ಅಗ್ನಿಪಥ್ ಯೋಜನೆ ವಿರೋಧಿಸಿ ಬೆಳಗಾವಿ ಬಂದ್ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಕ್ಷಿಪ್ರ ಕಾರ್ಯಪಡೆಯ ಪೊಲೀಸರು (Rapid Action Force – RAF) ರಾಪಿಡ್ ಆ್ಯಕ್ಷನ್ ಫೋರ್ಸ್ನಿಂದ ಪಥಸಂಚಲನ ನಡೆಸಲಾಯಿತು. ಭದ್ರಾವತಿಯಿಂದ ಆಗಮಿಸಿರುವ ಆರ್ಎಎಫ್ ಸಿಬ್ಬಂದಿ, ನಗರದ ಪ್ರಮುಖ ರಸ್ತೆಗಳಲ್ಲಿ ಪಥಸಂಚಲನ ನಡೆಸಿದರು. ನಗರ ವ್ಯಾಪ್ತಿಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನಿಗಾ ವಹಿಸಿದ್ದಾರೆ. ಬೆಳಗಾವಿ ನಗರ ಪೊಲೀಸ್ ಆಯುಕ್ತ ಡಾ.ಬೋರಲಿಂಗಯ್ಯ, ಉಪವಿಭಾಗಾಧಿಕಾರಿ ರವೀಂದ್ರ ಕರಲಿಂಗಣ್ಣವರ್, ಡಿಸಿಪಿ ರವೀಂದ್ರ ಗಡಾದಿ ಸೇರಿ ಹಲವು ಅಧಿಕಾರಿಗಳು ನಗರದ ವಿವಿಧೆಡೆ ಸಂಚರಿಸಿದರು. ಬೆಳಗಾವಿಯ ಚನ್ನಮ್ಮ ವೃತ್ತದಿಂದ ಕಾಲೇಜು ರಸ್ತೆ ಮಾರ್ಗವಾಗಿ ಪಥಸಂಚಲ ನಡೆಯಿತು.
ಬೆಳಗಾವಿ ನಗರ ವ್ಯಾಪ್ತಿಯಲ್ಲಿ ಸೇನೆಯಲ್ಲಿ ಉದ್ಯೋಗ ಪಡೆಯಲು ಇಚ್ಛಿಸಿರುವ ಆಕಾಂಕ್ಷಿಗಳು ಬೃಹತ್ ಪ್ರತಿಭಟನೆಗೆ ಮುಂದಾಗಿದ್ದಾರೆ. ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಪೊಲೀಸರು ಬಿಗಿ ಬಂದೋಸ್ತ್ ಮಾಡಿದ್ದಾರೆ. ತಾಲ್ಲೂಕಿನ ಹಿರೇಬಾಗೇವಾಡಿ ಟೋಲ್ ನಾಕಾ ಬಳಿ ಸಾಕಷ್ಟು ಸಂಖ್ಯೆಯಲ್ಲಿ ಪೊಲೀಸರು ನೆರೆದಿದ್ದಾರೆ. ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ (Karnataka State Reserve Police – KSRP) ಒಂದು ತುಕಡಿ ಸೇರಿದಂತೆ 35ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಬೆಳಗಾವಿ ನಗರ ಪ್ರವೇಶಿಸುವ ಎಲ್ಲ ವಾಹನಗಳನ್ನು ನಿಗಾ ಇರಿಸಲಾಗಿದೆ.
ಅಗ್ನಿಪಥ್ ಯೋಜನೆ ವಿರೋಧಿಸಿ ಬೆಳಗಾವಿಯಲ್ಲಿ ಪ್ರತಿಭಟನೆಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಬೆಳಂಬೆಳಗ್ಗೆ ನಗರ ಪೊಲೀಸ್ ಆಯುಕ್ತ ಡಾ.ಬೋರಲಿಂಗಯ್ಯ ಸಿಟಿ ರೌಂಡ್ಸ್ ನಡೆಸಿದರು. ಬೆಳಗಾವಿಯ ಚನ್ನಮ್ಮ ವೃತ್ತ ಸೇರಿದಂತೆ ಪ್ರಮುಖ ವೃತ್ತ, ರಸ್ತೆಗಳಲ್ಲಿ ಭದ್ರತೆಯನ್ನು ಪರಿಶೀಲಿಸಿದರು. ಯಾವುದೇ ಕಾರಣಕ್ಕೂ ಪ್ರತಿಭಟನೆಗೆ ಅವಕಾಶ ನೀಡಬಾರದು ಎಂದು ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ.
ಬೆಳಗ್ಗೆ ಹತ್ತು ಗಂಟೆಯ ನಂತರ ಯುವಕರು ಚನ್ನಮ್ಮ ವೃತ್ತದಲ್ಲಿ ಜಮಾವಣೆಗೊಳ್ಳುವ ಸಾಧ್ಯತೆಯಿದೆ. ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆಗಳಿಂದ ಹೋರಾಟಗಾರರು ಆಗಮಿಸುವ ಸಾಧ್ಯತೆಯಿದೆ. ಪ್ರತಿಭಟನೆ ನಡೆಸುವ ಕುರಿತು ಪೊಲೀಸರಿಗೆ ಯಾರೂ ಮಾಹಿತಿ ನೀಡಿಲ್ಲ. ಆದರೆ ಇಂದು ಪ್ರತಿಭಟನೆ ನಡೆಯುವ ಸಾಧ್ಯತೆಯ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕಿದ್ದಾರೆ. ನಗರದ ಪ್ರಮುಖ ವೃತ್ತಗಳು ಸೇರಿದಂತೆ ರೈಲು ನಿಲ್ದಾಣ, ಬಸ್ ನಿಲ್ದಾಣದಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ. ಇಬ್ಬರು ಡಿಸಿಪಿ ಸೇರಿ ಇನ್ನೂರಕ್ಕೂ ಅಧಿಕ ಸಿಬ್ಬಂದಿಯನ್ನು ನಿಯೋಜಿಸಿರುವ ಜೊತೆಗೆ ಡ್ರೋಣ್ ಮೂಲಕವೂ ನಗರದ ಚಲನವಲನಗಳ ಬಗ್ಗೆ ಹದ್ದಿನಕಣ್ಣು ಇರಿಸಲಾಗಿದೆ. ಯುವಕರು ನಡೆಸಲು ಉದ್ದೇಶಿಸಿರುವ ಇಂದಿನ ಹೋರಾಟಕ್ಕೆ ಸಾಥ್ ಕೊಡುವುದಾಗಿ ಹೇಳಿದ್ದ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದರು.
ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ