ಹೆತ್ತ ಮಗನನ್ನೇ ಕೊಂದ ತಂದೆ: ಕೊಲೆ ರಹಸ್ಯ ಭೇದಿಸಿದ್ದು ಮೃತನ ಸ್ನೇಹಿತರು!
ಕುಡಿದು ಕಿರಿಕ್ ಮಾಡುತ್ತಿದ್ದ ಮಗನನ್ನು ತಂದೆಯೇ ಹತ್ಯೆ ಮಾಡಿರುವ ಘಟನೆ ಬೆಳಗಾವಿಯ ಚಿಕ್ಕೋಡಿಯಲ್ಲಿ ನಡೆದಿದೆ. ಪುತ್ರ ಮದ್ಯವ್ಯಸನಿ ಎಂಬ ಕಾರಣಕ್ಕೆ ಹೋಟೆಲ್ ಮಾಲೀಕನ ಜೊತೆ ಸೇರಿ ವೈರ್‌ನಿಂದ ಉಸಿರುಗಟ್ಟಿಸಿ ಅಪ್ಪನೇ ಕೊಲೆ ಮಾಡಿದ್ದಾನೆ. ಮೃತನ ತಂದೆ ವರ್ತನೆ ಅನುಮಾನಕ್ಕೆ ಎಡೆಮಾಡಿಕೊಟ್ಟ ಕಾರಣ, ಸ್ನೇಹಿತರು ಮೃತನ ಶವ ಪರಿಶೀಲಿಸಿದ್ದಾರೆ. ಈ ವೇಳೆ ಕೊಲೆ ವಿಚಾರ ಬಯಲಾಗಿದ್ದು, ಆರೋಪಿಗಳ ವಿರುದ್ಧ ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಬೆಳಗಾವಿ, ಜನವರಿ 08: ಕುಡಿದು ಬಂದು ಕಿರಿ ಕಿರಿ ಮಾಡುತ್ತಾನೆ ಎಂಬ ಕಾರಣಕ್ಕೆ ಹೆತ್ತ ತಂದೆಯೇ ಮಗನಿಗೆ ಚಟ್ಟ ಕಟ್ಟಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಇಂದಿರಾನಗರದಲ್ಲಿ ನಡೆದಿದೆ. ಕಿರಣ್ ಆಲೂರೆ (31) ಮೃತ ಯುವಕನಾಗಿದ್ದು, ಆರೋಪಿ ನಿಜಗುಣಿ ಮತ್ತು ಉಸ್ಮಾನ್ ಮುಲ್ಲಾ ಎಂಬವರನ್ನು ಪ್ರಕರಣ ಸಂಬಂಧ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ. ವಿಶೇಷ ಅಂದ್ರೆ ಕಿರಣ್ ಕೊಲೆ ರಹಸ್ಯವನ್ನು ಇಲ್ಲಿ ಭೇದಿಸಿರೋದು ಆತನ ಸ್ನೇಹಿತರು ಅನ್ನೋದು ಗಮನಾರ್ಹ.
ಮದ್ಯದ ದಾಸನಾಗಿದ್ದ ಮಗ ಕಿರಣ್ನ ಕಾಟ ತಾಳಲಾರದೆ ತಂದೆ ನಿಜಗುಣಿ ಆತನ ಕೊಲೆಗೆ ಸ್ಕೆಚ್ ಹಾಕಿದ್ದ. ಅದರಂತೆ ತಾನು ಕೆಲಸ ಮಾಡುತ್ತಿದ್ದ ಹೋಟೆಲ್ ಮಾಲೀಕ ಉಸ್ಮಾನ ಮುಲ್ಲಾ ಜೊತೆ ಸೇರಿಕೊಂಡು ಮಗನನ್ನು ಮುಗಿಸಿದ್ದ. ಕುತ್ತಿಗೆಗೆ ವೈರ್‌ನಿಂದ ಬಿಗಿದು ಕಿರಣ್ ಹತ್ಯೆಮಾಡಿದ್ದ ಆರೋಪಿಗಳು, ಕಾರಿನಲ್ಲಿ ಶವ ತೆಗೆದುಕೊಂಡು ಓಡಾಡಿದ್ದರು. ಬಳಿಕ ಕಿರಣ್ ಸ್ನೇಹಿತರಿಗೆ ಕರೆಮಾಡಿದ್ದ ನಿಜಗುಣಿ, ಹೃದಯಾಘಾತದಿಂದ ನಿಮ್ಮ ಸ್ನೇಹಿತ ಮೃತಪಟ್ಟಿದ್ದಾನೆ ಎಂದು ತಿಳಿಸಿದ್ದ. ಜೊತೆಗೆ ತರಾತುರಿಯಲ್ಲಿ ಮೃತದೇಹವನ್ನು ಸುಡಲು ಮುಂದಾಗಿದ್ದ. ಆದರೆ ಅವರ ಸಂಪ್ರದಾಯದಂತೆ ಶವ ಹೂಳಬೇಕಿರುವ ಕಾರಣ ನಿಜಗುಣಿ ನಡೆ ಕಿರಣ್ ಸ್ನೇಹಿತರಲ್ಲಿ ಅನುಮಾನ ಮೂಡಿಸಿದೆ.
ಇದನ್ನೂ ಓದಿ: ಸೊಸೆ ಕಾಟಕ್ಕೆ ಅತ್ತೆ ಆತ್ಮಹತ್ಯೆ? ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ
ಕಿರಣ್ ತಂದೆ ನಿಜಗುಣಿ ವರ್ತನೆ ಬಗ್ಗೆ ಸಂಶಯಗೊಂಡು ಮೃತದೇಹ ಪರಿಶೀಲನೆ ನಡೆಸಿದಾಗ ಕುತ್ತಿಗೆ ಬಳಿ ಗಾಯ ಮತ್ತು ಕಿವಿಯಲ್ಲಿ ರಕ್ತಸ್ರಾವ ಆಗಿರೋದು ಕಂಡುಬಂದಿದೆ. ತಮ್ಮ ಅನುಮಾನಕ್ಕೆ ಮತ್ತಷ್ಟು ಪುಷ್ಠಿ ಸಿಕ್ಕ ಹಿನ್ನೆಲೆ ನಿಜಗುಣಿ ಕೆಲಸ ಮಾಡುತ್ತಿದ್ದ ಹೋಟೆಲ್ ಮಾಲೀಕ ಉಸ್ಮಾನ ಮುಲ್ಲಾನನ್ನು ಕಿರಣ್ ಸ್ನೇಹಿತರು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಕೊಲೆ ರಹಸ್ಯ ಬೆಳಕಿಗೆ ಬಂದಿದೆ. ಕೂಡಲೇ ನಿಜಗುಣಿಯನ್ನ ಸ್ಮಶಾನಕ್ಕೆ ಕರೆಸಿ ಆತನನ್ನೂ ಘಟನೆ ಬಗ್ಗೆ ಪ್ರಶ್ನಿಸಿದ್ದಾರೆ. ಈ ವೇಳೆ ಆತ ಕೂಡ ಮಗನನ್ನು ಕೊಲೆ ಮಾಡಿರೋದನ್ನು ಒಪ್ಪಿಕೊಂಡಿದ್ದಾನೆ. ಕೂಡಲೇ ಪೊಲೀಸರಿಗೆ ವಿಷಯ ತಿಳಿಸಲಾಗಿದ್ದು, ಆರೋಪಿಗಳ ವಿರುದ್ಧ ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಕೊಲೆ ಕೇಸ್ ದಾಖಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.