ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಅಂಗನವಾಡಿಯಲ್ಲಿ ತಮ್ಮ ಕುಟುಂಬಸ್ಥರಿಗೆ ಕೆಲಸ ನೀಡದ ಕೋಪದಲ್ಲಿ ಜಾಗದ ಮಾಲೀಕ ಕಟ್ಟಡಕ್ಕೆ ಬೀಗ ಹಾಕಿರುವ ಘಟನೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಜಿಲ್ಲೆಯಲ್ಲಿ ನಡೆದಿದೆ. ರಾಯಭಾಗ ತಾಲೂಕಿನ ನಂದಿಕುರಳಿ ಗ್ರಾಮದ ವಂಜೇರಿ ತೋಟದ ಅಂಗನವಾಡಿ ಕೇಂದ್ರಕ್ಕೆ ಕಳೆದ ನಾಲ್ಕು ದಿನಗಳಿಂದ ಬಾಬುರಾವ್ ವಂಜೇರಿ ಎಂಬವರು ಬೀಗ ಹಾಕಿದ್ದಾರೆ. ಇದರಿಂದಾಗಿ ಮಕ್ಕಳು ಅಂಗನವಾಡಿಯ ಆವರಣದಲ್ಲಿಯೇ ಕುಳಿತು ಆಟವಾಡುತ್ತಿದ್ದಾರೆ.
ಬೆಳಗಾವಿ, (ಜನವರಿ 08): ಅಂಗನವಾಡಿಯಲ್ಲಿ (Anganwadi centre) ತಮ್ಮ ಕುಟುಂಬಸ್ಥರಿಗೆ ಕೆಲಸ ನೀಡದ ಕೋಪದಲ್ಲಿ ಜಾಗದ ಮಾಲೀಕ ಕಟ್ಟಡಕ್ಕೆ ಬೀಗ ಹಾಕಿರುವ ಘಟನೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಜಿಲ್ಲೆಯಲ್ಲಿ ನಡೆದಿದೆ. ರಾಯಭಾಗ ತಾಲೂಕಿನ ನಂದಿಕುರಳಿ ಗ್ರಾಮದ ವಂಜೇರಿ ತೋಟದ ಅಂಗನವಾಡಿ ಕೇಂದ್ರಕ್ಕೆ ಕಳೆದ ನಾಲ್ಕು ದಿನಗಳಿಂದ ಬಾಬುರಾವ್ ವಂಜೇರಿ ಎಂಬವರು ಬೀಗ ಹಾಕಿದ್ದಾರೆ. ಇದರಿಂದಾಗಿ ಮಕ್ಕಳು ಅಂಗನವಾಡಿಯ ಆವರಣದಲ್ಲಿಯೇ ಕುಳಿತು ಆಟವಾಡುತ್ತಿದ್ದಾರೆ.
ಶಾಲೆಗೆ ಸ್ಥಳ ಕೊಟ್ಟಿರುವ ಬಾಬುರಾವ್ ವಂಜೇರಿ ಅವರು ಮಾತನಾಡಿ, ಕಟ್ಟಡ ಕಟ್ಟಿ 20ರಿಂದ 22 ವರ್ಷ ಆಯ್ತು. 2000ನೇ ಇಸವಿಯಲ್ಲಿ ಈ ಜಾಗ ಕೊಟ್ಟಿದ್ದೇವೆ. ಅಂದಿನ ಅಧಿಕಾರಿಗಳು ಸ್ಥಳ ಪಡೆಯುವಾಗ ನಿಮ್ಮ ಕುಟುಂಬಕ್ಕೆ ಈ ಶಾಲೆಯಲ್ಲಿ ನೌಕರಿ ಕೊಡಲಾಗುವುದು ಎಂದು ಭರವಸೆ ನೀಡಿದ್ದರು. ಇದುವರೆಗೂ ನಮಗೆ ನೌಕರಿ ಕೊಟ್ಟಿಲ್ಲ. ನಮ್ಮ ಬದಲು ಬೇರೆಯವರಿಗೆ ಕೊಟ್ಟಿದ್ದಾರೆ. ಸಹಾಯಕರ ಕೆಲಸ ಬಂದಿತ್ತು. ಆಗ ಡಿಸಿಯವರಿಗೆ ಅರ್ಜಿ ಕೊಟ್ಟಿದ್ದೆವು. ಅಧಿಕಾರಿಗಳಲ್ಲಿ ನೌಕರಿ ಕೇಳಿದರೆ ಅವರು ನಿಮಗೆ ಕೊಡುತ್ತೇವೆ, ಅರ್ಜಿ ಸಲ್ಲಿಸಿ ಎಂದು ಹೇಳುತ್ತಾರೆ. ಅಧಿಕಾರಿಗಳು ಬಂದು ನೋಡಿಕೊಂಡೂ ಹೋಗಿದ್ದಾರೆ. ಸಿಡಿಪಿ ಮೇಡಂ ಇಲ್ಲಿಗೆ ಬರುತ್ತೇನೆ ಎಂದು ಹೇಳಿದ್ದಾರೆ. ಇದುವರೆಗೂ ಬಂದಿಲ್ಲ. ನಮಗೊಂದು ನೌಕರಿ ಕೊಟ್ಟರೆ ನಾವು ಬಾಗಿಲು ತೆಗೆಯುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.
