ರಾಜಕಾಲುವೆ ಒತ್ತುವರಿ: ಮನೆ ಉಳಿಸಿ ಕಾಂಪೌಂಡ್ ಕೆಡವಲು ಜೆಸಿಬಿಗಳಿಗೆ ಬಿಬಿಎಂಪಿ ಸೂಚನೆ
ಮುಂಜಾನೆಯಿಂದಲೇ ಬಿಬಿಎಂಪಿ ಅಧಿಕಾರಿಗಳು ಜೆಸಿಬಿಗಳೊಂದಿಗೆ ಸ್ಥಳಕ್ಕೆ ಬಂದು ಮಾರ್ಕಿಂಗ್ ಮತ್ತು ಕಟ್ಟಡ ಕೆಡವುವ ಕೆಲಸ ಆರಂಭಿಸಿದರು.
ಬೆಂಗಳೂರು: ನಗರದ ಮಹದೇವಪುರ ಮತ್ತು ಯಲಹಂಕ ಪ್ರದೇಶಗಳಲ್ಲಿ ರಾಜಕಾಲುವೆ ಮತ್ತು ಕೆರೆ ಒತ್ತುವರಿ ತೆರವು ಕಾರ್ಯಾಚರಣೆ ಚುರುಕಾಗಿ ನಡೆಯುತ್ತಿದೆ. ಇಂದು ಮುಂಜಾನೆಯಿಂದಲೇ ಬಿಬಿಎಂಪಿ ಅಧಿಕಾರಿಗಳು ಜೆಸಿಬಿಗಳೊಂದಿಗೆ ಸ್ಥಳಕ್ಕೆ ಬಂದು ಮಾರ್ಕಿಂಗ್ ಮತ್ತು ಕಟ್ಟಡ ಕೆಡವುವ ಕೆಲಸ ಆರಂಭಿಸಿದರು. ಮನೆಗಳ ಕಾಂಪೌಂಡ್ ಮಾತ್ರ ತೆರವುಗೊಳಿಸಿ, ಕಟ್ಟಡಗಳನ್ನು ಹಾಗೆಯೇ ಬಿಡುವಂತೆ ಅಧಿಕಾರಿಗಳು ಜೆಸಿಬಿ ಚಾಲಕರಿಗೆ ಸೂಚನೆ ನೀಡಿದ್ದಾರೆ. ತಹಶೀಲ್ದಾರ್ ನೊಟೀಸ್ ಕೊಟ್ಟ ಮೂರು ದಿನಗಳ ನಂತರ ಮನೆಗಳನ್ನು ಕೆಡವಲು ಅಧಿಕಾರಿಗಳು ಪ್ಲಾನ್ ಮಾಡಿದ್ದಾರೆ.
ಚಲ್ಲಘಟ್ಟದಲ್ಲಿರುವ ನಲಪಾಡ್ ಅಕಾಡೆಮಿ ಶಾಲೆಯಿಂದಲೂ ರಾಜಕಾಲುವೆ ಒತ್ತುವರಿಯಾಗಿರುವುದು ಬೆಳಕಿಗೆ ಬಂದಿದೆ. ಕಾಲುವೆಯ ಜಾಗದಲ್ಲಿ ಕಾಂಪೌಂಡ್ ನಿರ್ಮಿಸಲಾಗಿದೆ. ಒತ್ತುವರಿ ತೆರವುಗೊಳಿಸಲು ಆರಂಭದಲ್ಲಿ ಅಧಿಕಾರಿಗಳು ಹಿಂದೇಟು ಹಾಕಿದ್ದರು. ಬೆಳ್ಳಗ್ಗೆಯಿಂದ ನಾನಾ ಕಾರಣ ಹೇಳಿಕೊಂಡು ತಡಮಾಡಿದ್ದರು. ಆದರೆ ನಂತರ ಪೊಲೀಸರ ರಕ್ಷಣೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ಸ್ಥಳಕ್ಕೆ ಬಂದಿದ್ದು, ತೆರವು ಕಾರ್ಯಾಚರಣೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಬೆಂಗಳೂರಿನ ಮಹದೇವಪುರ ಸಮೀಪದ ಶಾಂತಿನಿಕೇತನ ಲೇಔಟ್ನಲ್ಲಿಯೂ ಒತ್ತುವರಿ ಕಟ್ಟಡಗಳ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಸ್ಥಳದಲ್ಲಿ ಭದ್ರತೆಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಬೆಳ್ಳಂದೂರು ಕೆರೆಯಿಂದ ವರ್ತೂರು ಕೆರೆಗೆ ಸಂಪರ್ಕ ಕಲ್ಪಿಸುವ ಕಾಲುವೆಯನ್ನು ಒತ್ತುವರಿ ಮಾಡಿ ಮನೆಗಳನ್ನು ನಿರ್ಮಿಸಲಾಗಿದೆ. ಶಾಂತಿನಿಕೇತನ ಲೇಔಟ್ 2000ನೇ ಇಸವಿಯಲ್ಲಿ ನಿರ್ಮಾಣವಾಗಿತ್ತು. ಲೇಔಟ್ನ ಎಂಟು ಕಟ್ಟಡಗಳು 27 ಅಡಿಯ ರಾಜಕಾಲುವೆ ಒತ್ತುವರಿ ಮಾಡಿಕೊಂಡಿವೆ. ಕಟ್ಟಡಗಳನ್ನು ತೆರವುಗೊಳಿಸಲು ಅಧಿಕಾರಿಗಳು ಮಾರ್ಕ್ ಮಾಡಿದ್ದಾರೆ. ಶಾಂತಿನಿಕೇತನ ಲೇಔಟ್ ನಿರ್ಮಾಣವಾಗುವ ಮೊದಲು ಈ ಪ್ರದೇಶದಲ್ಲಿ 10 ಮೀಟರ್ ರಾಜಕಾಲುವೆ ಇತ್ತು. ಪ್ರಸ್ತುತ ಇದರಲ್ಲಿ 8 ಮೀಟರ್ನಷ್ಟು ಒತ್ತುವರಿಯಾಗಿದೆ. ಒಟ್ಟು 7 ಕಟ್ಟಡಗಳನ್ನು ತೆರವುಗೊಳಿಸಬೇಕಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದರು.
ಯಲಹಂಕದ ಎನ್ಸಿಬಿಎಸ್ ಬಳಿ ರಾಜಕಾಲುವೆ ಒತ್ತುವರಿ ತೆರವು ಮಾಡಲು ಬಂದ ಬಿಬಿಎಂಪಿ ಅಧಿಕಾರಿಗಳು ಮತ್ತೊಂದು ಸರ್ಕಾರಿ ಸಂಸ್ಥೆಯ ಅಧಿಕಾರಿಗಳಿಂದ ತೀವ್ರ ವಿರೋಧ ಎದುರಿಸಬೇಕಾಯಿತು. ರಾಜಕಾಲುವೆ ಮೇಲೆ ನಿರ್ಮಿಸಿದ್ದ ಗೋಡೆ ನೆಲಸಮಕ್ಕೆಂದು ತಂದ ಜೆಸಿಬಿಯನ್ನು ಕ್ವಾರ್ಟರ್ಸ್ ಒಳಗೆ ಬಿಡಲಿಲ್ಲ. ನಂತರ ಬಿಬಿಎಂಪಿ ಅಧಿಕಾರಿಗಳು ಹೊರಗಿನಿಂದ ಒತ್ತುವರಿ ಕಾಂಪೌಂಡ್ ತೆರವುಗೊಳಿಸಿದರು.
ಸಿಎಂ ಮಹತ್ವದ ಸಭೆ
ಬೆಂಗಳೂರಿನಲ್ಲಿ ಒತ್ತುವರಿ ತೆರವು ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕಾರಿಗಳ ಜೊತೆ ಸಭೆ ನಡೆಸಿ ಪರಿಸ್ಥಿತಿ ಪರಾಮರ್ಶಿಸಿದರು. ಬೆಂಗಳೂರು ನಗರ ಜಿಲ್ಲಾಧಿಕಾರಿ, ಬಿಬಿಎಂಪಿ ಆಯುಕ್ತರು, ಪಾಲಿಕೆ ವಲಯ ಆಯುಕ್ತರು ಸಭೆಯಲ್ಲಿ ಪಾಲ್ಗೊಂಡಿದ್ದರು. ಕಾಂಗ್ರೆಸ್ ಅವಧಿಯಲ್ಲಿ ನಡೆದಿದ್ದ ಒತ್ತುವರಿ ಬಗ್ಗೆಯೂ ಅಧಿಕಾರಿಗಳಿಂದ ಸಿಎಂ ಮಾಹಿತಿ ಪಡೆದರು. ವಿಧಾನಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯರು ಮಳೆ, ಪ್ರವಾಹ, ಬೆಂಗಳೂರಿನ ಸಂಕಷ್ಟದ ಬಗ್ಗೆ ಪ್ರಸ್ತಾಪಿಸಿದರೆ ಸೂಕ್ತ ಪ್ರತ್ಯುತ್ತರ ನೀಡಲು ಮುಖ್ಯಮಂತ್ರಿ ಸಿದ್ಧತೆ ಮಾಡಿಕೊಂಡರು.
ಒತ್ತುವರಿ ತೆರವಿಗೆ 1,500 ಕೋಟಿ: ಬೊಮ್ಮಾಯಿ
ಬೆಂಗಳೂರು ನಗರದಲ್ಲಿ ಹೆಚ್ಚು ಮಳೆಯಾದ ನಂತರ ರಾಜಕಾಲುವೆಗಳ ಪ್ರಾಮುಖ್ಯತೆ ಎಲ್ಲರಿಗೂ ಅರ್ಥವಾಗಿದೆ ಎಂದು ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಕಾಂಗ್ರೆಸ್ ಶಾಸಕ ಕೃಷ್ಣಭೈರೇಗೌಡ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ರಾಜಕಾಲುವೆಗಳ ಅಭಿವೃದ್ಧಿಗಾಗಿ ₹ 1,500 ಕೋಟಿ ಬಿಡುಗಡೆ ಮಾಡಿದ್ದೇನೆ. ಟೆಂಡರ್ ಆಗಿದೆ. ಕಾಮಗಾರಿ ಆರಂಭವಾಗಬೇಕಿದ್ದರೆ ಮೊದಲು ಒತ್ತುವರಿ ತೆರವು ಮಾಡಬೇಕಿದೆ ಎಂದರು.
Published On - 1:46 pm, Tue, 13 September 22