
ಬೆಳಗಾವಿ, ನ.10: ಅಕ್ರಮ ಸಂಬಂಧದ ಅಂಧಕಾರಕ್ಕೆ ಬಿದ್ದ ಹೆತ್ತ ತಾಯಿಯೊಬ್ಬಳು ತನ್ನ ಪ್ರಿಯಕರ ಹಾಗೂ ಆತನ ಸ್ನೇಹಿತರ ಜೊತೆಗೂಡಿ ಸ್ವಂತ ಮಗನನ್ನೇ ಅತ್ಯಂತ ಭೀಕರವಾಗಿ ಕೊಲೆ ಮಾಡಿಸಿರುವ ಕರಾಳ ಘಟನೆ ಬೆಳಗಾವಿಯಲ್ಲಿ ಬೆಳಕಿಗೆ ಬಂದಿದೆ. ಬೆಂಗಳೂರಿನ ಆರ್.ಟಿ. ನಗರ ನಿವಾಸಿ ವಿಜಯ್ ನಾರಾಯಣ (24) ಹತ್ಯೆಯಾದ ದುರ್ದೈವಿ ಯುವಕ. ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಮಗನನ್ನು ಕನ್ನಡ ರಾಜ್ಯೋತ್ಸವದ ನೆಪದಲ್ಲಿ ಬೆಳಗಾವಿಗೆ ಕರೆಸಿಕೊಂಡು, ಕನ್ನಡ ಬಾವುಟದಿಂದಲೇ ಕುತ್ತಿಗೆ ಬಿಗಿದು ಬರ್ಬರವಾಗಿ ಕೊಲೆ ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಳಮಾರುತಿ ಠಾಣೆ ಪೊಲೀಸರು ಹಂತಕಿ ತಾಯಿ ಮೀನಾ ಸೇರಿದಂತೆ ಒಟ್ಟು 6 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಬೆಂಗಳೂರು ಮೂಲದ ಮೀನಾ ಬ್ಯೂಟಿ ಪಾರ್ಲರ್‌ವೊಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಳು. ಈ ನಡುವೆ ಆಕೆಗೆ ಮಹಾರಾಷ್ಟ್ರ ಮೂಲದ ಯುವಕ ರಾಕೇಶ್ ಎಂಬಾತನ ಪರಿಚಯವಾಗಿ, ಅನೈತಿಕ ಸಂಬಂಧ ಬೆಳೆದಿತ್ತು. ವಿಜಯ್‌ಗೆ ಅನುಮಾನ ಬರಬಾರದೆಂದು ರಾಕೇಶನ್‌ನನ್ನು ತನ್ನ ಸ್ವಂತ ಕಾರು ಚಾಲಕನನ್ನಾಗಿ ನೇಮಿಸಿಕೊಂಡಿದ್ದಳು.
ತಾಯಿಯ ಈ ಅನೈತಿಕ ಸಂಬಂಧದ ವಿಚಾರ ತಿಳಿದ ಮಗ ವಿಜಯ್ ನಾರಾಯಣ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದನು. ಮಗನಿಂದ ತಮ್ಮ ಅಕ್ರಮ ಸಂಬಂಧಕ್ಕೆ ನಿರಂತರ ಅಡ್ಡಿಯಾಗುತ್ತಿದ್ದರಿಂದ ಕೋಪಗೊಂಡ ಮೀನಾ ಹಾಗೂ ಪ್ರಿಯಕರ ರಾಕೇಶ್, ವಿಜಯ್‌ನನ್ನು ಮುಗಿಸಿಹಾಕಲು ಸಂಚು ರೂಪಿಸಿದ್ದರು. ನವೆಂಬರ್ 1ರ ಕನ್ನಡ ರಾಜ್ಯೋತ್ಸವದ ಅದ್ಧೂರಿ ಕಾರ್ಯಕ್ರಮವನ್ನು ನೋಡಿ ಬರೋಣವೆಂದು ನಂಬಿಸಿ ಪ್ರಿಯಕರ ರಾಕೇಶ್ ಹಾಗೂ ಆತನ ಸ್ನೇಹಿತರು ವಿಜಯ್ ನಾರಾಯಣನನ್ನು ಬೆಳಗಾವಿಗೆ ಕರೆತಂದಿದ್ದರು.
ರಾಜ್ಯೋತ್ಸವದ ರಾತ್ರಿ ಹೆದ್ದಾರಿ ಪಕ್ಕದ ನಿರ್ಜನ ಪ್ರದೇಶಕ್ಕೆ ಕರೆದೊಯ್ದ ರಾಕೇಶ್ ಹಾಗೂ ಆತನ ನಾಲ್ವರು ಸ್ನೇಹಿತರಾದ ಸಚಿನ್, ಮನೋಜ್, ತಮ್ಮಣ್ಣ ಮತ್ತು ಏಕನಾಥ ಸೇರಿ ವಿಜಯ್‌ನ ಕುತ್ತಿಗೆಗೆ ಕನ್ನಡ ಬಾವುಟದಿಂದ ಬಿಗಿದು ಕೊಲೆಗೈದು ಶವವನ್ನು ಎಸೆದು ಪರಾರಿಯಾಗಿದ್ದರು. ಈ ಭೀಕರ ಕೃತ್ಯ ನಡೆಯುವಾಗ ತಾಯಿ ಮೀನಾ ಬೆಂಗಳೂರಿನಲ್ಲಿದ್ದುಕೊಂಡೇ ಫೋನ್ ಮೂಲಕ ಮಗನ ಹತ್ಯೆಯ ಪ್ರತಿಯೊಂದು ಅಪ್‌ಡೇಟ್ ಪಡೆಯುತ್ತಿದ್ದಳು. ಕೃತ್ಯ ಎಸೆಗಿದ ಬಳಿಕ ರಾಕೇಶ್ ವಾಪಸ್ ಬೆಂಗಳೂರಿಗೆ ಬಂದಿದ್ದನು.
ಇದನ್ನೂ ಓದಿ: ಮಂಗಳೂರು ಪಾದ್ರಿ ಸಿಪ್ರಿಯನ್ ಪಿಂಟೋ ವಿರುದ್ಧ ಮತ್ತೊಂದು ಪೋಕ್ಸೋ ಕೇಸ್; ಬಿಷಪ್ ವಿರುದ್ಧವೂ ಗಂಭೀರ ಆರೋಪ
ನಿರ್ಜನ ಪ್ರದೇಶದಲ್ಲಿದ್ದ ಅಪರಿಚಿತ ಯುವಕನ ಮೃತದೇಹವನ್ನು ಪತ್ತೆಹಚ್ಚಿದ ಮಾಳಮಾರುತಿ ಠಾಣೆ ಇನ್ಸ್‌ಪೆಕ್ಟರ್ ಬಿ.ಆರ್. ಗಡ್ಡೇಕರ್ ಹಾಗೂ ತಂಡ, ತನಿಖೆ ಆರಂಭಿಸಿ ಮೃತನ ಗುರುತು ವಿಜಯ್ ನಾರಾಯಣ ಎಂದು ಪತ್ತೆಹಚ್ಚಿದ್ದರು. ಮಗನ ಶವ ಪತ್ತೆಯಾದ ಸುದ್ದಿ ತಿಳಿಸಿ ತಾಯಿ ಮೀನಾಳನ್ನು ಬೆಳಗಾವಿಗೆ ಕರೆಸಿಕೊಂಡು ವಿಚಾರಣೆ ನಡೆಸಿದಾಗ ಆಕೆ ನೀಡಿದ ಸಂಶಯಾಸ್ಪದ ಹೇಳಿಕೆಗಳು ಪೊಲೀಸರ ಅನುಮಾನ ಹೆಚ್ಚಿಸಿದವು. ತಕ್ಷಣವೇ ತಾಯಿ ಮೀನಾ, ಮಗ ವಿಜಯ್ ಹಾಗೂ ಪ್ರಿಯಕರ ರಾಕೇಶ್ ಅವರ ಮೊಬೈಲ್ ಕಾಲ್ ಹಿಸ್ಟರಿ ಜಾಲಾಡಿದ ಪೊಲೀಸರು ತಮ್ಮದೇ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ ತಾಯಿ ಸತ್ಯವನ್ನು ಬಿಚ್ಚಿಟ್ಟಿದ್ದಾಳೆ. ಪ್ರಕರಣದಲ್ಲಿ ಭಾಗಿಯಾಗಿದ್ದ ಮೀನಾ, ಪ್ರಿಯಕರ ರಾಕೇಶ್, ಹಾಗೂ ಆತನ ಸ್ನೇಹಿತರಾದ ಸಚಿನ್, ಮನೋಜ್, ತಮ್ಮಣ್ಣ ಮತ್ತು ಏಕನಾಥ ಎಂಬ 6 ಮಂದಿ ಆರೋಪಿಗಳನ್ನು ಮಾಳಮಾರುತಿ ಠಾಣೆ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ