ಬೆಳಗಾವಿ: ಜಮೀನಿಗೆ ನೀರು ಹರಿಸುವ ವಿಚಾರಕ್ಕೆ ಗಲಾಟೆ; ರಾತ್ರೋರಾತ್ರಿ ಒಂಟಿ ಮಹಿಳೆ ಮನೆಗೆ ನುಗ್ಗಿ ಮಾರಣಾಂತಿಕ ಹಲ್ಲೆ
ವಂಟಮೂರಿಯಲ್ಲಿ ಮಹಿಳೆಯನ್ನ ವಿವಸ್ತ್ರಗೊಳಿಸಿ, ಹಲ್ಲೆ ನಡೆಸಿದ ಪ್ರಕರಣವೊಂದು ದೊಡ್ಡಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಜಮೀನಿಗೆ ನೀರು ಹರಿಸುವ ವಿಚಾರಕ್ಕೆ ಒಂಟಿ ಮಹಿಳೆ ಮನೆಗೆ ರಾತ್ರಿ 11 ಗಂಟೆಗೆ ನುಗ್ಗಿ ಮಾರಣಾಂತಿಕ ಹಲ್ಲೆ ನಡೆಸಿದ ಧಾರುಣ ಘಟನೆ ರಾಯಬಾಗ(Raybag) ತಾಲೂಕಿನ ಕಂಕನವಾಡಿ ಗ್ರಾಮದಲ್ಲಿ ನಡೆದಿದೆ.

ಬೆಳಗಾವಿ, ಮಾ.12: ಇತ್ತೀಚೆಗೆ ಬೆಳಗಾವಿ ಜಿಲ್ಲೆಯ ವಂಟಮೂರಿಯಲ್ಲಿ ಮಹಿಳೆಯನ್ನ ವಿವಸ್ತ್ರಗೊಳಿಸಿ, ಹಲ್ಲೆ ನಡೆಸಿದ ಪ್ರಕರಣವೊಂದು ದೊಡ್ಡಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ರಾಯಬಾಗ(Raybag) ತಾಲೂಕಿನ ಕಂಕನವಾಡಿ ಗ್ರಾಮದಲ್ಲಿ ಜಮೀನಿಗೆ ನೀರು ಹರಿಸುವ ವಿಚಾರಕ್ಕೆ ಒಂಟಿ ಮಹಿಳೆ ಮನೆಗೆ ರಾತ್ರಿ 11 ಗಂಟೆಗೆ ನುಗ್ಗಿ ಮಾರಣಾಂತಿಕ ಹಲ್ಲೆ ನಡೆಸಿದ ಧಾರುಣ ಘಟನೆ ನಡೆದಿದ್ದು, ಗುಂಪು ಕಟ್ಟಿಕೊಂಡು ಹಲ್ಲೆ ಮಾಡುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಗಂಡನನ್ನ ಆಸ್ಪತ್ರೆಗೆ ದಾಖಲಿಸಿ ಮಕ್ಕಳೊಂದಿಗೆ ಮನೆಯಲ್ಲಿದ್ದ ಮಹಿಳೆ ಮೇಲೆ ಹಲ್ಲೆ
ಇನ್ನು ಫೆ.23ರಂದು ನಡೆದ ಘಟನೆ ಇದಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಜಮೀನಿನಲ್ಲಿ ನೀರು ಹರಿಸುವ ವಿಚಾರಕ್ಕೆ ಹಲ್ಲೆಗೊಳಗಾದ ಮಂಜುಳಾ ಅವರ ಗಂಡ ನಾಗಪ್ಪನ ಮೇಲೆ ಮೊದಲು ಪಕ್ಕದ ಜಮೀನಿನವರಾದ ಹಾಲಪ್ಪ ಹುಕ್ಕೇರಿ ಕುಟುಂಬಸ್ಥರು ಹಲ್ಲೆ ನಡೆಸಿದ್ದರು. ಬಳಿಕ ಗಂಡನನ್ನ ಆಸ್ಪತ್ರೆಗೆ ದಾಖಲಿಸಿ ಹಲ್ಲೆಗೊಳಗಾದ ಮಂಜುಳಾ, ಮಕ್ಕಳೊಂದಿಗೆ ಮನೆಯಲ್ಲಿ ಮಲಗಿದ್ದರು. ಈ ವೇಳೆ ರಾತ್ರಿ 11 ಗಂಟೆಗೆ ನಾಗಪ್ಪನ ಮನೆಯ ಮೇಲೆ ಕಲ್ಲುತೂರಾಟ ನಡೆಸಿದ್ದಾರೆ.
ಮಹಿಳೆ ಮೇಲೆ 9 ಜನರಿಂದ ಹಲ್ಲೆ
ಕಲ್ಲು ತೂರಾಟ ಬಳಿಕ ಮನೆಯಿಂದ ಹೊರ ಬರ್ತಿದ್ದಂತೆ ಮಂಜುಳಾ ಅವರ ಮೇಲೆ ಹಾಲಪ್ಪ ಹುಕ್ಕೇರಿ, ಯಲ್ಲಪ್ಪ ಹುಕ್ಕೇರಿ, ಕುಮಾರ್ ಬಾಳಪ್ಪ ಹುಕ್ಕೇರಿ, ಲಕ್ಷ್ಮೀ ಹುಕ್ಕೇರಿ ಸೇರಿ ಒಂಬತ್ತು ಜನರು ಹಲ್ಲೆ ನಡೆಸಿದ್ದಾರೆ. ಮಹಿಳೆ ಮೇಲೆ ಹಲ್ಲೆ ಮಾಡುವ ದೃಶ್ಯ ಮನೆಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇನ್ನು ಹಲ್ಲೆಗೊಳಗಾಗಿ ಆಸ್ಪತ್ರೆ ಪಾಲಾದರೂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿಲ್ಲ. ಈ ಹಿನ್ನಲೆ ನೊಂದ ಕುಟುಂಬ, ನ್ಯಾಯಕ್ಕಾಗಿ ಬೆಳಗಾವಿ ಎಸ್ಪಿ ಕಚೇರಿಗೆ ಆಗಮಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



