ತೆಲಂಗಾಣ ಚುನಾವಣೆಗೆ ಗೋವಾದಿಂದ ಮದ್ಯ ಸಾಗಾಟ: ಬೆಳಗಾವಿಯಲ್ಲಿ 44 ಲಕ್ಷ ರೂ. ಮೌಲ್ಯದ ಎಣ್ಣೆ ಜಪ್ತಿ

| Updated By: ಆಯೇಷಾ ಬಾನು

Updated on: Oct 23, 2023 | 10:38 AM

ಅಬಕಾರಿ ಇನ್ಸ್​ಪೆಕ್ಟರ್ ಮಂಜುನಾಥ ತಂಡದಿಂದ ಕಾರ್ಯಾಚರಣೆ ನಡೆದಿದ್ದು ತೆಲಂಗಾಣ ಚುನಾವಣೆ ಹಿನ್ನೆಲೆ ಮತದಾರರಿಗೆ ಹಂಚಲು ಸಾಗಿಸಲಾಗುತ್ತಿದ್ದ ಮದ್ಯ ವಶಕ್ಕೆ ಪಡೆಯಲಾಗಿದೆ. ಇನ್ನು ಈ ಕಿಲಾಡಿಗಳು ಪುಷ್ಪ ಸಿನಿಮಾ ಶೈಲಿಯಲ್ಲಿ ಖತರ್ನಾಕ್ ಐಡಿಯಾ ಮಾಡಿದ್ದು ರಟ್ಟಿನ ರದ್ದಿಯಲ್ಲಿ ಮುಚ್ಚಿಟ್ಟು ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದರು.

ತೆಲಂಗಾಣ ಚುನಾವಣೆಗೆ ಗೋವಾದಿಂದ ಮದ್ಯ ಸಾಗಾಟ: ಬೆಳಗಾವಿಯಲ್ಲಿ  44 ಲಕ್ಷ ರೂ. ಮೌಲ್ಯದ ಎಣ್ಣೆ ಜಪ್ತಿ
ಮದ್ಯ(ಸಾಂದರ್ಭಿಕ ಚಿತ್ರ)
Follow us on

ಬೆಳಗಾವಿ, ಅ.23: ತೆಲಂಗಾಣ ಚುನಾವಣೆಗೆ (Telangana Election) ದಿನಾಂಕ ಘೋಷಣೆಯಾಗಿದ್ದೇ ತಡ ಮತದಾರರನ್ನು ಸೆಳೆಯಲು ರಾಜಕೀಯ ಪಕ್ಷಗಳು ಕಸರತ್ತಿಗೆ ಇಳಿದಿವೆ. ಮತದಾರರ (Voters) ಮನ ಗೆಲ್ಲಲ್ಲು ಹಣ, ಸೀರೆ, ಮದ್ಯ ಹಂಚಿಕೆ ಮಾಡಲಾಗುತ್ತಿದೆ ಎಂಬ ಮಾತುಗಳು ಕೂಡ ಕೇಳಿ ಬರುತ್ತಿದೆ. ಇದರ ನಡುವೆ ಬೆಳಗಾವಿಯಲ್ಲಿ (Belagavi) ಅಬಕಾರಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು ಮತದಾರರಿಗೆ ಹಂಚಲು ತರಲಾಗಿದ್ದ ಬ್ರ್ಯಾಂಡೆಡ್ ಮದ್ಯವನ್ನು ಜಪ್ತಿ ಮಾಡಿದ್ದಾರೆ. ಬೆಳಗಾವಿಯಲ್ಲಿ ತೆಲಂಗಾಣ ಚುನಾವಣೆಗೆ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಗೋವಾ ಮದ್ಯ ಜಪ್ತಿ ಮಾಡಲಾಗಿದೆ. ಲಾರಿ ಸಮೇತ 44 ಲಕ್ಷ ಮೌಲ್ಯದ ಮದ್ಯ ಜಪ್ತಿ ಮಾಡಲಾಗಿದ್ದು ಚಾಲಕ ಪರಾರಿಯಾಗಿದ್ದಾನೆ.

ಪುಷ್ಪ ಸಿನಿಮಾ ಶೈಲಿಯಲ್ಲಿ ಖತರ್ನಾಕ್ ಐಡಿಯಾ ಮಾಡಿದ ಗ್ಯಾಂಗ್

ಅಬಕಾರಿ ಇನ್ಸ್​ಪೆಕ್ಟರ್ ಮಂಜುನಾಥ ತಂಡದಿಂದ ಕಾರ್ಯಾಚರಣೆ ನಡೆದಿದ್ದು ತೆಲಂಗಾಣ ಚುನಾವಣೆ ಹಿನ್ನೆಲೆ ಮತದಾರರಿಗೆ ಹಂಚಲು ಸಾಗಿಸಲಾಗುತ್ತಿದ್ದ ಮದ್ಯ ವಶಕ್ಕೆ ಪಡೆಯಲಾಗಿದೆ. ಇನ್ನು ಈ ಕಿಲಾಡಿಗಳು ಪುಷ್ಪ ಸಿನಿಮಾ ಶೈಲಿಯಲ್ಲಿ ಖತರ್ನಾಕ್ ಐಡಿಯಾ ಮಾಡಿದ್ದು ರಟ್ಟಿನ ರದ್ದಿಯಲ್ಲಿ ಮುಚ್ಚಿಟ್ಟು ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದರು. ಕಳೆದ ಒಂದು ತಿಂಗಳಲ್ಲಿ ಇದು ಮೂರನೇ ಅತಿದೊಡ್ಡ ಕಾರ್ಯಾಚರಣೆಯಾಗಿದೆ. ಪ್ಲೈವುಡ್ ಬಾಕ್ಸ್ ಆಯ್ತು, ವಿದ್ಯುತ್‌ ಟ್ರಾನ್ಸಫಾರ್ಮರ್‌ ಬಾಕ್ಸ್‌ ಮಾಡಿ ಮದ್ಯ ಸಾಗಾಟ ಮಾಡಲು ಯತ್ನಿಸಿದ್ದಾಯ್ತು. ಈಗ ರಟ್ಟಿನ ರದ್ದಿಯಲ್ಲಿ ಬಚ್ಚಿಟ್ಟು ಅಕ್ರಮವಾಗಿ ಮದ್ಯ ಸಾಗಿಸಲು ಕಿಡಿಗೇಡಿಗಳು ಮುಂದಾಗಿದ್ದು ಪೊಲೀಸರು ಆದನ್ನೂ ಪತ್ತೆ ಹಚ್ಚಿದ್ದಾರೆ. ಈ ಮೂಲಕ ಕಿಡಿಗೇಡಿಗಳ ನಿದ್ದೆ ಕೆಡಿಸಿದ್ದಾರೆ.

ಇದನ್ನೂ ಓದಿ: ಮೈಸೂರು ದಸರಾ ವಜ್ರಮುಷ್ಟಿ ಕಾಳಗಕ್ಕೆ ವೆಂಕಟೇಶ್ ಜಟ್ಟಿ ಆಯ್ಕೆ, ಏನಿದು ವಜ್ರಮುಷ್ಟಿ ಕಾಳಗ? ಇತಿಹಾಸ ತಿಳಿದುಕೊಳ್ಳಿ

ಸದ್ಯ ಪೊಲೀಸರು ಅಕ್ರಮವನ್ನು ತಡೆದಿದ್ದು ಮದ್ಯ ವಶಕ್ಕೆ ಪಡೆದಿದ್ದಾರೆ. 21 ವಿವಿಧ ದುಬಾರಿ ಬ್ರ್ಯಾಂಡ್​ನ 250 ಬಾಕ್ಸ್ ಮದ್ಯ ವಶಕ್ಕೆ ಪಡೆಯಲಾಗಿದೆ. 44 ಲಕ್ಷ ಮೌಲ್ಯದ ಗೋವಾ ಮದ್ಯ, 20 ಲಕ್ಷ ಮೌಲ್ಯದ ಲಾರಿ ಸೇರಿ ಒಟ್ಟು 63 ಲಕ್ಷ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ಗೋವಾದಿಂದ ತೆಲಂಗಾಣಕ್ಕೆ ವೇಸ್ಟ್ ರದ್ದಿ ಸಾಗಿಸುತ್ತಿರುವುದಾಗಿ ದಾಖಲೆ ಸೃಷ್ಟಿಸಿ ರಟ್ಟಿನ ರದ್ದಿ ಮಧ್ಯೆ ಅಕ್ರಮವಾಗಿ ಮದ್ಯೆ ಸಾಗಿಸಲಾಗುತ್ತಿತ್ತು. ಬೆಳಗಾವಿ ತಾಲೂಕಿನ ಪೀರನವಾಡಿ ಬಳಿ ಅಬಕಾರಿ ಪೊಲೀಸರು ರೇಡ್ ಮಾಡಿದ್ದಾರೆ. ಪೊಲೀಸರು ಲಾರಿ ತಡೆಯುತ್ತಿದ್ದಂತೆ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ತೆಲಂಗಾಣ ರಾಜ್ಯದ ಪ್ರಮುಖ ನಗರಕ್ಕೆ ಮದ್ಯ ಸಾಗಿಸುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿದೆ.

ಬೆಳಗಾವಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ