ಬೆಳಗಾವಿ, (ಅಕ್ಟೋಬರ್ 11): ಕಾಂಗ್ರೆಸ್ನ ಹಿರಿಯ ಮುಖಂಡ, ಕಾಗವಾಡ ವಿಧಾನಸಭಾ ಕ್ಷೇತ್ರದ ಶಾಸಕ ರಾಜು ಕಾಗೆ ಮತ್ತೆ ಸುದ್ದಿಯಲ್ಲಿದ್ದಾರೆ. ಕಳೆದ ಬಾರಿ ಮೋದಿ ಬಗ್ಗೆ ಮತನಾಡಿ ಸುದ್ದಿಯಾಗಿದ್ದರು. ಈಗ ಸ್ವಪಕ್ಷದ ಸರ್ಕಾರದ ವಿರುದ್ಧವೇ ಬೇಸರ ಹೊರಹಾಕಿದ್ದಾರೆ. ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ತಾವಂಶಿ ಗ್ರಾಮದಲ್ಲಿ ಮಾತನಾಡಿರುವ ಕಾಗೆ, ರೈತರ ಪರ ಯಾವುದೇ ಯೋಜನೆಗಳು ಬರ್ತಿಲ್ಲ. ರೈತರು ಬದುಕು ನಡೆಸುವುದು ದುಸ್ತರವಾಗಿದೆ. ತಮ್ಮದೇ ಸರ್ಕಾರದ ವಿರುದ್ಧ ಹರಿಹಾಯ್ದರು. ಅಲ್ಲದೇ ರಾಜೀನಾಮೆ ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ರೈತರು ಒಂದು ವರ್ಷ ಬೆಳೆಗಳನ್ನ ಬೆಳೆಯುವುದನ್ನು ಬಿಟ್ರೇ ನೀವೇನು ತಿಂತಿರೀ? ನಿಮ್ಮ ಬಳಿ ರೊಕ್ಕ, ಬಂಗಾರ ಬೆಳ್ಳಿ ಸಾಕಷ್ಟು ಇರಬಹುದು. ಆದ್ರೆ ಅದನ್ನ ತಿನ್ನೋಕಾಗುತ್ತಾ? ಮೊದಲು ರೈತರನ್ನು ಬದುಕಿಸುವ ಕೆಲಸ ಮಾಡಿ . ರೈತರು ಬದುಕಿದ್ರೆ ಮಾತ್ರ ಈ ದೇಶ ಪ್ರಗತಿ ಹೊಂದಲು ಸಾಧ್ಯವಿದೆ. ಕಳೆದ ಒಂದು ವರ್ಷದಿಂದ ನನ್ನ ಗೋಳನ್ನು ಸರ್ಕಾರ ಆಲಿಸುತ್ತಿಲ್ಲ. ಹೀಗೆ ಪರಿಸ್ಥಿತಿ ಮುಂದುವರೆದ್ರೆ ವಿಧಾನಸೌಧದಲ್ಲಿಯೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಓರ್ವ ಮಂತ್ರಿಗೆ ಹೇಳಿದ್ದೆ. ನೀನ್ಯಾಕೆ ಆತ್ಮಹತ್ಯೆ ಮಾಡಿಕೊಳ್ತಿಯಾ, ನಿನ್ನ ಕೆಲಸ ಮಾಡ್ತೇವಿ ಅಂತ ಹೇಳಿದ ಮಂತ್ರಿಗಳಿದ್ದಾರೆ ಎಂದು ಕಿಡಿಕಾರಿದರು.
ಇದನ್ನೂ ಓದಿ: ಮೋದಿ ಸತ್ತರೆ ಮುಂದೆ ಯಾರೂ ಪ್ರಧಾನಿ ಆಗುವುದಿಲ್ಲವೇ: ಕಾಂಗ್ರೆಸ್ ಶಾಸಕ ರಾಜು ಕಾಗೆ
ನಾವೇನು ವಿಧಾನಸೌಧಕ್ಕೆ ಹೋಗಿ ಖಾಲಿ ಕುಂತಿಲ್ಲ, ಚೈನಿ(ಮೋಜು, ಮಸ್ತಿ) ಮಾಡುತ್ತಿಲ್ಲ. ರೈತರ ಕಷ್ಟ ಸುಖಗಳನ್ನು ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡುತ್ತಿದ್ದೇನೆ. ಆದ್ರೆ ಸರ್ಕಾರದವರು ನಮಗೆ ಸ್ಪಂದನೆ ಮಾಡುತ್ತಿಲ್ಲ. ಅದ್ದರಿಂದ ಏನು ಆಗೋದಿದೆ. ಬೇಕಾದ್ರೆ ನಾನು ನಾಳೆ ಹೋಗಿ ರಾಜೀನಾಮೆ ಕೊಡುತ್ತೇನೆ ಎಂದು ಎಚ್ಚರಿಕೆ ನೀಡಿದರು.
ಏತಕ್ಕಾಗಿ ನಾವು ಎಂಎಲ್‌ಎ ಗಳಾಗಿರಬೇಕು, ಏತಕ್ಕಾಗಿ ನಾವು ಅಧಿಕಾರದಲ್ಲಿಬೇಕು. ಆಡಳಿತ ಪಕ್ಷದ ಒಬ್ಬ ಶಾಸಕನಾಗಿ ಅಸಹಾಯಕತೆ ಬಗ್ಗೆ ಹೇಳುತ್ತಿದ್ದೇನೆ ಅಂದ್ರೆ ಎಷ್ಟರಮಟ್ಟಿಗೆ ಈ ವ್ಯವಸ್ಥೆಯಲ್ಲಿ ಬದುಕಿದ್ದೇವೆ ಎಂದು ಅರ್ಥ ಮಾಡಿಕೊಳ್ಳಿ. ಕಾಂಗ್ರೆಸ್ ಸರ್ಕಾರದ ನಡೆಯಿಂದಾಗಿ ನನ್ನ ಮನಸ್ಸಿಗೆ ಬಹಳ ನೋವಾಗಿದೆ. ಹೀಗಾಗಿ ಮುಂದಿನ ಸಲ ನನಗೆ ಎಂಎಲ್ಎ ಆಗುವುದು ಬೇಕಾಗಿಲ್ಲ ಎಂದು ಜನತೆ ಮುಂದೆ ತಮ್ಮ ಅಸಹಾಯಕತೆ ತೊಡಿಕೊಂಡರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:35 pm, Fri, 11 October 24