New Satellite Towns: ಬೆಂಗಳೂರಿನ ಸುತ್ತ ಹೈಸ್ಪೀಡ್ ಸಂಪರ್ಕ ವ್ಯವಸ್ಥೆಯೊಂದಿಗೆ 4 ಹೊಸ ಉಪನಗರ ನಿರ್ಮಾಣ; 3 ಪಟ್ಟಣಗಳ ಆಯ್ಕೆ ಅಂತಿಮ
ಪ್ರಸ್ತುತ ಬೆಂಗಳೂರಿನ ಜನಸಂಖ್ಯೆಯು 1.3 ಕೋಟಿ ಇದೆ. 2040ರ ಹೊತ್ತಿಗೆ ಇದು 4 ಕೋಟಿ ಮುಟ್ಟಬಹುದು ಎಂದು ಅಂದಾಜಿಸಲಾಗಿದೆ.
ಬೆಂಗಳೂರು: ಮೂಲಸೌಕರ್ಯ ಕೊರತೆ, ಟ್ರಾಫಿಕ್ ಜಾಮ್, ವ್ಯಾಪಕ ಜನಸಂದಣಿ ಸೇರಿದಂತೆ ಹಲವು ಕಾರಣಗಳಿಂದ ಸತತ ಟೀಕೆಗೆ ಗುರಿಯಾಗಿರುವ ಬೆಂಗಳೂರು ನಗರಕ್ಕೆ ಕಾಯಕಲ್ಪ ಕಲ್ಪಿಸಲು ಕರ್ನಾಟಕ ಸರ್ಕಾರ ಮುಂದಾಗಿದೆ. ಬೆಂಗಳೂರು ಸುತ್ತಮುತ್ತಲ 4 ನಗರಗಳನ್ನು ಅಗತ್ಯ ಮೂಲಸೌಕರ್ಯಗಳಿರುವ ಉತ್ತಮ ಉಪ-ನಗರಗಳಾಗಿ (New Satellite Towns around Bengaluru) ರೂಪಿಸಲು ಚಿಂತನೆ ನಡೆದಿದೆ. ಬೆಂಗಳೂರಿನ ಒತ್ತಡ ತಗ್ಗಿಸುವ ಉದ್ದೇಶದಿಂದ ರಾಜ್ಯದ ವಿವಿಧೆಡೆ 6 ನಗರಗಳಲ್ಲಿ ಸಮಗ್ರ ಅಭಿವೃದ್ಧಿ ಯೋಜನೆಗಳನ್ನು ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಬೆಂಗಳೂರಿಗೆ ಸಮೀಪವಿರುವ, ಹಾಲಿ ಅಸ್ತಿತ್ವದಲ್ಲಿರುವ ನಗರ-ಪಟ್ಟಣಗಳಲ್ಲಿ ಮೂಲಸೌಕರ್ಯಗಳನ್ನು ಉನ್ನತ ಮಟ್ಟಕ್ಕೆ ಏರಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ, ದೇವನಹಳ್ಳಿ, ನೆಲಮಂಗಲ ಪಟ್ಟಣಗಳನ್ನು ಉಪ-ನಗರಗಳಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ‘ಟೈಮ್ಸ್ನೌ’ ಜಾಲತಾಣದ ವರದಿ ತಿಳಿಸಿದೆ. ಮತ್ತೊಂದು ಉಪ-ನಗರವು ಹೊಸಕೋಟೆ ಅಥವಾ ರಾಮನಗರ ಇರಬಹುದು ಎಂದು ಹೇಳಲಾಗುತ್ತಿದೆ. ನಿಖರ ಮಾಹಿತಿ ಲಭ್ಯವಾಗಿಲ್ಲ.
ರಾಷ್ಟ್ರೀಯ ಹೆದ್ದಾರಿ 75ರಲ್ಲಿರುವ ನೆಲಮಂಗಲ ಪಟ್ಟಣದ ಮೂಲಕವೇ ಕರಾವಳಿ, ಮಧ್ಯ ಕರ್ನಾಟಕ ಮತ್ತು ಉತ್ತರ ಕರ್ನಾಟಕದ ಜನರು ಬೆಂಗಳೂರಿಗೆ ಪ್ರವೇಶಿಸುತ್ತಾರೆ. ಹಿಂದೂಪುರ ಮಾರ್ಗದಲ್ಲಿರುವ ದೊಡ್ಡಬಳ್ಳಾಪುರದಲ್ಲಿ ಬೃಹತ್ ಕೈಗಾರಿಕಾ ವಸಾಹತು ಸ್ಥಾಪನೆಯಾಗಿದೆ. ಇಲ್ಲಿ ಬಹುರಾಷ್ಟ್ರೀಯ ಕಂಪನಿಗಳು ಸೇರಿದಂತೆ ಹಲವು ಪ್ರಮುಖ ಕಾರ್ಖಾನೆಗಳು ಸ್ಥಾಪನೆಯಾಗಿದ್ದು ಬೆಂಗಳೂರಿನಿಂದ ಪ್ರತಿದಿನ ಸಾವಿರಾರು ಜನರು ಓಡಾಡುತ್ತಾರೆ. ಹೈದರಾಬಾದ್ ಮಾರ್ಗದಲ್ಲಿರುವ ದೇವನಹಳ್ಳಿಯು ಬೆಂಗಳೂರಿನೊಂದಿಗೆ ಉತ್ತಮ ರಸ್ತೆ ಹಾಗೂ ರೈಲು ಸಂಪರ್ಕ ಹೊಂದಿದ್ದು, ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸನಿಹದಲ್ಲಿಯೇ ಇದೆ.
ಬೆಂಗಳೂರಿನಲ್ಲಿ ಜನದಟ್ಟಣೆ ಹೆಚ್ಚಾಗಿರುವ ಕಾರಣ ನಗರದ ವ್ಯಾಪ್ತಿಯನ್ನು ಹಿಗ್ಗಸಲು ಸರ್ಕಾರವು ಚಿಂತನೆ ನಡೆಸುತ್ತಿದೆ. ಬೆಂಗಳೂರಿನ ಮೂಲಸೌಕರ್ಯವನ್ನು ಸಮಗ್ರವಾಗಿ ಮರುರೂಪಿಸಿ ಉನ್ನತೀಕರಣಗೊಳಿಸಬೇಕಿದೆ. ನಾವು ಹೊಸ ಬೆಂಗಳೂರಿನ ಬಗ್ಗೆ ಯೋಚಿಸಬೇಕಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಕಳೆದ ಮಾರ್ಚ್ ತಿಂಗಳಲ್ಲಿಯೂ ಸಿಎಂ ಬೊಮ್ಮಾಯಿ ಇದೇ ಥರದ ಹೇಳಿಕೆ ನೀಡಿದ್ದರು. ಪ್ರಸ್ತುತ ಬೆಂಗಳೂರಿನ ಜನಸಂಖ್ಯೆಯು 1.3 ಕೋಟಿ ಇದೆ. 2040ರ ಹೊತ್ತಿಗೆ ಇದು 4 ಕೋಟಿ ಮುಟ್ಟಬಹುದು. ಬೆಂಗಳೂರು ನಗರವನ್ನು ಉಪಗ್ರಹಗಳಿಂದ ಸುತ್ತುವರಿದ ಗ್ರಹದಂತೆ ಅಭಿವೃದ್ಧಿಪಡಿಸಬೇಕಿದೆ. ಈ ಉಪ-ನಗರಗಳಿಂದ ಬೆಂಗಳೂರಿಗೆ ರಸ್ತೆ, ರೈಲು, ಅತಿವೇಗದ ಸಂಚಾರ ವ್ಯವಸ್ಥೆ ಇರಬೇಕು ಎಂದು ಬೊಮ್ಮಾಯಿ ಹೇಳಿದ್ದರು.
ಬೆಂಗಳೂರಿನ ಸುತ್ತಲೂ ರೂಪಿಸಲಾಗುವ ಉಪ-ನಗರಗಳಲ್ಲಿ ಎಲ್ಲ ರೀತಿಯ ಮೂಲ ಸೌಕರ್ಯಗಳು ಇರುತ್ತವೆ. ಬೆಂಗಳೂರಿನ ಸುತ್ತಳತೆ ಈಗಾಗಲೇ ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಇದು ಎತ್ತರಕ್ಕೆ ಬೆಳೆಯಬೇಕಿದೆ ಎಂದು ಬೊಮ್ಮಾಯಿ ಹೇಳಿದ್ದರು.
Published On - 12:43 pm, Tue, 13 September 22