ಹುಬ್ಬಳ್ಳಿ-ಧಾರವಾಡ ಮಂದಿ ಪಾಲಿಕೆಗೆ ಅತಿ ಹೆಚ್ಚು ತೆರಿಗೆ ಕಟ್ಟಿ, ದಾಖಲೆ ಮಾಡಿದ್ದಾರೆ! ಏನಿದರ ಲೆಕ್ಕಾಚಾರ?
Hubballi-Dharwad Municipal Corporation tax: ರಾಜ್ಯದಲ್ಲಿಯೇ ಅತಿ ದೊಡ್ಡ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಪ್ರ 108.50 ಕೋಟಿ ರೂ ಕರ ಸಂಗ್ರಹಿಸಿದೆ. ಇನ್ನೂ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ವಾಣಿಜ್ಯ ಮಳಿಗೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಈಗಾಗಲೇ ಸೂಚಿಸಲಾಗಿದೆ. ಈ ಆರ್ಥಿಕ ವರ್ಷ ಮುಕ್ತಾಯವಾಗಲು ಇನ್ನೂ ಒಂದೂವರೆ ತಿಂಗಳಷ್ಟೇ ಬಾಕಿ ಇದೆ. ಜನ ಮತ್ತಷ್ಟು ಸ್ಪಂದಿಸಿದರೆ, ಪಾಲಿಕೆ ಗರಿಷ್ಠ ಗುರಿ ತಲುಪಬಹುದು ಅನ್ನೋ ಲೆಕ್ಕಾಚಾರದಲ್ಲಿದ್ದಾರೆ ಅಧಿಕಾರಿಗಳು.
ಯಾವುದೇ ದೇಶ, ರಾಜ್ಯ ಅಥವಾ ನಗರ ಅಭಿವೃದ್ಧಿಯಾಗಬೇಕೆಂದರೆ ಅದಕ್ಕೆ ಹಣ ಬೇಕು. ಈ ಹಣವನ್ನು ಜನರು ಸರಿಯಾಗಿ ತೆರಿಗೆ ಕಟ್ಟೋ ಮೂಲಕ ನೀಡಬೇಕಾಗುತ್ತದೆ. ಆದರೆ ಅನೇಕ ಕಡೆಗಳಲ್ಲಿ ಈ ತೆರಿಗೆ ತುಂಬಲು ಜನರು ಹಿಂದೇಟು ಹಾಕುತ್ತಾರೆ. ಆದರೆ ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಜನರು ಈ ಬಾರಿ ಅತಿ ಹೆಚ್ಚು ತೆರಿಗೆ ಕಟ್ಟಿ (highest tax), ದಾಖಲೆ ಮಾಡಿದ್ದಾರೆ. ಅಷ್ಟಕ್ಕೂ ಯಾವ ತೆರಿಗೆ ಅದು? ಅದು ಸಂಗ್ರಹವಾಗಿದ್ದಾದರೂ ಎಷ್ಟು? ಇಲ್ಲಿದೆ ನೋಡಿ… ಹುಬ್ಬಳ್ಳಿ-ಧಾರವಾಡ ರಾಜ್ಯದಲ್ಲಿಯೇ ಅತಿ ದೊಡ್ಡ ಮಹಾನಗರ ಪಾಲಿಕೆ (Hubballi-Dharwad Municipal Corporation) ಅನ್ನೋ ಖ್ಯಾತಿಯನ್ನು ಹೊಂದಿದೆ. ಇಂಥ ಹೆಗ್ಗಳಿಕೆ ಜೊತೆಗೆ ಈ ಪಾಲಿಕೆಯು ಆಸ್ತಿ ತೆರಿಗೆ ಸಂಗ್ರಹದಲ್ಲಿ ಇದೇ ಮೊದಲ ಬಾರಿಗೆ ನೂರು ಕೋಟಿ ರೂಪಾಯಿಯ ಗಡಿ ದಾಟಿದೆ. ಪಾಲಿಕೆಯ 62 ವರ್ಷಗಳ ಇತಿಹಾಸದಲ್ಲಿ ಇದೊಂದು ಹೊಸ ಮೈಲಿಗಲ್ಲು. 2023-24ನೇ ಸಾಲಿನಲ್ಲಿ 135 ಕೋಟಿ ರೂಪಾಯಿ ತೆರಿಗೆ ಸಂಗ್ರಹದ ಗುರಿಯನ್ನು ಹೊಂದಲಾಗಿದೆ.
ಇದೀಗ 2023ರ ಏಪ್ರಿಲ್ 1ರಿಂದ 2024ರ ಫೆಬ್ರವರಿ 16 ರವರೆಗೆ 108.50 ಕೋಟಿ ರೂಪಾಯಿ ಸಂಗ್ರಹಿಸಿದೆ. ಇನ್ನೂ ಒಂದೂವರೆ ತಿಂಗಳಲ್ಲಿ 27 ಕೋಟಿ ರೂಪಾಯಿ ಆಸ್ತಿ ಸಂಗ್ರಹಿಸಬೇಕಾದ ದೊಡ್ಡ ಸವಾಲು ಪಾಲಿಕೆಯ ಅಧಿಕಾರಿಗಳ ಮೇಲಿದೆ. ಈ ಪಾಲಿಕೆ ವ್ಯಾಪ್ತಿಯಲ್ಲಿ 1,80,450 13 ವಸತಿ, 33,732 ವಾಣಿಜ್ಯ ಹಾಗೂ 1,10,926 ಖಾಲಿ ಜಾಗ ಸೇರಿ 3,25,108 ಆಸ್ತಿಗಳಿವೆ. ಹು-ಧಾ ಮಹಾನಗರ ಪಾಲಿಕೆಗೆ ಅತಿ ದೊಡ್ಡ ಆದಾಯ ಮೂಲ ಆಸ್ತಿ ತೆರಿಗೆಯೇ ಆಗಿದೆ.
ಜಾಹೀರಾತು ಕರ, ಟ್ರೇಡ್ ಲೈಸೆನ್ಸ್, ಮಳಿಗೆ ಬಾಡಿಗೆ, ರಸ್ತೆ ಕಟ್ಟಿಂಗ್ ಶುಲ್ಕ, ನಗರ ಯೋಜನೆ ಶಾಖೆ, ಇತ್ಯಾದಿಗಳಿಂದ ಪಾಲಿಕೆ ಗಳಿಸುವ ಆದಾಯ ಅಲ್ಪ ಪ್ರಮಾಣದ್ದಾಗಿರುತ್ತದೆ. ವರ್ಷದಿಂದ ವರ್ಷಕ್ಕೆ ಆಸ್ತಿ ತೆರಿಗೆ ವಸೂಲಾತಿ ಪ್ರಮಾಣವು ಹೆಚ್ಚುತ್ತಿರುವುದು ಸಹಜವಾದರೂ ಈ ವರ್ಷ ಪಾಲಿಕೆ ಕೈಗೊಂಡ ಕೆಲವು ಉತ್ತೇಜಕ ಕ್ರಮಗಳು ಶತ ಕೋಟಿಯ ದಾಖಲೆಗೆ ಕಾರಣವಾಗಿವೆ ಎನ್ನಬಹುದು ಎಂದು ಡಾ. ಈಶ್ವರ ಉಳ್ಳಾಗಡ್ಡಿ, ಆಯುಕ್ತ, ಹು-ಧಾ ಮಹಾನಗರ ಪಾಲಿಕೆ ಮಾಹಿತಿ ನೀಡಿದ್ದಾರೆ.
ಸ್ಥಿರಾಸ್ತಿ ಮಾಲೀಕರು ಆಸ್ತಿ ತೆರಿಗೆ ಪಾವತಿಸಲೆಂದೇ ಹು-ಧಾ ಮಹಾನಗರ ಪಾಲಿಕೆ ಪ್ರಸಕ್ತ ವರ್ಷ ಆಫ್‌ಲೈನ್, ಆನ್ ಲೈನ್ ಜತೆಗೆ ಆ್ಯಪ್ ಮೂಲಕ ಪಾವತಿಗೆ ವ್ಯವಸ್ಥೆ ಮಾಡಿತ್ತು. ಪ್ರಾರಂಭದಲ್ಲಿ ಆನ್‌ಲೈನ್ ಹಾಗೂ ಆ್ಯಪ್ ವ್ಯವಸ್ಥೆಯು ಒಂದಿಷ್ಟು ತಾಂತ್ರಿಕ ಸಮಸ್ಯೆ ಎದುರಿಸಿದರೂ ಬಳಿಕ ಸುಧಾರಣೆಯಾಗಿದ್ದವು. ಪಾವತಿಗೆ ಸರದಿ ಸಾಲಿನಲ್ಲಿ ನಿಲ್ಲುವ ಸಾರ್ವಜನಿಕರಿಗೆ ಬಿಸಿಲಿನ ಝಳದಿಂದ ರಕ್ಷಣೆ ನೀಡಲು ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಕೆಲವು ವಲಯ ಕಚೇರಿಗಳ ಅಧಿಕಾರಿಗಳು ನೆರಳು ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದರು.
Also Read: ಸಮಾಜ ಕಲ್ಯಾಣ ಇಲಾಖೆಯ ಭ್ರಷ್ಟ ಅಧಿಕಾರಿ ಕೊನೆಗೂ ಅಮಾನತು, ಇನ್ನಷ್ಟು ತನಿಖೆ ಆದ್ರೆ ಮತ್ತಷ್ಟು ಗೋಲ್ ಮಾಲ್ ಬಯಲಾಗುತ್ತೆ
ಹೆಚ್ಚಿನ ಸಂಖ್ಯೆಯಲ್ಲಿ ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಸ್ಥಿರಾಸ್ತಿ ಮಾಲೀಕರು ಶೇ. 5ರಷ್ಟು ರಿಯಾಯಿತಿಯ ಪ್ರಯೋಜನ ಪಡೆದ ಪರಿಣಾಮ 2023-24ನೇ ಸಾಲಿನ ಏಪ್ರಿಲ್ ತಿಂಗಳೊಂದರಲ್ಲಿಯೇ ಪಾಲಿಕೆಯ ಖಜಾನೆಗೆ ಬರೋಬ್ಬರಿ 43.18 ಕೋಟಿ ರೂಪಾಯಿ ಜಮೆಯಾಗಿತ್ತು. ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ಧತಿ ಜಾರಿಗೆ ಬಂದಾಗಿನಿಂದ ಪ್ರತಿ ಆರ್ಥಿಕ ವರ್ಷದ ಮೊದಲ ತಿಂಗಳಾದ ಏಪ್ರಿಲ್‌ನಲ್ಲಿ ಆಸ್ತಿ ತೆರಿಗೆ ಪಾವತಿಸಿದರೆ ಶೇ. 5ರಷ್ಟು ರಿಯಾಯಿತಿ ನೀಡಲಾಗುತ್ತದೆ. ಇದರ ಪ್ರಯೋಜನ ಪಡೆದ 1.10 ಲಕ್ಷ ಸ್ಥಿರಾಸ್ತಿ ಮಾಲೀಕರು ಆಗಲೇ ಆಸ್ತಿ ತೆರಿಗೆ ಪಾವತಿಸಿದ್ದರು. ಇದೇ ರೀತಿ ಜನರು ತೆರಿಗೆ ಕಟ್ಟಿದರೆ ಪಾಲಿಕೆ ಅಭಿವೃದ್ಧಿ ಕೆಲಸಗಳನ್ನು ಮಾಡಲು ಅನುಕೂಲವಾಗುತ್ತೆ ಅನ್ನೋದು ಸ್ಥಳೀಯರ ಅಭಿಪ್ರಾಯ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:51 pm, Mon, 19 February 24