ಪರಿಹಾರಕ್ಕಾಗಿ ನೀರಾವರಿ ಕಚೇರಿಯಲ್ಲಿ ರೈತರ ಧರಣಿ: ಸತೀಶ್ ಜಾರಕಿಹೊಳಿ ಸಂಧಾನ ಸಭೆ ಯಶಸ್ವಿ
ಪರಿಹಾರ ನೀಡುವಂತೆ ಆಗ್ರಹಿಸಿ ಮಾಸ್ತಿಹೊಳಿ ಗ್ರಾಮಸ್ಥರು ಬೆಳಗಾವಿ ನೀರಾವರಿ ಕಚೇರಿಯಲ್ಲಿ ಧರಣಿ ಕುಳಿತಿದ್ದರು. ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಅವರ ಸಂಧಾನ ಸಭೆ ವಿಫಲಗೊಂಡ ಹಿನ್ನೆಲೆ ಮಧ್ಯಪ್ರವೇಶಿಸಿದ ಸಚಿವ ಸತೀಶ್ ಜಾರಕಿಹೊಳಿ, ರೈತರೊಂದಿಗೆ ಸಂಧಾನ ಸಭೆ ನಡೆಸಿ ಅವರ ಮನವೋಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಬಗ್ಗೆ ಜಾರಕಿಹೊಳಿ ಮಾಹಿತಿ ನೀಡಿದರು.
ಬೆಳಗಾವಿ, ಮಾ.12: ಪರಿಹಾರ ನೀಡುವಂತೆ ಆಗ್ರಹಿಸಿ ಬೆಳಗಾವಿ (Belagavi) ನೀರಾವರಿ ಕಚೇರಿಯಲ್ಲಿ ಧರಣಿ ಕುಳಿತಿದ್ದ ಮಾಸ್ತಿಹೊಳಿ ರೈತರೊಂದಿಗೆ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ನಡೆಸಿದ ಸಂಧಾನಸಭೆ ಯಶಸ್ವಿಯಾಗಿದೆ. ಸಭೆಯ ಬಳಿಕ ಮಾತನಾಡಿದ ಸತೀಶ್ ಜಾರಕಿಹೊಳಿ, ಪ್ರತಿಭಟನೆ ಕೈಬಿಡಲು ರೈತರು ಒಪ್ಪಿದ್ದಾರೆ, ಸಂಧಾನ ಯಶಸ್ವಿಯಾಗಿದೆ ಎಂದರು.
ಮಾಸ್ತಿಹೊಳಿ ಗ್ರಾಮಸ್ಥರು ನಿನ್ನೆಯಿಂದ ಧರಣಿ ಮಾಡುತ್ತಿದ್ದರು. ರೈತರು, ಅಧಿಕಾರಿಗಳ ಮಧ್ಯೆ ಘರ್ಷಣೆ ನಡೆಯುತ್ತಿದೆ. ಭೂಸ್ವಾಧೀನ ಕುರಿತು ಇಬ್ಬರ ಬಳಿ ಪೇಪರ್ಗಳು ಬೇರೆ ಬೇರೆ ಇವೆ. ಕೆಲವು ಪೇಪರ್ಗಳು ನಷ್ಟ ಆಗಿರಬಹುದು, ಕಳೆದಿರಬಹುದು. ನಮ್ಮ ಬಳಿಯೂ ಕೆಲ ಪೇಪರ್ಗಳು ಇಲ್ಲ. ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ ಬೇಡಿಕೆ ಇದೆ ಎಂದರು.
ವಸ್ತುಸ್ಥಿತಿ ಬರೆಯುತ್ತೇವೆ, ಸರ್ಕಾರಕ್ಕೆ ಇರೋ ವಸ್ತು ಸ್ಥಿತಿ ಬರೆಯಲು ಅಧಿಕಾರಿಗಳು ಒಪ್ಪಿದ್ದಾರೆ. ಭೂಸ್ವಾಧೀನವಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಅಂತಿಮವಾಗಿ ಸರ್ಕಾರ ತೀರ್ಮಾನಿಸುತ್ತದೆ. ಆದರೆ ಪರಿಹಾರ ನೀಡಿರುವ ಬಗ್ಗೆ ನಮ್ಮಲ್ಲಿ ದಾಖಲೆಗಳು ಇಲ್ಲ. ಮೂರು ದಿನದಲ್ಲಿ ಸರ್ಕಾರಕ್ಕೆ ಪತ್ರ ಬರೆಯುವಂತೆ ಸೂಚನೆ ನೀಡಿದ್ದೇವೆ. ನೀರಾವರಿ ಇಲಾಖೆ ಅಧಿಕಾರಿಗಳಿ ಸಮೀಕ್ಷೆ ನಡೆಸಿ ವರದಿ ಸಲ್ಲಿಸುತ್ತಾರೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಏನಿದು ಪ್ರಕರಣ?
ನಾಲ್ಕು ದಶಕಗಳಿಂದ ಭೂಮಿ ಕಳೆದುಕೊಂಡ ಹಿಡಕಲ್ ಜಲಾಶಯದ (Hidkal Dam) ಸಂತ್ರಸ್ತರು, ಜೀವನಕ್ಕೆ ಆಧಾರವಾಗಿದ್ದ ಭೂಮಿ ಕಳೆದುಕೊಂಡವರು ಪರಿಹಾರಕ್ಕಾಗಿ ಕಚೇರಿ ಕಚೇರಿ ಅಲೆಯುತ್ತಿದ್ದಾರೆ. ಪರಿಹಾರಕ್ಕಾಗಿ ಕೋರ್ಟ್ ಮೆಟ್ಟಿಲೇರಿದವರಿಗೆ ಪರಿಹಾರದ ಭರವಸೆ ಕೂಡ ಸಿಕ್ಕಿತ್ತು. ಆದರೆ ಅಧಿಕಾರಿಗಳ ಬೇಜವಾಬ್ದಾರಿಗೆ ಸಿಗದ ಪರಿಹಾರ ಇಂದು ಅವರ ಆಕ್ರೋಶದ ಕಟ್ಟೆ ಒಡೆದಿತ್ತು.
ಇದನ್ನೂ ಓದಿ: ದಲಿತ ಮುಖ್ಯಮಂತ್ರಿ ಬೇಡಿಕೆ ಚುನಾವಣೆ ಸಮಯದಲ್ಲಿ ಪ್ರಸ್ತಾಪಿಸಬಾರದಿತ್ತು: ಸತೀಶ್ ಜಾರಕಿಹೊಳಿ, ಸಚಿವ
ಹೀಗಾಗಿ ನಿನ್ನೆ (ಮಾರ್ಚ್ 11) ಬೆಳಗ್ಗೆ ಊರುಗಳಿಂದಲೇ ಜಾನುವಾರುಗಳ ಸಮೇತ ಬೆಳಗಾವಿ ಚನ್ನಮ್ಮ ವೃತ್ತಕ್ಕೆ ಆಗಮಿಸಿದ ರೈತರು ಅಲ್ಲಿಂದ ಮೆರವಣಿಗೆ ಮೂಲಕ ಹೊರಟು ನೀರಾವರಿ ಕಚೇರಿಗೆ ನುಗ್ಗಿ ಒಳ ಭಾಗದಲ್ಲೇ ಕುಟುಂಬ ಸಮೇತ ಹೋರಾಟಕ್ಕೆ ಕುಳಿತಿದ್ದರು. ಬಳಿಕ ರೈತರ ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಭೇಟಿ ನೀಡಿ ರೈತರ ಜೊತೆ ಸಂಧಾನ ಸಭೆ ನಡೆಸಿ ವಿಫಲರಾಗಿದ್ದರು.
ನೀರಾವರಿ ಇಲಾಖೆ ವಿರುದ್ಧ ರೈತ ಮಹಿಳೆಯರು ತೀವ್ರ ಆಕ್ರೋಶ ಹೊರಹಾಕಿದ್ದರು. ಪರಿಹಾರ ಸಿಗುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲವೆಂದು ಪಟ್ಟು ಹಿಡಿದಿದ್ದರು. ರೈತರ ಜೊತೆಗಿನ ಸಂಧಾನ ಸಭೆ ವಿಫಲ ಹಿನ್ನೆಲೆ ನೀರಾವರಿ ಇಲಾಖೆ ಅಧಿಕಾರಿಗಳ ಜೊತೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಸಭೆ ಮಾಡಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ