಕೇಳಿದ ವಿದ್ಯಾರ್ಥಿಗೆ ಕನ್ನಡದಲ್ಲಿ ಉತ್ತರಿಸಿದ ಶಿಕ್ಷಕರಿಗೆ ಎಂಥ ಗತಿ ಬಂದಿದೆ ನೋಡಿ. ಏನ್ ನಡೀತಿದೆ ಕನ್ನಡ ನಾಡಿನಲ್ಲಿ?ಮುಂದೆ ಕನ್ನಡ ಕೇಳೋಕೆ ಅಥವಾ ಕನ್ನಡದಲ್ಲಿ ಮಾತಾಡಿದ್ರೆ ಎಲ್ಲಿ ಕೆಲಸ ಹೋಗ್ತದೆ ಅನ್ನೋ ಭಯದ ವಾತಾವರಣ ನಿರ್ಮಾಣ ಮಾಡ್ತಿರುವ ನೀಚರಿಗೆ ಧಿಕ್ಕಾರ. ಕರ್ನಾಟಕದಲ್ಲಿ ಇಂಗ್ಲಿಷ್ ಸಾರ್ವಭೌಮವೇ ಎಂದು ನೆಟ್ಟಿಗರು ಪ್ರಶ್ನಿಸಿದ್ದರು.
ನೋಡಿದ್ರಲ್ಲಾ ಕನ್ನಡ ಕನ್ನಡಿಗರ ವಿಷಯಕ್ಕೆ ಬಂದ್ರೆ ಕನ್ನಡಿಗರು ಸುಮ್ಮನಿರಲ್ಲ. ಕನ್ನಡಿಗರಿಗೆ ಅನ್ಯಾಯವಾದಾಗ ಕನ್ನಡಿಗರೊಂದಿಗೆ ನಿಲ್ಲೋದಿಕ್ಕೆ ಕನ್ನಡ ಪರ ಸಂಘಟನೆಗಳು ಅನ್ಯಾಯವಾದವರೊಂದಿಗೆ ನಿಂತು ಕನ್ನಡಿಗರಿಗೆ ನ್ಯಾಯಕೊಡಿಸಿದ್ದಾರೆ. ಇಂಥ ಘಟನೆಗಳು ಮತ್ತೆ ಮರುಕಳಿಸದಿರಲಿ.
ವರದಿ: ಲಕ್ಷ್ಮಿ ನರಸಿಂಹ ಟಿವಿ9 ಬೆಂಗಳೂರು
Published On - 9:09 pm, Sat, 14 June 25




