ಬೆಳಗಾವಿ: ಇಂದು 238ಕಿಮೀ ಉದ್ದದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಸಂಕೇಶ್ವರ ಮಹಾರಾಷ್ಟ್ರ ಷಟ್ಪಥ ಮಾರ್ಗಕ್ಕೆ ಹಲವು ದಿನಗಳ ಬೇಡಿಕೆ ಇತ್ತು. ಬೆಳಗಾವಿ ಸಂಕೇಶ್ವರ ಬೈಪಾಸ್ ರಸ್ತೆ ಕಾಮಗಾರಿಗೆ 1500 ಕೋಟಿ ರೂಪಾಯಿ, ಸಂಕೇಶ್ಚರ ಮಹಾರಾಷ್ಟ್ರ ಗಡಿವರೆಗಿನ ರಸ್ತೆಗೆ 1400 ಕೋಟಿ ರೂಪಾಯಿ, ಮುಂಬೈ ಗೋವಾ ಮಧ್ಯೆ ರಸ್ತೆಗೆ 18 ಸಾವಿರ ಕೋಟಿ ವೆಚ್ಚ ಮಾಡಿ ಕಾಮಗಾರಿ ನಡೆಸಲಾಗುವುದು. ಇದೇ ವರ್ಷ ಈ ಕಾಮಗಾರಿ ಪೂರ್ಣಗೊಳ್ಳುತ್ತೆ ಎಂದು ಬೆಳಗಾವಿಯಲ್ಲಿ ನಿತಿನ್ ಗಡ್ಕರಿ ತಿಳಿಸಿದ್ದಾರೆ. ಕರ್ನಾಟಕ ರಾಜ್ಯಕ್ಕೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಬಂಪರ್ ಯೋಜನೆಗಳ ಘೋಷಣೆ ಮಾಡಿದ್ದಾರೆ. ಬೆಳಗಾವಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಶಂಕು ಸ್ಥಾಪನೆ ನೆರವೇರಿಸಲಾಗಿದೆ. ಕಾರ್ಯಕ್ರಮ ಉದ್ದೇಶಿಸಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಭಾಷಣ ಮಾಡಿದ್ದಾರೆ.
ಚೋರ್ಲಾ ಜಾಂಬೋಟಿ ಬೆಳಗಾವಿ ನಡುವೆ ದ್ವಿಪಥ ಕಾಮಗಾರಿ ಆರಂಭವಾಗಲಿದೆ. ವಿಜಯಪುರ ಮುರಗುಂಡಿ, ಸಿದ್ದಾಪುರ ವಿಜಯಪುರ ಕಾಮಗಾರಿಗೆ ಚಾಲನೆ ನೀಡಿದ್ದೇವೆ. ಹಲವು ಎಂಎಲ್ಎಗಳು ಸಂಸದರು ಸಾಕಷ್ಟು ಮನವಿ ಸಲ್ಲಿಸಿದ್ದಾರೆ. ಈ ವರ್ಷ ಇದಕ್ಕಿಂತ ಹೆಚ್ಚು ಕಾಮಗಾರಿ ನೀಡಲು ಕಷ್ಟಸಾಧ್ಯ. ಮುಂದಿನ ವರ್ಷ ಮತ್ತಷ್ಟು ಕಾಮಗಾರಿಗಳ ಮಂಜೂರು ಮಾಡಲಾಗುತ್ತದೆ. ಶೀಘ್ರವೇ ಭಾರತ್ ಮಾಲಾ 2 ಯೋಜನೆ ಘೋಷಣೆ ಮಾಡಲಾಗುತ್ತದೆ. ಬೆಳಗಾವಿ ರಿಂಗ್ ರಸ್ತೆಗೆ ಮಂಗಲಾ ಅಂಗಡಿ ಮನವಿ ಮಾಡಿದ್ರು ಅದನ್ನ ಮಂಜೂರು ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
ಬೆಳಗಾವಿಯ ಶಾಸಕರು ನೀಡಿದ ಕೆಲವು ಯೋಜನೆಗಳನ್ನ ಮಂಜೂರು ಮಾಡುವ ಭರವಸೆ ನೀಡಲಾಗಿದೆ. ರೈತರಿಗೆ ಟೋಲ್ ಫೀ ಸಮಸ್ಯೆ ಆಗಬಾರದೆಂದು ಈರಣ್ಣ ಕಡಾಡಿ ಮನವಿ ಮಾಡಿದ್ದಾರೆ. ಅವರ ಮನವಿಗೆ ಸ್ಪಂದಿಸಿ ರೈತರಿಗೆ ಯಾವುದೇ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲಾಗಿದೆ. ನಾನು ಐವತ್ತು ಲಕ್ಷ ಕೋಟಿ ವೆಚ್ಚದ ಕಾಮಗಾರಿ ಮಾಡಿದ್ದೇನೆ. ಯಾವುದೇ ಕಾಮಗಾರಿಗೆ ಹಣದ ತೊಂದರೆ ಇಲ್ಲ. ಗ್ರೀನ್ ಕಾರಿಡಾರ್, ಇಂಡಸ್ಟ್ರಿಯಲ್ ಕಾರಿಡಾರ್ ಯೋಜನೆ ಮಾಡ್ತಿದ್ದೇವೆ. ಬೆಂಗಳೂರು ಚೆನ್ನೈ 18 ಸಾವಿರ ಕೋಟಿ ವೆಚ್ಚ ಮಾಡಿ ಕಾಮಗಾರಿ ನಡೆಸಲಾಗಿದೆ. ಭೂಮಿ ಪೂಜೆಗೂ ಟೈಮ್ ಸಿಕ್ಕಿರಲಿಲ್ಲ ಆದಷ್ಟು ಬೇಗ ಉದ್ಘಾಟನೆ ಮಾಡಲಾಗುತ್ತದೆ. ಐಟಿ ಉದ್ಯಮಕ್ಕೂ ಇದು ಅನುಕೂಲವಾಗಲಿದೆ. ಮಂಗಳೂರು ರಿಂಗ್ ರೋಡ್ ಸಹ ನಾವು ನಿರ್ಮಾಣ ಮಾಡ್ತೀವಿ ಎಂದು ಗಡ್ಕರಿ ತಿಳಿಸಿದ್ದಾರೆ.
ಇಂದು ರಾಣಿ ಬೆಳವಡಿ ಮಲ್ಲಮ್ಮ ಉತ್ಸವ ನಡೆಸಲಾಗುತ್ತಿದೆ. ಛತ್ರಪತಿ ಶಿವಾಜಿ ಮಹಾರಾಜರು ಬೆಳವಡಿ ಮಲ್ಲಮ್ಮರನ್ನ ತಂಗಿಯಂತೆ ಭಾವಿಸಿದ್ರು. ಕನ್ನಡ ಮರಾಠಿ ಮಧ್ಯೆ ಸೋದರತ್ವ ಸಂಬಂಧ ಇದೆ. ಬೆಳವಡಿ ಮಲ್ಲಮ್ಮಗೆ ನನ್ನ ನಮನ ಸಲ್ಲಿಸುವೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ. ದಿ. ಸುರೇಶ್ ಅಂಗಡಿ ಸ್ಮರಿಸಿ ಇಂದು ಬೆಳಗಾವಿಯಲ್ಲಿ ಕಾಮಗಾರಿಗಳಿಗೆ ಚಾಲನೆ ನೀಡ್ತಿದ್ದೇನೆ. ಈ ಕಾಮಗಾರಿಗಳಿಗೆ ಮನವಿ ಮಾಡಲು ನನ್ನ ಬಳಿ ಸುರೇಶ್ ಅಂಗಡಿ ಬರ್ತಿದ್ರು. ಆದ್ರೆ ಸುರೇಶ್ ಅಂಗಡಿ ಇಂದು ನಮ್ಮ ಜೊತೆಗಿಲ್ಲ ಎಂದು ನಿತಿನ್ ಗಡ್ಕರಿ ಬೇಸರ ವ್ಯಕ್ತಪಡಿಸಿದ್ದಾರೆ.
ಬೆಳಗಾವಿಯಲ್ಲಿ ಇಂದು ರಸ್ತೆ ಕ್ರಾಂತಿ ಆಗುತ್ತಿದೆ. ಇಂದು ಐದು ರಾಷ್ಟ್ರೀಯ ಹೆದ್ದಾರಿಗಳ ಲೋಕಾರ್ಪಣೆ ಮಾಡಲಾಗಿದೆ. ಇದರ ಹಿಂದೆ ಇರುವ ಶಕ್ತಿ ಪ್ರಧಾನಿ ನರೇಂದ್ರ ಮೋದಿ ಎಂದು ಬೆಳಗಾವಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. ಕರ್ನಾಟಕದಲ್ಲಿ ಪ್ರಥಮವಾಗಿ ಜಲಶಕ್ತಿ ಯೋಜನೆ ಆರಂಭ ಆಗಿದೆ. ಬೆಳಗಾವಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಜಲಶಕ್ತಿ ಉತ್ಪಾದನೆ ಮಾಡಲಾಗುತ್ತಿದೆ. ಮೋದಿ, ಗಡ್ಕರಿ, ಜೋಶಿ ಆಶೀರ್ವಾದದೊಂದಿಗೆ ಅಭಿವೃದ್ಧಿ ಆಗಲಿದೆ ಎಂದು ಬೆಳಗಾವಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಯಾವಾಗ?; ಸಿಎಂ ಬೊಮ್ಮಾಯಿ ನೀಡಿದ್ರು ಉತ್ತರ
ಇದನ್ನೂ ಓದಿ: ಉಕ್ರೇನ್ನಲ್ಲಿ ಸಿಲುಕಿರುವ ಕರ್ನಾಟಕದ ಜನರನ್ನು ಸುರಕ್ಷಿತವಾಗಿ ಕರೆತರಲಾಗುತ್ತದೆ: ಸಿಎಂ ಬೊಮ್ಮಾಯಿ ಭರವಸೆ
Published On - 3:24 pm, Mon, 28 February 22