ಸದಾ ಒಂದಿಲ್ಲೊಂದು ವಿವಾದಗಳ ಸುಳಿಗೆ ಸಿಲುಕುವ ಬೆಳಗಾವಿ ಮಹಾನಗರ ಪಾಲಿಕೆ (Belagavi City Corporation) ಮತ್ತೆ ಸುದ್ದಿಯಲ್ಲಿದೆ. ಈ ಬಾರಿ ಪಾಲಿಕೆಯಲ್ಲಿನ ಮಹತ್ವದ ಲ್ಯಾಪ್ ಟಾಪ್ ಗಳೇ ಕಳ್ಳತನವಾಗಿ ಸುದ್ದಿಯಾಗಿದೆ. ರಜಾ ದಿನಗಳನ್ನೇ ಟಾರ್ಗೆಟ್ ಮಾಡಿಕೊಂಡ ಖದೀಮರು ಕಚೇರಿಗೆ ನುಗ್ಗಿ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ (Thieves on duty on a holiday). ಹಲವು ಮಹತ್ವದ ದಾಖಲೆಗಳ ಸಂಗ್ರಹವಿದ್ದ ಲ್ಯಾಪ್‌ಟಾಪ್ ( laptops) ಎಗರಿಸಿಕೊಂಡು ಹೋಗಿದ್ದಾರೆ. ಹಾಗಾದರೆ, ಬೆಳಗಾವಿ ಮಹಾನಗರ ಪಾಲಿಕೆ ಲ್ಯಾಪ್‌ಟಾಪ್ ನಲ್ಲಿ ಏನೆಲ್ಲ ದಾಖಲೆಗಳು ಇದ್ದವು? ಪಾಲಿಕೆ ಆಯುಕ್ತರು ಬದಲಾಗ್ತಿದ್ದಂತೆ ಲ್ಯಾಪ್ ಟಾಪ್ ಕಳ್ಳತನ ಹಲವು ಅನುಮಾನಕ್ಕೆ ಎಡೆ ಮಾಡಿಕೊಡ್ತಿರೋದ್ಯಾಕೆ ಅಂತೀರಾ ಈ ಸ್ಟೋರಿ…
ಹೌದು, ಬೆಳಗಾವಿಯ ಬಸವೇಶ್ವರ ವೃತ್ತದಲ್ಲಿರುವ ಪಾಲಿಕೆಯ ದಕ್ಷಿಣ ವಲಯದ ಕಂದಾಯ ಕಚೇರಿಯಲ್ಲಿದ್ದ ಲ್ಯಾಪ್‌ಟಾಪ್ ಕಳ್ಳತನವಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಕಿಟಕಿ, ಗಾಜು ಒಡೆದು, ಬಾಗಿಲು ಮುರಿದು ಒಳಗೆ ನುಗ್ಗಿ ಲ್ಯಾಪ್‌ಟಾಪ್ ಎಗರಿಸಿ ಕಳ್ಳರು ಪರಾರಿಯಾಗಿದ್ದಾರೆ. ಅಲ್ಲದೇ ಇನ್ನೂ ಏನೇನು ಕದ್ದಿದ್ದಾರೆ ಎಂಬುದು ಪೊಲೀಸರ ತನಿಖೆಯಿಂದ ಗೊತ್ತಾಗಬೇಕಿದೆ. ಸದ್ಯ ಆಸ್ತಿ ಮಾಲೀಕತ್ವದ ದಾಖಲಾತಿ, ಆಸ್ತಿ ಮಾಲೀಕರ ಗುರುತಿನ ಚೀಟಿ, ತೆರಿಗೆ ಚೀಟಿ, ಕಟ್ಟಡ ಪರವಾನಗಿ ಪತ್ರ, ಹೀಗೆ 26 ವಾರ್ಡ್‌ಗಳ ನಿವಾಸಿಗಳ ದಾಖಲೆಗಳ ಸಂಗ್ರಹವಿದ್ದ ನಾಲ್ಕು ಲ್ಯಾಪ್‌ಟಾಪ್ ಎಗರಿಸಿ ಪರಾರಿಯಾಗಿದ್ದಾರೆ.
Also Read: ಹುಬ್ಬಳ್ಳಿ-ಧಾರವಾಡ ಮಂದಿ ಪಾಲಿಕೆಗೆ ಅತಿ ಹೆಚ್ಚು ತೆರಿಗೆ ಕಟ್ಟಿ, ದಾಖಲೆ ಮಾಡಿದ್ದಾರೆ! ಏನಿದರ ಲೆಕ್ಕಾಚಾರ?
ಈ ಕುರಿತು ಪ್ರತಿಕ್ರಿಯೆ ನೀಡಿದ ಮಹಾನಗರ ಪಾಲಿಕೆ ಆಯುಕ್ತ ಪಿ.ಎನ್.ಲೋಕೆಶನ್, ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ನಾನು ಕೂಡ ಸ್ಥಳಕ್ಕೆ ಭೇಟಿ ನೀಡಿ, ಏನೆಲ್ಲಾ ಮಹತ್ವದ ದಾಖಲೆಗಳು ಕಳ್ಳತನ ಆಗಿವೆ ಪರಿಶೀಲಿಸುತ್ತೇವೆ. ಪೊಲೀಸರು ತನಿಖೆ ನಡೆಸಲಿದ್ದು, ನಮ್ಮ ಮೂಲಗಳಿಂದಲೂ ವಿಚಾರಣೆ ನಡೆಸುತ್ತೇವೆ ಎಂದು ತಿಳಿಸಿದ್ದಾರೆ.
ಇನ್ನು ನಿನ್ನೆ ತಡರಾತ್ರಿ ಕಚೇರಿಗೆ ನುಗ್ಗಿದ ಖದೀಮರು ಕಿಟಕಿ ಗಾಜು ಒಡೆದು ಒಳನುಗ್ಗಿ ಆಫೀಸ್ ನಲ್ಲಿದ್ದ ನಾಲ್ಕು ಲ್ಯಾಪ್‌ಟಾಪ್ ಕಳ್ಳತನ ಮಾಡಿದ್ದಾರೆ. ಹಾಗಾದರೆ ಅವರದು ಕೇವಲ ಲ್ಯಾಪ್‌ಟಾಪ್ ಕಳ್ಳತನ ಮಾಡುವ ಉದ್ದೇಶವಾಗಿತ್ತಾ? ಅದರಲ್ಲಿ ಇಲಾಖೆಗೆ ಸಂಬಂಧಿಸಿದ ಯಾವೆಲ್ಲ ಮಹತ್ವದ ದಾಖಲೆಗಳಿದ್ದವು ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮತ್ತೊಂದೆಡೆ ಬೆಳಗಾವಿ ಮಹಾನಗರ ಪಾಲಿಕೆಗೆ ನೂತನ ಆಯುಕ್ತ ಅಧಿಕಾರ ವಹಿಸಿಕೊಂಡ ಎರಡೇ ದಿನಕ್ಕೆ ಪ್ರಮುಖ ದಾಖಲೆಗಳ ಸಂಗ್ರಹವಿದ್ದ ಲ್ಯಾಪ್‌ಟಾಪ್‌ಗಳ ಕಳ್ಳತನ ಆಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಶುಕ್ರವಾರವಷ್ಟೇ ನೂತನ ಕಮೀಷನರ್ ಆಗಿ ಪಿ.ಎನ್ ಲೋಕೇಶ್ ಅಧಿಕಾರ ವಹಿಸಿಕೊಂಡಿದ್ದರು. ಸ್ಥಳಕ್ಕೆ ಟಿಳಕವಾಡಿ ಠಾಣೆ ಪೊಲೀಸರು ಹಾಗೂ ಶ್ವಾನದಳ ಸಿಬ್ಬಂದಿಗಳು ಭೇಟಿ, ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಪಾಲಿಕೆ ಕಂದಾಯ ಅಧಿಕಾರಿ ಡಿ.ಜಿ. ಕೋರಿ ಪ್ರತಿಕ್ರಿಯೆ ನೀಡಿದ್ದು ನಿನ್ನೆ ರಜೆ ಇತ್ತು, ಇಂದು ಬೆಳಿಗ್ಗೆ 9.15ಕ್ಕೆ ಕಚೇರಿಗೆ ಬಂದಾಗ ಕಳ್ಳತನ ಆಗಿರೋದು ಗೊತ್ತಾಗಿದೆ. ಏನು ಕಳ್ಳತನ ಆಗಿದೆ ಅನ್ನೋದರ ಮಾಹಿತಿ ಇಲ್ಲ. ಪೊಲೀಸರಿಗೆ ದೂರು ನೀಡಲಾಗಿದ್ದು ಪೊಲೀಸರು ತನಿಖೆ ಆರಂಭಿಸಿದ್ದಾರೆ ಅಂತಾ ಹೇಳಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ