ಅಳಿದುಳಿದ ಮಗನ ಮೊಳೆಗಳನ್ನ ಕೈಚೀಲದಲ್ಲಿ ತುಂಬಿ ತಂದೆ ಕೈಗೆಕೊಟ್ಟಿದ್ದಕ್ಕೆ ಕುಟುಂಬಸ್ಥರು ಆಕ್ರೋಶ

| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 08, 2024 | 8:17 PM

ಬೆಳಗಾವಿ ತಾಲೂಕಿನ ನಾವಗೆ ಬಳಿಯಲ್ಲಿ ಕಾರ್ಖಾನೆಗೆ ಬಿದ್ದ ಬೆಂಕಿ ಮೂರು ದಿನ ಕಳೆದರೂ ಇನ್ನೂ ಆರಿಲ್ಲ. ಮೃತನ ಮೂಳೆಗಳನ್ನ ಬ್ಯಾಗ್​ನಲ್ಲಿ ಹಾಕಿ ಕೊಟ್ಟಿದ್ದಕ್ಕೆ ಹೆತ್ತವರ ಕುಟುಂಬ ಅಸಮಾಧಾನ ಹೊರ ಹಾಕುತ್ತಿದ್ದರೆ, ಇತ್ತ ಮನೆಯಲ್ಲಿ ನೀರವ ಮೌನ ಆವರಿಸಿದೆ. ಚೀಲದಲ್ಲಿ ಮೂಳೆ ಕೊಟ್ಟ ಬಗ್ಗೆ ಜಿಲ್ಲಾಧಿಕಾರಿ ಹೇಳಿದ್ದೇನು? ಕಾರ್ಖಾನೆ ಮಾಲೀಕರ ವಿರುದ್ಧ ಕುಟುಂಬಸ್ಥರು ಆಕ್ರೋಶ ಹೊರ ಹಾಕಿದ್ಯಾಕೆ ಅಂತೀರಾ? ಈ ಸ್ಟೋರಿ ಓದಿ.

ಬೆಳಗಾವಿ, ಆ.08: ಬೆಳಗಾವಿ(Belagavi)ಯ ನಾವಗೆಯಲ್ಲಿ ಟೇಪ್ ತಯಾರಿಕಾ ಕಾರ್ಖಾನೆಯಲ್ಲಿ ನಡೆದ ಅಗ್ನಿ ದುರಂತದಲ್ಲಿ ಮಾರ್ಕಂಡೇಯ ನಗರದ 19 ವರ್ಷದ ಯಲ್ಲಪ್ಪ ಗುಂಡ್ಯಾಗೋಳ ಸಜೀವ ದಹನವಾಗಿದ್ದ. ಮನೆಯ ಜವಾಬ್ದಾರಿಯನ್ನ ತನ್ನ ಮೇಲೆ ಹೊತ್ತುಕೊಂಡು ಅಕ್ಕನ ಮದುವೆ ಮಾಡಿ ಇನ್ನಿಬ್ಬರ ಸಹೋದರಿಯರ‌ ಓದಿನ ಜವಾಬ್ದಾರಿಯನ್ನೂ ಸಹ ತಾನೇ ತೆಗೆದುಕೊಂಡು ಕೆಲಸಕ್ಕೆ ‌ಸೇರಿದ್ದ. ಮಂಗಳವಾರ ಸಂಜೆ ಶಾರ್ಟ್ ಸರ್ಕ್ಯೂಟ್​ನಿಂದ ಹೊತ್ತಿಕೊಂಡ ಬೆಂಕಿಯಲ್ಲಿ ಸಜೀವವಾಗಿ ಯಲ್ಲಪ್ಪ ಬೆಂದು ಹೋಗಿದ್ದ. ಬೆಂಕಿಯ ಕೆನ್ನಾಲಿಗೆಗೆ ಯಲ್ಲಪ್ಪನ ದೇಹ ಸಂಪೂರ್ಣ ಸುಟ್ಟು ಕರಕಲಾಗಿ ಕೇವಲ ಮೂಳೆಗಳು ಮಾತ್ರ ಉಳಿದ್ದಿದ್ದವು. ಲಿಫ್ಟ್ ನ ಒಳಭಾಗದಲ್ಲಿ ಸಿಲುಕಿದ್ದ ಯಲ್ಲಪ್ಪ ಅಕ್ಷರಶಃ ಇನ್ನಿಲ್ಲದ ಸ್ಥಿತಿ ತಲುಪಿದ್ದ. ಕಾರ್ಯಾಚರಣೆ ನಡೆಸಿ ಶವದ ಅವಶೇಷ ಹೊರ ತೆಗೆದ ಅಧಿಕಾರಿಗಳು ಮಡಿಕೆಯಲ್ಲಿ ಹಾಕಿ ಯಲ್ಲಪ್ಪನ ಮೃತದೇಹದ ಅವಶೇಷಗಳನ್ನು ನೀಡಿದ್ದರು. ಸದ್ಯ ಈ ವಿಚಾರ ಜಿಲ್ಲೆ ಹಾಗೂ ಸಮಾಜಿಕ ಜಾಲತಾಣಗಳಲ್ಲಿ ಚರ್ಚಾ ವಿಷಯವಾಗಿದ್ದು, ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಯಲ್ಲಪ್ಪನ ತಂದೆ ಜಿಲ್ಲಾಡಳಿತ ಹಾಗೂ ಕಾರ್ಖಾನೆ ಮೇಲೆ ಅಸಮಾಧಾನ ಹೊರ ಹಾಕಿದ್ದಾರೆ.

ಇನ್ನು ಸತತ 16 ಗಂಟೆಗಳ ನಿರಂತರ‌ ಕಾರ್ಯಾಚರಣೆಯ ನಂತರ ಯಲ್ಲಪ್ಪನಿದ್ದ ಲಿಫ್ಟ್​ನ ಜೆಸಿಬಿ ಬಳಸಿ ಪತ್ತೆಹಚ್ಚಲಾಯಿತು. ನಂತರ ಜೆಸಿಬಿಯ ಸಹಾಯದಿಂದಲೇ ಲಿಫ್ಟ್ ಓಪನ್ ಮಾಡಲಾಗಿತ್ತು. ಬಳಿಕ ಮಡಿಕೆಯಲ್ಲಿ ಹಾಕಿ ಅವಶೇಷಗಳನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿತ್ತು. ಈ ಕುರಿತು ಜಿಲ್ಲಾಧಿಕಾರಿ ಮೊಹ್ಮದ್ ರೋಷನ್ ಸಹ ಪ್ರತಿಕ್ರಿಯೇ ನೀಡಿದ್ದು, ‘ನಾವು ಚೀಲದಲ್ಲಿ ಹಾಕಿ ಅವಶೇಷಗಳನ್ನು‌ ನೀಡಿಲ್ಲ. ಬದಲಾಗಿ ಮಣ್ಣಿನ ಮಡಿಕೆಯಲ್ಲಿ ಅವಶೇಷ ಹಾಕಿ ಕೊಡಲಾಗಿತ್ತು. ಮಳೆಯಾಗುತ್ತಿದ್ದರಿಂದ ಮೃತ ಯಲ್ಲಪ್ಪನ ಕುಟುಂಬಸ್ಥರು ಕೈ ಚೀಲದಲ್ಲಿ ಮಡಿಕೆಯನ್ನು ಹಾಕಿ ತೆಗೆದುಕೊಂಡು ಹೋಗಿದ್ದಾರೆ ಎಂದಿದ್ದಾರೆ.

ಇದನ್ನೂ ಓದಿ:ಬೆಳಗಾವಿ ಕಾರ್ಖಾನೆ ಅಗ್ನಿ ದುರಂತದಲ್ಲಿ 152 ಜನ ಗ್ರೇಟ್ ಎಸ್ಕೇಪ್: ಆಗಿದ್ದೇನು? ಕಾರ್ಯಾಚರಣೆ ಹೇಗಿತ್ತು ಗೊತ್ತಾ?

ಘಟನೆ ಸಂಬಂಧ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಕಾರ್ಖಾನೆ ಮಾಲೀಕರಾದ ಅನಿಷ್, ಸುನೀಶ್ ಮೈತ್ರಾನಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಕಾರ್ಖಾನೆಯಲ್ಲಿ ಎನಾದ್ರು ಲೋಪದೋಷ ಇತ್ತಾ ಎಂಬ ಬಗ್ಗೆ ತನಿಖೆ ನಡೆಯಬೇಕಿದೆ. ಅಗ್ನಿ ಅವಘಡ ತಡೆಯಲು ಎನಾದರೂ ಮುನ್ನೆಚ್ಚರಿಕೆ ವಹಿಸಿದ್ದಾರೆ ಎಂಬ ಸೂಕ್ತ ತನಿಖೆ ಆಗಬೇಕಿದೆ. ಆದ್ರೆ ಮಗನ ಕಳೆದುಕೊಂಡ ಕುಟುಂಬಕ್ಕೆ ಮೀಡಿಯಬೇಕಿದ್ದವರೇ ಮಾಡಿದ ರೀತಿ ಎಲ್ಲರ ಮನಕಲಕುವಂತಿದ್ದು ದುರ್ದೈವದ ಸಂಗತಿ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ