ಸುಟ್ಟು ಕರಕಲಾದ ಮೃತದೇಹವನ್ನು ಕೈಚೀಲದಲ್ಲಿ ಕೊಟ್ಟರು; ಬೆಳಗಾವಿ ಜಿಲ್ಲಾಡಳಿತದ ವಿರುದ್ಧ ಭಾರೀ ಆಕ್ರೋಶ
ಬೆಳಗಾವಿಯ ಸ್ನೇಹಂ ಟೇಪ್ ಮ್ಯಾನಿಫ್ಯಾಕ್ಚರಿಂಗ್ ಕಾರ್ಖಾನೆ ಅಗ್ನಿ ದುರಂತದಲ್ಲಿ ಸುಟ್ಟು ಕರಕಲಾದ ಯಲ್ಲಪ್ಪ ಸಣ್ಣಗೌಡ ಗುಂಡ್ಯಾಗೋಳ ಅವರ ಮೂಳೆಗಳನ್ನು ಅಧಿಕಾರಿಗಳು ಕೈಚೀಲದಲ್ಲಿ ಹಾಕಿ ತಂದೆಗೆ ಕೊಟ್ಟಿದ್ದಾರೆ. ಸದ್ಯ ಈ ಸಂಬಂಧ ಬೆಳಗಾವಿ ಜಿಲ್ಲಾಡಳಿತದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಬೆಳಗಾವಿ, ಆಗಸ್ಟ್.08: ಬೆಳಗಾವಿಯ ಸ್ನೇಹಂ ಟೇಪ್ ಮ್ಯಾನಿಫ್ಯಾಕ್ಚರಿಂಗ್ ಕಾರ್ಖಾನೆಗೆ ಬೆಂಕಿ ಬಿದ್ದು ದೊಡ್ಡ ಅನಾಹುತ ಸಂಭವಿಸಿದೆ. ಘಟನೆಯಲ್ಲಿ ಓರ್ವ ಸಜೀವ ದಹನವಾಗಿದ್ದು 16 ಗಂಟೆಗಳ ಕಾರ್ಯಾಚರಣೆ ಬಳಿಕ ಮೃತನ ಮೂಳೆಗಳು ಸಿಕ್ಕಿವೆ. ಆದರೆ ಮೃತಪಟ್ಟ (Death) ಕಾರ್ಮಿಕ ಯಲ್ಲಪ್ಪ ಸಣ್ಣಗೌಡ ಗುಂಡ್ಯಾಗೋಳ (19) ಅವರ ಮೃತದೇಹದ ಅವಶೇಷಗಳನ್ನು ಅಧಿಕಾರಿಗಳು ಕೈಚೀಲದಲ್ಲಿ ಹಾಕಿ ತಂದೆ ಸಣ್ಣಗೌಡ ಅವರ ಕೈಗೆ ಕೊಟ್ಟಿರೋದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ಮನೆಯ ನಿರ್ವಹಣೆ ಜವಾಬ್ದಾರಿ ಹೊತ್ತು ಕಾರ್ಖಾನೆಗೆ ಕೆಲಸ ಸೇರಿದ್ದ ಮಗ ಕಾರ್ಖಾನೆಗೆ ಬಿದ್ದ ಅಗ್ನಿ ದುರಂತದಲ್ಲಿ ಮೃತಪಟ್ಟಿದ್ದಾನೆ. ಮನೆ ಮಗ ಸುಟ್ಟು ಕರಕಲಾಗಿ ಮೂಳೆಗಳು ಮಾತ್ರ ಸಿಕ್ಕಿದ್ದು ಮೂಳೆಗಳನ್ನು ಕೈ ಚೀಲದಲ್ಲಿ ಹಾಕಿ ತಂದೆಯ ಕೈಗೆ ಕೊಡಲಾಗಿದೆ. ಮಗನ ಸಾವಿನ ನೋವಿನಲ್ಲಿರುವ ತಂದೆ ಮೂಳೆಗಳನ್ನು ಕೈಯಲ್ಲಿ ಹಿಡಿದು ಮತ್ತಷ್ಟು ರೋಧಿಸಿದ್ದಾರೆ. ಸದ್ಯ ಕೈ ಚೀಲದಲ್ಲಿ ಮೃತನ ಮೂಳೆಗಳನ್ನು ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ನೆಟ್ಟಿಗರು ಚೀಮಾರಿ ಹಾಕಿದ್ದಾರೆ.
ಈ ರೀತಿ ಕೈ ಚೀಲದಲ್ಲಿ ಮೂಳೆಗಳನ್ನು ಹಾಕಿ ಕೊಡುವುದು ಎಷ್ಟು ಸರಿ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಮೃತ ಯುವಕನಿಗೆ ಕನಿಷ್ಠ ಮಟ್ಟದ ಗೌರವ ನೀಡದೆ ಮೃತದೇಹ ಸಾಗಾಣೆಗೆ ವಾಹನ ವ್ಯವಸ್ಥೆ ಮಾಡದೆ, ಈ ರೀತಿ ತರಕಾರಿ ತರುವ ಚೀಲದಲ್ಲಿ ನೀಡುವುದು ಎಷ್ಟು ಸರಿ ಎಂದು ಸಾರ್ವಜನಿಕರು ಕೆಂಡಕಾರಿದ್ದಾರೆ.
ಇದನ್ನೂ ಓದಿ: ಬೆಳಗಾವಿ ಕಾರ್ಖಾನೆ ಅಗ್ನಿ ದುರಂತದಲ್ಲಿ 152 ಜನ ಗ್ರೇಟ್ ಎಸ್ಕೇಪ್: ಆಗಿದ್ದೇನು? ಕಾರ್ಯಾಚರಣೆ ಹೇಗಿತ್ತು ಗೊತ್ತಾ?
ಬೆಳಗಾವಿ ಜಿಲ್ಲೆಯ ನಾವಗೆ ಗ್ರಾಮದ ಹೊರ ವಲಯದಲ್ಲಿ ಇರೋ ಸ್ನೇಹಂ ಹೊತ್ತಿ ಉರಿದು ಹೋಗಿದ್ದು, ಕೋಟ್ಯಾಂತರು ನಷ್ಟ ಸಂಭವಿಸಿದೆ. ಅಷ್ಟೇ ಅಲ್ಲದೇ ಮಾರ್ಕಂಡಯ ನಗರ ನಿವಾಸಿಯಾಗಿದ್ದ ಯಲ್ಲಪ್ಪ ಗುಂಡ್ಯಾಗೋಳ(19) ಬೆಂಕಿಯಲ್ಲಿ ಬೆಂದು ಜೀವ ಕಳೆದುಕೊಂಡಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ಮನೆ ನಿರ್ವಹಣೆಗಾಗಿ ಯಲ್ಲಪ್ಪ ಕೆಲಸಕ್ಕೆ ಸೇರಿದ್ದ. ಸಂಜೆ 7 ಗಂಟೆಯ ಸಮಯದಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಕಾರ್ಖಾನೆಗೆ ಬೆಂಕಿ ಹೊತ್ತಿತ್ತು. ಬೆಂಕಿ ಕೆನ್ನಾಲಿಗೆ ತೀವ್ರಗೊಂಡು ಇಡೀ ಕಾರ್ಖಾನೆಯನ್ನು ವ್ಯಾಪಿಸಿತ್ತು. ಇಡೀ ಜಿಲ್ಲಾಡಳಿತವೇ ಬೆಂಕಿ ಕೆನ್ನಾಲಿಗೆ ನಂದಿಸಲು ಶ್ರಮ ವಹಸಿತ್ತು. ಇಡೀ ರಾತ್ರಿ 8 ಅಗ್ನಿ ಶಾಮಕ ವಾಹನಗಳು, ಖಾಸಗಿ ನೀರಿನ ಟ್ಯಾಂಕರ್ ಗಳು ಶ್ರಮಿಸಿದ್ದವು.
ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಸಹ ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದರು. ಸತತ 16 ಗಂಟೆಯ ಕಾರ್ಯಾಚರಣೆಯ ಬಳಿಕ ಯಲ್ಲಪ್ಪ ಗುಂಡ್ಯಾಗೋಳ ಇರೋ ಸ್ಥಳವನ್ನು ಅಧಿಕಾರಿಗಳು ತಲುಪಿದ್ದರು. ಜೆಸಿಬಿ ಮೂಲಕ ಗೋಡೆ ಹೊಡೆದು ಸುಟ್ಟು ಕರಕಲಾಗಿದ್ದ ಯಲಪ್ಪನ ದೇಹದ ಮೂಳೆಗಳನ್ನು ಹೊರ ತೆಗೆದರು. ಬಳಿಕ ಕುಟುಂಬಸ್ಥರು, ತಹಶಿಲ್ದಾರ, ಡಿಎಚ್ಒ ಸ್ಥಳ ಪಂಚನಾಮೆ ಮಾಡಿ ಮೂಳೆಯೊಂದನ್ನ ಡಿಎನ್ಎ ಟೆಸ್ಟ್ ಗೆ ಎಫ್ ಎಸ್ ಎಲ್ ತಂಡ ರವಾನೆ ಮಾಡಿತು. ಅಳಿದೂಳಿದ ಮೂಳೆಗಳನ್ನ ಕುಟುಂಬಸ್ಥರಿಗೆ ಚೀಲದಲ್ಲಿ ನೀಡ್ತಿದ್ದಂತೆ ಆಕ್ರಂದನ ಮುಗಿಲು ಮುಟ್ಟಿತು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ