400 ಕೋಟಿ ರೂ. ದರೋಡೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್: ಮಹಾರಾಷ್ಟ್ರ ಎಸ್​ಐಟಿ ತನಿಖಾ ವರದಿಯಲ್ಲಿ ಸ್ಫೋಟಕ ಅಂಶ!

ಚೋರ್ಲಾ ಘಾಟ್​ನಲ್ಲಿ ನಡೆದಿತ್ತು ಎನ್ನಲಾಗಿದ್ದ 400 ಕೋಟಿ ರೂ. ದರೋಡೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದೆ. ಮಹಾರಾಷ್ಟ್ರ ಎಸ್‌ಐಟಿ ತನಿಖಾ ವರದಿ ಪ್ರಕಾರ, ದರೋಡೆ ನಡೆದಿದ್ದಕ್ಕೆ ಯಾವುದೇ ಸಾಕ್ಷ್ಯ ದೊರೆತಿಲ್ಲ. ಸಂದೀಪ್ ಪಾಟೀಲ್ ನೀಡಿದ ದೂರು ಸುಳ್ಳು ಎಂದಿರುವುದಾಗಿ ಮೂಲಗಳು ತಿಳಿಸಿವೆ. ಇದೀಗ ಪಾಟೀಲ್ ವಿರುದ್ಧ ಕಾನೂನು ಕ್ರಮಕ್ಕೆ ಸಿದ್ಧತೆ ನಡೆದಿದೆ ಎಂದೂ ಹೇಳಲಾಗಿದೆ.

400 ಕೋಟಿ ರೂ. ದರೋಡೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್: ಮಹಾರಾಷ್ಟ್ರ ಎಸ್​ಐಟಿ ತನಿಖಾ ವರದಿಯಲ್ಲಿ ಸ್ಫೋಟಕ ಅಂಶ!
400 ಕೋಟಿ ರೂ. ದರೋಡೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್
Image Credit source: tv9
Edited By:

Updated on: Feb 16, 2026 | 10:25 AM

ಬೆಳಗಾವಿ, ಫೆಬ್ರವರಿ 16: ಕರ್ನಾಟಕ-ಗೋವಾ ಗಡಿಯಲ್ಲಿ ನಡೆದಿದೆ ಎನ್ನಲಾದ 400 ಕೋಟಿ ರೂ. ದರೋಡೆ (Rs 400 Crore Robbery Case) ಪ್ರಕರಣಕ್ಕೆ ಈಗ ಮತ್ತೊಂದು ಟ್ವಿಸ್ಟ್ ದೊರೆತಿದೆ. ಘಟನೆ ನಡೆದದ್ದೇ ಸುಳ್ಳು ಎಂಬ ಅನುಮಾನಕ್ಕೆ ಬಲ ಸಿಕ್ಕಿದೆ. ಬೆಳಗಾವಿ ಸಮೀಪದ ಗಡಿ ಪ್ರದೇಶದಲ್ಲಿ ಹಣ ಸಾಗಿಸುತ್ತಿದ್ದ ಎರಡು ಕಂಟೇನರ್‌ಗಳನ್ನು ದರೋಡೆ ಮಾಡಲಾಗಿದೆ ಎಂದು ನೀಡಿದ್ದ ದೂರಿನ ಮೇಲೆ ಮಹಾರಾಷ್ಟ್ರ ಸರ್ಕಾರ ಎಸ್‌ಐಟಿ ರಚಿಸಿ ತನಿಖೆ ನಡೆಸಿತ್ತು. ಸುಮಾರು ಒಂದು ತಿಂಗಳ ಕಾಲ ತನಿಖೆ ನಡೆಸಿದ ಎಸ್‌ಐಟಿ ತಂಡ, ಬೆಳಗಾವಿ (Belagavi) ಖಾನಾಪುರ ತಾಲೂಕಿನ ಚೋರ್ಲಾ ಘಾಟ್ ಬಳಿ ದರೋಡೆ ನಡೆದಿದೆ ಎಂಬುದಕ್ಕೆ ಯಾವುದೇ ಸಾಕ್ಷ್ಯ ಸಿಕ್ಕಿಲ್ಲ ಎಂದು ವರದಿ ಸಲ್ಲಿಸಿದೆ ಎಂದು ಮೂಲಗಳು ತಿಳಿಸಿವೆ.

ದೂರು ನೀಡಿದ್ದ ಸಂದೀಪ್ ಪಾಟೀಲ್ ಹೇಳಿಕೆಯಲ್ಲಿ ಸ್ಥಳ, ಸಮಯ, ಪ್ರಯಾಣ ಮಾರ್ಗ ಹಾಗೂ ಕರೆ ವಿವರಗಳಲ್ಲಿ ಗಂಭೀರ ವ್ಯತ್ಯಾಸಗಳು ಕಂಡುಬಂದಿವೆ ಎಂಬುದು ಎಸ್​​ಐಟಿ ತನಿಖೆಯಲ್ಲಿ ಬಹಿರಂಗವಾಗಿದೆ ಎನ್ನಲಾಗಿದೆ.

ಇದರ ಆಧಾರವಾಗಿ ಚೋರ್ಲಾ ಘಾಟ್‌ನಲ್ಲಿ ಯಾವುದೇ ದರೋಡೆ ನಡೆದಿಲ್ಲ ಎಂದು ಎಸ್‌ಐಟಿ ಸ್ಪಷ್ಟಪಡಿಸಿದೆ. ಹೀಗಾಗಿ ಸಾಕ್ಷ್ಯಗಳ ಕೊರತೆಯಿಂದ ಪ್ರಕರಣದಲ್ಲಿ ಬಂಧಿತರಾಗಿದ್ದ ಆರೋಪಿಗಳನ್ನು ನ್ಯಾಯಾಲಯ ಇಂದು ಬಿಡುಗಡೆ ಮಾಡುವ ಸಾಧ್ಯತೆ ಇದೆ. ಈ ಪ್ರಕರಣ ಕರ್ನಾಟಕ ಹಾಗೂ ಮಹಾರಾಷ್ಟ್ರ ಎರಡೂ ರಾಜ್ಯಗಳಲ್ಲಿ ದೊಡ್ಡ ಸಂಚಲನ ಮೂಡಿಸಿತ್ತು.

ಇದೀಗ ಸುಳ್ಳು ದೂರು ನೀಡಿದ ಆರೋಪದ ಮೇಲೆ ಸಂದೀಪ್ ಪಾಟೀಲ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ನಾಸಿಕ್ ಪೊಲೀಸರಿಂದ ಸಿದ್ಧತೆ ಆರಂಭವಾಗಿದೆ ಎಂದು ಮೂಲಗಳು ತಿಳಿಸಿವೆ.

ಏತನ್ಮಧ್ಯೆ, ಸಂದೀಪ್ ಪಾಟೀಲ್ ಅವರು ಬೆಳಗಾವಿ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಭಾನುವಾರ ಪತ್ರ ಬರೆದು ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ. ಮಹಾರಾಷ್ಟ್ರ ಎಸ್‌ಐಟಿ ಪಾರದರ್ಶಕ ತನಿಖೆ ನಡೆಸುತ್ತಿಲ್ಲ, ಪ್ರಕರಣಕ್ಕೆ ಸಂಬಂಧಿಸಿದ ಆಡಿಯೋ ದಾಖಲೆಗಳು ನನ್ನ ಬಳಿ ಇವೆ ಎಂದು ಅವರು ತಿಳಿಸಿದ್ದು, ಆ ದಾಖಲೆಗಳ ಆಧಾರದಲ್ಲಿ ಮರು ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.

ಏನಿದು 400 ಕೋಟಿ ರೂ. ದರೋಡೆ ಪ್ರಕರಣ?

ಬೆಳಗಾವಿಯ ಚೋರ್ಲಾ ಘಾಟ್ ಪ್ರದೇಶದಲ್ಲಿ 2025 ರ ಅಕ್ಟೋಬರ್ 25 ರಂದು 2 ಕಂಟೇನರ್‌ಗಳಲ್ಲಿದ್ದ ಸುಮಾರು 400 ಕೋಟಿ ರೂ. ನಗದು ಹಣವನ್ನು ದರೋಡೆ ಮಾಡಲಾಗಿತ್ತು ಎಂದು ಮಹಾರಾಷ್ಟ್ರದ ನಾಸಿಕ್ ಮೂಲದ ಉದ್ಯಮಿ ಸಂದೀಪ್ ದತ್ತಾ ಪಾಟೀಲ್ ಇತ್ತೀಚೆಗೆ ಮಹಾರಾಷ್ಟ್​ರ ಪೊಲೀಸರಿಗೆ ದೂರು ನೀಡಿದ್ದರು. ಅವರು ದೂರು ನೀಡಿದ ನಂತರ ಪ್ರಕರಣ ಬೆಳಕಿಗೆ ಬಂದಿದ್ದು ದೇಶದಾದ್ಯಂತ ಸಂಚಲನ ಮೂಡಿಸಿತ್ತು. ದೂರುದಾರರ ಪ್ರಕಾರ, ದರೋಡೆಯಾದ ಹಣವು ಗುಜರಾತ್ ಮೂಲದ ಬಿಲ್ಡರ್ ಕಿಶೋರ್ ಸವಲಾ ಸೇಠ್‌ ಅವರಿಗೆ ಸೇರಿದ್ದು, ಅದರಲ್ಲಿ ರದ್ದಾದ 2,000 ರೂ. ಮುಖಬೆಲೆಯ ನೋಟುಗಳೂ ಇದ್ದವು ಎನ್ನಲಾಗಿದೆ.

ಇದನ್ನೂ ಓದಿ: ಬೆಳಗಾವಿಯಲ್ಲಿ 400 ಕೋಟಿ ರೂ ದರೋಡೆ ಕೇಸ್​​ಗೆ ಟ್ವಿಸ್ಟ್​​​​​: SIT ವಿರುದ್ಧವೇ ಸ್ಫೋಟಕ ಆರೋಪ

ಆದರೆ ಇದೀಗ, ಅಂಥದ್ದೊಂದು ಪ್ರಕರಣ ನಡೆದಿರುವ ಸಾಧ್ಯತೆಯನ್ನೇ ಮಹಾರಾಷ್ಟ್ರ ಎಸ್​ಐಟಿ ಅಲ್ಲಗಳೆದಿದೆ. ಜತೆಗೆ, ವರದಿಯನ್ನೂ ಸಿದ್ಧಪಡಿಸಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸಹದೇವ್​ ಮಾನೆ

ಸಹದೇವ ಯಲ್ಲಪ್ಪ ಮಾನೆ. ಹುಟ್ಟಿದ್ದು ಧಾರವಾಡ ತಾಲೂಕಿನ ಗುಳೇದಕೊಪ್ಪ ಗ್ರಾಮ. ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಳೆದ 12 ವರ್ಷದಿಂದ ಟಿವಿ ಮಾಧ್ಯಮದಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. 2014ರಲ್ಲಿ ಬೀದರ್ ಜಿಲ್ಲೆಯಿಂದ ವೃತ್ತಿ ಜೀವನ ಪ್ರಾರಂಭ ಮಾಡಿ ಕಲಬುರಗಿ, ಹುಬ್ಬಳ್ಳಿಯಲ್ಲಿ ಕೆಲಸ ಮಾಡಿ ಸದ್ಯ ‘ಟಿವಿ9’ ಕನ್ನಡ ಸುದ್ದಿ ವಾಹಿನಿಯಲ್ಲಿ 9ವರ್ಷಗಳಿಂದ ಬೆಳಗಾವಿ ಜಿಲ್ಲೆಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಬೀದರ್ ಜಿಲ್ಲೆಯಲ್ಲಿ ಅತ್ಯುತ್ತಮ ಜಿಲ್ಲಾ ವರದಿಗಾರ ಪ್ರಶಸ್ತಿ ಪಡೆದಿದ್ದು, ಗಡಿ ಜಿಲ್ಲೆ ಬೆಳಗಾವಿಯಲ್ಲಿ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಕೂಡ ದೊರೆತಿದೆ. ರೈತರ ಸಮಸ್ಯೆಗಳತ್ತ ಬೆಳಕು ಚೆಲ್ಲುವ ವರದಿ ಸೇರಿ ಗಡಿ ಸಮಸ್ಯೆ, ಕ್ರೈಮ್, ಪ್ರವಾಹ ಪರಿಸ್ಥಿತಿ, ನೆರೆಯ ಮಹಾರಾಷ್ಟ್ರ, ಗೋವಾದಲ್ಲಿನ ಬೆಳವಣಿಗೆ ಕುರಿತು ವರದಿ ಮಾಡುತ್ತಿರುವುದು ವಿಶೇಷ.

Read More
Loading...
Unable to load recommendations.
Follow Us