ಬೆಳಗಾವಿ: ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ನೀಡಿರುವ ‘ಏಕಪತ್ನಿ ವ್ರತಸ್ಥ‘ ಎಂಬ ಹೇಳಿಕೆಗೆ ರಾಜ್ಯ ರಾಜಕಾರಣದಲ್ಲಿ ಹಲವು ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಈಗ ಈ ಬಗ್ಗೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿದ್ದು ಸಚಿವ ಸುಧಾಕರ್ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಬಾಯಿ ತೆಗೆದರೆ ರಾಮನ ಪಕ್ಷದವರು ಅಂತಾರೆ. ಆದರೆ ಅವರ ಬಾಯಲ್ಲಿ ಇಂತಹ ಮಾತುಗಳು ಬರುತ್ತಿವೆ. ಮಾತಿನ ಭರದಲ್ಲಿ ಎಲ್ಲರ ಮೇಲೆ ಬೆಟ್ಟು ಮಾಡಿದ್ದಾರೆ. ಬಿಜೆಪಿಯಲ್ಲೂ ಶೋಭಾ, ರೂಪಾಲಿ, ಪೂರ್ಣಿಮಾ ಇದ್ದಾರೆ. ಶಶಿಕಲಾ ಜೊಲ್ಲೆಯವರು ಸಚಿವೆಯಾಗಿದ್ದಾರೆ. ಇವರೆಲ್ಲರನ್ನೂ ಸುಧಾಕರ್ ಅಪಮಾನಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.
ಸುಧಾಕರ್ ಹೇಳಿಕೆಯನ್ನ ನಾವು ಪ್ರಧಾನಿಯವರಿಗೆ ಕಳಿಸ್ತೇವೆ
ಸುಧಾಕರ್, ನಮ್ಮೆಲ್ಲರ ಹೆಸರನ್ನ ತೆಗೆದುಕೊಂಡಿದ್ದಾರೆ. ಅವರ ಬಳಿ ಯಾವ ಸಾಕ್ಷಿಗಳಿವೆ ಕೋರ್ಟ್ಗೆ ಕೊಡಲಿ. ಸಾಕ್ಷ್ಯಗಳನ್ನ ಪ್ರೋಡ್ಯೂಸ್ ಮಾಡೋಕೆ ಅವಕಾಶವಿದೆ. ಹಿಂದೂ ರಾಷ್ಟ್ರ, ಹಿಂದೂ ಸಂಸ್ಕೃತಿ ಬಗ್ಗೆ ಅವಹೇಳನ ಮಾಡಿದ್ದಾರೆ. ರಾಜಕಾರಣಕ್ಕೆ ಮಹಿಳೆಯರೇ ಬರುವುದು ವಿರಳ. ಬಂದವರನ್ನ ಸಂಶಯದಿಂದ ನೋಡುವಂತೆ ಮಾಡಿದ್ದಾರೆ. ಸುಧಾಕರ್ ಹೇಳಿಕೆಯನ್ನ ನಾವು ಪ್ರಧಾನಿಯವರಿಗೆ ಕಳಿಸ್ತೇವೆ. ಅವರ ಸಂಸ್ಕೃತಿ ಎಂತದ್ದು ಎನ್ನುವುದನ್ನ ಅವರು ನೋಡಲಿ. ಇಡೀ ಮಹಿಳಾ ಕುಲಕ್ಕೆ ಸುಧಾಕರ್ ಅಪಮಾನಿಸಿದ್ದಾರೆ. ಇದು ಸಾರ್ವಜನಿಕ ಬದುಕಿನಲ್ಲಿರುವವರ ಬಗ್ಗೆ ಮಾಡಿದ ಅಪಮಾನ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಸುಧಾಕರ್ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಬಾಯಿ ಬಿಟ್ರೆ ರಾಮನ ಬಗ್ಗೆ ಜಪ ಮಾಡುವವರು ಈ ರೀತಿಯಲ್ಲಿ ಮಾತಾಡುವುದಕ್ಕೆ ಯಾರು ಅನುವು ಮಾಡಿಕೊಟ್ರು. ಅವರ ಪಕ್ಷದ ಶಾಸಕರು ಒಪ್ಪಿಸಿಕೊಳ್ಳುವುದಕ್ಕೆ ಸಾಧ್ಯನಾ. ಅವರು ಒಬ್ಬ ಮಂತ್ರಿ. ಪ್ರಮಾಣ ವಚನ ಸ್ವೀಕಾರ ಮಾಡುವಾಗ ರಾಗ ದ್ವೇಷದಿಂದ ಪ್ರಮಾಣ ವಚನ ಸ್ವೀಕಾರ ಮಾಡಿರುತ್ತಾರೆ. ಕುಮಾರಸ್ವಾಮಿ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರ ಹೆಸರು ತೆಗೆದುಕೊಂಡಿದ್ದಾರೆ. ಅವರ ಬಳಿ ಸಾಕ್ಷಿಗಳು ಇದ್ರೆ ಪ್ರೊಡ್ಯೂಸ್ ಮಾಡಲಿ. ಪ್ರಧಾನಿ, ಹೋಮ್ ಮಿನಿಸ್ಟರ್ಗೆ ಇದನ್ನು ಕಳಿಸಿಕೊಡುತ್ತೇವೆ ಎಂದು ಗರಂ ಆಗಿದ್ದಾರೆ.
ಸಚಿವ ಸುಧಾಕರ್ ಹೇಳಿದ್ದೇನು?
ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ರಮೇಶ್‌ಕುಮಾರ್ ಸತ್ಯಹರಿಶ್ಚಂದ್ರರಾ? ಇವರೆಲ್ಲರೂ ಏಕಪತ್ನಿ ವ್ರತ ಮಾಡುತ್ತಿದ್ದಾರಾ? ನಾನೂ ಸೇರಿದಂತೆ 224 ಶಾಸಕ ಮೇಲೆಯೂ ತನಿಖೆಯಾಗಲಿ. ಎಲ್ಲರನ್ನು ತನಿಖೆ ಮಾಡಿದಾಗ ಬಂಡವಾಳ ಗೊತ್ತಾಗುತ್ತೆ ಎಂದು ಬೆಂಗಳೂರಿನಲ್ಲಿ ಆರೋಗ್ಯ ಸಚಿವ ಡಾ.ಸುಧಾಕರ್ ಹಾಲಿ ಬೆಳವಣಿಗೆಗಳ ಬಗ್ಗೆ ಮಾತನಾಡುತ್ತಾ ಪಂಥಾಹ್ವಾನ ನೀಡಿದ್ದರು.
ಮುಖ್ಯಮಂತ್ರಿ ಆಗಿದ್ದಾಗ ಯಾರು ಯಾರು ಏನೇನು ಮಾಡಿದ್ದರು? ಎಂದು ಎಲ್ಲದರ ಬಗ್ಗೆಯೂ ತನಿಖೆಯಾಗಲಿ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ರಮೇಶ್‌ಕುಮಾರ್ ಸತ್ಯಹರಿಶ್ಚಂದ್ರರಾ? ಇವರೆಲ್ಲರೂ ಏಕಪತ್ನಿ ವ್ರತ ಮಾಡುತ್ತಿದ್ದಾರಾ? ಎಂದು ಡಾ.ಕೆ.ಸುಧಾಕರ್ ಪ್ರಶ್ನೆ ಎತ್ತಿದ್ದಾರೆ. ಹೀಗಾಗಿ 224 ಶಾಸಕರ ಬಗ್ಗೆ ಕೂಡ ತನಿಖೆಯಾಗಲಿ ಎಂದು ಬೆಂಗಳೂರಿನಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಆಗ್ರಹಿಸಿದ್ದರು.
ಎಲ್ಲಾ ಮಂತ್ರಿಗಳದ್ದು ಶಾಸಕರದ್ದು ವಿರೋಧ ಪಕ್ಷಗಳವರದ್ದು ಕೂಡ ತನಿಖೆಯಾಗಲಿ. ಯಾರಿಗೆ ಅನೈತಿಕ ಸಂಬಂಧವಿದೆ ಎಂಬುದು ತಿಳಿಯಲಿ ಬಿಡಿ. ಸಮಾಜಕ್ಕೆ ಇವರೆಲ್ಲರೂ ಕೂಡ ಮಾದರಿಯಾಗಿದ್ದಾರೆ. ಆದರೆ ಇವರೆಲ್ಲರೂ ಕೂಡ ಒಪ್ಪಿಕೊಳ್ಳಲಿ. 224 ಶಾಸಕರ ಬಗ್ಗೆಯೂ ಕೂಡ ತನಿಖೆಯಾಗಲಿ ಎಂದು ಸುಧಾಕರ್ ಆಗ್ರಹಿಸಿದ್ದರು.