ಬೆಂಗಳೂರು: ಬೆಳಗಾವಿ ಜಿಲ್ಲೆ ಸವದತ್ತಿ ಕ್ಷೇತ್ರದ ಶಾಸಕ ಆನಂದ ಮಾಮನಿ(Anand Mamani), ಸಚಿವ ಸ್ಥಾನ ಸಿಗದಿದ್ರೆ ವಿಧಾನಸಭೆ ಡೆಪ್ಯುಟಿ ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿಕೆ ಕೊಟ್ಟಿದ್ದರು. ಆದ್ರೆ ಈಗ ಅಂತಿಮವಾದ ಬೊಮ್ಮಾಯಿ ಸಚಿವ ಸಂಪುಟದಲ್ಲಿ ತಮ್ಮ ಹೆಸರಿಲ್ಲ ಎಂಬುವುದು ತಿಳಿಯುತ್ತಿದ್ದಂತೆ ಡೆಪ್ಯುಟಿ ಸ್ಪೀಕರ್ ಆನಂದ್ ಮಾಮನಿ ಯೂಟರ್ನ್ ಹೊಡೆದಿದ್ದಾರೆ. ರಾಜೀನಾಮೆ ನೀಡದಂತೆ ಹೈಕಮಾಂಡ್ ಸೂಚನೆ ನೀಡಿದೆ. ಹೀಗಾಗಿ ನಾನು ರಾಜೀನಾಮೆ ನೀಡಲ್ಲ ಎಂದು ಟಿವಿ9ಗೆ ಆನಂದ್ ಮಾಮನಿ ತಿಳಿಸಿದ್ದಾರೆ.
ಮಾಮನಿ, ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಸಚಿವ ಸ್ಥಾನ ಸಿಗದಿದ್ರೆ ನಾಳೆ ಸಚಿವರ ಪ್ರಮಾಣವಚನಕ್ಕೂ ಮುನ್ನವೇ ಡೆಪ್ಯುಟಿ ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತೇನೆ. ಈ ನಿರ್ಧಾರಕ್ಕೆ ನಾನು ಬದ್ಧ. ಎಲ್ಲರ ನಿರ್ಣಯದಿಂದ ನಾನು ಡೆಪ್ಯುಟಿ ಸ್ಪೀಕರ್ ಸ್ಥಾನಕ್ಕೆ ಬಂದಿದ್ದೆ. ನನಗೆ ಸಚಿವ ಸ್ಥಾನ ಕೊಡುವಂತೆ ಮನವಿ ಮಾಡಿದ್ದೇನೆ. ನನಗೆ ಈವರೆಗೂ ದೂರವಾಣಿ ಕರೆ ಬಂದಿಲ್ಲ. ನಾನು ಸಿಎಂ, ಬಿಎಸ್‌ವೈರನ್ನು ಭೇಟಿಯಾಗಿ ಮಾತನಾಡುವೆ. ಬಳಿಕ ನನ್ನ ಬೆಂಬಲಿಗರ ಜತೆ ಮಾತನಾಡಿ ನಿರ್ಧರಿಸುತ್ತೇನೆ. ನನ್ನ ಮಾತಿಗೆ ನಾನು ಬದ್ಧನಾಗಿದ್ದೇನೆ ಎಂದು ಇಂದು ಬೆಳಗ್ಗೆ ಮಾಮನಿ ಹೇಳಿಕೆ ನೀಡಿದ್ದರು.
ಆದ್ರೆ ಈಗ ಸಚಿವ ಸಂಪುಟ ಫೈನಲ್ ಆಗ್ತಿದ್ದಂತೆ ಯೂಟರ್ನ್ ಹೊಡೆದಿದ್ದಾರೆ. ಸಿಎಂ ಆಗುವಂತಹ ಹಿರಿಯ ನಾಯಕರು ರಾಜೀನಾಮೆ ನೀಡೋದು ಬೇಡ. ಕ್ಷೇತ್ರದ ಜನರು ಕೂಡ ಆತುರದ ನಿರ್ಧಾರ ಬೇಡ ಎನ್ನುತ್ತಿದ್ದಾರೆ. ಪಕ್ಷ ತುಂಬ ಪ್ರಬಲವಾಗಿದೆ. ರಾಜೀನಾಮೆ ಕೊಡೋದು ಬೇಡ ಅಂದಿದ್ದಾರೆ. ಮತ್ತೊಮ್ಮೆ ಕ್ಷೇತ್ರದ ಜನರೊಂದಿಗೆ ಚರ್ಚಿಸ್ತೇನೆ. ಇವತ್ತು ಕ್ಷೇತ್ರಕ್ಕೆ ಹೋಗಿ ಕಾರ್ಯಕರ್ತರ ಜೊತೆ ಮಾತನಾಡ್ತೇನೆ ಎಂದ ಮಾಮನಿ ಜಾರಿಕೊಂಡಿದ್ದಾರೆ.
ಇದನ್ನೂ ಓದಿ: ಸಿಎಂ ಬೊಮ್ಮಾಯಿ ಸಂಪುಟ ಸಂಕಟ: ಚೊಚ್ಚಲ ಸಂಪುಟ ರಚನೆಗೂ ಮುನ್ನವೇ ಮಾಮನಿ ರಾಜೀನಾಮೆ ಬೆದರಿಕೆ
Published On - 1:04 pm, Wed, 4 August 21