
ಬೆಳಗಾವಿ, (ಜನವರಿ 07): ಸಕ್ಕರೆ ಕಾರ್ಖಾನೆಯಲ್ಲಿ (Sugar Factory) ಬಾಯ್ಲರ್ ಸ್ಫೋಟಗೊಂಡ (Boiler Blast) ಪರಿಣಾಮ ಮೂವರು ಕಾರ್ಮಿಕರು ಸಾವನ್ನಪ್ಪಿದ್ದು, ಐವರು ಕಾರ್ಮಿಕರಿಗೆ ಗಂಭೀರ ಗಾಯಗೊಂಡಿರುವ ಘಟನೆ ಬೆಳಗಾವಿ (Belagavi) ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮರಕುಂಬಿಯಲ್ಲಿ ನಡೆದಿದೆ. ಅಕ್ಷಯ ತೋಪಡೆ(45), ದೀಪಕ್ ಮುನವಳ್ಳಿ(31), ಸುದರ್ಶನ ಬನೋಶಿ(25) ಮೃತ ದುರ್ದೈವಿಗಳು.
ಗ್ರಾಮದ ಹೊರವಲಯದಲ್ಲಿರುವ ವಿಕ್ರಮ ಇನಾಮದಾರ್ ಎನ್ನುವರಿಗೆ ಸೇರಿದ ಇನಾಮದಾರ್ ಸಕ್ಕರೆ ಕಾರ್ಖಾನೆಯಲ್ಲಿಈ ದುರಂತ ಸಂಭವಿಸಿದ್ದು, ಗಂಭೀರ ಗಾಯಗೊಂಡವರನ್ನು ಬೆಳಗಾವಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂಪೂರ್ಣ ಸುಟ್ಟ ಸ್ಥಿತಿಯಲ್ಲಿರುವ ಐವರು ಜನರನ್ನು ಝೀರೋ ಟ್ರಾಫಿಕ್‌ನಲ್ಲಿಯೇ ಬೈಲಹೊಂಗಲದಿಂದ ಬೆಳಗಾವಿ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.
ಕಾರ್ಖಾನೆಯ ನಂಬರ್ 1 ಕಂಪಾರ್ಟಮೆಂಟ್ ನಲ್ಲಿ ವಾಲ್ ರಿಪೇರಿ ಮಾಡೋ ಸಂದರ್ಭದಲ್ಲಿ ಈ ದುರಂತ ಸಂಭವಿಸಿದ್ದು, ಘಟನೆಯಲ್ಲಿ ಮೂವರು ಸಾವನ್ನಪ್ಪಿರುವುದು ದೃಢಪಟ್ಟಿದೆ. ಸದ್ಯ ಆಸ್ಪತ್ರೆಗೆ ಬೆಳಗಾವಿ ಎಸ್ಪಿ ಕೆ.ರಾಮರಾಜನ್, ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ.
ಇನ್ನು ಘಟನೆ ಸಂಬಂಧ ಬೆಳಗಾವಿಯಲ್ಲಿ ಎಸ್ಪಿ ಕೆ ರಾಮರಾಜನ್ ಪ್ರತಿಕ್ರಿಯಿಸಿದ್ದು, ಮಧ್ಯಾಹ್ನ 2 ಗಂಟೆಯ ಸಮಯದಲ್ಲಿ ಇನಾಮದಾರ್ ಸಕ್ಕರೆ ಕಾರ್ಖಾನೆಯಲ್ಲಿ ಘಟನೆ ಸಂಭವಿಸಿದೆ. 8 ಜನರಿಗೆ ಬಿಸಿ ಪದಾರ್ಥ (ಮಳ್ಳಿ) ಮೈ ಮೇಲೆ ಬಿದ್ದು ಗಾಯವಾಗಿದೆ. ಒಬ್ಬರನ್ನು ಬೈಲಹೊಂಗಲ ಆಸ್ಪತ್ರೆಗೆ ರವಾನಿಸಿದ್ದು, ಇನ್ನುಳಿದವರನ್ನು ಬೆಳಗಾವಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಝೀರೋ ಟ್ರಾಫಿಕ್‌ನಲ್ಲಿ ಗಾಯಾಳುಗಳನ್ನು ಶಿಫ್ಟ್ ಮಾಡಲಾಗಿದೆ. ದೂರು ಆಧರಿಸಿ ತನಿಖೆ ಮಾಡುತ್ತೇವೆ ಎಂದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.