ಬೆಳಗಾವಿ: 7 ವರ್ಷಗಳು ಕಳೆದರೂ ಉದ್ಘಾಟನೆ ಭಾಗ್ಯ ಕಾಣದ ತಾಯಿ, ಮಕ್ಕಳ ಆಸ್ಪತ್ರೆ; 1 ಆಸ್ಪತ್ರೆ ಕಟ್ಟಲು ಏಳು ವರ್ಷ ಬೇಕಾ
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಹೊರವಲಯದಲ್ಲಿ ಐದು ಎಕರೆ ವಿಶಾಲವಾದ ಪ್ರದೇಶದಲ್ಲಿ ಸುಸಜ್ಜಿತ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡ ನಿರ್ಮಾಣವಾಗಿದ್ದು, ವೈದ್ಯಕೀಯ ಉಪಕರಣಗಳು ಧೂಳು ತಿನ್ನುತ್ತಿದೆ. ಹೌದು, ಬರೊಬ್ಬರಿ ಕಟ್ಟಡ ಕಾಮಗಾರಿ ಆರಂಭಗೊಂಡು ಏಳು ವರ್ಷಗಳು ಕಳೆದರೂ ಇನ್ನೂ ಉದ್ಘಾಟನೆ ಭಾಗ್ಯ ಕಂಡಿಲ್ಲ.
ಬೆಳಗಾವಿ, ಆ.9: ಜಿಲ್ಲೆಯ ಚಿಕ್ಕೋಡಿ(Chikkodi) ಹೊರವಲಯದಲ್ಲಿ ಐದು ಎಕರೆ ವಿಶಾಲವಾದ ಪ್ರದೇಶದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ(Hospital)ಯ ಸುಸಜ್ಜಿತ ಕಟ್ಟಡ ನಿರ್ಮಾಣವಾಗಿದ್ದು, ವೈದ್ಯಕೀಯ ಉಪಕರಣಗಳು ಧೂಳು ತಿನ್ನುತ್ತಿದೆ. ಈಗಾಗಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಉತ್ತರ ಕರ್ನಾಟಕವೆಂದರೆ ನಿರ್ಲಕ್ಷ್ಯ ಎಂಬ ಭಾವನೆ ಈ ಭಾಗದ ಜನರಲ್ಲಿದೆ. ಹೌದು, ಇದಕ್ಕೆ ತಾಜಾ ಉದಾಹರಣೆ ಎಂಬಂತೆ ಚಿಕ್ಕೋಡಿಯಲ್ಲಿ ನಿರ್ಮಾಣವಾಗಿರುವ 100 ಹಾಸಿಗೆ ಸಾಮರ್ಥ್ಯದ ತಾಯಿ ಮತ್ತು ಮಕ್ಕಳ ಆಸ್ಪತ್ರೆ. ಬೆಳಗಾವಿ ಜಿಲ್ಲೆ ಚಿಕ್ಕೋಡಿ ಉಪವಿಭಾಗದ ಬಹುತೇಕ ತಾಲೂಕುಗಳು ಮಹಾರಾಷ್ಟ್ರದ ಗಡಿಯಲ್ಲಿವೆ. ಈ ಭಾಗದಲ್ಲಿ ಸೂಕ್ತ ಸರ್ಕಾರಿ ಆಸ್ಪತ್ರೆಗಳಿಲ್ಲದೇ ಜನರು ಮಹಾರಾಷ್ಟ್ರದ ಮಿರಜ್, ಸಾಂಗಲಿಯ ಖಾಸಗಿ ಆಸ್ಪತ್ರೆಗಳ ಮೊರೆ ಹೋಗುತ್ತಾರೆ.
ಇದನ್ನ ತಪ್ಪಿಸುವ ನಿಟ್ಟಿನಲ್ಲಿ ಚಿಕ್ಕೋಡಿಯಲ್ಲಿ ಸುಸಜ್ಜಿತ ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಾಣ ಮಾಡುವಂತೆ ಸಾಕಷ್ಟು ಆಗ್ರಹ ಕೇಳಿ ಬಂದಿತ್ತು. ಎಂಎಲ್‌ಸಿ ಪ್ರಕಾಶ್ ಹುಕ್ಕೇರಿ ಸತತ ಪ್ರಯತ್ನದಿಂದ ನೂರು ಬೆಡ್ಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಚಿಕ್ಕೋಡಿಗೆ ಮಂಜೂರು ಮಾಡಿಸಿಕೊಂಡು ಬಂದಿದ್ದರು. ಖುದ್ದು ಆರೋಗ್ಯ ಇಲಾಖೆಯ ಅಧಿಕಾರಿಗಳೇ ಹೇಳುವ ಪ್ರಕಾರ 2015ರಲ್ಲಿ ಕಟ್ಟಡ ಕಾಮಗಾರಿ ಅರಂಭಗೊಂಡಿದೆ. ಅಂದರೆ, ಬರೋಬ್ಬರಿ ಕಟ್ಟಡ ಕಾಮಗಾರಿ ಆರಂಭಗೊಂಡು ಏಳು ವರ್ಷಗಳು ಕಳೆದರೂ ಇನ್ನೂ ಉದ್ಘಾಟನೆ ಭಾಗ್ಯ ಕಂಡಿಲ್ಲ.
ಇದನ್ನೂ ಓದಿ:My India My Life Goals: ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು ಮುಖ್ಯ
ಚಿಕ್ಕೋಡಿಯಲ್ಲಿ ಇರುವಂತಹ ಸಾರ್ವಜನಿಕ ಆಸ್ಪತ್ರೆಯಂತೂ ಶಿಥಿಲಾವಸ್ಥೆಗೆ ತಲುಪಿದ್ದು, ಮಳೆಗಾಲದಲ್ಲಿ ಆಸ್ಪತ್ರೆಯಲ್ಲಿ ಬಕೆಟ್, ಬುಟ್ಟಿಗಳನ್ನು ಇಡುವಂತಹ ಪರಿಸ್ಥಿತಿ ಇದೆ. ಸದ್ಯ ಏಳು ವರ್ಷಗಳಿಂದ ವಿಳಂಬ ಕಾಮಗಾರಿಯಿಂದ ಈಗ ಶೇಕಡ 90ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಆದಷ್ಟು ಬೇಗ ಆಸ್ಪತ್ರೆ ಲೋಕಾರ್ಪಣೆ ಮಾಡಬೇಕು. ಇಲ್ಲವಾದ್ರೆ, ತಾಲೂಕು ಆರೋಗ್ಯಾಧಿಕಾರಿ, ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದ ಜಿಲ್ಲಾ ಸಂಚಾರ ಹಾಗೂ ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ ಮುಖಂಡ ಸಂಜು ಬಡಿಗೇರ ಎಚ್ಚರಿಕೆ ನೀಡಿದ್ದಾರೆ.
ಇನ್ನು ಕಟ್ಟಡ ಕಾಮಗಾರಿ ವಿಳಂಬವಾಗಿದ್ದಕ್ಕೆ ಖುದ್ದು ಎಂಎಲ್‌ಸಿ ಪ್ರಕಾಶ್ ಹುಕ್ಕೇರಿಯವರೇ ಬಹಿರಂಗ ವೇದಿಕೆಗಳಲ್ಲಿ ಸಾಕಷ್ಟು ಬಾರಿ ಅಸಮಾಧಾನ ಹೊರಹಾಕಿದ್ದಾರೆ. ಕಟ್ಟಡ ಕಾಮಗಾರಿ ಜವಾಬ್ದಾರಿ ನೋಡಿಕೊಳ್ಳುವ ಕರ್ನಾಟಕ ಆರೋಗ್ಯ ವ್ಯವಸ್ಥೆ ಅಭಿವೃದ್ಧಿ ಮತ್ತು ಸುಧಾರಣೆ ಯೋಜನೆ ಅಧಿಕಾರಿಗಳು 20ಕ್ಕೂ ಹೆಚ್ಚು ಬಾರಿ ಗುತ್ತಿಗೆದಾರನಿಗೆ ನೋಟಿಸ್ ನೀಡಿದ್ದರೂ, ಯಾವುದೇ ಪ್ರಯೋಜನ ಆಗಿಲ್ಲವಂತೆ. ಇನ್ನು ಈ ಕುರಿತು ಮಾತನಾಡಿರುವ ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಸಂತೋಷ್ ಕೊಣ್ಣೂರಿ, ‘ಸಾರ್ವಜನಿಕ ಆಸ್ಪತ್ರೆ ಚಿಕ್ಕೋಡಿಯಿಂದ ಹೊಸದಾಗಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡ ಕಾಮಗಾರಿ 2015ರಿಂದ ಆರಂಭವಾಗಿದ್ದು, ಈವರೆಗೂ ಪೂರ್ಣಗೊಂಡಿಲ್ಲ. ಕೋವಿಡ್ ಹಿನ್ನೆಲೆ ವಿಳಂಬವಾಗಿತ್ತು. ಬಳಿಕ ಮತ್ತೆ ಕಟ್ಟಡ ಕಾಮಗಾರಿ ಶುರುವಾಯಿತು. ಇನ್ನೊಂದು ತಿಂಗಳಲ್ಲಿ ಆಸ್ಪತ್ರೆ ಉದ್ಘಾಟನೆ ಮಾಡುವ ಚಿಂತನೆ ಇದೆ ಎಂದರು.
ಇದನ್ನೂ ಓದಿ:ದೆಹಲಿಯ ಏಮ್ಸ್ ಆಸ್ಪತ್ರೆಯ ಎಂಡೋಸ್ಕೋಪಿ ವಾರ್ಡ್ನಲ್ಲಿ ಕಾಣಿಸಿಕೊಂಡ ಬೆಂಕಿ, ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಆಗಮನ
ಅದೇನೇ ಇರಲಿ ಬೆಳಗಾವಿ ಜಿಲ್ಲೆಯ ಗಡಿಭಾಗದಲ್ಲಿ ಜನರಿಗೆ ಸೂಕ್ತ ವೈದ್ಯಕೀಯ ಸೌಲಭ್ಯ ಸಿಗದೇ ನೆರೆಯ ಮಹಾರಾಷ್ಟ್ರದ ಮಿರಜ್ ಸಾಂಗಲಿಗೆ ಹೋಗಬೇಕಾದ ಸ್ಥಿತಿ ಇದೆ. ಇನ್ನಾದರೂ ಸರ್ಕಾರ ಎಚ್ಚೆತ್ತುಕೊಂಡು ಶೀಘ್ರವೇ ಈ ಆಸ್ಪತ್ರೆಯನ್ನು ಸಾರ್ವಜನಿಕರ ಅನುಕೂಲಕ್ಕೆ ಲೋಕಾರ್ಪಣೆ ಮಾಡಲಿ ಎಂಬುದು ಈ ಭಾಗದ ಜನರ ಹಕ್ಕೊತ್ತಾಯವಾಗಿದೆ.
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ