ವಿಧಾನಸಭೆ ಕಲಾಪ: ಆನೆಗಳ ಭ್ರೂಣಹತ್ಯೆಗೆ ಮೂಡಿಗೆರೆ ಶಾಸಕ ಆಗ್ರಹ; ಖಡಕ್ ಆಗಿ ಇಲ್ಲ ಎನ್ನದ ಸಚಿವ
ಕರ್ನಾಟಕದಲ್ಲಿ ಆನೆಗಳ ಭ್ರೂಣಹತ್ಯೆ ಆರಂಭಿಸುವ ಮೂಲಕ ಆನೆಗಳ ಸಂಖ್ಯೆಗೆ ಕಡಿವಾಣ ಹಾಕಬೇಕು ಎನ್ನುವ ಬೇಡಿಕೆಯನ್ನು ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಸರ್ಕಾರದ ಮುಂದಿಟ್ಟರು.
ಬೆಂಗಳೂರು: ಕರ್ನಾಟಕದಲ್ಲಿ ಆನೆಗಳ ಭ್ರೂಣಹತ್ಯೆ ಆರಂಭಿಸಬೇಕು. ಆ ಮೂಲಕ ಆನೆಗಳ ಸಂಖ್ಯೆಗೆ ಕಡಿವಾಣ ಹಾಕಬೇಕು ಎನ್ನುವ ಬೇಡಿಕೆಯನ್ನು ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ವಿಧಾನಸಭೆ ಕಲಾಪದ ಮೂಲಕ ಸರ್ಕಾರದ ಮುಂದಿಟ್ಟರು. ಈ ಬೇಡಿಕೆಯನ್ನು ಸರ್ಕಾರದ ಪರವಾಗಿ ಪ್ರತಿಕ್ರಿಯಿಸಿದ ಸಚಿವ ಶಿವರಾಂ ಹೆಬ್ಬಾರ್ ಸ್ಪಷ್ಟವಾಗಿ ನಿರಾಕರಲಿಲ್ಲ. ಬದಲಾಗಿ, ಆನೆಗಳ ಭ್ರೂಣ ಹತ್ಯೆ ಮಾಡುವ ವಿಚಾರ ಸರ್ಕಾರದ ಮುಂದಿಲ್ಲ ಎಂದಷ್ಟೇ ಹೇಳಿದರು. ಆನೆಗಳ ಹಾವಳಿ ಬಗ್ಗೆ ಪ್ರಶ್ನೋತ್ತರ ಕಲಾಪದಲ್ಲಿ ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ ನಾಡಿಗೆ ನುಗ್ಗುವ ಆನೆಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ‘ನಾವು ಪರಿಹಾರ ಕೊಡುತ್ತೇವೆ, ಸಾಯಲು ರೆಡಿ ಇರಿ’ ಎನ್ನುವಂತಾಗಿದೆ ನಮ್ಮ ಸ್ಥಿತಿ. ಆನೆಗಳ ಸಂಖ್ಯೆ ಹೆಚ್ಚಾಗಿದೆ, ಅವುಗಳನ್ನು ಖಾಲಿ ಮಾಡಿಸಿ. ಇಲ್ಲ ಆನೆಗಳ ಭ್ರೂಣ ಹತ್ಯೆ ಮಾಡಿಸಿ. ಆನೆಗಳ ಹಾವಳಿಯಿಂದ ಆರು ಜನರು ಸತ್ತಿದ್ದಾರೆ. ಇದಕ್ಕೆ ಶಾಶ್ವತ ಪರಿಹಾರ ಬೇಕು. ನಮಗೆ ಕ್ಷೇತ್ರದಲ್ಲಿ ಓಡಾಡಲು ಆಗುತ್ತಿಲ್ಲ. ಶವ ಮನೆಮುಂದಿಟ್ಟುಕೊಂಡು ಫೋನ್ ಮಾಡುತ್ತಾರೆ ಎಂದು ವಿಷಾದಿಸಿದರು.
ಸಚಿವ ಶಿವರಾಮ ಹೆಬ್ಬಾರ್ ಉತ್ತರ ನೀಡಿ, ಈಗಾಗಲೇ ಆನೆಗಳನ್ನು ಹಿಡಿದು ಕಾಡಿಗೆ ಬಿಡಲಾಗಿದೆ. ಸತ್ತವರಿಗೆ ಪರಿಹಾರ ಕೂಡ ಕೊಡಲಾಗಿದೆ. ಒಂದು ಆನೆ ಮಾತ್ರ ಮೂಡಿಗೆರೆಯಲ್ಲಿ ಹಾವಳಿ ಇಡುತ್ತಿದೆ. ಮೂಡಿಗೆರೆ ಬೈರಾ ಅಂತ ಅದರ ಹೆಸರು. ಅದನ್ನು ಹಿಡಿಯುವ ಕೆಲಸ ಆಗುತ್ತದೆ. ಆನೆಗಳ ಭ್ರೂಣ ಹತ್ಯೆಯ ಪ್ರಸ್ತಾವ ಸರ್ಕಾರದ ಮುಂದಿಲ್ಲ ಎಂದರು.
ಗುತ್ತಿಗೆ ನೌಕರರ ಮರುನೇಮಕ ಸಾಧ್ಯವಿಲ್ಲ
ಬೀದರ್ನ ಬ್ರೀಮ್ಸ್ ಆಸ್ಪತ್ರೆಯ ಹೊರಗುತ್ತಿಗೆ ನೌಕರರನ್ನು ಕೆಲಸದಿಂದ ತೆಗೆಯಲಾಗಿದೆ. ಆರು ತಿಂಗಳ ಸಂಬಳ, ಇಎಸ್ಐ ಮತ್ತು ಪಿಎಫ್ ಕೊಟ್ಟಿಲ್ಲ ಎಂದು ಶೂನ್ಯ ವೇಳೆಯಲ್ಲಿ ಭಾಲ್ಕಿ ಶಾಸಕ ಈಶ್ವರ್ ಖಂಡ್ರೆ ಸದನದ ಗಮನ ಸೆಳೆದರು. ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ಡಾ ಸುಧಾಕರ, ಕೊರೊನಾ ಸಂದರ್ಭದಲ್ಲಿ ಹೊರ ಗುತ್ತಿಗೆ ಆಧಾರದ ಮೇಲೆ ಕೆಲಸಕ್ಕೆ ತೆಗೆದುಕೊಂಡಿದ್ದೆವು. ಕೆಲವರನ್ನು ಎರಡು ವರ್ಷ ಮುಂದುವರೆಸಿದ್ದೇವೆ. ಪಿಎಫ್ ಕಟ್ಟದೇ ಇರುವುದರ ಬಗ್ಗೆ ದೂರು ದಾಖಲಾಗಿದೆ. ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿದ್ದೇವೆ. ನೈರ್ಮಲ್ಯ ಕಾರ್ಮಿಕರ ಹುದ್ದೆ ತುಂಬುತ್ತಿದ್ದೇವೆ ಎಂದರು. ಕೊರೋನಾ ಸಂದರ್ಭದಲ್ಲಿ ತುಂಬಿದ ಹುದ್ದೆಯಲ್ಲ ಎಂದು ಖಂಡ್ರೆ ಆಕ್ಷೇಪ ವ್ಯಕ್ತಪಡಿಸಿದರು. ಗುತ್ತಿಗೆಗೆ ತೆಗೆದುಕೊಂಡ ಅವಧಿ ಮುಗಿದಿದೆ. ಅವರನ್ನು ಮುಂದುವರೆಸಲು ಸಾಧ್ಯವಿಲ್ಲ ಎಂದು ಸುಧಾಕರ ವಿವರಿಸಿದರು.
ಉತ್ತರ ಕನ್ನಡ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನೀಡಲು ಆಗ್ರಹ
ಉತ್ತರ ಕನ್ನಡ ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲು ಉತ್ತರ ಕನ್ನಡ ಜಿಲ್ಲೆಯ ಶಾಸಕರು ಒಕ್ಕೊರಲಿನಿಂದ ಆಗ್ರಿಸಿದರು. ಪ್ರಶ್ನೋತ್ತರ ಕಲಾಪದ ವೇಳೆ ಕಾರವಾರ ಶಾಸಕಿ ರೂಪಾಲಿ ನಾಯಕ್, ಭಟ್ಕಳ ಶಾಸಕ ಸುನಿಲ್ ನಾಯ್ಕ್, ಕುಮಟಾ ಶಾಸಕ ದಿನಕರಶೆಟ್ಟಿ, ಹಳಿಯಾಳ ಕ್ಷೇತ್ರದ ಶಾಸಕ ಆರ್.ವಿ.ದೇಶಪಾಂಡೆ ಮಾತನಾಡಿದರು. ಪ್ರತಿಕ್ರಿಯಿಸಿದ ಸಚಿವ ಶಿವರಾಂ ಹೆಬ್ಬಾರ್, ಜಿಲ್ಲೆಯ ಜನರಿಗೆ ಅನುಕೂಲವಾಗುವ ಸ್ಥಳದಲ್ಲಿ ಆಸ್ಪತ್ರೆ ಮಾಡುತ್ತೇವೆ. ಆರೋಗ್ಯ ಸಚಿವರ ನಿವಾಸದಲ್ಲಿ ಈ ಬಗ್ಗೆ ಸಭೆ ನಡೆದಿದೆ. ಅಧಿವೇಶನದ ಬಳಿಕ ಈ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ ಎಂದರು. ಈ ವೇಳೆ ಮಧ್ಯ ಪ್ರವೇಶಿಸಿದ ಸ್ಪೀಕರ್ ಕಾಗೇರಿ, ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಅಗತ್ಯವಿದೆ ಎಂದರು. ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಉತ್ತರ ನೀಡಿ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಸಿಎಂ ತಾತ್ವಿಕ ಒಪ್ಪಿಗೆ ನೀಡಿದ್ದಾರೆ. ಸ್ಪೀಕರ್ ಅಧ್ಯಕ್ಷತೆಯಲ್ಲಿ ಇನ್ನೊಂದು ಸಭೆ ಮಾಡುತ್ತೇವೆ ಎಂದರು.
ಕರ್ನಾಟಕದಲ್ಲಿ ಪಿಎಸ್ಟಿ ಸಕ್ರಿಯ: ಶರವಣ
ವಿಧಾನಸೌಧದಲ್ಲಿ ವಿಧಾನ ಪರಿಷತ್ ಶಾಸಕ ಟಿ.ಎ.ಶರವಣ ಮಾತನಾಡಿ, ಎರರೂ ರಾಷ್ಟ್ರೀಯ ಪಕ್ಷಗಳು ಅಧಿವೇಶನದ ಅಮೂಲ್ಯ ಕ್ಷಣವನ್ನು ಹಾಳು ಮಾಡಿವೆ. ಇಬ್ಬರೂ ತಮ್ಮ ಭ್ರಷ್ಟಾಚಾರಗಳನ್ನ ಮುಚ್ಚಿಹಾಕಿಕೊಳ್ಳೋಕೆ ಜನರ ಮುಂದೆ ಬೆತ್ತಲಾಗಿದ್ದಾರೆ. ರಾಜ್ಯದ ಜನರ ಜ್ವಲಂತ ಸಮಸ್ಯೆಗಳನ್ನ ಚರ್ಚೆ ಮಾಡಬಹುದಿತ್ತು. ನಮಗೆ ಧ್ವನಿಯೇ ಇಲ್ಲದಂತೆ ಮಾಡಿ ಪ್ರತಿಭಟನೆಗೆ ಇಳಿದರು. ಆತುರಾತುರವಾಗಿ ಎರಡು ಬಿಲ್‌ಗಳನ್ನ ಪಾಸ್ ಮಾಡಿಕೊಂಡಿದ್ದಾರೆ. ಪ್ರಾಮಾಣಿಕವಾಗಿ ತೆರಿಗೆ ಹಣ ದೆಹಲಿಗೆ ಹೋಗ್ತಾ ಇದೆ. ಲಂಚದ ಬದಲು ಇನ್ನು ಮುಂದೆ ಬೇರೆ ಪದ ಹೇಳಬೇಕು. ರಾಜ್ಯದಲ್ಲಿ ಪಿಎಸ್ಟಿ ಅಂದರೆ POLITICAL SERVICE TAX ಸಕ್ರಿಯವಾಗಿದೆ. ಇದರ ಬಗ್ಗೆ ನಮ್ಮ ನಾಯಕರು ಶೀಘ್ರದಲ್ಲೇ ದಾಖಲೆ ಬಿಡುಗಡೆ ಮಾಡಲಿದ್ದಾರೆ ಎಂದು ಹೇಳಿದರು.
Published On - 3:14 pm, Thu, 22 September 22