
ಬೆಳಗಾವಿ, ಡಿಸೆಂಬರ್ 9: ಚಳಿಯ ನಡುವೆಯೂ ಬೆಳಗಾವಿ ಅಧಿವೇಶನದಲ್ಲಿ (Belagavi Session) ಇವತ್ತಿನಿಂದ ಕಾವು ಏರುವ ಸಾಧ್ಯತೆ ಇದೆ. ಸೋಮವಾರ ವಿಧಾನಪರಿಷತ್‌ನಲ್ಲಿ ಬೇರೆ ಬೇರೆ ವಿಚಾರಗಳು ಸ್ವಲ್ಪ ಸದ್ದು ಮಾಡಿದವು. ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಲಷ್ಟೇ ವಿಧಾನಸಭೆ ಕಲಾಪ ಸೀಮಿತವಾಗಿತ್ತು. ಆದರೆ ಇಂದಿನಿಂದ ಅಸಲಿ ಚರ್ಚೆ ಶುರುವಾಗಲಿದೆ. ಅದರಲ್ಲೂ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ವಿಪಕ್ಷ ಬಿಜೆಪಿ ರೈತಾಸ್ತ್ರ ಬಿಡಲು ಮುಂದಾಗಿದೆ.
ಬೆಳಗಾವಿಯ ಮಾಲಿನಿ ಸಿಟಿ ಮೈದಾನದಲ್ಲಿ ಬಿಜೆಪಿ ಪ್ರತಿಭಟನೆ ನಡೆಯಲಿದೆ. ಬೃಹತ್ ಪ್ರತಿಭಟನೆ ನಡೆಸುವ ಮೂಲಕ 20 ಸಾವಿರ ರೈತರೊಂದಿಗೆ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ಬಿಜೆಪಿ ತಯಾರಿ ಮಾಡಿಕೊಂಡಿದೆ. ಉತ್ತರ ಕರ್ನಾಟಕ ಬಗ್ಗೆ ಚರ್ಚೆಗೆ ಪಟ್ಟುಹಿಡಿದಿರುವ ಬಿಜೆಪಿ, ಸೋಮವಾರ ಬಿಎಸಿ ಸಭೆಯಲ್ಲಿ ನಿಲುವಳಿ ನೋಟಿಸ್ ನೀಡಿದೆ. ಕಬ್ಬು ಬೆಳೆಗಾರರು, ಮೆಕ್ಕೆಜೋಳ, ಭತ್ತ, ತೊಗರಿ ಬೆಳೆಗಾರರಿಗೆ ಅನ್ಯಾಯವಾಗಿದೆ. ಪ್ರವಾಹ ಪರಿಹಾರ, ಅಭಿವೃದ್ಧಿಯಲ್ಲಿ ಉತ್ತರ ಕರ್ನಾಟಕ ಕಡೆಗಣನೆ ಹೀಗೆ ಹಲವು ವಿಚಾರ ಮುಂದಿಟ್ಟು ಸದನದ ಒಳಗೆ ಮತ್ತು ಹೊರಗೂ ಹೋರಾಟಕ್ಕೆ ಕರೆಕೊಟ್ಟಿದೆ.
ಸೋಮವಾರ ವಿಪಕ್ಷ ನಾಯಕ ಆರ್.ಅಶೋಕ್ ಪ್ರತಿಭಟನಾ ಸಮಾವೇಶದ ಸ್ಥಳ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಸಿ. ಟಿ. ರವಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್, ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕೇರಿ, ಶಾಸಕ ವಿಠ್ಠಲ ಹಲಗೇಕರ್, ಅಭಯ್ ಪಾಟೀಲ್ ರಾಜ್ಯ ಉಪಾಧ್ಯಕ್ಷ ಅನಿಲ್ ಬೆನಕೆ, ಮಾಜಿ ಶಾಸಕ ಸಂಜಯ್ ಪಾಟೀಲ್, ಬೆಳಗಾವಿ ಜಿಲ್ಲಾಧ್ಯಕ್ಷೆ ಗೀತಾ ಸುತಾರ, ಬೆಳಗಾವಿ ಗ್ರಾಮಾಂತರ ಅಧ್ಯಕ್ಷ ಶ್ರೀ ಸುಭಾಷ್ ಪಾಟೀಲ್ ಮತ್ತು ಪ್ರಮುಖರು ಉಪಸ್ಥಿತರಿದ್ದರು.
ನಂತರ ಮಾತನಾಡಿದ ಅಶೋಕ್, ರಾಜ್ಯದಲ್ಲಿ 2400 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಖಜಾನೆ ಖಾಲಿ ಖಾಲಿಯಾಗಿದೆ. ಕಾಂಗ್ರೆಸ್ನವರು ಜಾಲಿ ಜಾಲಿ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮಾತನಾಡಿ, ಸುವರ್ಣಸೌಧಕ್ಕೆ ಮುತ್ತಿಗೆ ಹಾಕುತ್ತೇವೆ. ಸರ್ಕಾರಕ್ಕೆ ಬಿಸಿ ಮುಟ್ಟಿಸುತ್ತೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕರ್ನಾಟಕದ ಅನ್ನಭಾಗ್ಯ ಅಕ್ಕಿ ದುಬೈನಲ್ಲಿ ಮಾರಾಟವಾಗುತ್ತಿದ್ಯಾ? ಕಾಂಗ್ರೆಸ್-ಬಿಜೆಪಿ ಜಟಾಪಟಿ
ಮತ್ತೊಂದೆಡೆ, ಬಿಜೆಪಿ ನಾಯಕರ ಈ ಹೋರಾಟಕ್ಕೆ ಕಾಂಗ್ರೆಸ್ ನಾಯಕರು ತಿರುಗೇಟುಕೊಟ್ಟಿದ್ದಾರೆ. ಮೊದಲು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಲಿ ಎಂದಿದ್ದಾರೆ.
ರೈತರೊಂದಿಗೆ ಬಿಜೆಪಿ ಪ್ರತಿಭಟನೆ ವೇಳೆ ದೊಡ್ಡ ಹಂಗಾಮವೇ ನಡೆಯುವ ಸಾಧ್ಯತೆಯಿದೆ. ಮುಂಜಾಗ್ರತಾ ಕ್ರಮವಾಗಿ ವ್ಯಾಪಕ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ.
Published On - 6:41 am, Tue, 9 December 25