ಬೆಳಗಾವಿ, ಫೆಬ್ರವರಿ 20: ಕರ್ನಾಟಕ, ಜಮ್ಮು-ಕಾಶ್ಮೀರ ಸೇರಿದಂತೆ ದೇಶದ ಅನೇಕ ವಿಶ್ವ ವಿದ್ಯಾಲಯಗಳಿಗೆ ಕೇಂದ್ರ ಸರ್ಕಾರ 3600 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದೆ ಎಂದು ಕೇಂದ್ರ ಸಂಸದೀಯ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ತಿಳಿಸಿದರು. ಬೆಳಗಾವಿಯಲ್ಲಿ (Belagavi) ಮಂಗಳವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಪ್ರಧಾನಮಂತ್ರಿ ಉಷಾ ಯೋಜನೆ’ಯಡಿ (PM Usha Yojana) 78 ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಅನುದಾನ ನೀಡಿದ್ದು, ಇಂದೇ ಅದರ ಬಿಡುಗಡೆಯಾಗುತ್ತಿದೆ ಎಂದು ಹೇಳಿದರು.
ಉಷಾ ಯೋಜನೆಯಡಿ ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯಕ್ಕೆ 100 ಕೋಟಿ ರೂಪಾಯಿ, ಗುಲ್ಬರ್ಗಾ ವಿಶ್ವವಿದ್ಯಾಲಯಕ್ಕೆ 20 ಕೋಟಿ ರೂ. ಹಾಗೂ ಧಾರವಾಡ ವಿಶ್ವವಿದ್ಯಾಲಯಕ್ಕೆ 20 ಕೋಟಿ ರೂಪಾಯಿ ದೊರೆಯಲಿದೆ ಎಂದು ಜೋಶಿ ತಿಳಿಸಿದರು. ಜಮ್ಮು- ಕಾಶ್ಮೀರ ಸೇರಿದಂತೆ ದೇಶದ ಹಲವಾರು ವಿಶ್ವವಿದ್ಯಾಲಯಗಳ ಅಭಿವೃದ್ಧಿಗಾಗಿ ಪ್ರಧಾನಮಂತ್ರಿ ಈ ಅನುದಾನ ಬಿಡುಗಡೆ ಮಾಡಿದ್ದಾರೆ. ಸಾಕ್ಷರತೆಯಿಂದ ಮಾತ್ರ ದೇಶದ ನೈಜ ವಿಕಾಸ ಸಾಧ್ಯವೆಂದು ನಂಬಿರುವ ಪ್ರಧಾನಿ ಮೋದಿ ಅವರು ದೇಶದ ವಿಶ್ವವಿದ್ಯಾಲಯಗಳಿಗೆ ಹೊಸ ಜೀವ ತುಂಬಲು ಇಂಥ ಮಹತ್ತರವಾದ ಯೋಜನೆಗೆ ಚಾಲನೆ ನೀಡಿದ್ದಾರೆ ಎಂದು ಜೋಶಿ ಹೇಳಿದರು.
ಭಾರತದ ಯುವ ಜನತೆಗೆ ಶಿಕ್ಷಣ ಮತ್ತು ಮೂಲಸೌಕರ್ಯವನ್ನು ಅಭಿವೃದ್ಧಿಗೊಳಿಸಿ ಭಾರತವನ್ನು ವಿಶ್ವಗುರು ಮಾಡುವ ಧ್ಯೇಯ ಪ್ರಧಾನಿಯವರದ್ದಾಗಿದೆ. ಈ ನಿಟ್ಟಿನಲ್ಲಿ ಪ್ರಾಥಮಿಕ ಶಿಕ್ಷಣದಿಂದಲೇ ವಿದ್ಯಾರ್ಥಿಗಳ ಅಮೂಲ್ಯ ಜೀವನ ರೂಪಿಸಲು ಪ್ರಧಾನಿ ಹೊಸ ಹೊಸ ಯೋಜನೆಗಳನ್ನು ಹಾಕಿಕೊಂಡಿದ್ದಾರೆ ಎಂದರು.
ಜಮ್ಮು- ಕಾಶ್ಮೀರ ಎಂದರೆ ಹಿಂಸಾಚಾರ, ಭಯೋತ್ಪಾದನೆಯೇ ಎಲ್ಲರ ಮನದಲ್ಲಿ ಹಾದು ಹೋಗುತ್ತಿತ್ತು. ಈಗದು ಸಂಪೂರ್ಣ ಬದಲಾಗಿದೆ. ಅಭಿವೃದ್ಧಿ ಪರ್ವ ಆರಂಭವಾಗಿದೆ. ವಿಶ್ವವಿದ್ಯಾಲಯಗಳ ಅನುದಾನ ಬಿಡುಗಡೆ ಸೇರಿದಂತೆ ಜಮ್ಮುವಿನ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಪ್ರಧಾನಿ ಮೋದಿ ಅವರು ಇಂದು ಅಲ್ಲಿಂದಲೇ ಚಾಲನೆ ನೀಡಿದ್ದಾರೆ. ನಾನು ಮತ್ತು ಸಂಸದೆ ಮಂಗಳಾ ಅಂಗಡಿ ಅವರು ಬೆಳಗಾವಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಲ್ಲಿ ನಡೆದ ನೇರಪ್ರಸಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇವೆ ಎಂದು ಸಚಿವ ಜೋಶಿ ತಿಳಿಸಿದರು.
ಇದನ್ನೂ ಓದಿ: ಜಮ್ಮುವಿನಲ್ಲಿ 32,000 ಕೋಟಿ ರೂ.ಗಳ ಅಭಿವೃದ್ಧಿ ಯೋಜನೆಗಳಿಗೆ ಮೋದಿ ಚಾಲನೆ
ಪ್ರಧಾನಿ ನರೇಂದ್ರ ಮೋದಿ ಅವರು ಜಮ್ಮುವಿನಲ್ಲಿ 32,000 ಕೋಟಿ ರೂ.ಗಳ ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದರು. ಆರೋಗ್ಯ, ಶಿಕ್ಷಣ, ರೈಲು, ರಸ್ತೆ, ವಿಮಾನಯಾನ, ಪೆಟ್ರೋಲಿಯಂ, ನಾಗರಿಕ ಮೂಲಸೌಕರ್ಯ ಸೇರಿದಂತೆ ಹಲವಾರು ಕ್ಷೇತ್ರಗಳಿಗೆ ಸಂಬಂಧಿಸಿದ ಯೋಜನೆಗಳು ಇರದಲ್ಲಿ ಸೇರಿವೆ. ಈ ಕಾರ್ಯಕ್ರಮದಲ್ಲಿ ವರ್ಚುವಲ್ ಆಗಿ ಭಾಗವಹಿಸಿದ ನಂತರ ಜೋಶಿ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:09 pm, Tue, 20 February 24