ವಿಧಾನಸಭೆ ಕಲಾಪ: ರಾಜಕಾಲುವೆ ಕಾಮಗಾರಿಗೆ ಹೆಚ್ಚಿನ ಅನುದಾನ; ಕೃಷ್ಣ ಬೈರೇಗೌಡ ಪ್ರಶ್ನೆಗೆ ಸಿಎಂ ಬೊಮ್ಮಾಯಿ ಉತ್ತರ
ಪ್ರಶ್ನೋತ್ತರ ಕಲಾಪದಲ್ಲಿ ಬ್ಯಾಟರಾಯನಪುರ ಶಾಸಕ ಕೃಷ್ಣ ಭೈರೇಗೌಡ, ಬೆಂಗಳೂರಿನ ರಾಜಕಾಲುವೆ ಅಭಿವೃದ್ಧಿ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಬೆಂಗಳೂರು ನೆರೆಯಿಂದ ಆಸ್ತಿ, ಪಾಸ್ತಿ ಪ್ರಾಣ ಹಾನಿಯಾಗಿದೆ.
ಬೆಂಗಳೂರು: ಹತ್ತು ದಿನಗಳ ಕಾಲ ನಡೆಯುವ ಅಧಿವೇಶನದ (Session) ಎರಡನೇ ದಿನ ಆರಂಭವಾಗಿದೆ. ವಿಧಾನಸಭೆಯ 2ನೇ ದಿನದ ಕಲಾಪದಲ್ಲಿ ಸರ್ಕಾರದ ವೈಫಲ್ಯ, ಮಳೆ ಹಾನಿ, ರಾಜಕಾಲುವೆ ಒತ್ತುವರಿ ಸೇರಿದಂತೆ ಇಂದು ಅನೇಕ ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ಪ್ರಶ್ನೋತ್ತರ ಕಲಾಪದಲ್ಲಿ ರಾಜಕಾಲುವೆ ಒತ್ತುವರಿ ಸಂಬಂಧ ಕೃಷ್ಣ ಬೈರೇಗೌಡ(Krishna Byregowda) ಮತ್ತು ಸಿಎಂ ಬೊಮ್ಮಾಯಿ(Basavaraj Bommai) ನಡುವೆ ಖಡಕ್ ಚರ್ಚೆ ನಡೆದಿದೆ.
ಪ್ರಶ್ನೋತ್ತರ ಕಲಾಪದಲ್ಲಿ ಬ್ಯಾಟರಾಯನಪುರ ಶಾಸಕ ಕೃಷ್ಣ ಭೈರೇಗೌಡ, ಬೆಂಗಳೂರಿನ ರಾಜಕಾಲುವೆ ಅಭಿವೃದ್ಧಿ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಬೆಂಗಳೂರು ನೆರೆಯಿಂದ ಆಸ್ತಿ, ಪಾಸ್ತಿ ಪ್ರಾಣ ಹಾನಿಯಾಗಿದೆ. ಬ್ರಾಂಡ್ ಬೆಂಗಳೂರಿಗೂ ಧಕ್ಕೆ ಉಂಟಾಗಿದೆ. ಇದಕ್ಕೆ ಮುಖ್ಯ ಕಾರಣ ಮಳೆ ನೀರಿನ ಪ್ರವಾಹ. ಈ ನಿಟ್ಟಿನಲ್ಲಿ ರಾಜಕಾಲುವೆ ಅಭಿವೃದ್ಧಿ ಪಡಿಸುವುದು ಮುಖ್ಯ. ಬೆಂಗಳೂರಿನಲ್ಲಿ 850 ಕಿ.ಮೀ. ರಾಜಕಾಲುವೆ ಇದೆ. ಹಿಂದಿನ ಸರ್ಕಾರದಲ್ಲಿ 400 ಕಿ. ಮೀ. ಅಭಿವೃದ್ಧಿಗೆ 1900 ಕೋಟಿ ಅನುದಾನ ರಾಜಕಾಲುವೆ ಅಭಿವೃದ್ಧಿಗೆ ನೀಡಿದೆ. ಕಳೆದ ಮೂರು ವರ್ಷದಲ್ಲಿ 70 ಕಿಮೀ ಮಾತ್ರ ರಾಜಕಾಲುವೆ ಅಭಿವೃದ್ಧಿ ಆಗಿದೆ. ಸಿಎಂ ಕೊಟ್ಟಿರುವ ಉತ್ತರ ಪ್ರಕಾರ 400 ಕಿಮೀ ಅಭಿವೃದ್ಧಿ ಆಗಲು ಬಾಕಿ ಇದೆ. ರಾಜಕಾಲುವೆ ಅಭಿವೃದ್ಧಿ ಪಡಿಸುವ ಕೆಲಸ ಆಗಬೇಕು. 1500 ಕೋಟಿ ಕೊಡುತ್ತೇವೆ ಎಂದು ಸಿಎಂ ಘೋಷಣೆ ಮಾಡಿದ್ದರು. ಆದರೆ ಇನ್ನೂ ಕಾಮಗಾರಿ ಆಗಿಲ್ಲ ಮತ್ತೆ ಪ್ರವಾಹ ಬಂದಿದೆ. ರಾಜಕಾಲುವೆ ಅಭಿವೃದ್ಧಿ ಪಡಿಸದೇ ಹೋದರೆ ಮಳೆ ನೀರು ಸಮಸ್ಯೆಗೆ ಪರಿಹಾರ ಇಲ್ಲ. ನನ್ನ ಕ್ಷೇತ್ರದಲ್ಲೂ 110 ಕೋಟಿ ಕೇಳಿದ್ದೆ, ಆದರೆ 20 ಕೋಟಿ ಕೊಡಲಾಗಿದೆ. ಹೀಗಾದಾಗ ನೆರೆ ತಡೆಗಟ್ಟಲು ಹೇಗೆ ಸಾಧ್ಯ? ಎಲ್ಲಾ ರಾಜಕಾಲುವೆ ಅಭಿವೃದ್ಧಿ ಪಡಿಸುವ ಕೆಲಸ ಆಗಬೇಕು ಎಂದು ಸದನದಲ್ಲಿ ಕೃಷ್ಣ ಬೈರೇಗೌಡ ಒತ್ತಾಯಿಸಿದ್ದಾರೆ.
ಇದಕ್ಕೆ ಉತ್ತರಿಸಿದ ಸಿಎಂ ಬಸವರಾಜ ಬೊಮ್ಮಾಯಿ ಹೆಚ್ಚು ಮಳೆಯಾಗಿದ್ದಕ್ಕೆ ರಾಜಕಾಲುವೆ ಪ್ರಾಮುಖ್ಯತೆ ಪಡೆದಿವೆ. ರಾಜಕಾಲುವೆ ಒತ್ತುವರಿ ಮಾಡಿಕೊಂಡು ಕಟ್ಟಡ ಕಟ್ಟಲಾಗಿದೆ. ₹1,500 ಕೋಟಿ ಬಿಡುಗಡೆ ಮಾಡಿದ್ದೇನೆ, ಟೆಂಡರ್ ಆಗಿದೆ. ಎಲ್ಲ ಪ್ರಾರಂಭ ಆಗಬೇಕಿದ್ರೆ ಒತ್ತುವರಿ ತೆರವು ಮಾಡಬೇಕು. ರಾಜಕಾಲುವೆ ನಿರ್ಮಾಣ ಆಗಲು ಸಮಯ ಬೇಕು. ನಿಮ್ಮ ಕಾಲದಲ್ಲಿ ಕೊಟ್ಟಿದ್ದೂ ಕೂಡ ಸಮಯ ಬೇಕಿದೆ. ಅವಶ್ಯಕತೆ ಇರುವ ಕಡೆ ಕೆಲಸ ಆರಂಭ ಆಗಿದೆ. ಬಜೆಟ್‌ನಲ್ಲಿ 1,500 ಕೋಟಿ, ಈಗ 300 ಕೋಟಿ ಬಿಡುಗಡೆ ಮಾಡಲಾಗಿದೆ. ಹೆಚ್ಚಿನ ಅನುದಾನ ನೀಡಿ ಕಾಮಗಾರಿ ಪೂರ್ಣಗೊಳಿಸ್ತೇವೆ. ರಾಜಕಾಲುವೆ ಸಂಪೂರ್ಣವಾಗಿ 859 ಕಿ.ಮೀ ಮಾಡಿ ಮುಗಿಸುತ್ತೇವೆ. ಬ್ಯಾಟರಾಯನಪುರ ಕ್ಷೇತ್ರಕ್ಕೆ 407 ಕೋಟಿ ಕಳೆದ ಮೂರು ವರ್ಷದಲ್ಲಿ ಪಡೆದುಕೊಂಡಿದ್ದೀರಿ. ಅಮೃತ ಯೋಜನೆ ಅಡಿ 100 ಕೋಟಿ ಕೊಡಲಾಗಿದೆ ಎಂದರು.
ರಾಜಕಾಲುವೆಗೆ ಹೆಚ್ಚುವರಿ ಹಣ ಬಳಕೆ ಮಾಡಿಕೊಳ್ಳಿ. 8 ವಲಯದಲ್ಲಿ ಸಮಸ್ಯೆ ಇಲ್ಲ, 2 ವಲಯದಲ್ಲಿ ಸಮಸ್ಯೆ ಇದೆ. ಮಹದೇವಪುರ ವಲಯದಲ್ಲಿ ಮಾತ್ರ ಸಮಸ್ಯೆ ಇದೆ. ವರ್ತೂರು ಹಾಗೂ ಬೆಳ್ಳಂದೂರು ಕೆರೆಗೆ ವ್ಯಾಲಿ ಸೇರುತ್ತೆ. 110 ಹಳ್ಳಿಗಳು ಸೇರಿವೆ, ಅಲ್ಲೂ ಕೂಡ ಕೆರೆಗಳು ಇವೆ. ಸಮರೋಪಾದಿಯಲ್ಲಿ ಸಮಸ್ಯೆಯನ್ನ ಎದುರಿಸೋಣ. ಶಾಸಕರು ತಮ್ಮ ಕ್ಷೇತ್ರದ ಸಮಸ್ಯೆ ಹೇಳಿಕೊಂಡಿದ್ದಾರೆ. ಸ್ಲೂಯಿಸ್ ಗೇಟ್ ಹಾಕಲು ಅನುಮತಿ ನೀಡಿದ್ದೇನೆ. ಎಲ್ಲೂ ಕೆಲಸ ನಿಲ್ಲದಂತೆ ನೋಡಿಕೊಳ್ಳುತ್ತೇವೆ. 300 ಕಿ.ಮೀ. ಸಮಯ ಬದ್ಧವಾಗಿ ಮಾಡಲು ಆದೇಶಿಸಲಾಗಿದೆ ಎಂದರು.
ಇನ್ನು ಇದೇ ವೇಳೆ, ಬೆಂಗಳೂರಿಲ್ಲಿ ರಾಜಕಾಲುವೆ ಒತ್ತುವರಿ ತೆರವು ವಿಚಾರಕ್ಕೆ ಸಂಬಂಧಿಸಿ ವಿಧಾನಸಭೆಯಲ್ಲಿ ಶಾಸಕ ಲಿಂಬಾವಳಿ ವಿಷಯ ಪ್ರಸ್ತಾಪಿಸಿದ್ರು. ಒತ್ತುವರಿ ತೆರವು ಕಾರ್ಯವನ್ನು ನಿಲ್ಲಿಸಬೇಡಿ, ಮುಂದುವರಿಸಿ. ವರ್ತೂರು ಭಾಗದಲ್ಲೇ ಹೆಚ್ಚು ಒತ್ತುವರಿ ಆಗಿದೆ. ವಿಪಕ್ಷಗಳು ಕೂಡ ಒತ್ತುವರಿ ತೆರವಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದ್ರು.
ಸೆ.5ರಿಂದಲೇ ಮಹದೇವಪುರದಲ್ಲಿ ಒತ್ತುವರಿ ತೆರವು ಕಾರ್ಯ ನಡೆದಿದೆ. ಸೆಪ್ಟೆಂಬರ್ 3, 4ರಂದು ಹೆಚ್ಚು ಮಳೆಯಾಗಿದ್ದರಿಂದ ಹಾನಿಯಾಗಿದೆ. ಮಳೆಯಿಂದ ಹೆಚ್ಚು ಹಾನಿಯಾಗಲು ಒತ್ತುವರಿಯೇ ಕಾರಣ. ಹಾಗಾಗಿ ಮಹದೇವಪುರದಲ್ಲಿ ಒತ್ತುವರಿ ತೆರವು ಮಾಡಲಾಗ್ತಿದೆ. ದೊಡ್ಡ ಬಿಲ್ಡರ್ಗಳು ಕಟ್ಟಿದ ಕಟ್ಟಡಗಳ ಒತ್ತುವರಿ ಮಾತ್ರ ತೆರವು ಮಾಡಲಾಗುತ್ತಿದೆ. ಸಾಮಾನ್ಯ ಜನರು ಮಾಡಿದ ಒತ್ತುವರಿ ತೆರವು ಮಾಡುತ್ತಿಲ್ಲ. ಐಟಿ ಕಂಪನಿಗಳು ಒತ್ತುವರಿ ಮಾಡಿವೆ ಎಂದು ಅಶೋಕ್ ಹೇಳಿದ್ದಾರೆ. ಸಚಿವ ಆರ್.ಅಶೋಕ್ ಹೇಳಿದ್ದು ತಪ್ಪು ಮಾಹಿತಿ. ಐಟಿ ಕಂಪನಿ ಒತ್ತುವರಿ ಮಾಡಿಲ್ಲ, ಬಿಲ್ಡರ್ಗಳಿಂದ ಒತ್ತುವರಿಯಾಗಿದೆ ಎಂದು ವಿಧಾನಸೌಧದಲ್ಲಿ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಹೇಳಿದ್ರು.
Published On - 1:12 pm, Tue, 13 September 22