ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ ಎಂಇಎಸ್ ಪುಂಡರು ಮತ್ತೆ ಬಾಲ ಬಿಚ್ಚಿದ್ದಾರೆ. ಗಡಿ ವಿಚಾರಕ್ಕೆ ಮತ್ತೆ ಖ್ಯಾತೆ ಶುರುವಾಗಿದೆ. ಗಡಿ ವಿವಾದದ ಕುರಿತು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆಯಲು ಎಂಇಎಸ್ ಮುಂದಾಗಿದೆ.
ಮಹಾರಾಷ್ಟ್ರ ಏಕೀಕರಣ ಸಮಿತಿಯ ಯುವ ಘಟಕ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು ಪೋಸ್ಟ್ ಕಾರ್ಡ್ ಅಭಿಯಾನ ಶುರು ಮಾಡಿದೆ. ಬೆಳಗಾವಿ ಸೇರಿ 865 ಪ್ರದೇಶ ಮಹಾರಾಷ್ಟ್ರಕ್ಕೆ ಸೇರಿಸುವಂತೆ ಒತ್ತಾಯಿಸಿದ್ದಾರೆ. ಭಾಷಾವಾರು ಪ್ರಾಂತ ರಚನೆಯಾದ ದಿನದಿಂದ ಮರಾಠಿ ಭಾಷಿಕರ ಮೇಲೆ ಅನ್ಯಾಯವಾಗುತ್ತಿದೆ ಎಂದು ಪತ್ರದಲ್ಲಿ ಆರೋಪ ಮಾಡಿದ್ದಾರೆ. 1956 ರಿಂದ ಗಡಿ ಪ್ರದೇಶಗಳನ್ನ ಮಹಾರಾಷ್ಟ್ರಕ್ಕೆ ಸೇರಿಸುವಂತೆ ಹೋರಾಟ ನಡೆಸುತ್ತಿದ್ದೇವೆ.
65 ವರ್ಷಗಳಿಂದ ಕನ್ನಡ ಭಾಷಿಕ ರಾಜ್ಯದಲ್ಲಿ ಗಡಿಭಾಗದ ಮರಾಠಿಗರ ಮೇಲೆ ಅನ್ಯಾಯವಾಗುತ್ತಿದೆ. ಗಡಿ ವಿವಾದವನ್ನ ಪ್ರಧಾನಿ ಮೋದಿ ವೈಯಕ್ತಿಕವಾಗಿ ಲಕ್ಷ್ಯ ವಹಿಸಿ ಇತ್ಯರ್ಥ ಪಡಿಸಬೇಕು. ಗಡಿಭಾಗದ 40 ಲಕ್ಷ ಮರಾಠಿಗರನ್ನು ಮಹಾರಾಷ್ಟ್ರಕ್ಕೆ ಸೇರಿಸಿ ನ್ಯಾಯ ಕೊಡಿಸಬೇಕು ಎಂದು ಪತ್ರದಲ್ಲಿ ಪ್ರಸ್ತಾಪಿಸಲಾಗಿದೆ. ಎಂಇಎಸ್, ಪ್ರಧಾನಿ ಮೋದಿಗೆ ಪತ್ರ ಬರೆಯುವ ಅಭಿಯಾನ ಆರಂಭಿಸಿದ್ದು ಈವರೆಗೂ 11 ಸಾವಿರ ಪತ್ರಗಳನ್ನು ಪೋಸ್ಟ್ ಮಾಡಿರುವುದಾಗಿ ಮಾಹಿತಿ ಸಿಕ್ಕಿದೆ.
ಇದನ್ನೂ ಓದಿ: ಹಳದಿ, ಕೆಂಪು ಶಾಲು ಹಾಕಿದವರನ್ನು ಕಂಡಲ್ಲೇ ಹೊಡೀತಾರೆ ಮರಾಠಿಗರು.. ಎಂಇಎಸ್ ಪುಂಡನ ಗೊಡ್ಡು ಬೆದರಿಕೆ