ಬೆಳಗಾವಿ: ರಾಜ್ಯ ಮಟ್ಟದ ಕಿತ್ತೂರು ಉತ್ಸವ ನೋಡಿ ಹಿಂದಿರುಗುವಾಗ ಬೆಳಗಾವಿ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ರಾಷ್ಟ್ರೀಯ ಹೆದ್ದಾರಿ 4 ದಾಟುತ್ತಿದ್ದ ಇಬ್ಬರು ಪಾದಚಾರಿಗಳಿಗೆ ಕಾರು ಡಿಕ್ಕಿ ಹೊಡೆದಿದೆ. ಈ ಪರಿಣಾಮ ಇಬ್ಬರು ಪಾದಚಾರಿಗಳು ಮೃತಪಟ್ಟಿದ್ದಾರೆ.
ಬೆಳಗಾವಿ ಜಿಲ್ಲೆ ಕಿತ್ತೂರು ಹೊರವಲಯದಲ್ಲಿರುವ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಮೇಲೆ ಘಟನೆ ಸಂಭವಿಸಿದೆ. ಖಾನಾಪುರ ತಾಲೂಕಿನ ಕೊರವಿಕೊಪ್ಪ ಗ್ರಾಮದ ನಿವಾಸಿಗಳಾದ ಬಾಳಪ್ಪ ತಳವಾರ(33), ಕರೆಪ್ಪ ತಳವಾರ(36) ಮೃತ ದುರ್ದೈವಿಗಳು. ಕಿತ್ತೂರು ಉತ್ಸವ ನೋಡಿ ವಾಪಸಾಗುತ್ತಿದ್ದವರ ಮೇಲೆ ಬೆಳಗಾವಿಯಿಂದ ಧಾರವಾಡದತ್ತ ಹೊರಟಿದ್ದ ಕಾರು ತಡರಾತ್ರಿ ಡಿಕ್ಕಿ ಹೊಡೆದಿದೆ. ಕಿತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ನೀರು ತುಂಬಿದ ಕಲ್ಲಿನ ಕ್ವಾರಿಗೆ ಇಳಿದಿದ್ದ ಯುವಕ ನಾಪತ್ತೆ
ಬೆಳಗಾವಿ ತಾಲೂಕಿನ ಅಲತಗಾ ಗ್ರಾಮದಲ್ಲಿ ನೀರು ತುಂಬಿದ ಕಲ್ಲಿನ ಕ್ವಾರಿಗೆ ಇಳಿದಿದ್ದ ಅನಗೋಳ ಗ್ರಾಮದ ಸತೀಶ್ ಹನುಮಣ್ಣವರ್(22) ಎಂಬ ಯುವಕ ನಾಪತ್ತೆಯಾಗಿದ್ದಾನೆ. ನಿನ್ನೆ ಮೂವರು ಸ್ನೇಹಿತರ ಜತೆ ಪಾರ್ಟಿ ಮಾಡಿದ್ದ ಸತೀಶ್, ಈ ವೇಳೆ ಕಲ್ಲುಕ್ವಾರಿಯ ನೀರು ನೋಡಲು ಬಂದಿದ್ದಾಗ ನಾಪತ್ತೆಯಾಗಿದ್ದಾನೆ. ಈ ವೇಳೆ ಆತನ ಸ್ನೇಹಿತರು ಗಾಬರಿಗೊಂಡು ಕುಟುಂಬಸ್ಥರಿಗೆ ಮತ್ತು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಇದನ್ನೂ ಓದಿ: ಹಾಸನಾಂಬೆ ದರ್ಶನೋತ್ಸವದ ಕೊನೇ ದಿನ ದೇವಿಯ ಸಮ್ಮುಖದಲ್ಲಿ ಮಹಿಳೆಯೊಬ್ಬರ ವಿಚಿತ್ರ ವರ್ತನೆ
ಸ್ಥಳಕ್ಕೆ ಭೇಟಿ ನೀಡಿದ ಕಾಕತಿ ಠಾಣೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ತಡರಾತ್ರಿಯವರೆಗೂ ಎಸ್‌ಡಿಆರ್‌ಎಫ್ ತಂಡದಿಂದ ಯುವಕನಿಗಾಗಿ ಶೋಧ ಕಾರ್ಯ ನಡೆಸಲಾಗಿದೆ. ಆದ್ರೆ ಯುವಕ ಪತ್ತೆಯಾಗಿಲ್ಲ. ಹೀಗಾಗಿ ಇಂದು ಕೂಡ ಶೋಧಕಾರ್ಯ ಮುಂದುವರಿಯಲಿದೆ.
ದೀಪಾವಳಿ ನೆಪದಲ್ಲಿ ಜೂಜಾಟ: ಸಿಕ್ಕಸಿಕ್ಕಲ್ಲಿ ದಾಳಿ ನಡೆಸಿ ಹಣ ಜಪ್ತಿ ಮಾಡಿದ ಪೊಲೀಸರು
ಕೊಪ್ಪಳ: ಜಿಲ್ಲೆಯ ಹಲವೆಡೆ ದೀಪಾವಳಿಯಂದು ದೀಪ ಕಾಯುವ ನೆಪದಲ್ಲಿ ಇಸ್ಪೀಟ್ ಆಡುತ್ತಾರೆ. ಕಾನೂನು ಪ್ರಕಾರ ಇಸ್ಪೀಟ್ ಆಡುವುದು ಅಪರಾಧವಾಗಿದೆ. ಹೀಗಾಗಿ ಯಾರು ಕೂಡ ಇಸ್ಪೀಟ್ ಆಡದಂತೆ ಪೊಲೀಸ್ ಇಲಾಖೆಯು ಡಂಗೂರ ಸಾರಿಸಿ, ಸಿಬ್ಬಂದಿಯೂ ಮೈಕ್ ಮೂಲಕ ತಿಳಿ ಹೇಳಿ ಹಾಗೂ ವಾಹನಗಳಲ್ಲಿ ಘೋಷಣೆ ಮಾಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗಿತ್ತು. ಆದರೆ ಕೆಲವು ಕಡೆಗಳಲ್ಲಿ ಪೊಲೀಸರ ಎಚ್ಚರಿಕೆಯನ್ನು ನಿರ್ಲಕ್ಷ್ಯಿಸಿ ದೀಪಾವಳಿಯಂದು ಇಸ್ಪೀಟ್ ಆಡುತ್ತಿದ್ದವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ದಂಡ ವಸೂಲಿ ಮಾಡಿದ್ದಾರೆ.
ಪೊಲೀಸರ ಸೂಚನೆಯ ನಂತರವೂ ದೀಪಾವಳಿ ನೆಪದಲ್ಲಿ ಕೊಪ್ಪಳದಲ್ಲಿ ಇಸ್ಪೀಟ್ ಹಾವಳಿ ಮಿತಿ ಮೀರಿದ ಹಿನ್ನೆಲೆ ಅಖಾಡಕ್ಕಿಳಿದ ಪೊಲೀಸರು, ಒಂದೇ ದಿನ ಹಲವೆಡೆ ದಾಳಿ ನಡೆಸಿ 30ಕ್ಕೂ ಹೆಚ್ಚು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅದರಂತೆ ಒಟ್ಟು 228 ಜನರ ಮೇಲೆ ಪ್ರಕರಣ ದಾಖಲಾದಂತಾಗಿದೆ. ಜೂಜಿಗೆ ಇಟ್ಟ ಒಟ್ಟು 2.56 ಲಕ್ಷ ಹಣವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.