ಬೆಳಗಾವಿ: 44 ಇಲಾಖೆಗಳಲ್ಲಿ ಸುಮಾರು 2.5 ಲಕ್ಷಕ್ಕೂ ಹೆಚ್ಚು ಹುದ್ದೆ ಖಾಲಿಯಿದೆ. 1 ವರ್ಷದಲ್ಲಿ 1 ಲಕ್ಷ ಹುದ್ದೆ ಭರ್ತಿ ಮಾಡುವುದಾಗಿ ಸರ್ಕಾರ ಹೇಳಿತ್ತು. ಆದರೆ ಕೆಲವೇ ಕೆಲವು ಇಲಾಖೆಗೆ ಮಾತ್ರ ಸಿಬ್ಬಂದಿ ನೇಮಕ ಸೀಮಿತವಾಗಿದೆ. ಖಾಲಿ ಹುದ್ದೆಗಳ ಭರ್ತಿ ಮಾಡಬೇಕೆಂದು ಜೆಡಿಎಸ್ ಸದಸ್ಯ ಟಿ.ಎ.ಶರವಣ (TA Sharavana) ಒತ್ತಾಯಿಸಿದರು. ವಿಧಾನ ಪರಿಷತ್ ಕಲಾಪದಲ್ಲಿ ಗಮನ ಸೆಳೆಯುವ ಸೂಚನೆ ವೇಳೆ ಟಿ.ಎ.ಶರವಣ ಸರ್ಕಾರಕ್ಕೆ ಮನವಿ ಮಾಡಿದರು. ರಾಜ್ಯದ ವಿವಿಧ 44 ಇಲಾಖೆಯಲ್ಲಿ 2.5 ಲಕ್ಷಕ್ಕೂ ಅಧಿಕ ಹುದ್ದೆಗಳು ಖಾಲಿ ಇದ್ದರೂ ಈ ಸ್ಥಳದಲ್ಲಿ ಹೊರ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಂಡಿದ್ದಾರೆ. ವಿವಿಧ ಇಲಾಖೆಯಲ್ಲಿ ಸಿ, ಡಿ ಗ್ರೂಪ್ ಹುದ್ದೆಗಳು ಖಾಲಿಯಿವೆ. ಹಲವು ಬಾರಿ ಕೇಳಿದರೂ ಸರ್ಕಾರ ಕಡೆಯಿಂದ ಉತ್ತರ ಬರುತ್ತಿಲ್ಲ. ಆದಷ್ಟು ಬೇಗ ಸರ್ಕಾರ ಇದರ ಬಗ್ಗೆ ಗಮನ ಹರಿಸಬೇಕೆಂದು ಆಗ್ರಹಿಸಿದರು.
ಬೆಂಗಳೂರು-ಮೈಸೂರು ದಶಪಥ ರಸ್ತೆ ಕಾಮಗಾರಿ ವಿಚಾರವಾಗಿ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಮರಿತಿಬ್ಬೇಗೌಡ ಪ್ರಸ್ತಾಪ ಮಾಡಿದರು. ದಶಪಥ ರಸ್ತೆ ಕಾಮಗಾರಿ, ಅಂಡರ್ಪಾಸ್ನಲ್ಲಿ ನೀರು ನಿಲ್ಲುತ್ತಿದೆ. ಈ ಬಗ್ಗೆ ಸರ್ಕಾರ ಏನು ಕ್ರಮಕೈಗೊಂಡಿದೆ ಎಂದು ಮರಿತಿಬ್ಬೇಗೌಡ ಪ್ರಶ್ನೆ ಮಾಡಿದರು. ಇದಕ್ಕೆ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಉತ್ತರ ನೀಡಿದ್ದು, ಮಳೆಯಿಂದಾಗಿ ಕೆಲವು ಕಡೆ ಸಮಸ್ಯೆ ಆಗುತ್ತಿದೆ. ರಸ್ತೆಯಲ್ಲಿ ಉಬ್ಬುತಗ್ಗುಗಳನ್ನು ಸರಿಪಡಿಸಲು ಸೂಚನೆ ನೀಡಲಾಗಿದೆ. ರಾಜಕಾಲುವೆ ಬ್ಲಾಕ್ ಆಗಿದ್ದರಿಂದ ನೀರು ನುಗ್ಗಿ ಸಮಸ್ಯೆಯಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಜತೆ ಚರ್ಚಿಸಿ ಸಮಸ್ಯೆ ಇತ್ಯರ್ಥ ಮಾಡುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ: ವಿಧಾನಸಭೆ ಕಲಾಪ: ರಾಜಕಾಲುವೆ ಕಾಮಗಾರಿಗೆ ಹೆಚ್ಚಿನ ಅನುದಾನ; ಕೃಷ್ಣ ಬೈರೇಗೌಡ ಪ್ರಶ್ನೆಗೆ ಸಿಎಂ ಬೊಮ್ಮಾಯಿ ಉತ್ತರ
ವಿಧಾನಸಭೆಯಲ್ಲಿ ವಕೀಲರ ರಕ್ಷಣಾ ವಿಧೇಯಕ ಬಗ್ಗೆ ಪ್ರಸ್ತಾಪ ಮಾಡಿದ್ದು, ವಕೀಲರ ವಿಚಾರವಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ. ಇತ್ತೀಚೆಗೆ ವಕೀಲರ ಮೇಲೆ ಹಲ್ಲೆ, ದೌರ್ಜನ್ಯಗಳು ಹೆಚ್ಚುತ್ತಿದೆ. ಹೀಗಾಗಿ ವಕೀಲರ ರಕ್ಷಣೆಗೆ ವಿಧೇಯಕ ತರುವುದು ಅಗತ್ಯವಿದೆ. ಸರ್ಕಾರ ಕೂಡಲೇ ವಕೀಲರಿಗಾಗಿ ಕಾನೂನು ಜಾರಿಗೆ ತರಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದರು. ವಕೀಲರ ರಕ್ಷಣೆಗೆ ಸಂಬಂಧಿಸಿದ ವಿಧೇಯಕ ಜಾರಿ ಬಗ್ಗೆ ಕಾನೂನು ಸಚಿವರ ಜತೆ ಚರ್ಚಿಸಿ ವಿಧೇಯಕ ಅಂಗೀಕಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಮಾಧುಸ್ವಾಮಿ ಪರ ಸಚಿವ ಕಾರಜೋಳ ಉತ್ತರಿಸಿದರು.
ಇನ್ನು ರೈತರ ಸಮಸ್ಯೆಗಳ ಕುರಿತು ಸಿದ್ದರಾಮಯ್ಯ ಚರ್ಚೆ ಮಾಡಿದ್ದು, ರೈತರ ಸಮಸ್ಯೆಗಳು ಅಂದರೆ ಬರೀ ಒಂದು ಭಾಗಕ್ಕೆ ಸಂಬಂಧಿಸಿದ್ದಲ್ಲ. ರೈತರ ಬಿಕ್ಕಟ್ಟುಗಳು ಇಡೀ ರಾಜ್ಯಕ್ಕೆ ಸಂಬಂಧಿಸಿದ್ದು, ಅದರಲ್ಲಿ ಉತ್ತರ ಕರ್ನಾಟಕವು ಬರುತ್ತವೆ. ಕಬ್ಬು ಅಥವಾ ದ್ರಾಕ್ಷಿ, ತೊಗರಿ, ಭತ್ತ ಬೆಳೆಗಾರರ ಬಗ್ಗೆ ಮಾತನಾಡಿದ್ರೆ ಅವೆಲ್ಲವೂ ಉತ್ತರ ಕರ್ನಾಟಕದಲ್ಲೂ ಬೆಳೆಯುತ್ತಾರೆ. ಅತೀ ಹೆಚ್ಚು ಸಕ್ಕರೆ ಕಾರ್ಖಾನೆ ಇರುವುದು ಉತ್ತರ ಕರ್ನಾಟಕ ಭಾಗದಲ್ಲಿ. ಅದರಿಂದ ಇದು ಕೂಡ ಈ ಭಾಗದ ಸಮಸ್ಯೆ ಬಗ್ಗೆಯೂ ಮಾತನಾಡುತ್ತಿದ್ದೇವೆ ಎಂದರು.
ಇದನ್ನೂ ಓದಿ: ವಿಧಾನಸಭೆ ಕಲಾಪ: ಆನೆಗಳ ಭ್ರೂಣಹತ್ಯೆಗೆ ಮೂಡಿಗೆರೆ ಶಾಸಕ ಆಗ್ರಹ; ಖಡಕ್ ಆಗಿ ಇಲ್ಲ ಎನ್ನದ ಸಚಿವ
ಒಂದು ಕಾಲದಲ್ಲಿ ನಮ್ಮ ದೇಶದಲ್ಲಿ ಫುಡ್ ಸೆಕ್ಯುರಿಟಿ ಇರಲಿಲ್ಲ. ಸ್ವಾತಂತ್ರ ಸಂದರ್ಭದಲ್ಲಿ ಆಹಾರ ಭದ್ರತೆ ಇರಲಿಲ್ಲ, ಈಗ ಹೆಚ್ಚು ಕಡಿಮೆ ಆಹಾರ ಭದ್ರತೆ ಆಗಿದೆ. ಈ ದೇಶದಲ್ಲಿ ಹಸಿರು ಕ್ರಾಂತಿ ಆದ ನಂತರ ಆಹಾರ ಭದ್ರತೆ ಆಗಿದೆ. ಆರೋಗ್ಯ, ವಸತಿ, ಶಿಕ್ಷಣ ಸಿಗಬೇಕು ಎಂಬುದು ಎಲ್ಲರ ಆಶಯ ಎಂದು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.