ರೈತರ ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಕೊರತೆ: ಕೇಂದ್ರದತ್ತ ಬೊಟ್ಟು ಮಾಡಿದ ಸಚಿವ ಸತೀಶ್ ಜಾರಕಿಹೊಳಿ
ಸಂಪೂರ್ಣ ದಕ್ಷಿಣ ಭಾರತಕ್ಕೆ ಕೇಂದ್ರ ಸರ್ಕಾರ ಪೂರೈಸುತ್ತಿದ್ದ ವಿದ್ಯುತ್ ನಿಲ್ಲಿಸಿದೆ. ಎರಡು-ಮೂರು ದಿನಗಳಿಂದ ವಿದ್ಯುತ್ ಪೂರೈಕೆ ನಿಲ್ಲಿಸಿದ್ದು ಎಲ್ಲಿಯವರೆಗೆ ಅಂತ ಹೇಳಿಲ್ಲ. ಕೇಂದ್ರ ಸರ್ಕಾರದವರು ವಿದ್ಯುತ್ ಕೊಟ್ಟರೇ ಸರಿ ಆಗುತ್ತೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಬೆಳಗಾವಿ, ಅಕ್ಟೋಬರ್ 09: ಸಂಪೂರ್ಣ ದಕ್ಷಿಣ ಭಾರತಕ್ಕೆ ಕೇಂದ್ರ ಸರ್ಕಾರ ಪೂರೈಸುತ್ತಿದ್ದ ವಿದ್ಯುತ್ ನಿಲ್ಲಿಸಿದೆ. ಎರಡು-ಮೂರು ದಿನಗಳಿಂದ ವಿದ್ಯುತ್ ಪೂರೈಕೆ ನಿಲ್ಲಿಸಿದ್ದು ಎಲ್ಲಿಯವರೆಗೆ ಅಂತೂ ಹೇಳಿಲ್ಲ. ಕೇಂದ್ರ ಸರ್ಕಾರದವರು ವಿದ್ಯುತ್ ಕೊಟ್ಟರೇ ಸರಿ ಆಗುತ್ತೆ ಎಂದು ಸಚಿವ ಸತೀಶ್ ಜಾರಕಿಹೊಳಿ (satish jarkiholi) ಹೇಳಿದ್ದಾರೆ. ಜಿಲ್ಲೆಯ ಚಿಕ್ಕೋಡಿಯಲ್ಲಿ ಮಾಧ್ಯದವರೊಂದಿಗೆ ಮಾತನಾಡಿದ ಅವರು, ವಿದ್ಯುತ್ ಖರೀದಿ ಮಾಡಬೇಕೆಂದರೂ ಎಲ್ಲೂ ಲಭ್ಯತೆ ಇಲ್ಲ. ಕೇಂದ್ರ ಸರ್ಕಾರದವರು ಏಕಾಏಕಿ ವಿದ್ಯುತ್ ಪೂರೈಕೆ ಏಕೆ ಸ್ಥಗಿತಗೊಳಿಸಿದ್ದಾರೆ ಗೊತ್ತಿಲ್ಲ. ಇದರ ಬಗ್ಗೆ ಏಕೆ ಏನು ಅಂತಾ ಚರ್ಚೆ ಮಾಡುತ್ತಿದ್ದೇವೆ ಎಂದಿದ್ದಾರೆ.
ಕೇಂದ್ರ ಸರ್ಕಾರ ರಾಜಕಾರಣ ಮಾಡುತ್ತಿದೆಯಾ ಎಂದು ಮಾಧ್ಯಮಗಳ ಪ್ರಶ್ನೆಗೆ, ಈ ಬಗ್ಗೆ ಗೊತ್ತಿಲ್ಲ, ಅದರ ಬಗ್ಗೆ ಚರ್ಚೆ ಮಾಡುತ್ತೇವೆ. ರಾಜಕೀಯ ಅನಿಸಿದರೆ ಅದರ ಬಗ್ಗೆ ಪ್ರತಿಕ್ರಿಯೆ ನೀಡುತ್ತೇವೆ. ನಾವು ರಾಜ್ಯದಲ್ಲಿ ಏನು ಉತ್ಪಾದನೆ ಮಾಡುತ್ತಿದ್ದೇವೆ ಅದನ್ನ ಮಾತ್ರ ಕೊಡುತ್ತಿದ್ದೇವೆ.ಹಲವೆಡೆ ಜಲವಿದ್ಯುತ್ ಘಟಕ ಬಂದ್ ಇದೆ. ಕುಡತಿನಿ, ವಿಜಯಪುರ, ರಾಯಚೂರಲ್ಲಿ ವಿದ್ಯುತ್ ಘಟಕಗಳು ದುರಸ್ತಿ ಇವೆ ಎಂದರು.
ಶೀಘ್ರದಲ್ಲೇ ಚಿಕ್ಕೋಡಿಯಲ್ಲೂ ಪ್ರಗತಿ ಪರಿಶೀಲನಾ ಸಭೆ
ಈಗಾಗಲೇ ರಾಯಬಾಗ, ಸವದತ್ತಿ ತಾಲೂಕಿನಲ್ಲಿ ಪ್ರಗತಿ ಪರಿಶೀಲನಾ ಸಭೆ ಮಾಡಿದ್ದು, ಶೀಘ್ರದಲ್ಲೇ ಚಿಕ್ಕೋಡಿಯಲ್ಲೂ ಮಾಡಲಾಗುವುದು ಎಂದು ಶಾಸಕರ ಜೊತೆ ಮಾತನಾಡಿ ಕೆಡಿಪಿ ಸಭೆಗೆ ದಿನಾಂಕ ನಿಗದಿಪಡಿಸುವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ; 43 ಹೆಚ್ಚುವರಿ ಬರಪೀಡಿತ ತಾಲೂಕುಗಳನ್ನು ಘೋಷಿಸಿದ ರಾಜ್ಯ ಸರ್ಕಾರ
ಚಿಕ್ಕೋಡಿ ಉಪವಿಭಾಗಕ್ಕೆ ಬರ ಅಧ್ಯಯನ ತಂಡ ಭೇಟಿ ನೀಡದ ವಿಚಾರವಾಗಿ ಮಾತನಾಡಿದ ಅವರು, ಬರ ಪೀಡಿತ 194 ತಾಲೂಕುಗಳಿಗೂ ಹೋಗಲ್ಲ, ರ್ಯಾಂಡಮ್ ಆಗಿ ಪರಿಶೀಲನೆ ಮಾಡುತ್ತಾರೆ. ಕನಿಷ್ಠ 8ರಿಂದ 10 ಜಿಲ್ಲೆಗಳಿಗೆ ಬರ ಅಧ್ಯಯನ ತಂಡ ಭೇಟಿ ನೀಡಿದೆ. ಕೇಂದ್ರ ಬರ ಅಧ್ಯಯನ ತಂಡ ಬರದಿದ್ರೆ ಯಾವುದೇ ತಾರತಮ್ಯ ಆಗಲ್ಲ ಎಂದಿದ್ದಾರೆ.
ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ಮೇಲಿನ ಅಸಮಾಧಾನ ಮರೆತ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅದು ಮುಗಿದುಹೋದ ಕತೆ ಅಂದರು!
ಬರ ಪರಿಸ್ಥಿತಿ ಮನವರಿಕೆ ಮಾಡುವಲ್ಲಿ ಸರ್ಕಾರ ವಿಫಲ ಎಂಬ ಬಿಜೆಪಿ ನಾಯಕರ ಆರೋಪಕ್ಕೆ ಸಚಿವ ಸತೀಶ್ ಜಾರಕಿಹೊಳಿ ತಿರುಗೇಟು ನೀಡಿದ್ದು, ಬರ ಅಧ್ಯಯನ ತಂಡಕ್ಕೆ ಮನವರಿಕೆ ಮಾಡೋದಲ್ಲ, ಅವರಿಗೆ ಆಗಬೇಕು. ನಾವು ಉಪ ಸಮಿತಿಯಲ್ಲಿ ಹೇಳಿದ್ದೇವೆ, ಸಿಎಂ ಸಭೆ ಮಾಡಿ ಹೇಳಿದ್ದಾರೆ. ನಾವು ಹೇಳಿದರೆ ವರದಿ ಕೊಡಲ್ಲ, ವಸ್ತುಸ್ಥಿತಿಯಿದ್ದರೆ ಮಾತ್ರ ವರದಿ ಕೊಡುತ್ತಾರೆ ಎಂದು ಹೇಳಿದ್ದಾರೆ.
ಅದು ಅವರ ವೈಯಕ್ತಿಕ ವಿಚಾರ
ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ರಿಯಾಲಿಟಿ ಶೋ ಬಿಗ್ ಬಾಸ್ ಮನೆ ಎಂಟ್ರಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಅದು ಅವರ ವೈಯಕ್ತಿಕ, ಅವನೊಬ್ಬ ಟ್ಯೂಷನ್ ಹೇಳುತ್ತಾರೆ. ಅದು ಅವರ ವೃತ್ತಿ, ಅದಕ್ಕೂ ಇದಕ್ಕೂ ಏನೂ ಸಂಬಂಧ ಇಲ್ಲ. ಅವರದ್ದೇ ಆದ ವೃತ್ತಿ ಇರುತ್ತೆ, ಅದಕ್ಕೆ ನಾವು ಕಮೆಂಟ್ ಮಾಡಕ್ಕಾಗಲ್ಲ ಎಂದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.